ಅಂತರಂಗ
ಅರಿಮೆಯ ಅರಿವಿರಲಿ-9 : ಆತ್ಮರತಿ
- ಯೋಗೇಶ್ ಮಾಸ್ಟರ್
ಅವನು ಲ್ಯಾಕೋನಿಯಾದ ಬೇಟೆಗಾರ. ಅವನಿದ್ದದ್ದು ಪುರಾತನ ಗ್ರೀಸಿನಲ್ಲಿರುವ ಥಿಸ್ಪಿಯೇ ಪ್ರಾಂತ್ಯ. ಅವನೋ ಕಟ್ಟುಮಸ್ತಾದ ಮೈಕಟ್ಟಿನವ, ಸುಂದರ ಮುಖದವ. ಅವನೂ ಸುಂದರ. ಅವನಿಗೂ ಸುಂದರವಾದ ವಿಷಯಗಳಲ್ಲಿ ಪರಮಾಸಕ್ತಿ. ಅವಳೊಬ್ಬಳು ಶಾಪಕ್ಕೊಳಗಾದ ಕನ್ಯೆ. ಅವನನ್ನು ಅನುಸರಿಸುತ್ತಿರುತ್ತಾಳೆ. ಅವಳ ಶಾಪವೋ ಅವಳಿಗೆ ತನ್ನ ಮಾತನ್ನು ತಾನು ಹೇಳಲಾಗದು. ಇತರರ ಮಾತನ್ನು ಪ್ರತಿಧ್ವನಿಸಬೇಕು. ಹಾಗಾಗಿ ಅವಳಿಗೆ ಗ್ರೀಕ್ ಬೇಟೆಗಾರನಿಗೆ ತನ್ನ ಪ್ರೀತಿಯ ಮಾತುಗಳನ್ನು ಹೇಳಲಾಗದು, ತನ್ನ ಪ್ರಶಂಸೆಯನ್ನೂ ತಿಳಿಸಲಾಗದು. ಅವನೋ ಇವಳ ಕಡೆ ಕಣ್ಣೆತ್ತಿಯೂ ನೋಡದೇ ಓಡಾಡುತ್ತಿರುತ್ತಾನೆ.
ಒಮ್ಮೆ ತಿಳಿಯಾದ ನೀರಿನಲ್ಲಿ ತನ್ನ ಬಿಂಬವನ್ನು ನೋಡಿಕೊಳ್ಳುತ್ತಾನೆ. ತನ್ನದೇ ಸೌಂದರ್ಯವನ್ನು ತಾನೇ ನೋಡಿಕೊಂಡು ಪರವಶನಾಗುತ್ತಾನೆ. ಆ ನೀಳ ಮೂಗು, ಹೊಳಪಿನ ಕಣ್ಣುಗಳು, ಗುಲಾಬಿ ದಳದಂತಹ ತುಟಿಗಳು, ನಕ್ಕರೆ ಅರಳಿದ ಹೂವಿನಂತಹ ಮುಖ; ಆಹಾ! ಅದನ್ನು ಮುದ್ದಿಸುವಷ್ಟು ಆಕರ್ಷಕ, ಮೋಹಕ. ಒಂದೇ ಕಣ್ಣೋಟಕೆ ಪ್ರೇಮಿಸಲಾಗುವಂತೆ, ಒಮ್ಮಿಂದೊಮ್ಮೆಲೇ ಮರುಳಾಗಿ ಅಪ್ಪಿ ಇನ್ನಿಲ್ಲವಾಗುವಂತಹ ಸೆಳೆತ. ಅವನು ತನ್ನ ಬಿಂಬಕ್ಕೆ ತಾನೇ ಮೋಹಿತನಾಗಿ ಮುದಪಡೆಯಲು, ಸರಸದಿಂದ ಮುಟ್ಟುತ್ತಾನೆ. ನೀರು ಕಲಕುತ್ತಿದ್ದಂತೆ ಬಿಂಬ ಚದರುತ್ತದೆ. ಇಲ್ಲವಾಗುತ್ತದೆ. ಅಯ್ಯೋ, ತನ್ನ ಮೋಹಕ, ಪ್ರೇಮಪೂರ್ಣ ತನ್ನನ್ನು ಪಡೆಯಲು ನೀರಿಗೆ ಧುಮುಕುತ್ತಾನೆ. ಆದರೆ ಸಿಗುವುದಿಲ್ಲ. ದಡದಲ್ಲೊಂದು ಅವನ ಪ್ರೇಮಕ್ಕೆ ಸಾಕ್ಷಿಯಾಗಿ ಹೂಗಿಡವೊಂದು ಮೂಡುತ್ತದೆ. ಆ ಹೂವಿಗೂ ಅವನದೇ ಹೆಸರು. ನಾರ್ಸಿಸಸ್.
ಆತ್ಮರತಿಯಲೆಗಳು
ನಾರ್ಸಿಸಸ್ ತನ್ನ ತಾನು ಮೋಹಿಸಿಕೊಳ್ಳುವ, ತನಗೆ ತಾನು ಪರವಶವಾಗುವ, ತನ್ನನ್ನು ತಾನೇ ಪ್ರೀತಿಸಿಕೊಳ್ಳುವ ಆತ್ಮರತಿಗೆ ಪ್ರತಿಮೆಯಾಗಿ ನಿಲ್ಲುತ್ತಾನೆ. ಈ ಅರಿಮೆಯೇ ಆತ್ಮರತಿ. ಅವರಿವರ ಅತಿಕ್ರಮಣ ಪ್ರವೇಶವಿರದಿದ್ದಾಗ ಏಕಾಂತದಲ್ಲಿ ಕನ್ನಡಿಯ ಮುಂದೆ ಕುಳಿತುಕೊಂಡು ತನ್ನನ್ನೇ ತಾನೇ ನೋಡಿಕೊಂಡು, ಕಾಣುವ ಎಲ್ಲಾ ವಿವರಗಳನ್ನು ಗಮನಿಸುತ್ತಾ, ಪ್ರಶಂಸಿಸುತ್ತಾ, ನಸುನಗುತ್ತಾ, ಮೋಹಗೊಳ್ಳುತ್ತಾ ಪರವಶವಾಗುವ ಅನುಭವವಿರುವವರಿಗೆ ನಾರ್ಸಿಸಸ್ ನೀರಿನಲ್ಲಿ ತನ್ನ ಬಿಂಬವನ್ನು ಹೇಗೆ ನೋಡಿಕೊಂಡಿದ್ದಿರಬಹುದು ಎಂದು ಅರಿವಾಗುತ್ತದೆ.
ಫೇಸ್ಬುಕ್ ಅಥವಾ ಇನ್ಟಾಗ್ರಾಂನಲ್ಲೋ ಕಣ್ಣಾಡಿಸಿದರೆ ಆತ್ಮರತಿಯ ಅಸಂಖ್ಯಾತ ಉದಾಹರಣೆಗಳು ಸಿಗುತ್ತವೆ. ಮುಖಪುಟವಂತೂ ಆತ್ಮರತಿಯ ಮಹಾಸಾಗರ. ನಾರ್ಸಿಸಿಸಂ ಅಥವಾ ಆತ್ಮರತಿಯ ಅರಿಮೆಯ ಅಲೆಗಳು ಎದ್ದೆದ್ದು ಬರುತ್ತಲೇ ಇರುತ್ತವೆ. ಅಷ್ಟು ಸಾಮಾನ್ಯ. ನಮಗೆ ಹೆಜ್ಜೆಹೆಜ್ಜೆಗೂ ಕಣ್ಣಿಗಪ್ಪಳಿಸುತ್ತಿರುತ್ತವೆ.
ಅದ್ಯಾವುದೋ ಊರ ಹಬ್ಬಕ್ಕೆ ಶುಭಾಶಯ ಕೋರುವ ರಾಜಕಾರಣಿಯ ಅಥವಾ ಮುಂದೆ ನಿಲ್ಲಬಹುದಾದ ಚುನಾವಣಾ ಅಭ್ಯರ್ಥಿಯ ಫ್ಲೆಕ್ಸ್ ನೋಡಿ. ಹೆಸರಿನ ಹಿಂದೆ ಒಂದಿಷ್ಟು ಬಿರುದು ಬಾವಲಿಗಳು, ಗ್ರಾಫಿಕ್ಸ್ನಲ್ಲಿ ಹುಲಿ ಸಿಂಹಗಳೂ ಅತ್ತಿತ್ತ ಇದ್ದರೆ ಆಶ್ಚರ್ಯವಿಲ್ಲ. ಈತನೆಂದು ಗುರುತಿಸಲು ಬರಿಯ ಮುಖ ಸಾಕಾದರೂ, ಅವರಿಗೆ ಆತ ತೊಟ್ಟಿರುವ ಬೂಟಿನವರೆಗೂ, ಜೊತೆಗೆ ನಡೆಯ ಭಂಗಿಯನ್ನೂ ತೋರುವ ತವಕ. ಅದನ್ನು ನೋಡಿ, ಆಹಾ, ಆ ಸುಂದರವಾದ ಹೊಳಪುಳ್ಳ ಉಂಗುರವನ್ನು ನೋಡು, ಆಹಾ, ಆ ಚೆಂದದ ಶರ್ಟಿನ ಬಣ್ಣವನ್ನು ನೋಡು.
ಇಂಥವೆಲ್ಲಾ ತೊಟ್ಟಿರುವ, ಹೀಗೆಲ್ಲಾ ಕಾಣುವ ಇವನೇ ನಮ್ಮ ನಾಯಕನಾಗಬೇಕು ಎಂದು ಅವನ ಸೌಂದರ್ಯೋಪಾಸನೆಯಿಂದ ರಸ್ತೆಯಲ್ಲಿ ಓಡಾಡುತ್ತಿರುವವರಾರಾದರೂ ಪರವಶವಾಗುತ್ತಾರೆಂದುಕೊಂಡಿದ್ದೀರಾ?
ಫೇಸ್ಬುಕ್ಕಿನಲ್ಲಿ ಕೆಲವರು ಎಡಕ್ಕೆ ತಿರುಗಿ ಒಂದು ಪಟ, ಬಲಕ್ಕೆ ತಿರುಗೊಂದು ಪಟ, ಹೀಂಗೊಂದು ಪಟ, ಹಾಗೊಂದು ಪಟ. ಮೇಲಿಂದೊಂದು, ಕೆಳಗಿಂದೊಂದು; ನಾನಾ ಭಾವಗಳಲ್ಲಿ, ಭಂಗಿಗಳಲ್ಲಿ ವಿಜೃಂಭಿಸುತ್ತಿರುತ್ತವೆ. ಕೆಲವು ಸಲ ಬರಿಯ ನೋಡುಗರಿಗೆ ಪಟ ಹಾಕಿದವರಿಗೆ ಕಂಡ ವ್ಯತ್ಯಾಸಗಳಾವುವೂ ಕಾಣುವುದೂ ಇಲ್ಲ. ಎಲ್ಲವೂ ಒಂದೇ ಎಂಬಂತೆ ಕಾಣುತ್ತಿರುತ್ತದೆ.
ಇನ್ನೂ ಮುಂದುವರಿದು ತಾವು ತೊಟ್ಟಿರುವ ಪ್ರತಿ ಬಟ್ಟೆಯ ಪಟಗಳನ್ನು ಫೇಸ್ಬುಕ್ಕಿನಲ್ಲಿ ಪೇರಿಸುವುದು ಸಾಲದೆಂದು ಅವರ ಸ್ನೇಹಿತರೆಲ್ಲಿ ನೋಡುವುದರಿಂದ ವಂಚಿತರಾಗಿಬಿಡುತ್ತಾರೋ ಎಂದು ಪ್ರಶಂಸಿಸಬಹುದಾದ ಸ್ನೇಹಿತರಿಗೆಲ್ಲಾ ತಗುಲಿ ಹಾಕಿರುತ್ತಾರೆ. ಲೈಕಿಸಲಿ, ಪ್ರೀತಿಸಲಿ, ವಾವ್ ಎಂದು ಕಣ್ಣು ಬಾಯಿ ಬಿಡಲೆಂಬ ಹೆಬ್ಬಯಕೆ. ಒಂದು ನಾರ್ಸಿಸಸ್ ಮತ್ತೊಂದು ನಾರ್ಸಿಸಸ್ಸನ್ನು ನೋಡುವುದಿಲ್ಲ.
ಆಗ ಈ ನಾರ್ಸಿಸಸ್ ಬಡಪೆಟ್ಟಿಗೆ ಬಗ್ಗದೆ ಆ ನಾರ್ಸಿಸಸ್ ಒಳಪೆಟ್ಟಿಗೆಗೆ ಸಂದೇಶ ಕಳುಹಿಸಿ ಮೆಚ್ಚಿಸಿಕೊಳ್ಳುವವರೆಗೂ ಬಿಡುವುದಿಲ್ಲ.
ಆಹಾ, ಈ ಮುಖ ಎಡಗಡೆಯಿಂದ ಎಷ್ಟು ಸುಂದರ, ಹಾ, ಹಾಗೆಯೇ ಬಲದಿಂದಲೂ ಸುಂದರ ಎಂದು ನಾನಾ ಬಗೆಗಳಿಂದಲೂ ನೋಡುತ್ತಾ ಆನಂದದಿಂದ ರಸಾನುಭೂತಿಯಲ್ಲಿ ಮಿಂದೆದ್ದು ನೋಡುಗಳು ಸುರಸವಾದ ಸಾರ್ಥಕ ಪಡೆಯುತ್ತಾರೆಂದುಕೊಂಡಿದ್ದೀರಾ?
ಬಹಳಷ್ಟು ಸೆಲ್ಫೀ ಅಥವಾ ಸ್ವಂತೀ ಪಟಗಳು ಆತ್ಮರತಿಯ ಬಿಂಬಗಳು.
ಸಾಮಾನ್ಯ ಸಮಸ್ಯೆ
ಆತ್ಮರತಿ ಎಂದರೆ ಆತ್ಮವಿಶ್ವಾಸ ಅಥವಾ ಸ್ವಕೇಂದ್ರಿತ ವ್ಯಕ್ತಿತ್ವವೇನಲ್ಲ. ಅದೊಂದು ಮಾನಸಿಕ ಸಮಸ್ಯೆ. ಕಾರಣ ಮತ್ತು ಪರಿಣಾಮಗಳಿರುವಂತಹ ಬಹಳ ಗುರುತರವಾದಂತಹ ಹಾಗೂ ಗಂಭೀರವಾದ ಸಮಸ್ಯೆಯೇ. ಈ ಆತ್ಮರತಿಯ ಅರಿಮೆಗೆ narcissistic personality disorder (NPD)
ಎಂದು ಕರೆಯುತ್ತಾರೆ. ಆಗಲೇ ಹೇಳಿದಂತೆ ಇದು ನಮ್ಮಲ್ಲಿ ಬಹು ವ್ಯಾಪಕವಾದ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಮಾನಸಿಕ ಸಮಸ್ಯೆಗಳು ಸಮಸ್ಯೆಗಳನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಹಾಗೆ ಗುರುತಿಸಿಕೊಂಡರೆ ಅವು ಕೊಂಚವಾದರೂ ನಿಯಂತ್ರಣಕ್ಕೆ ಬರುತ್ತವೆ. ನನ್ನಲ್ಲಿ ಆತ್ಮರತಿಯ ಅರಿಮೆ ಇದೆ ಎಂದು ಗುರುತಿಸಿಕೊಂಡರೆ ಪ್ರದರ್ಶನಗಳು ಕೊಂಚ ಕಡಿಮೆಯಾಗಬಹುದು. ಅಥವಾ ಪ್ರದರ್ಶನಗಳಿಗೊಂದು ನಿಯಂತ್ರಣ ಬರಬಹುದು.
ಒಟ್ಟಾರೆ ಆತ್ಮರತಿಯ ಅರಿಮೆಯನ್ನು ಇತರರಲ್ಲಿ ಗುರುತಿಸಲು ಮತ್ತು ತನ್ನಲ್ಲಿ ಗುರುತಿಸಿಕೊಳ್ಳಲು ಫೇಸ್ಬುಕ್ ಮತ್ತು ಫ್ಲೆಕ್ಸುಗಳು ಒಳ್ಳೆಯ ಸಾಧನವಾಗಿವೆ. ಆದರೆ ಈ ಆತ್ಮರತಿಯ ಸಮಸ್ಯೆ ಬರೀ ಪ್ರದರ್ಶನಕ್ಕಷ್ಟೇ ಸೀಮಿತವಾಗಿದ್ದರೆ ನಸುನಕ್ಕು ಸುಮ್ಮನಾಗಿಬಿಡಬಹುದಿತ್ತು. ಆದರೆ ಅದು ಗಂಭೀರವಾದ ಒಳಸುಳಿಗಳನ್ನು ಹೊಂದಿವೆ. ಮುಂದೆ ಹೇಳಲಾಗುವ ಎಲ್ಲಾ ಲಕ್ಷಣಗಳೂ ಇರಲೇ ಬೇಕೆಂದೇನಿಲ್ಲ. ಆದರೆ ಇವು ಸಾಮಾನ್ಯ ಲಕ್ಷಣಗಳು. ಇವುಗಳಲ್ಲಿ ಕೆಲವು ಇರಬಹುದು. ಇಲ್ಲದೇ ಇರಬಹುದು. ಕೆಲವರಿಗೆ ಇವುಗಳ ಜೊತೆಗೆ ಇನ್ನೂ ಹಲವಿರಬಹುದು.
ತನಗೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವ ಹಪಹಪಿಸುವ ಬಯಕೆ.
ತನ್ನ ಕಡೆಗೆ ಗಮನ ಸೆಳೆಯುವ ಮತ್ತು ಪ್ರಶಂಸೆ ಪಡೆಯುವ ಅದುಮಿಡಲಾಗದ ಆಳದೊಳಗಿಂದೇಳುತ್ತಲೇ ಇರುವ ಆಸೆ. ಬೇರೆಯವರ ಬಗ್ಗೆ ಸಹಾನುಭೂತಿ(empathy)ಇಲ್ಲದಿರುವುದು. ಸಂಬಂಧಗಳಲ್ಲಿ ಸಮಸ್ಯೆಗಳು, ಸ್ವಾರ್ಥ, ಇತರರ ಭಾವನೆಗಳನ್ನು ಪರಿಗಣಿಸದಿರುವುದು.
ಒಟ್ಟಾರೆ ಈ ಆತ್ಮರತಿ ಅರಿಮೆಯು ಕಪ್ಪು ಬಿಳಿಪಿನಷ್ಟು ಸ್ಪಷ್ಟವಾಗಿ ವಿಭಜಿಸಿ ಸ್ಪಷ್ಟೀಕರಿಸಲಾಗದ್ದು. ಬೆಳಕಿನ ವಕ್ರೀಭವನದಿಂದ ಅನೇಕ ಬಣ್ಣಗಳು ಮೂಡುವಂತೆ ವಿವಿಧ ರಂಗುಗಳನ್ನು ಪಡೆದುಕೊಳ್ಳುವಂತಹ ಅರಿಮೆ.
ಇನ್ನೂ ಕೆಲವರಲ್ಲಿ ನೀವು ಗಮನಿಸಬಹುದು.
ತಮ್ಮ ಬಗ್ಗೆ ಅತ್ಯಂತ ಮಹೋನ್ನತದ ಎತ್ತರದ ಭವಿಷ್ಯತ್ತಿನ ಭ್ರಮೆಯಲ್ಲಿ ಬಡಬಡಿಸುತ್ತಿರುವರು. ಅವರ ವಿಶ್ವಾಸಕ್ಕೆ, ಯಶಸ್ಸಿಗೆ, ಅಧಿಕಾರಕ್ಕೆ, ಬುದ್ಧಿಮತ್ತೆಗೆ, ಸೌಂದರ್ಯಕ್ಕೆ, ಪ್ರೇಮಕ್ಕೆ ಸಾಟಿಯೇ ಇಲ್ಲವೆಂಬಂತೆ ಹೇಳಿಕೊಳ್ಳುತ್ತಿರುವರು.
ಬರಹಗಾರನೊಬ್ಬ ತಾನು ರಚಿಸಿದ ಕವನ, ಕತೆ ಅಥವಾ ಲೇಖನವನ್ನು ಸಹಜವಾಗಿ ಪ್ರಕಟಿಸುತ್ತಾನೆ. ಬರಿದೇ ಪ್ರಸ್ತುತ ಪಡಿಸುವುದು ಅಥವಾ ಹಂಚಿಕೊಳ್ಳುವುದೇಕೆಂದರೆ ಅದು ಓರ್ವ ವ್ಯಕ್ತಿಯ ಅಥವಾ ಸಮಾಜದ ಅಭಿಪ್ರಾಯವನ್ನು ಅಥವಾ ಒಲವು ನಿಲುವುಗಳನ್ನು ಅಭಿವ್ಯಕ್ತಿಗೊಳಿಸುತ್ತಿರುತ್ತವೆ. ಹಾಗಾಗಿ ಅದನ್ನು ಅವನು ಹಂಚಿಕೊಳ್ಳುವುದು ಸಹಜ. ಈ ಹಂಚಿಕೊಳ್ಳುವಿಕೆಯಲ್ಲಿ ಪ್ರಶಂಸೆಯ ಹಸಿವಿರಲಾರದು. ಆದರೆ, ತಾವೊಂದು ಸುಂದರವಾದ ಮತ್ತು ಅಪರೂಪವಾದ ಅಥವಾ ವಿಶಿಷ್ಟವಾದ ಕತೆಯೊಂದನ್ನು ಅಥವಾ ಕವನವೊಂದನ್ನು ಬರೆದಿದ್ದೇನೆ ಎಂದು ನಿಮ್ಮ ವಾಟ್ಸಪ್ಪಿಗೋ ಅಥವಾ ಇನ್ಬಾಕ್ಸಿಗೋ ಯಾರಾದರೂ ಕಳುಹಿಸಿದ್ದಾರೆಂದರೆ, ಅವರು ಬರಿದೇ ಹಂಚಿಕೊಳ್ಳಲು ಕಳುಹಿಸಿಲ್ಲ. ನಿಮಗೂ ವಿಷಯ ತಿಳಿದಿರಲಿ ಎಂಬ ಸಾಧಾರಣ ಧೋರಣೆಯಲ್ಲ.
ಪ್ರಶಂಸೆಗಳನ್ನು ಉಣಬಡಿಸಿ ನನ್ನ ಆತ್ಮರತಿಯ ಹಸಿವನ್ನು ತಣಿಸಿ ಎಂದು. ಪ್ರಶಂಸೆಗಳಿಗಾಗಿ ಪರಿತಪಿಸುವುದು, ಪ್ರಶಸ್ತಿಗಳಿಗಾಗಿ ಹಂಬಲಿಸಿ ಹೆಣಗಾಡಿ ಎಂತಾದರೂ ಪಡೆಯುವುದು, ಕಮಿಷನ್ ಕೊಟ್ಟಾದರೂ ಡಾಕ್ಟರೇಟ್ ಪಡೆದು ಡಾ. ಹಾಕಿಕೊಂಡು ಆನಂದಿಸುವುದು; “ಅದು ಸಾಮಾನ್ಯ” ಕೆಟಗರಿಗೆ ತಳ್ಳಬೇಡಿ. ಆತ್ಮರತಿಯ ಹಸಿವೆಯಿಂದ ಬಳಲುತ್ತಿರುವ ಅರಿಮೆ ಎಂಬ ಅರಿವಿರಲಿ. ಅರಿಮೆಗಳಿರುವುದು ಸಾಮಾನ್ಯವಲ್ಲ. ಸಾಮಾನ್ಯವಾಗಿರುವ ಸಮಸ್ಯೆಗಳು.
ನನಗೆ ಅವರು ಗೊತ್ತು
ಒಂದೆರಡು ವರ್ಷಗಳ ಹಿಂದೆ, ನಮ್ಮ ಮನೆಯ ಹತ್ತಿರವೇ ಮರವೊಂದರ ಕೆಳಗೆ ಧೂಮಪಾನ ಮತ್ತು ಮದ್ಯಪಾನದಲ್ಲಿ ನಿರತರಾಗಿದ್ದ ಯುವಕರ ತಂಡವೊಂದು ಮನೆಯೊಳಗಿದ್ದವರಿಗೆ ಕಿರಿಕಿರಿ ಮಾಡುವಷ್ಟು ಉತ್ಸಾಹದಲ್ಲಿ ಊಳಿಡುತ್ತಿದ್ದರು. ನಿದ್ರೆ ಮಾಡುತ್ತಿದ್ದ ನನಗೆ ಭಂಗವಾಗಬಾರದೆಂದು ನನ್ನ ಹೆಂಡತಿ ಅವರ ಬಳಿಗೆ ಹೋಗಿ, “ನೀವು ಹೀಗೆಲ್ಲಾ ಇಲ್ಲಿ ಗಲಾಟೆ ಮಾಡಬಾರದು. ಎದ್ದು ಬಾರ್ ಅಥವಾ ಪಬ್ ಗೆ ಹೋಗಿ” ಎಂದು ಹೇಳಿದಳು. ಅವರಲ್ಲೊಬ್ಬ ಹೇಳಿದನಂತೆ, “ರೀ ಮೇಡಂ, ನಾವ್ಯಾರು ಗೊತ್ತಾ? ರಾಮ ಲಕ್ಷ್ಮಣರ ಹುಡುಗರು” ಎಂದು. “ಯಾವ ರಾಮ ಲಕ್ಷ್ಮಣ? ರಾಮ ಲಕ್ಷ್ಮಣರ ಹುಡುಗರಾದರೆ ಭಜನೆ ಮಾಡ್ಕೊಂಡು ಕೂತ್ಕೊಳ್ಳಿ. ಇಲ್ಯಾಕೆ ಬಂದು ಹೀಗೆ ಗಲಾಟೆ ಮಾಡ್ತೀರಿ” ಎಂದವಳೇ ಮನೆಗೆ ಬಂದು ಪೋಲಿಸರಿಗೆ ಫೋನ್ ಮಾಡಿ, ಅವರು ಬಂದು ರಾಮ ಲಕ್ಷ್ಮಣರ ಹುಡುಗರಿಗೆ ಬೈದು ಬೆತ್ತದ ರುಚಿಯನ್ನೋ ತೋರಿಸಿ ಕಳುಹಿಸಿದ್ದರು.
ರಾಮ ಲಕ್ಷ್ಮಣರಿಬ್ಬರೂ ರೌಡಿಗಳು ಎಂದು ಪೋಲಿಸರು ರಾಮಾಯಣದ ರಾಮ ಲಕ್ಷ್ಮಣರಷ್ಟೇ ತಿಳಿದಿದ್ದ ನನ್ನ ಹೆಂಡತಿಗೆ ತಿಳಿಸಿದರು. ಅವಳಿಗೆ ಅರ್ಥವಾಗದೇ ಹೋಗಿದ್ದು, ಅವರಿಬ್ಬರ ಹೆಸರು ಹೇಳಿದರೆ ತಾನೇಕೆ ಸುಮ್ಮನಾಗಬೇಕೆಂದು ಅವರು ಬಯಸಿದರು ಎಂದು.
ಆತ್ಮರತಿಯ ಸ್ವಕುಚ ಮರ್ಧನದವರದು ಇದಿನ್ನೊಂದು ಲಕ್ಷಣ. ನನಗೆ ಆ ಮಿನಿಸ್ಟರ್ ಗೊತ್ತು, ಈ ಹೀರೋ ಮೊದಲು ನಮ್ಮನೇಲೇ ಬಾಡಿಗೆಗೆ ಇದ್ದ, ಆ ಹೀರೋಯಿನ್ ನನ್ನ ಫ್ರೆಂಡ್ಗೆ ಫ್ರೆಂಡು, ಆ ಸಾಧಕ ನಮ್ಮ ಸಂಬಂಧಿಗಳೇ ಆಗಬೇಕು; ಎಂದೆಲ್ಲಾ ಪ್ರಖ್ಯಾತ ವ್ಯಕ್ತಿಗಳ ಅಥವಾ ಸಂಘಸಂಸ್ಥೆಗಳ ಜೊತೆಗೆ ತಮ್ಮ ಗುರುತುಗಳನ್ನು ಅಗತ್ಯವಿಲ್ಲದಿದ್ದರೂ ಪ್ರದರ್ಶಿಸುತ್ತಿರುವುದು.
ಆತ್ಮಪೋಷಣೆ
ಗೌರಿಹಬ್ಬದ ದಿನದಂದು ಸಂಗೀತ ನಿರ್ದೆಶಕ ಹಂಸಲೇಖ ಮತ್ತವರ ಮನೆಯವರು ನಮ್ಮ ಮನೆಗೆ ಬಂದಿದ್ದರು. ನಾನೆಲ್ಲೋ ಒಳಗಿದ್ದೆ. ನಮ್ಮ ತಾಯಿಯ ಜೊತೆ ಫೋನಿನಲ್ಲಷ್ಟೇ ಮಾತಾಡಿದ್ದ ಹಂಸಲೇಖರವರಿಗೆ ಅಮ್ಮನ ಮುಖ ಪರಿಚಯವಿಲ್ಲ. ವರಾಂಡದಲ್ಲಿ ನಿಂತಿದ್ದ ಅತ್ತೆಯವರ ಬಳಿಗೆ ಬಂದು “ಅಮ್ಮಾ ನಮಸ್ಕಾರ” ಎಂದರು. ಅವರನ್ನು ನಮ್ಮ ತಾಯಿ ಎಂದು ತಿಳಿದಿದ್ದರು. ಹಲ್ಲಿಗೆ ಕಡ್ಡಿ ಚುಚ್ಚಿಕೊಳ್ಳುತ್ತಿದ್ದ ಅವರು “ಆ” ಎಂದರು, ಅಂದರೆ ‘ಸರಿ’ ಅಂತ ಅರ್ಥ. “ನಾನು ಹಂಸಲೇಖ” ಎಂದರು. ಆ ಧ್ವನಿಯಲ್ಲಿ ನಿಮಗೆ ಗೊತ್ತೇ ಇರಬೇಕಾದ ಪರಿಚಯ ಎಂಬ ಧೋರಣೆ. ಆದರೆ ಅವರು ಅಂದಿದ್ದು, “ಅದಕ್ಕೆ?” ಅಂತ. ಹಂಸಲೇಖರಿಗೆ ಒಂದು ಕ್ಷಣ ಕಕ್ಕಾಬಿಕ್ಕಿ. “ನಾನು ಹಂಸಲೇಖ” ಎಂಬ ಭಾವಕ್ಕೆ ತಟ್ಟಂತ ತಡೆ.
ಒಳಗಿಂದ ಬಂದ ನನ್ನ ತಾಯಿ, “ಓ ಹಂಸಲೇಖ ಬನ್ನಿ ಬನ್ನಿ” ಎಂದು ಕರೆದುಕೊಂಡು ಹೋದರು. ಅಲ್ಲಿಗೆ ಅವರ ಮುಜುಗರವನ್ನು ತಿಳಿಗೊಳಿಸಿಕೊಳ್ಳಲು ಸಾಧ್ಯವಾಯಿತು. ನಮ್ಮತ್ತೆಗೆ ಹಂಸಲೇಖ ಎಂದರೆ ಯಾರೆಂದೇ ಗೊತ್ತಿರಲಿಲ್ಲ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಗೊತ್ತಿರುವ ಏಕೈಕ ವ್ಯಕ್ತಿ ಎಂದರೆ ಅವರು ರಾಜ್ ಕುಮಾರ್ ಮಾತ್ರ.
“ನಾನು ಹಂಸಲೇಖ ಎಂಬ ಗರ್ವವನ್ನು ಆ ತಾಯಿ ಮುರಿದರು” ಎಂದು ಹಂಸಲೇಖ ಆಗಾಗ್ಗೆ ನೆನಪು ಬಂದಾಗ ನನ್ನ ಅತ್ತೆಯನ್ನು ನೆನೆಸಿಕೊಳ್ಳುತ್ತಿದ್ದರು. ಆತ್ಮರತಿಯ ಅಭಿವ್ಯಕ್ತಿಯನ್ನು ಪೋಷಿಸಿದಾಗ ಅದು ಉಬ್ಬುವುದು. ಪೋಷಣೆ ಸಿಗದಿದ್ದಾಗ ಅದು ಕುಗ್ಗುವುದು. ಕೆಲವು ಸಲ ಖಿನ್ನತೆಗೇ ಜಾರುವುದು.
ಜನಪ್ರಿಯ ಕಲಾವಿದರೂ ಅದೆಷ್ಟು ಎತ್ತರಕ್ಕೆ ಬೆಳೆದಿದ್ದರೂ, “ನನ್ನ ಪ್ರತಿಭೆ ಮತ್ತು ಸೇವೆಯನ್ನು ಗುರುತಿಸಿ ಸರ್ಕಾರ ಪ್ರಶಸ್ತಿಯನ್ನು ಕೊಟ್ಟಿಲ್ಲ” ಎಂದು ಸಂದರ್ಶನಗಳಲ್ಲಿ ಅವಲತ್ತುಕೊಳ್ಳುತ್ತಿದ್ದಾಗ ನಾರ್ಸಿಸಸ್ನ ಪ್ರಲಾಪದಂತೆ ಕಂಡರೆ ತಪ್ಪೇನೂ ಅಲ್ಲ. ನಾರ್ಸಿಸಸ್ ಅಲ್ಲದಿದ್ದರೂ ನಾರ್ಸಿಸಸ್ ಸಂಬಂಧಿಕರೇ ಆಗಿರುತ್ತಾರೆ.
ಬಹುಪರಾಕ್
ಕೆಲವೊಂದು ಫ್ಲೆಕ್ಸ್ಗಳಲ್ಲಿ ಯಾವುದ್ಯಾವುದೋ ಕನ್ನಡ ಹೋರಾಟಗಾರರೆಂದು ಗುರುತಿಸಿಕೊಂಡವರ ಚಿತ್ರಗಳ ಕೆಳಗೆ ಸಮಸ್ತ ಕನ್ನಡಿಗರ ಹೃದಯ ಸಿಂಹಾಸನಾಧೀಶ ಎಂದೇನಾದರೂ ಹಾಕಿದ್ದರೆ ತಕ್ಷಣವೇ ನಾನು ನನ್ನ ಪಕ್ಕದವರಿಗೆ ಹೇಳುತ್ತೇನೆ. ಅದು ನನ್ನ ಹೃದಯದ ಹೊರತು ಎಂದು. ತಮ್ಮ ಹೆಸರಿನ ಹಿಂದೆ ಬಿರುದುಬಾವಲಿಗಳನ್ನು ಹಚ್ಚಿಕೊಳ್ಳುವುದು, ಸ್ವಾಮೀಜಿಗಳು ತಮ್ಮ ಆಟೋಗ್ರಾಫ್ ಹಾಕುವಾಗಲೂ ಜಗದ್ಗುರು ಶ್ರೀ ಶ್ರೀ ಶ್ರೀ ಎಂದು ಬರೆದುಕೊಂಡು ತಮ್ಮ ಹೆಸರನ್ನು ಬರೆಯುವುದು ಆತ್ಮರತಿಯ ಮತ್ತೊಂದು ಮಗ್ಗುಲೇ.
ಕೆಲವೊಂದು ಸ್ವಾಮಿಗಳ ಆತ್ಮರತಿಯ ಲಕ್ಷಣಗಳು ಅಳತೆ ಮೀರಿದ್ದಾಗಿರುತ್ತದೆ. ನಮಸ್ಕಾರಕ್ಕೆ ಪ್ರತಿನಮಸ್ಕಾರ ಹೇಳದಿರುವಷ್ಟು. ಅವರನ್ನು ನೋಡಲು ಯಾರಾದರೂ ಬಂದರೆಂದರೆ ಮುಗಿಸಿಕೊಳ್ಳಲು ಪಾದಗಳನ್ನು ಮುಂದೆ ಸರಿಸುವಷ್ಟು. ತಮ್ಮ ಕಿರೀಟಧಾರಿ ಫೋಟೋ, ತಮ್ಮ ತಲೆಯ ಹಿಂದೆ ಫೋಟೋಶಾಪಿನಲ್ಲಿ ಪ್ರಭಾವಳಿಯನ್ನು ಬಿಡಿಸಿಕೊಂಡು ನಗುನಗುತ್ತಾ ಅಭಯ ಹಸ್ತವನ್ನು ತೋರುವ ದೈವೀಪಟವನ್ನು ಮಾಡಿಸಿಕೊಳ್ಳುವಷ್ಟು.ಆತ್ಮರತಿಯರಿಮೆಯವರೋ ಬಹುಬಹು ಪರಾಕು ಪ್ರಿಯರು.
ಈ ಆತ್ಮರತಿಯರಿಮೆಯ ಮತ್ತೊಂದು ಲಕ್ಷಣವೆಂದರೆ ಇತರರದನ್ನು ಪ್ರಶಂಸಿಸಲು ಅಷ್ಟು ಮನಸೊಪ್ಪದಿರುವುದು. ತಾವು ಯಾವುದೋ ಒಂದು ಆ ಕೆಲಸವನ್ನು ಎಂದಿಗೂ ಮಾಡದಿದ್ದರೂ “ಅದೇನು ಮಹಾ. ನಾನೂ ಮಾಡುತ್ತೇನೆ” ಎನ್ನುವುದು. ಸಾಲದಕ್ಕೆ ಅಸೂಯಾಪರವಾಗಿವುದು. ಆತ್ಮರತಿಯೆಂಬ ಅರಿಮೆಗೆ ಅನೇಕಾನೇಕ ಗೀಳುಗಳು ಮತ್ತು ವ್ಯಸನಗಳು ಆಪ್ತ ಸ್ನೇಹಿತರು.
ಫೇಸ್ಬುಕ್ಕಿನಲ್ಲಿ ತಮಗೇ ಆಸಕ್ತಿ ಇರುವ ವಿಷಯವನ್ನೋ ಅಥವಾ ಸಂಗತಿಯನ್ನೋ ಇನ್ನಾರಾದರೂ ತಮಗಿಂತ ಮುಂಚೆಯೇ ಪ್ರಕಟಿಸಿಬಿಟ್ಟರೆ, ಅಥವಾ ತಾವು ಪ್ರಕಟಿಸಿದ್ದರೆ ಚೆನ್ನಾಗಿರುತ್ತಿತ್ತು ಎಂಬಂತಹ ಬರಹವನ್ನೋ ಅಥವಾ ವಿಷಯವನ್ನೋ ಗೋಡೆಗೆ ಅಂಟಿ ಹಾಕಿಕೊಂಡಿದ್ದರೆ, ಅದನ್ನು ನೋಡಿದರೂ ಹಾಗೆಯೇ ಮುಂದೆ ಹೋಗುತ್ತಾರೆ. ಅದು ತಮಗೂ ಇಷ್ಟವಾದ ಅಥವಾ ಆಸಕ್ತಿಯ ವಿಷಯವಾಗಿದ್ದರೂ ಲೈಕಿಸುವುದಿಲ್ಲ ಅಥವಾ ಕಮೆಂಟಿಸುವುದಿಲ್ಲ. ಅಸೂಯಾಗ್ನಿಯು ಅವರಿಗೆ ಏನನ್ನೂ ಮಾಡದಂತೆ ತಡೆಯುತ್ತದೆ. ಇನ್ನು ‘ನಾನೂ ಇದೇ ವಿಚಾರ ಮಾಡಿದ್ದೆ. ಆದರೆ ನೀವು ಮಾಡಿದ್ದೀರಿ. ಅಭಿನಂದನೆಗಳು’ ಎಂದು ತಿಳಿಸುವುದು ಬಹಳ ದುಬಾರಿಯ ವ್ಯಾಪಾರ ಅವರಿಗೆ.
ಓ, ಆತ್ಮರತಿಯ ಆಯಾಮಗಳು ಅಗಣಿತ. ಆದರೂ ಒಂದಷ್ಟು ಗುಣಿಸಿದ್ದೇನೆ ಮತ್ತು ಪರಿಗಣಿಸಿದ್ದೇನೆ ಮನೋವೈಜ್ಞಾನಿಕ ತಳಹದಿಯಿಂದ. ಮುಂದೆ ನೋಡೋಣ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
-
ದಿನದ ಸುದ್ದಿ5 days agoಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!
-
ದಿನದ ಸುದ್ದಿ5 days agoವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್ಗೆ ರಾಜೀನಾಮೆ ಸವಾಲು!
-
ದಿನದ ಸುದ್ದಿ2 days agoಬಿಜೆಪಿ ರೈತ ಮೋರ್ಚಾದಿಂದ ಬಂದ್ಗೆ ಕರೆ; ಹಲವು ವೃತ್ತಗಳಲ್ಲಿ ಟೈರ್ಗೆ ಬೆಂಕಿ, ಬೆಂಕಿ ನಂದಿಸಿದ ಪೊಲೀಸರು
-
ದಿನದ ಸುದ್ದಿ6 days agoವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಕ್ಯಾಂಟೀನ್ಗಳಿಗೆ ಅಧಿಕಾರಿಗಳ ಶಾಕ್! 34 ಕ್ಯಾಂಟೀನ್ ಪರಿಶೀಲನೆ, 5ಕ್ಕೆ ನೋಟಿಸ್
-
ದಿನದ ಸುದ್ದಿ5 days agoTrump Oil Deal: ವೆನೆಜುವೆಲಾದ 65 ಬಿಲಿಯನ್ ಬ್ಯಾರೆಲ್ ತೈಲದ ಮೇಲೆ ಅಮೆರಿಕದ ಕಣ್ಣು; ಇದು ವಿಶ್ವದ ಅತಿದೊಡ್ಡ ಡೀಲ್ನಾ?
-
ದಿನದ ಸುದ್ದಿ6 days agoಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
-
ದಿನದ ಸುದ್ದಿ3 days agoಕುಂದುಕೊರತೆಗಳಿಗೆ ತ್ವರಿತ ಪರಿಹಾರ ನೀಡಲು ಏಕೀಕೃತ ವ್ಯವಸ್ಥೆ; ಶನಿವಾರ ಜನಸಂಪರ್ಕ, ಬುಧವಾರ ಮೂರು ಹಂತದ ಪರಿಶೀಲನೆ

