ಅಂತರಂಗ
ಅರಿಮೆಯ ಅರಿವಿರಲಿ-10 : ನಾನು ಎಂದರೆ ಯಾರು..?
- ಯೋಗೇಶ್ ಮಾಸ್ಟರ್
“ನಮಸ್ಕಾರ” ಎಂದಿರಿ ಅವರಿಗೆ. ಅವರೂ “ನಮಸ್ಕಾರ” ಎಂದರು. ನಿಮ್ಮಿಬ್ಬರ ಭೇಟಿಯಾಗಿ ಹತ್ತು ನಿಮಿಷಗಳಾಗಿವೆ. ಹನ್ನೊಂದನೆಯ ನಿಮಿಷಕ್ಕೆ ಇನ್ಯಾರೋ ಮೂರನೆಯವರು ಅವರಿಗೆ ತಿಳಿದಿರುವವರೋ ಅಥವಾ ಸಾಂದರ್ಭಿಕವಾಗಿ ಬಂದರು. ಅವರು ನಿಮ್ಮನ್ನು ವರ್ಣಿಸಲು ಪ್ರಾರಂಭಿಸುತ್ತಾರೆ. ನಿಮ್ಮದೆಂತಹ ಉದಾತ್ತ ವ್ಯಕ್ತಿತ್ವ, ನೀವು ಎಷ್ಟು ಪ್ರತಿಭಾವಂತರು, ನೀವು ಅವರಿಗೆ ಈಗ ಸಿಕ್ಕಿದ್ದು ಎಷ್ಟು ಅದೃಷ್ಟ; ಇತ್ಯಾದಿ.
ನಿಮ್ಮ ಅಗಣಿತ ಗುಣನಾಮ ಬಹುಪರಾಕುಗಳನ್ನೆಲ್ಲಾ ಕೇಳಿ ನೀವೇನಾದರೂ ಎಣ್ಣೆಗೆ ಬಿದ್ದ ಪೂರಿಯಂತೆ ಉಬ್ಬಿದಿರೋ ನೀವೊಬ್ಬ ನಾರ್ಸಿಸಸ್. ನಿಮ್ಮನ್ನು ಪುಂಖಾನುಪುಂಖವಾಗಿ ಹೊಗಳುತ್ತಿರುವವರು ಕೂಡಾ ಒಬ್ಬ ನಾರ್ಸಿಸಸ್. ಬರಿಯ ಹತ್ತು ನಿಮಿಷದ ಪರಿಚಯದಲ್ಲಿ ನಿಮ್ಮ ಜೀವಮಾನದ ಸಾಧನೆಯನ್ನು ಜಗತ್ತಿಗೆ ಸಾರಲು ಪಣತೊಟ್ಟು ನಿಂತಿರುವ ಮತ್ತು ನಿಮಗೆ ಬೇಕು ಬೇಕಾದ ಎಲ್ಲಾ ಪ್ರಶಸ್ತಿಗಳನ್ನು ಅವರ ಪೆಟ್ಟಿಗೆಯಿಂದ ತೆಗೆತೆಗೆದು ಕೊಡುತ್ತಿದ್ದಾರೆಂದರೆ ಅವರೂ ಕೂಡಾ ಒಬ್ಬ ನಾರ್ಸಿಸಸ್.
ನೀವೂ ಕೂಡಾ ಇಂತೆಯೇ ಅವರನ್ನು ಪ್ರಶಂಸಿಸಬೇಕೆಂದು ಅವರು ನಿಮಗೆ ಲಂಚ ನೀಡುತ್ತಿರುವುದು. ನೀವು ಅವರು ಬಡಿಸಿದ ರಸದೌತಣ ಸವಿದು, ಗಪ್ಪನೆ ಸುಮ್ಮನಾಗಿಬಿಟ್ಟರೆ. ಅವರು ನಿಮ್ಮನ್ನು ಮತ್ತೆಂದೂ ಹೊಗಳಲಾರರು. ನೀವೂ ಹೊಗಳಿದರೋ ಅಲ್ಲಿಗೆ ಕೊಟ್ಟು ಪಡೆಯುವ ವ್ಯವಹಾರ ಸುಸೂತ್ರವಾಗಿ ನಡೆಯುತ್ತಲೇ ಇರುತ್ತದೆ. ಇದು ಕೆಲವು ಸಲ ವೇದಿಕೆಯ ಮೇಲೂ ನಡೆಯುತ್ತದೆ.
ನಮ್ಮ ಸಾಧನೆಯ ಪಟ್ಟಿ ಒಂದು ನಮ್ಮ ಕೈಯ ಒಂದು ಮೊಳದಷ್ಟಿರುತ್ತದೆ. ಆದರೆ ನಮ್ಮನ್ನು ಕರೆಸಿದವರು ಅದನ್ನು ದುಬೈನ ಬುರ್ಜಾ ಖಲೀಫ್ ಕಟ್ಟಡದಷ್ಟು ಎಳೆದಿರುತ್ತಾರೆ. ಅಲ್ಲಿ ನಮ್ಮನ್ನು ಕರೆಯಿಸಿದವರಿಗೆ ನಾರ್ಸಿಸಸ್ ಹಸಿವೆಗೆ ಎರಡು ಬಗೆಯ ಊಟ ಬೇಕು. ಒಂದು ನಾವು ಕರೆಯಿಸಿರುವ ವ್ಯಕ್ತಿ ಸಾಧಾರಣ ಅಲ್ಲ. ಅಸಮಾನ್ಯ. ಅವರು ಅಷ್ಟು ಅಗ್ರಗಣ್ಯ ಎಂಬ ಚಿತ್ರಣವನ್ನು ಸಭಿಕರಿಗೆ ನೀಡುವುದು ಒಂದಾದರೆ, ಅಷ್ಟು ಹೊಗಳಿಸಿ ಹೂಮಳೆಗರೆಸಿಕೊಂಡವರು ಅದಕ್ಕೆ ಧನ್ಯತಾಭಾವದಿಂದ ಮರುಹೊಗಳಿಕೆ ಕೊಡಬಾರದೇ? ಇಂತಹ ಕಾರ್ಯಕ್ರಮ ಮಾಡುತ್ತಿರುವ ಇವರು ಅದೆಷ್ಟು ಮಹೋನ್ನತ ವ್ಯಕ್ತಿ ಎಂದು ಬಿನ್ನವತ್ತಳೆ ನೀಡದೇ ಹಾಗೇ ಹೋಗುವುದು ನ್ಯಾಯವೇ? ಧರ್ಮವೇ? ಸರಿ, ಪೈಪೋಟಿಗಳ ಮೇಲೆ ಹೊಗಳಬೇಕಾಗುತ್ತದೆ.ಹೊಗಳಿಕೆಗಳ ಹೊನ್ನಶೂಲದಿಂದ ಪರಸ್ಪರ ಇರಿದಿರಿದುಕೊಳ್ಳುತ್ತಿರುವುದು ಆತ್ಮರತಿಯರಿಮೆಯ ಮತ್ತೊಂದು ಫಳಫಳಿಸುವ ಲಕ್ಷಣ.
ಹೊಗಳಿಕೆಗಳ ಸುರಿಮಳೆ ಸುರಿದಾಗ ನಾರ್ಸಿಸಸ್ ಅಲ್ಲದವರಾದರೆ ಸಂಕೋಚದಿಂದ ಹಿಡಿಮುದ್ದೆಯಾಗುತ್ತಾರೆ. ಸ್ಪಂದಿಸುವುದೂ ಕಷ್ಟವಾಗುತ್ತದೆ. ಅಂತವರು ಸುಮ್ಮನಿದ್ದರೆ ಒಪ್ಪಿಕೊಂಡಂತಹ ಕಷ್ಟ, ಅದನ್ನು ಅಲ್ಲಗಳೆದರೆ ಸಭಿಕರ ಮುಂದೆ ಆಯೋಜಕರನ್ನು ಮುಜುಗರಕ್ಕೆ ತಳ್ಳಿದಂತಾಗುವುದು. ಅದಕ್ಕೆ ಅಡ್ಡಗೋಡೆ ಮೇಲೆ ದೀಪವಿಟ್ಟುಬಿಡುತ್ತಾರೆ. “ಇವರು ನನ್ನ ಮೇಲಿನ ಅಭಿಮಾನದಿಂದ ಇಷ್ಟು ಹೇಳುತ್ತಿದ್ದಾರೆ. (ನಾನು ಅಷ್ಟು ಇಲ್ಲ) ಎಂದು ಬ್ರಾಕೆಟಲ್ಲಿ ಓದುವವರಿಗೆ ಅರ್ಥವಾಗುವಷ್ಟು ಒಂದಿಷ್ಟು ನಗೆ ನಕ್ಕು ವಿಷಯವನ್ನು ತೇಲಿಸಿಬಿಡುತ್ತಾರೆ.
ಕೆಲವು ಸಮಾರಂಭಗಳು ಆತ್ಮರತಿಯ ಅಮೋಘ ಮೆರವಣಿಗೆಯೇ ಆಗಿರುತ್ತದೆ. ನಾರ್ಸಿಸಮ್ ಬಗ್ಗೆ ತಿಳಿದಿವರಿಗೆ ಅದು ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಗಾದೆಯಂತೆ. ಕೆಲವರೆಲ್ಲಾ ಆ ಎಲ್ಲಾ ಹೊಗಳಿಗೆಗಳನ್ನು ಸ್ವೀಕರಿಸುತ್ತಾರೆ. ಹೌದು, ನಾನಿದಕ್ಕೆ ಅರ್ಹ ಎಂದು ಭಾವಿಸಿರುತ್ತಾರೆ. ಇನ್ನೂ ಸರಿಯಾಗಿ ಮತ್ತು ಪೂರ್ತಿಯಾಗಿ ಅವರು ಹೇಳಿಲ್ಲ ಎಂದೂ ಸ್ವಲ್ಪ ನಿರಾಶೆಯಾಗುತ್ತದೆ. ಇವರು ನಾರ್ಸಿಸಮ್ ಪಂಥದವರು.
ನೀವು ಅವರಿಗೆ ನಿರಾಶೆ ಮಾಡಿದಿರೋ, ಉಹುಂ, ಇನ್ನೊಂದು ಸಲ ಅವರು ನಿಮ್ಮನ್ನು ಅವರು ಲಕ್ಷಿಸುವುದಿಲ್ಲ. ನೀವು ಅವರನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ, ಅತಿಥಿಯಾಗಿ ಕರೆದು ಉಪೇಕ್ಷೆ ಮಾಡಿಬಿಡುತ್ತೀರಿ ಎಂದು ನಿಮ್ಮ ಕಡೆ ಹೊರಳುವುದಿಲ್ಲ.
ಹೊಗಳಿಕೆಯೇ ಆಹಾರ
ಆತ್ಮರತಿಯ ಸುಖಿಗಳು ತಮ್ಮನ್ನು ಭೇಟಿ ಮಾಡಿದವರಿಗೆ ತಮ್ಮ ಜೀವನದ ಮಹತ್ವದ ಅನೇಕಾನೇಕ ಘಟನೆಗಳನ್ನು ಹೇಳುತ್ತಿರುತ್ತಾರೆ. ಅದು ಆ ಸಂದರ್ಭಕ್ಕೆ ಬೇಕಿರಲಿ, ಬೇಡದಿರಲಿ. ಹೇಳದೇ ಬಿಡುವುದಿಲ್ಲ. ನೀವು ಕತೆ ಕೇಳಿದಂತೆ ಕೇಳಿ ಸುಮ್ಮನಾಗಿಬಿಟ್ಟರೆ ಅವರಿಗೆ ಬಹಳ ನಿರಾಶೆಯಾಗುತ್ತದೆ. ಅವರು ಅಷ್ಟೂ ಹೊತ್ತು ಹೇಳಿದ್ದೇಕೆಂದರೆ, ಆ ಗುಣಗಳನ್ನೆಲ್ಲಾ ನೀವು ಗುರುತಿಸಿ, ಹೆಕ್ಕಿ, ಒಂದಿಷ್ಟು ಒಳ್ಳೆಯ ಮಾತುಗಳನ್ನಾಡಬೇಕು ಎಂದು. ಅವು ಕಷ್ಟದ ಮತ್ತು ಸಾಹಸದ ಕೆಲಸಗಳಾಗಿರಬಹುದು.
ಯಾರಿಗೋ ಉಪಕಾರ ಮಾಡಿದ್ದಾಗಿರಬಹುದು.ಯಾವುದೋ ಸನ್ನಿವೇಶದಲ್ಲಿ ಹೆಣಗಾಡಿದ್ದೋ, ಹೋರಾಡಿದ್ದೋ ಆಗಿರಬಹುದು.
ಅವರಿಗೆ ಪ್ರಿಯವಾಗುವ ಶಬ್ದಗಳೇನೆಂದರೆ,
“ಅಬ್ಬಾ, ನೀವು ಅದು ಹೇಗೆ ಆ ಸಾಹಸ ಮಾಡಿದಿರಿ? ನೀವಾಗಿದ್ದಕ್ಕೆ ಮಾಡಿದಿರಿ. ಬೇರೆಯವರಾಗಿದ್ದರೆ ಓಡಿ ಹೋಗಿಬಿಡುತ್ತಿದ್ದರು. ಸೋತು ಸುಣ್ಣವಾಗಿಬಿಡುತ್ತಿದ್ದರು.”
“ಈಗಿನ ಕಾಲದಲ್ಲಿ ಯಾರು ಆ ರೀತಿ ನೆರವಾಗುತ್ತಾರೆ. ಎಲ್ಲರೂ ಅವರವರದು ನೋಡಿಕೊಳ್ಳುತ್ತಾರೆ. ನೀವಾಗಿದ್ದಕ್ಕೆ ಅಷ್ಟು ಉಪಕಾರ ಮಾಡಿದ್ದೀರಿ. ನಿಜವಾಗಿಯೂ ನೀವು ಗ್ರೇಟ್.” “ಪ್ಚ್, (ಅವರನ್ನೇ ದಿಟ್ಟಿಸಿ ನೋಡುತ್ತಾ) ನಂಬಕ್ಕೇ ಆಗಲ್ಲ. ನೀವು ಹೇಗೆ ಇವೆಲ್ಲಾ ಮಾಡಿದಿರಿ? ನನಗೆ ನಿಮ್ಮ ಜೊತೆ ಹೀಗೆ ಇರೋದೇ ಹೆಮ್ಮೆ.”
ಆಗ ಅವರ ಮುಖ ನೋಡಿ. ಕಣ್ಣುಗಳಲ್ಲಿ ಹೊಳಪಿರುತ್ತದೆ. ಮುಖದ ಪೂರ್ತಿ ನಗು ತುಂಬಿರುತ್ತದೆ. ವೆಂಕಟೇಶ್ವರ ಮಹಾತ್ಮ್ಯೆ ಸಿನಿಮಾದಲ್ಲಿ ಪ್ರತ್ಯಕ್ಷವಾದ ದೇವರು ನಸುನಗುತ್ತಾ ಭಕ್ತನ ಸ್ತುತಿಗೀತೆಗಳನ್ನು ಕೇಳುತ್ತಾ ತಲೆಯಾಡಿಸುತ್ತಿರುವಂತೆ ಕಾಣುತ್ತದೆ.
ಆತ್ಮರತಿಯ ರತಿಮನ್ಮಥರ ಸಂಭಾಷಣೆಯಲ್ಲಿ ಸಾಮಾನ್ಯವಾಗಿ ಅವರು ಮಾಡಿರುವ ಸಾಧನೆ ಅಥವಾ ಪಟ್ಟಿರುವ ವೇದನೆಗಳಿಂದ ಗೆದ್ದಿರಿವುದ ನಿವೇದನೆ. ಇತರರಿಗಿಂತ ತಾವು ವಿಶೇಷವೆಂದು ತಮ್ಮ ಕೇಳುಗ ಕುರಿಗಳಿಗೆ ಅರ್ಥ ಮಾಡಿಸಬೇಕಾಗಿರುವುದೇ ಅವರ ಗುರಿ.
ಅವರ ಮಾತುಗಳನ್ನು ಮುಂದಿರುವವರು ಕೇಳುತ್ತಿದ್ದಾರೋ ಇಲ್ಲವೋ ಎಂದು ಯೋಚಿಸುವುದೇ ಇಲ್ಲ. ತಮ್ಮ ಮುಂದಿರುವವರು ತಾವು ಕೇಳುತ್ತಿರುವ ಸಂಕೇತವಾಗಿ ಪ್ರಶ್ನೆಗಳನ್ನು ಕೇಳದಿದ್ದರೂ, ಅನುಮಾನಗಳನ್ನು ಮುಂದಿಟ್ಟು ಬಗೆಹರಿಸಿಕೊಳ್ಳಲು ಯತ್ನಿಸದಿದ್ದರೂ ಇವರು ಹೇಳುತ್ತಲೇ ಇರುತ್ತಾರೆ. ಅವರ ಹಸಿವಿಗೆ ಕೇಳುಗರ ಸಕಾರಾತ್ಮಕ ಪ್ರತಿಕ್ರಿಯೆಯೇ ಆಹಾರ.
ಅಪಾರ ಆತ್ಮವಿಶ್ವಾಸದ ವ್ಯಕ್ತಿಯಂತೆ ಕಾಣುವ ಅವರು ಹಾಗೆಯೇ ವರ್ತಿಸುತ್ತಾರೆ. ಅವರ ಆತ್ಮರತಿಗೆ ಸರಸವಾಗಿ ಉಣಬಡಿಸದ ಅರಸಿಕರನ್ನು ಅವರು ಇಷ್ಟಪಡುವುದಿಲ್ಲ. ದೂರಲಿ, ದೂರದಿರಲಿ ಖಂಡಿತವಾಗಿ ದೂರೀಕರಿಸುತ್ತಾರೆ. ಅವರ ಸುತ್ತ ಹೊಗಳುಭಟರಿರಬೇಕು. ಅವರು ಹೇಳಿದ್ದಕ್ಕೆಲ್ಲಾ, “ಪ್ಚ, ಅಮೋಘ! ವಿಸ್ಮಯ! ಅದ್ಭುತ!” ಎಂದು ಬೆರಗಾಗುತ್ತಿರಬೇಕು.
ಏಳು ಮಹಾಪಾತಕಗಳು
ನಾರ್ಸಿಸಮ್ನ ಏಳು ಮಹಾಪಾತಕಗಳನ್ನು ಮನೋವಿಜ್ಞಾನಿಗಳು ಗುರುತಿಸುತ್ತಾರೆ.
ನಾಚಿಗೇಡಿತನ: ಸಾಮಾನ್ಯವಾಗಿ ಆತ್ಮರತಿಯ ವ್ಯಕ್ತಿಗಳು ಮುಕ್ತವಾಗಿ ಮತ್ತು ಅಭಿಮಾನದಿಂದ ನಾಚಿಗೇಡಿಯಾಗಿರುತ್ತಾರೆ. ನಾನೂಂದ್ರೆ ಏನು? ನಾನೂಂದ್ರೆ ಯಾರು? ನಾನು ಮನಸ್ಸು ಮಾಡಿದರೆ ಏನು ಮಾಡ್ತೇನೆ ಗೊತ್ತಾ?; ಈ ವಾಕ್ಯಗಳೆಲ್ಲಾ ಅವರವೇ. ಅವರು ತಾವು ಯಾವಾಗಲೂ ವಿಮರ್ಶಾತೀತವಾಗಿರಲು ಬಯಸುತ್ತಾರೆ. ತನ್ನಲ್ಲಿ ವಿಮರ್ಶೆ ಮಾಡಲೇನಿದೆ? ನನ್ನ ಟೀಕಿಸುವವನು ಅಥವಾ ವಿಮರ್ಶಿಸುವವನು ಖಂಡನೆ ಅರ್ಹನೆಂದು ಅವರ ಅಚಲ ನಂಬಿಕೆ. ತಾವು ಶ್ರೀಮಾನ್ ಅಥವಾ ಶ್ರೀಮತಿ ಪರ್ಫೆಕ್ಟ್. ಒಂದು ವೇಳೆ ಅವರ ಯಾವುದಾದರೂ ಕೆಲಸ ಖಂಡಿತವಾಗಿ ಖಂಡನೀಯ ಮತ್ತು ತಪ್ಪು ಎಂದು ನಿರೂಪಿಸಿಬಿಟ್ಟಿದ್ದೇ ಆದರೂ, ಅವರು ಹೇಳುವುದೇನೆಂದರೆ, “ಅಕಸ್ಮಾತ್, ಈ ಕೆಲಸ ತಪ್ಪಾಗಿರಬಹುದು.
ಆದರೆ ನನ್ನ ಉದ್ದೇಶವು ಉತ್ತಮವಾಗಿತ್ತು. ನಾನು ಒಳ್ಳೆಯ ಉದ್ದೇಶದಿಂದ ಮಾಡಿದ್ದು” ಎಂದು ಹೇಳುತ್ತಾರೆಯೇ ಹೊರತು, ತಾವು ಅಪರಾಧ ಪ್ರಜ್ಞೆಯಿಂದ ನರಳುವುದೂ ಇಲ್ಲ. ತಾವು ತಪ್ಪಿತಸ್ಥರೆಂದು ಒಪ್ಪಿಕೊಳ್ಳುವುದೂ ಇಲ್ಲ.
ಅಸಾಧ್ಯ ಸಾಧಕ: ನಾರ್ಸಿಸಿಸ್ಟ್ಗಳು ತಮ್ಮನ್ನು ತಾವು ಪರ್ಫೆಕ್ಟ್ ಎಂದು ನಂಬಿರುವ ಕಾರಣದಿಂದ ಇತರರಿಗೆ ಸಾಧ್ಯವಾಗದ ಅದ್ಭುತಗಳನ್ನು ತಾವು ಸೃಷ್ಟಿಸುತ್ತೇವೆಂದು ನಂಬಿರುತ್ತಾರೆ. ಇತರರನ್ನು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡುತ್ತಾರೆಯೇ ಹೊರತು ತಮ್ಮ ಆತ್ಮಚಿತ್ರಣವನ್ನು ಕಿಂಚಿತ್ತೂ ಮುಕ್ಕಾಗಿಸಿಕೊಳ್ಳರು.
ಸೊಕ್ಕು: ಯಾರಾದರೂ ಅವರನ್ನು ಖಂಡಿಸಿದರೆ, ಟೀಕಿಸಿದರೆ ಅವರ ಉಸಿರಾಟ ವೇಗವನ್ನು ಪಡೆಯುತ್ತದೆ. ಸೊಕ್ಕು ಉಕ್ಕೇರುತ್ತದೆ. ಆ ಟೀಕೆಗಳನ್ನು ತುಂಬಾ ವ್ಯಕ್ತಿಗತವಾಗಿ ಅದನ್ನು ತೆಗೆದುಕೊಳ್ಳುವುದು ಮಾತ್ರವಲ್ಲದೇ ಇತರರಿಗೆ ಅವರ ಬಗ್ಗೆ ನಕಾರಾತ್ಮಕವಾಗಿ ಹೇಳುತ್ತಿರುತ್ತಾರೆ. ಅವರ ಚಾರಿತ್ರ್ಯವಧೆ ಮಾಡಲು ಹೇಸುವುದಿಲ್ಲ. ಅವರಿಗೆಂತಾದರೂ ಸಂಕಟ ಬಂದರೆ “ಅವರಿಗೆ ಹಾಗೇ ಆಗಬೇಕು” ಎಂದು ತೃಪ್ತಿಪಡುವ ಪ್ರಯತ್ನ ಮಾಡುತ್ತಾರೆ.
ಅಸೂಯೆ: ಇತರರ ಸಾಧನೆಗಳನ್ನು ಪ್ರಶಂಸಿಸುವುದು ಅವರಿಗೆ ಎಂದೂ ಆಗದು. ಇತರರೇನಾದರೂ ಸಾಧನೆ ಮಾಡಿದ್ದಾರೆಂದರೆ ಅವರ್ಯಾವುದೋ ಅಡ್ಡದಾರಿಯಿಂದ ಮೇಲೆದ್ದು ಬಂದಿರಬೇಕು, ಯಾವುದಾದರೂ ವಶೀಲಿ, ಲಂಚ ರುಶುವತ್ತುಗಳ ಪ್ರಭಾವವಿರಬೇಕು, ಅವರಿಗೇನು ಅವರಪ್ಪನ ಹತ್ತಿರ ದುಡ್ದು ಬೇಕಾದಷ್ಟಿದೆ ಮಾಡುತ್ತಾನೆ; ಹೀಗೆ, ಏನಾದರೊಂದು ಹೇಳಿಯೇ ತೀರುತ್ತಾರೆಯೇ ಹೊರತು ಮೆಚ್ಚುವುದಂತೂ ಇಲ್ಲ. ಅದ್ಯಾವ ಸೀಮೆ ಸಾಧನೆ ಎಂಬ ಉಪೇಕ್ಷೆಯು ಅಸೂಯೆಯ ಬಿಂಬವೇ ಹೊರತು ಮತ್ತೇನಿಲ್ಲ.
ಪರಾಕುಪ್ರಿಯ: ನಾರ್ಸಿಸಿಸ್ಟ್ಗಳು ಸಕಾರಣಕ್ಕೆ ಹೊರತಾದ ಬಿರುದುಬಾವಲಿಗಳನ್ನು ಹೊಂದುವುದಕ್ಕೆ ಇಷ್ಟಪಡುತ್ತಾರೆ. ಪಕ್ಕದ ರಸ್ತೆಯವರಿಗೆ ಅವರ ಬಗ್ಗೆ ತಿಳಿದಿರದಿದ್ದರೂ ತಾವು ಜಗದ್ವಿಖ್ಯಾತರು ಎಂದು ಅನ್ನಿಸಿಕೊಳ್ಳಲು ಆಶಿಸುತ್ತಾರೆ. ಅದನ್ನು ಉಳಿಸಿಕೊಳ್ಳಲು ಸದಾ ಹೆಣಗಾಡುತ್ತಿರುತ್ತಾರೆ. ಅದನ್ನು ಒಪ್ಪಿಕೊಳ್ಳದವರ ಬಗ್ಗೆ ಬಹಳ ಕೋಪವಿರುತ್ತದೆ.
ಪಟಾಲಂ ಪಡೆ: ತಮ್ಮ ಸುತ್ತಲೂ ಹೇಳಿದಂತೆ ಕೇಳಿಕೊಂಡಿರುವ ಒಂದಷ್ಟು ಜನರನ್ನು ಹೊಂದಿರುವಂತಹ ಮನಸ್ಥಿತಿ ಬಹಳ ಸಾಧಾರಣ. ಆ ಜನರು ಇವರಿಗೆ ಪರಾಕು ಹೇಳಲು ಮಾತ್ರವಲ್ಲದೇ, ಇವರ ಶ್ರೇಷ್ಟತೆ ಮತ್ತು ಹೆಗ್ಗಳಿಕೆಯ ಬಗ್ಗೆ ಜನಗಳಲ್ಲಿ ಜಾಗೃತಿಯನ್ನು ಉಂಟು ಮಾಡಬೇಕೆಂದು ಇವರ ಅಭಿಲಾಷೆ. ಸಾಧಾರಣರಲ್ಲದೇ ಇವರು ಮಹಾನ್ ಸಾಧಕರಾಗಿದ್ದರೂ, ಪ್ರಖ್ಯಾತರಾಗಿದ್ದರೂ ಇಂತಹ ಮನಸ್ಥಿತಿಯಲ್ಲೇ ಇರುತ್ತಾರೆ.
ಅವರೊಬ್ಬರು ಈ ನಾಡಿನ ಬಹುಪ್ರಖ್ಯಾತರು. ನಾನೂ ಮತ್ತು ಕೆಲವು ಯುವನಿರ್ದೇಶಕರ ತಂಡಕ್ಕೆ ಅವರು ಗೆಳೆಯರು. ನಾವೆಲ್ಲರೂ ಕೂಡಿ ಒಂದು ಸಂಸ್ಥೆಗೆ ಔಪಚಾರಿಕ ಭೇಟಿ ನೀಡಬೇಕಿತ್ತು. ಪ್ರಖ್ಯಾತರ ಗೆಳೆಯರೊಬ್ಬರೂ ನಮ್ಮೊಂದಿಗೆ ಬಂದಿದ್ದರು.
ಈ ನಮ್ಮ ತಂಡ ಸಾಮಾನ್ಯವಾಗಿ ಮಾತಾಡಿಕೊಂಡು ಬರುತ್ತಿದ್ದೆವು. ಪ್ರಖ್ಯಾತರ ಗೆಳೆಯ ನಮ್ಮ ತಂಡದ ಬಳಿಗೆ ಬಂದು ಹೇಳಿದರು, “ನೀವು ಮೊದಲು ಒಳಗೆ ಬೇಗ ಬೇಗ ಹೋಗಿ. ಅಲ್ಲಿ ಇರುವವರಿಗೆ ಹೇಳಿ, ‘ಸಾರ್ ಬಂದರು, ಸಾರ್ ಬಂದರು’ ಅಂತ. ಅಲರ್ಟ್ ಆಗಲಿ” ಎಂದು.
ಪ್ರಖ್ಯಾತರ ಮುಖವನ್ನು ನೋಡಿದರೆ ಅವರು ಸಹಜವಾಗಿ ಅಲರ್ಟ್ ಆಗುತ್ತಾರೆ. ಮೇಲೆದ್ದು ಬಂದು ಗೌರವಿಸುತ್ತಾರೆ, ಸ್ವಾಗತಿಸುತ್ತಾರೆ. ನಾವು ಹೋಗಿ ‘ಬಂದ್ರು ಬಂದ್ರು’ ಅಂತ ಹೇಳೋದೇನಿದೇಂತ ನಮ್ಮ ಧೋರಣೆ. ನಾವು ಅದಕ್ಕೆ ಜಾಣ ಮುಗ್ಧರಾಗಿ ‘ನೀವು ಹೇಳುವುದು ಹೇಗೆ ಮಾಡುವುದು ಎಂದು ತಿಳಿಯಲಿಲ್ಲ’ ಎಂಬಂತೆ ಪಿಳಪಿಳನೆ ನೋಡುತ್ತಿದ್ದೆವು. ಆಗ ನಗಲೂ ಆಗುತ್ತಿರಲಿಲ್ಲ. ನಾವುಗಳು ಆಮೇಲೆ ಮನಸೋಯಿಚ್ಚೆ ನಗಾಡಿಕೊಂಡೆವು. ಬಹುಶಃ ನಮ್ಮ ಹತ್ತಿರ ಮಾಡಿಕೊಂಡ ತಮ್ಮ ಗೆಳೆಯರ ಅಹವಾಲು ಆ ಪ್ರಖ್ಯಾತರಿಗೆ ತಿಳಿದಿರಲಿಲ್ಲ ಎನಿಸುತ್ತದೆ.
ಇರಲಿ, ಇಂತಹ ಪಟಾಲಂ ಪಡೆಯನ್ನು ಹೊಂದಿರುವಾಸೆ ಆತ್ಮರತಿಸಖರದು. ಅವರನ್ನು ಶೋಷಿಸುತ್ತಿದ್ದೇವೆ ಎಂಬ ಅರಿವೂ ಅವರಿಗಿರುವುದಿಲ್ಲ. ತಮಗಾಗಿ ಅವರು ಹಾಗೆ ಮಾಡಬೇಕಾಗಿರುವುದು ಅವರ ಧರ್ಮ ಎಂದು ಅವರು ಭಾವಿಸಿರುತ್ತಾರೆ.
ಸೀಮೆಯೊಳಗೆ ಬಂಧಿತರು: ಬಹಳ ಶೋಚನೀಯ ಸಂಗತಿಯೆಂದರೆ, ತಾವು ತಮ್ಮ ಸುತ್ತಲೂ ಒಂದು ಎಲ್ಲೆಯನ್ನು ಗೀಚಿಕೊಂಡು ತಮ್ಮನ್ನು ಸಂಕುಚಿತಗೊಳಿಸಿಕೊಳ್ಳುತ್ತಿದ್ದೇವೆ ಎಂಬ ಅರಿವು ಅವರಿಗೆ ಇರದೇ ಹೋಗುವುದು. ಅವರು ತಮ್ಮ ಮತ್ತು ಇತರರ ನಡುವೆ ಕಂದಕಗಳನ್ನು ತೋಡಿಕೊಳ್ಳುತ್ತಿದ್ದೇವೆ ಎಂದು ಅವರ ಅರಿವಿಗೆ ಬಾರದೇ ಹೋಗುವುದು. ಒಂದು ವೇಳೆ ಅವರು ಖ್ಯಾತನಾಮರಾಗಿದ್ದರೆ, ಉನ್ನತ ಅಧಿಕಾರಸ್ಥರಾಗಿದ್ದರೆ ಅನಿವಾರ್ಯವಾಗಿ ಅವರಿಂದ ಕೆಲಸಗಳಾಗಬೇಕಾದವರು ತಗ್ಗುವ ಬಗ್ಗುವ ನಟನೆ ಮಾಡುತ್ತಿರುತ್ತಾರೆ.
ಕೊನೆಗೊಮ್ಮೆ ಅವರಿಂದ ಏನೂ ಕೆಲಸ ಆಗುವ ಅಗತ್ಯ ಇಲ್ಲದೇ ಹೋದಾಗ ಅವರನ್ನು ತಟ್ಟನೆ ನಿರ್ಲಕ್ಷಿಸಿಬಿಡುತ್ತಾರೆ. ಸಂಪೂರ್ಣ ಬಿಟ್ಟುಬಿಡುತ್ತಾರೆ. ತಮ್ಮ ಸುತ್ತಲೂ ವಂದಿಮಾಗದರನ್ನು, ಪಟಾಲಮನ್ನು ಕಟ್ಟಿಕೊಂಡು ತಿರುಗಾಡುತ್ತಿದ್ದವರಿಗೆ ಒಮ್ಮಿಂದೊಮ್ಮೆಲೆ ಆಘಾತವಾಗುತ್ತದೆ. ತಮ್ಮ ಅಹಂಕಾರಕ್ಕೆ ಆಹಾರ ಸಿಗದೇ ಮಾನಸಿಕವಾಗಿ ಕೃಶವಾಗುತ್ತಾರೆ. ಖಿನ್ನತೆಗೆ ಜಾರುತ್ತಾರೆ. ಅಂತಹ ಖಿನ್ನತೆಗಳಿಂದ ಹೊರಬರಲಾಗದೇ ಅನೇಕ ರೀತಿಯ ವ್ಯಸನಗಳಿಗೆ ತುತ್ತಾಗುತ್ತಾರೆ. ಕೆಲವೊಮ್ಮೆ ಆತ್ಮಹತ್ಯೆಗೆ ಶರಣಾಗಲೂಬಹುದು.
ಈ ಮಾನಸಿಕ ಸಮಸ್ಯೆ ಬಹಳಷ್ಟು ಜನರಲ್ಲಿರುವುದರಿಂದ ವ್ಯಕ್ತಿಗತವಾಗಿಯೂ ಮತ್ತು ಸಾಮಾಜಿಕವಾಗಿಯೂ ಬಹಳ ಸಂಘರ್ಷಗಳು ಮತ್ತು ಸಮಸ್ಯೆಗಳು ಉಂಟಾಗುತ್ತಿರುತ್ತವೆ. ಇದನ್ನು ಓದಿದಾಗ ನನ್ನಲ್ಲೂ ಇಂತಹ ಸಮಸ್ಯೆಯೊಂದಿದೆ ಎಂದು ಯಾರಿಗಾದರೂ ಅನ್ನಿಸಿದರೆ, ಅದು ಬಹಳ ಒಳ್ಳೆಯ ಸೂಚನೆ. ಏಕೆಂದರೆ, ಯಾವುದೇ ಮಾನಸಿಕ ಸಮಸ್ಯೆಯ ಚಿಕಿತ್ಸೆಯ ಕಾರ್ಯ ಪ್ರಾರಂಭವಾಗುವುದು ‘ನನಗೆ ಈ ಸಮಸ್ಯೆ ಇದೆ’ ಅರಿವಿನಿಂದ.
ಅದೇ ಪರಿಹಾರಕ್ಕೆ ಮೊದಲ ಹೆಜ್ಜೆ. ಸಾಮಾನ್ಯವಾಗಿ ಮಾನಸಿಕ ಸಮಸ್ಯೆಯು ತೀವ್ರವಾಗಿರುವವರು ತಮಗೆ ಮಾನಸಿಕ ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳುವುದೇ ಇಲ್ಲ. ಇತರರಲ್ಲಿ ಅದು ಇದೆ ಎಂದು ಗುರುತಿಸಲು ಯತ್ನಿಸುತ್ತಿರುತ್ತಾರೆ. ತಾವು ಮಾತ್ರ ಸಂಪೂರ್ಣ ಆರೋಗ್ಯದಿಂದ ಇದ್ದೇವೆ ಎಂದುಕೊಂಡಿರುತ್ತಾರೆ. ಮನೋರೋಗಕ್ಕೆ ಮದ್ದಿಲ್ಲ ಎಂಬ ಗಾದೆಯನ್ನು ಒಪ್ಪುವುದು ಬೇಡ.ಮನೋರೋಗಕ್ಕೆ ಮದ್ದಿದೆ ಎಂಬ ಭರವಸೆ ಮತ್ತು ವಿಶ್ವಾಸದೊಡನೆ ಆತ್ಮವಿಮರ್ಶೆಗೊಳಗಾಗುವುದು ಈ ಸಮಸ್ಯೆಗೆ ಪರಿಹಾರಕ್ಕೆ ದಾರಿ ಕಾಣುವ ಪ್ರಾರಂಭ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಆತ್ಮಕತೆ | ಮದುವೆಯ ಬಂಧ-ಸ್ನೇಹಿತರ ಮನೆಯಲ್ಲಿ ಔತಣ
- ರುದ್ರಪ್ಪ ಹನಗವಾಡಿ
ನನ್ನ ಹೆಂಡತಿ ಗಾಯತ್ರಿ 1979ನೇ ಬ್ಯಾಚಿನ ನನ್ನ ವಿಭಾಗದಲ್ಲಿಯೇ ವಿದ್ಯಾರ್ಥಿಯಾಗಿದ್ದವಳು. ವಿದ್ಯಾರ್ಥಿನಿಯಾಗಿ ಅವಳ ಶೈಕ್ಷಣಿಕ ಓದಿನ ಜೊತೆ ನಾಟಕ, ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತಿಯುಳ್ಳವಳಾಗಿದ್ದಳು. ಅವಳಿಗಿದ್ದ ತಮ್ಮ ಹಿರಿಯ/ಕಿರಿಯ ವಿದ್ಯಾರ್ಥಿನಿಗಳ ಜೊತೆಗಿನ ಸ್ನೇಹ ಸಂಬಂಧದ ಜೊತೆ, ಕೇಂದ್ರದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಳು.
ನಮ್ಮ ಕೇಂದ್ರದಿಂದ 1978ರಲ್ಲಿ ಎಂ.ಎ. ಮುಗಿಸಿದ್ದ ಯಶೋಧ ಮತ್ತು ಶಾರದ ಎಂಬ ಇಬ್ಬರು ವಿದ್ಯಾರ್ಥಿನಿಯರು ಎಂ.ಎ., ಮುಗಿಸಿದ ನಂತರ, ಬೆಂಗಳೂರಿನಲ್ಲಿ ಯಶೋಧ ವಿ.ಕೆ.ಆರ್.ವಿ. ರಾವ್ ಇನ್ಸಿಟಿಟ್ಯೂಟ್ನಲ್ಲಿ ಸಂಶೋಧಕಿಯಾಗಿ ಕೆಲಸ ಮಾಡುತ್ತಿದ್ದಳು. ಶಾರದ ತನ್ನ ಸೋದರ ಸಂಬಂಧಿ ಡಾಕ್ಟರ್ರೊಬ್ಬರನ್ನು ಮದುವೆಯಾಗಿ ಗೃಹಿಣಿ ಯಾಗಿದ್ದಳು. ಇವರಿಬ್ಬರೂ ಮೊದಲು ಶಿವಮೊಗ್ಗದಿಂದ ದಿನವೂ ಬೆಳಿಗ್ಗೆ ಬರುತ್ತಿದ್ದ ಗಜಾನನ ಬಸ್ಸಿಗೆ ಗಾಯತ್ರಿ ಮತ್ತು ಇತರರೊಡನೆ ಕ್ಲಾಸಿಗೆ ಬರುತ್ತಿದ್ದರು. ಹಾಗಾಗಿ ಅವರಿಬ್ಬರ ಎಂ.ಎ., ಮುಗಿದ ನಂತರವೂ ಕೇಂದ್ರಕ್ಕೆ ಬಂದಾಗ ಗಾಯತ್ರಿಯನ್ನು ಜೊತೆಗೆ ಇದ್ದ ಸ್ನೇಹಿತರನ್ನು ಭೇಟಿ ಮಾಡಿ ಹೋಗುತ್ತಿದ್ದರು. ಹೀಗೆ ಹೋಗುವಾಗ ನಮ್ಮ ಜ್ಞಾನೇಂದ್ರ ಪ್ರಭು ಜೊತೆ ನಾನು ಶಿವಮೊಗ್ಗಕ್ಕೂ ಜೊತೆಗೆ ಹೋಗಿ ಅಲ್ಲಿನ ಮನೋಹರ ಕೆಫೆಯಲ್ಲಿ ಕಾಫಿ ಕುಡಿದು, ಹರಟೆ ಹೊಡೆದು ಹಿಂತಿರುಗುತ್ತಿದ್ದೆವು. ಆ ದಿನಗಳಲ್ಲಿಯೇ ನನಗೆ ಗಾಯತ್ರಿಯ ಪರಿಚಯವಾಗಿ ಒಬ್ಬರಿಗೊಬ್ಬರು ಆಸಕ್ತರಾಗಿದ್ದೆವು. ಅದೆಲ್ಲ ಪ್ರಭು, ದೇವರಾಜು ಮತ್ತು ಕೇಶವಮೂರ್ತಿಗಳ ನಮ್ಮ ಸ್ನೇಹ ವಲಯಕ್ಕೂ ತಿಳಿದಿತ್ತು.
ಗ್ರಾಮೀಣ ಪ್ರದೇಶಗಳಿಂದ ಬಹಳ ಹುಡುಗರು ಏನೆಲ್ಲ ಓದಿದ್ದರೂ ಹುಡುಗಿಯರೊಡನೆ ಸರಳವಾಗಿ ಮಾತಾಡಿಕೊಂಡು ಇರುವುದು ವಿರಳವಾಗಿದ್ದ ದಿನಗಳು. ನಾನಾದರೂ ಎಂ.ಎ. ಮುಗಿಸಿ 4-5 ವರ್ಷಗಳ ಪಾಠ ಮಾಡಿದ ಅನುಭವವಿದ್ದರೂ ಗ್ರಾಮೀಣ ಹಿನ್ನೆಲೆಯ ಸಾಮಾನ್ಯ ಹಿಂಜರಿಕೆ ಮತ್ತು ಸಂಕೋಚದ ಕಾರಣ ಹುಡುಗಿಯರಿಂದ ದೂರವೇ ಉಳಿಯುತ್ತಿದ್ದೆ.
ಓದಿನ ಜೊತೆಗೆ ಎಸ್ವೈಎಸ್, ಡಿ.ಎಸ್.ಎಸ್.ಗಳ ಹೋರಾಟಗಳಲ್ಲಿ ಭಾಗವಹಿಸಿ, ಬೀದಿ ಬೀದಿಗಳಲ್ಲಿ ಭಾಷಣ, ಮೆರವಣಿಗೆ ಅನೇಕ ಸಂದರ್ಭಗಳಲ್ಲಿ ಪೋಲೀಸ್ ಸ್ಟೇಷನ್ನಲ್ಲಿ ಬಂಧಿಯಾಗಿ ಹೊರಬಂದಿದ್ದರೂ ಪ್ರೀತಿಯ ಪ್ರೇಮಗಳ ವಿಷಯದಲ್ಲಿ ಹಿಂಜರಿಕೆ ಮತ್ತು ಸಂಕೋಚಗಳು ನನ್ನಲ್ಲಿ ಮನೆ ಮಾಡಿದ್ದವು. ನಾನು ಈ ಹಿಂದೆ ಸೋಷಿಯಾಲಜಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿದ್ದ ಮೂರು ಜನ ಹುಡುಗಿಯರಲ್ಲಿ ಒಬ್ಬಳು ತೋರಿದ ವಿಶೇಷ ಆಸಕ್ತಿ ಮತ್ತು ಮಾತುಕತೆಗೆ ಮಾರುಹೋಗಿ, ಅವಳು ವಿಶೇಷವಾಗಿ ತಂದು ಕೊಡುತ್ತಿದ್ದ ತಿಂಡಿ ಮತ್ತು ಪ್ರಸೆಂಟೇಷನ್ಗಳನ್ನು ನನ್ನ ಮೇಲಿನ ವಿಶೇಷ ಪ್ರೀತಿಯಿಂದಲೇ ಕೊಟ್ಟಿರಬೇಕೆಂದು ಭಾವಿಸಿಕೊಂಡಿದ್ದೆ. ಅದನ್ನೆಲ್ಲ ಆಗ ನನ್ನ ಜೊತೆಗಿದ್ದ ಬಸವಣ್ಯಪ್ಪನಿಗೆ ಹೇಳಿದಾಗ ಅವನು, `ಅವಳು ನಿನ್ನನ್ನು ಪ್ರೀತಿಸುತ್ತಿದ್ದಾಳೆ, ನಿನಗೆ ಇಷ್ಟವಾದರೆ-ನೀನೆ ಅವಳಿಗೆ ಮದುವೆಯಾಗುವಂತೆ ಕೇಳು’ ಎಂದು ಹುರಿದುಂಬಿಸುತ್ತಿದ್ದ. ಏರು ಯೌವನದ ಸೆಳೆವಿನಲ್ಲಿದ್ದ ನಾನು ಒಂದು ದಿನ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಸಂಜೆಯ ವಿಹಾರದಲ್ಲಿದ್ದಾಗ ನನ್ನನ್ನು ಮದುವೆಯಾಗುತ್ತೀಯ ಎಂದು ಕೇಳಿಯೇ ಬಿಟ್ಟೆ. ನನಗಿಂತಲೂ ವಯಸ್ಸಿನಲ್ಲಿ ಮತ್ತು ಬುದ್ದಿಯಲ್ಲಿ ಮುಂದಿದ್ದ ಅವಳು ನನ್ನ ಪ್ರೇಮ ಭಿಕ್ಷೆಯನ್ನು ನಯವಾಗಿ ತಿರಸ್ಕರಿಸಿದ್ದಳು. ನಂತರ ನಾನು ನನ್ನ ವೃತ್ತಿಯನ್ನೇ ಬದಲಾಯಿಸಿದ ಕಾರಣ ಆ ಪ್ರೇಮ ಪ್ರಕರಣ ಅಲ್ಲಿಗೆ ಮುಕ್ತಾಯವಾಗಿ ಬಿಆರ್ಪಿಗೆ ವರ್ಗವಾಗಿ ಬಂದಿದ್ದೆ.
ಈ ಹಿನ್ನೆಲೆಯಲ್ಲಿದ್ದ ನನಗೆ ತಕ್ಷಣದಲ್ಲಿ ಪ್ರೀತಿಯ ಪ್ರಸ್ತಾಪವನ್ನು ಮಾಡುವಾಗ ಅನೇಕ ರೀತಿಯ ಹಿಂಜರಿಕೆಯಲ್ಲಿ ಮುಳುಗಿ ಬಿಡುತ್ತಿದ್ದೆ. ಆದರೆ ಪ್ರಭು ಮತ್ತು ಕೇಶವಮೂರ್ತಿಯವರೊಡನೆ ನಂತರ ನನ್ನ ಹಳೆ ವಿದ್ಯಾರ್ಥಿನಿಯರಾದ ಯಶೋಧ ಮತ್ತು ಶಾರದಾ ಅವರ ಮುಖಾಂತರ ಗಾಯತ್ರಿಯ ಬಗ್ಗೆ ನನಗಿರುವ ಆಸಕ್ತಿ ತಿಳಿಸಿದೆ. ಅವಳು ಎಂ.ಎ. ಪರೀಕ್ಷೆ ಮುಗಿದಿದ್ದರಿಂದ ಊರಿಗೆ ಹೋಗಿದ್ದಳು. ಅವಳು ಮದುವೆಗೆ ಒಪ್ಪಿಗೆ ಸೂಚಿಸಿದ್ದರೂ ಅವಳಿಗೆ ಒಂದು ಕೆಲಸ ಪಡೆದ ನಂತರ ದಿನಗಳಲ್ಲಿ ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿ ನಾನಿದ್ದೆ. ಗಾಯತ್ರಿಯೂ ರಜೆಯಿದ್ದ ಕಾರಣ ತನ್ನ ಊರಾದ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರಕ್ಕೆ ಹೋಗಿದ್ದಳು. ನನ್ನ ಜೊತೆ ಮನೆತನ, ಜಾತಕಗಳ ವಿವರಗಳ ಗೊಡವೆ ಇಲ್ಲದೆ, ನನ್ನನ್ನು ಮದುವೆಯಾಗಲು ಒಪ್ಪಿಸುವಲ್ಲಿ ಗಾಯತ್ರಿಯ ಗೆಳತಿಯರು, ನನ್ನ ಮಿತ್ರ ಪ್ರಭು ಎಲ್ಲ ಕಾರಣರಾಗಿದ್ದರು. ನಾನಾವ ಜಾತಿ ಮತ್ತು ಆರ್ಥಿಕ ಸಾಂಸ್ಕೃತಿಕ ಹಿನ್ನೆಲೆಗಳ ಬಗ್ಗೆ ಏನೂ ಕೆದಕದೆ ನನ್ನನ್ನು ಮಾತ್ರ ನೋಡಿ ಒಪ್ಪಿದ ಗಾಯತ್ರಿಯ ಬಗ್ಗೆ ಅಭಿಮಾನದ ಪ್ರೀತಿಯಲ್ಲಿ ಕಾಲ ಕಳೆಯುತ್ತಿದ್ದೆ. ಹೀಗಿರುವಾಗ ಮೇ ತಿಂಗಳ ಕೊನೆ ವಾರದಲ್ಲಿ ತನ್ನ ಗೆಳತಿಯ ಜೊತೆ ಬಿ.ಆರ್.ಪಿ.ಗೆ ಬಂದ ಗಾಯತ್ರಿ ಹೊಸ ಸುದ್ದಿಯನ್ನು ತಂದಿದ್ದಳು. ರಜೆಯಲ್ಲಿ ಅವರ ಮನೆಗೆ ಬಂದಿದ್ದ ಹುಡುಗನೊಬ್ಬ ಗಾಯತ್ರಿಯನ್ನು ನೋಡಿ ಮದುವೆಯಾಗಲು ಒಪ್ಪಿರುವುದಾಗಿಯೂ, ಇಷ್ಟರಲ್ಲೇ ಮದುವೆ ಮಾತು ಆಗಬಹುದೆಂಬ ಆತಂಕದ ಸುದ್ದಿಯನ್ನು ತಿಳಿಸಿದಳು.
ಗಾಯತ್ರಿಯ ಎಂ.ಎ. ಮುಗಿದು ನೌಕರಿ ಹಿಡಿದ ನಂತರ ಎಲ್ಲರ ಒಪ್ಪಿಗೆ ಪಡೆದು ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದ ನಮಗೆ ನಂತರದ ಬೆಳವಣಿಗೆಗಳು ನಮ್ಮಿಬ್ಬರ ಕೈತಪ್ಪಿ ಹೋಗುವ ಆತಂಕವಾಯಿತು. ಈ ನನ್ನ ಎಲ್ಲ ಅಂತರಂಗದ ವಿಷಯಗಳನ್ನು ಚರ್ಚಿಸಲು ಪ್ರಭು ಜೊತೆ ಭದ್ರಾವತಿಗೆ ಕೃಷ್ಣಪ್ಪನವರನ್ನು ಕಂಡು ಚರ್ಚಿಸಿಕೊಂಡು ಬರಲು ಹೋದೆವು. ಕೃಷ್ಣಪ್ಪ ಮತ್ತು ಇಂದಿರಾ ಅವರ ಜೊತೆ ಎಲ್ಲ ವಿಷಯಗಳನ್ನು ಚರ್ಚಿಸಿ ದಿನಾಂಕ 4-6-1979ರಂದು ರಿಜಿಸ್ಟರ್ ಮದುವೆಯ ಕಾರ್ಯ ಮುಗಿಸಲು ತೀರ್ಮಾನಿಸಿದೆವು. ಅದಕ್ಕೂ ಮುಂಚೆ ಗಾಯತ್ರಿಯನ್ನು ಕರೆದುಕೊಂಡು ಬರಲು ತಿಳಿಸಿದರು. ಅದರಂತೆ ಹೋದಾಗ ಇಂದಿರಾ ಕೂಡ ಇದ್ದು ಗಾಯತ್ರಿಗೆ ಸಮಾಧಾನ, ಧೈರ್ಯ ಹೇಳಿ ಮದುವೆಯ ಆತಂಕವನ್ನು ಹಗುರ ಮಾಡಿದ್ದರು. ತುರ್ತಾಗಿ ಇದ್ದ ಪರಿಸ್ಥಿತಿಯಲ್ಲೇ ಮದುವೆಮಾಡಿಕೊಳ್ಳುವುದನ್ನು ಬಿಟ್ಟರೆ ಬೇರೆ ಮಾರ್ಗ ಕಾಣಲಿಲ್ಲ. ನಮ್ಮ ಊರ ಮನೆಯಲ್ಲಿ ಈ ವಿಷಯಗಳನ್ನು ತಿಳಿಸಿ ಚರ್ಚಿಸಿ ಒಪ್ಪಿಸುವುದು ಸಾಧ್ಯವಿರಲಿಲ್ಲ. ಏಕೆಂದರೆ ಅವ್ವ ನನ್ನ ಅಕ್ಕನ ಮಗಳನ್ನು ಮದುವೆ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಿದ್ದಳು. ಆ ರೀತಿ ಅಕ್ಕನ ಮಗಳನ್ನು ಮದುವೆಯಾಗುವುದು, ಅವರು ನನ್ನನ್ನು ಅವರ ಸಾಗರದ ಮನೆಯಲ್ಲಿಟ್ಟುಕೊಂಡು ಓದಿಸಿದ ಬಗ್ಗೆ ಋಣ ತೀರಿಸುವ ಜವಾಬ್ದಾರಿ ಎಂದು ಎಲ್ಲರ ನಂಬಿಕೆಯಾಗಿತ್ತು. ಇದನ್ನೆಲ್ಲ ತಿಳಿಗೊಳಿಸಿ ಪ್ರಸ್ತುತ ಮದುವೆ ವಿಷಯಕ್ಕೆ ಒಪ್ಪಿಸಿ ಕರೆತರುವುದು ಆ ಕ್ಷಣದಲ್ಲಿ ಸಾಧ್ಯವಿಲ್ಲದ ಮಾತಾಗಿತ್ತು.
ಇನ್ನು ಗಾಯತ್ರಿ ಮನೆಯವರು ಶೃಂಗೇರಿ ಮಠದ ಅನುಯಾಯಿಗಳು. ಪ್ರಥಮದಲ್ಲಿ ನಾನು ಅಬ್ರಾಹ್ಮಣನಾದ ಕಾರಣ ಈ ಮುದುವೆಯ ಪ್ರಸ್ತಾಪವೇ ಸಾಧ್ಯವಿಲ್ಲದ ಮಾತಾಗಿತ್ತು. ಅದರಲ್ಲೂ ನನ್ನ ಜಾತಿ ದಲಿತ ಗುಂಪಿಗೆ ಸೇರಿದ್ದೆಂಬುದು ತಿಳಿಸಿದರೆ ಇನ್ನು ಅನೇಕ ಸಮಸ್ಯೆಗಳನ್ನು ಹುಟ್ಟುಹಾಕುವುದರಲ್ಲಿತ್ತು. ಹಾಗಾಗಿ ಅವರಿಗೂ ಈ ಮದುವೆ ವಿಷಯ ತಿಳಿಸಿ ಒಪ್ಪಿಗೆ ಪಡೆದು ಮದುವೆಯಾಗುವುದು ಸಾಧ್ಯವಿರಲಿಲ್ಲ. ಈ ವಿಷಯಗಳೇನಾದರೂ ಮೊದಲೇ ಗೊತ್ತಾದರೆ, ಮದುವೆಯಾಗಲು ಖಂಡಿತ ಬಿಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದ ಕಾರಣದಿಂದಾಗಿ ಎಲ್ಲದನ್ನು ಗೌಪ್ಯವಾಗಿಟ್ಟು ಮದುವೆಯ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಕೃಷ್ಣಪ್ಪ – ಇಂದಿರಾ ಅವರ ಮದುವೆ 1975ರಲ್ಲಿಯೇ ನಡೆದು ಆ ನಂತರ ಅನೇಕ ಅಂತರ್ಜಾತೀಯ, ಧರ್ಮೀಯ ಮತ್ತು ಸರಳ ಮದುವೆಗಳನ್ನು ಮಾಡಿಸಿ ಹೆಸರಾಗಿದ್ದರು. ಸಮಾಜವಾದಿ ಚಳುವಳಿ, ದಲಿತ ಚಳುವಳಿಯ ಅನೇಕ ಯುವಕ, ಯುವತಿಯರು ಇಂದಿರಾ ಕೃಷ್ಣಪ್ಪನವರ ನೇತೃತ್ವದಲ್ಲಿ ಅಂತರ್ಜಾತಿ ಮದುವೆಯಾಗಿದ್ದರು. ಕೃಷ್ಣಪ್ಪನವರ ಅಭಿಮಾನಿ ಬಳಗ – ಭದ್ರಾವತಿ, ಶಿವಮೊಗ್ಗದಲ್ಲಿ ಸದಾ ಇಂತಹ ಸಂದರ್ಭದಲ್ಲಿ ಬೇಕಾದ ನೆರವು ನೀಡಲು ಮುಂದಾಗಿರುತ್ತಿತ್ತು.
ಈ ತಯಾರಿಯ ಸಮಯದಲ್ಲಿಯೇ ನನ್ನ ಹಳೆಯ ವಿದ್ಯಾರ್ಥಿನಿಯರಾಗಿದ್ದ ಯಶೋಧ ಮತ್ತು ಶಾರದ ಅವರು ನೀವು ಹೇಗೂ ಲಿಂಗಾಯತರಂತೆ ಕಾಣುತ್ತೀರಿ, ಸದ್ಯದ ಸಮಯದಲ್ಲಿ ನೀವು ನಿಮ್ಮ ಜಾತಿಯನ್ನು ಲಿಂಗಾಯತರೆಂದು ಹೇಳಿ ಮದುವೆಗೆ ಗಾಯತ್ರಿ ಮನೆಯವರನ್ನು ಒಪ್ಪಿಸುವ ಸಲಹೆ ನೀಡಿದರು. ಆದರೆ ಅದೆಲ್ಲ ಆಗದ ಮಾತು ಎಂದು ನಾನು ಅವರಿಗೆ ಆಗಲೇ ತಿಳಿ ಹೇಳಿದೆ. ಮದುವೆಯ ದಿನಕ್ಕೆ ಬೇಕಾದ ಸೀರೆ, ಒಂದು ತಾಳಿ ಚೈನು ವ್ಯವಸ್ಥೆ ಮಾಡಿಕೊಳ್ಳುವುದು ಮತ್ತು ನನಗೆ ಒಂದು ಜೊತೆ ಷರ್ಟ್ ಪ್ಯಾಂಟ್ ಹೊಲಿಯಲು ಹಾಕಿದ್ದೆ. ಆದರೆ ನನಗೆ ಆ ಟೈಲರ್ ಮದುವೆ ದಿನಕ್ಕೆ ಕೊಡಲೇ ಇಲ್ಲ. ಗಾಯತ್ರಿಯನ್ನು ಭದ್ರಾವತಿಯ ಕೃಷ್ಣಪ್ಪನವರ ಮನೆಗೆ ಬರಲು ಹೇಳಿ ನಂತರ ಎಲ್ಲರೂ ಸೇರಿ ಸಬ್ ರಿಜಿಸ್ಟಾçರ್ ಆಫೀಸಿಗೆ ಹೋದೆವು. ಆಗ ಚಿತ್ರದುರ್ಗದಲ್ಲಿದ್ದ ಬಸವಣ್ಯಪ್ಪ ಕಟ್ಟಲು ತಾಳಿಯೊಂದನ್ನು ಕೊಂಡು ತಂದಿದ್ದ. ಸಬ್ರಿಜಿಸ್ಟರ್ ಆಫೀಸಿನಲ್ಲಿ ಫೀಸಾಗಿ 14ರೂ.ಗಳ ಖರ್ಚಿನಲ್ಲಿ ಭದ್ರಾವತಿಯಲ್ಲಿ ಸಮಾಜವಾದಿ ಮತ್ತು ದಲಿತ ಗೆಳೆಯರ ಸಮಕ್ಷಮದಲ್ಲಿ ಕೃಷ್ಣಪ್ಪ-ಇಂದಿರಾ ದಂಪತಿಗಳ ನೇತೃತ್ವದಲ್ಲಿ ಮದುವೆಯಾಗಿತ್ತು. ಉಟ್ಟ ಸೀರೆಯಲ್ಲಿ ನರಸಿಂಹರಾಜಪುರದಿಂದ ಬಂದಿದ್ದ ಗಾಯತ್ರಿ ಅವರ ಮನೆಯವರಿಗೆ ಪ್ರಭು ಮತ್ತು ಕೇಶವಮೂರ್ತಿಗಳು ಮಾರನೆದಿನ ಹೋಗಿ ನಮ್ಮ ವಿವಾಹ ಆಗಿರುವ ಬಗ್ಗೆ ತಿಳಿಸಿ ಬರಬೇಕೆಂಬ ಮಾತಿಗೆ ಇಬ್ಬರೂ ಮಾರನೇ ದಿನ ಗಾಯತ್ರಿಯ ಮನೆಗೆ ಹೋಗಿ ಮದುವೆಯಾದ ಸುದ್ದಿ ತಿಳಿಸಿದ್ದರು. `ಗಾಯತ್ರಿಯು ಅವಳಿಗೆ ಅಧ್ಯಾಪಕರಾಗಿದ್ದ ರುದ್ರಪ್ಪ ಎನ್ನುವವರನ್ನು ಮದುವೆಯಾಗಿದ್ದಾಳೆ, ಅವರಿಬ್ಬರೂ ಚೆನ್ನಾಗಿರುತ್ತಾರೆ, ನೀವೇನು ಚಿಂತಿಸುವ ಅಗತ್ಯವಿಲ್ಲ’ ಎಂಬುದನ್ನು ಬಾಯಿಪಾಠ ಮಾಡಿದಂತೆ ಒಪ್ಪಿಸಿ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿ ಬಂದಿದ್ದರು. ಅದರಿಂದಾಗಿ ಅವರ ಮನೆಯವರಿಗೆ ಗಾಯತ್ರಿ ಎಲ್ಲಿ ಹೋಗಿದ್ದಾಳೆ ಮತ್ತು ಏನಾಗಿದೆ ಎಂಬುದರ ಬಗ್ಗೆ ತಕ್ಷಣ ತಿಳಿದಂತಾಗಿತ್ತು.
ನನ್ನ ಮದುವೆ ದಿನ ಕೃಷ್ಣಪ್ಪನವರ ಮನೆಯಲ್ಲಿದ್ದ ನಾವು ಅಲ್ಲಿದ್ದರೆ ಗಾಯತ್ರಿ ಮನೆ ಕಡೆಯವರು ಬಂದು ಗಲಾಟೆ ಮಾಡಬಹುದೆಂದು ಭಾವಿಸಿ ಇಂದಿರಾ ಕೃಷ್ಣಪ್ಪನವರ ಹಿತೈಷಿ ಆಧ್ಯಾಪಕ ಶಿವಮೊಗ್ಗ ಮುನೀರ್ ಮತ್ತು ಅವರ ತಾಯಿ (ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ) ಬಚ್ಚಿಮ್ಮಾ ಮನೆಗೆ ಹೋಗಿ ಉಳಿಯಬೇಕೆಂದು ತೀರ್ಮಾನಿಸಿದ್ದರು. ಅದರಂತೆ ಮೊದಲ ರಾತ್ರಿ ಬಚ್ಚಿಮ್ಮಾ ಸಿಹಿ ಅಡುಗೆ ಮಾಡಿ ಔತಣ ಏರ್ಪಡಿಸಿದ್ದರು. ಊಟದ ಶಾಸ್ತç ಮಾಡಿ ಮಲಗಿದರೆ ನಿದ್ದೆ ಬಾರದೇ ಇಡೀ ರಾತ್ರಿ ಆತಂಕ ಮತ್ತು ಚಿಂತೆಗಳಲ್ಲಿ ಕಳೆದೆವು. ಮದುವೆಯಾಗಿ ಒಂದು ವಾರದಲ್ಲಿ ಅಂದರೆ 10-6-1979ರಂದು ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ಒಂದು ಸಂತೋಷಕೂಟ ವ್ಯವಸ್ಥೆ ಮಾಡಿದ್ದೆವು. ಅದಕ್ಕೆಲ್ಲಾ ಶಿವಮೊಗ್ಗದವನೇ ಆಗಿದ್ದ ಪ್ರಭು ಮತ್ತು ಅವನ ಅಲ್ಲಿನ ಗೆಳೆಯರಾದ ರೈತಸಂಘದ ಚಟ್ನಳ್ಳಿ ಮಂಜಪ್ಪ, ಅರ್ಚನ ಟ್ರೇರ್ಸ್ ಕಾಂತರಾಜ್ ಓಡಾಡಿ ನಿಗದಿಗೊಳಿಸಿದ್ದರು. ಸುಮಾರು 300-400 ಜನರಿಗೆ ಲಘು ಉಪಹಾರದೊಡನೆ ಈ ಸಮಾರಂಭವನ್ನು ಹಮ್ಮಿಕೊಂಡಿದ್ದೆವು. ಅದಕ್ಕಾಗಿ ಒಂದು ಸಾಮಾನ್ಯ ಕರೆಯೋಲೆಯನ್ನು ಸಹ ಮುದ್ರಿಸಿ ಬೇಕಾದ ಸ್ನೇಹಿತರಿಗೆ ಮತ್ತು ನನ್ನ ಊರಿನ ಸಂಬಂಧಿಕರಿಗೆ ಹಂಚಲು ನಮ್ಮ ಊರಿನ ಮಾಂತೇಶಿಗೆ ಜವಾಬ್ದಾರಿ ನೀಡಿದ್ದೆನು. ಅವನ ಮುಖಾಂತರ ಊರಿಗೆ ಕಳಿಸಿಕೊಟ್ಟಿದ್ದೆ. ಅವ್ವ ಮತ್ತು ಎಲ್ಲ ಸಂಬಂಧಿತ ಬಳಗ ಮತ್ತು ಊರಿನವರು ಹೇಳಿ ಕೇಳಿ ಮದುವೆಯಾಗದೆ ದಿಢೀರ್ ಆಗಿ ಈ ರೀತಿ ಆದ ಬಗ್ಗೆ ಆಕ್ಷೇಪಗಳನ್ನು ಮಾಡಿ ಅರ್ಯಾರೂ ಬಾರದೆ 7-8 ಜನ ಸ್ನೇಹಿತರು ಮಾತ್ರ ಊರಿನಿಂದ ಬಂದಿದ್ದರು. ನಂತರ ನಡೆಯಬೇಕಾಗಿದ್ದ ಸಂತೋಷಕೂಟವೂ ಕೂಡ ಶಿವಮೊಗ್ಗದಲ್ಲಿ ನಡೆಸಲು ಗಾಯತ್ರಿಯವರ ಮನೆಕಡೆಯಿಂದ ಶಿವಮೊಗ್ಗದಲ್ಲಿ ಮಾತ್ರ ಈ ಸಮಾರಂಭ ಮಾಡುವುದು ಬೇಡ ಎಂಬ ಅಭಿಪ್ರಾಯಪಟ್ಟಿದ್ದರಿಂದ ಕೊನೆ ಹಂತದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮುಂದೆ ಒಂದು ತಿಳುವಳಿಕೆಯ ಸೂಚನೆಯನ್ನು ಬರೆದು ಹಾಕಿ ಇಲ್ಲಿ ನಡೆಯಬೇಕಾಗಿದ್ದ ಸಂತೋಷ ಕೂಟ ಸಮಾರಂಭವನ್ನು ಬಿಆರ್ಪಿಯಲ್ಲಿನ ಸ್ನಾತಕೋತ್ತರ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ನನ್ನ ಅನೇಕ ಸ್ನೇಹಿತರು ಸಂಜೆ ಬಂದವರು ನಂತರದ ಸ್ಥಳ ಬದಲಾವಣೆಯನ್ನು ತಿಳಿದು ಕಡೆಗವರು ಬಿಆರ್ಪಿಯಲ್ಲಿ ನಡೆದ ಸಂತೋಷಕೂಟದಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಮತ್ತೆ ಕೆಲವರು ಅಲ್ಲಿ ಇಲ್ಲಿ ವಿಚಾರಿಸಿ ಬಿಆರ್ಪಿಗೆ ಬರುವ ವೇಳೆಗೆ ಸಂತೋಷಕೂಟವೇ ಅವಸರದ ಗಲಾಟೆಯಲ್ಲಿ ಮುಕ್ತಾಯವಾಗಿತ್ತು.
ಮದುವೆಯಾದ ಮಾರನೇ ದಿನ ಭದ್ರಾವತಿಯಲ್ಲಿರುವುದಾಗಲೀ ಹತ್ತಿರದಲ್ಲಿ ಇಲ್ಲೆಲ್ಲಿ ಇರುವುದು ಸೂಕ್ತವಲ್ಲವೆಂದು ಅವಸರದಲ್ಲಿ ಇಂದಿರಾ ಜೋಡಿಸಿಕೊಟ್ಟಿದ್ದ ಅವರದೇ ಸೂಟ್ಕೇಸ್ನಲ್ಲಿ ಒಂದೆರಡು ಸೀರೆ ಬಟ್ಟೆಗಳನ್ನು ಜೋಡಿಸಿಕೊಂಡು ಭದ್ರಾವತಿಯ ಬಸ್ ಸ್ಟಾö್ಯಂಡ್ಗೆ ಬಂದೆವು. ನಾನು ದಾವಣಗೆರೆಗೆ ಹೋಗೋಣವೆಂದು ಯೋಚಿಸುತ್ತಿರುವಾಗಲೇ ಅಲ್ಲಿಗೆ ಬಂದ ಶಂಕರ್ ಮೋಟಾರ್ ಟ್ರಾನ್ಸ್ಪೋರ್ಟ್ ನೋಡಿ, ಇವಳು ಅದು ನಮ್ಮ ಊರಿಗೆ ಹೋಗುವ ಬಸ್, ಅದರಲ್ಲಿ ತಮ್ಮ ಊರಿನವರು ಯಾರಾದರು ಇರುತ್ತಾರೆ ಎಂದು ಗಡಿಬಿಡಿ ಮಾಡಿದಾಗ ಅಲ್ಲೇ ಮೈಸೂರು ಕಡೆ ಹೊರಟು ನಿಂತಿದ್ದ ಬಸ್ ಹತ್ತಿ ಅರಸೀಕೆರೆಗೆ ಎರಡು ಟಿಕೆಟ್ ತೆಗೆದುಕೊಂಡು ಬಸ್ ಹತ್ತಿ ಕೂತೆವು. ಸದ್ಯ ಭದ್ರಾವತಿ ಬಿಟ್ಟೆವಲ್ಲ ಎಂಬ ಸಮಾಧಾನದಲ್ಲಿ ಸ್ವಲ್ಪ ಯೋಚಿಸುತ್ತಾ ಮೈಸೂರಿಗೆ ಹೋಗುವುದೋ ಇಲ್ಲ, ಅರಸೀಕೆರೆಯಲ್ಲಿ ಉಳಿಯುವುದೋ ಎಂಬ ಯೋಚನೆಯಲ್ಲಿದ್ದಾಗಲೇ, ಅರಸೀಕೆರೆಯಲ್ಲಿ ನಾನು ಬಿ.ಎ., ಮತ್ತು ಎಂ.ಎ. ನಲ್ಲಿ ನನ್ನ ರೂಂಮೇಟ್ ಮತ್ತು ಬ್ಯಾಚ್ಮೇಟ್ ಆಗಿದ್ದ ಎಲ್. ರವೀಂದ್ರ ಆಗ ಅರಸೀಕೆರೆ ತಹಸೀಲ್ದಾರನಾಗಿದ್ದ. ನಾವು ಅರಸೀಕೆರೆಯಲ್ಲಿ ಇಳಿದು ಬಸ್ ಸ್ಟಾö್ಯಂಡ್ ಹತ್ತಿರದಲ್ಲಿದ್ದ ವಸತಿಗೃಹದಲ್ಲಿ ರೂಂ ಮಾಡಿದೆವು. ನಂತರ ಸೂಟ್ಕೇಸ್ನಲ್ಲಿದ್ದ ಬಟ್ಟೆಯನ್ನೆಲ್ಲಾ ನೋಡಿ ಅವಳಿಗೊಂದು ಹೊಸ ಸೀರೆ ತೆಗೆದುಕೊಳ್ಳಲು ನಿರ್ಧರಿಸಿ, ವಸತಿಗೃಹದ ಎದುರಲ್ಲಿದ್ದ ಈಗಲೂ ಇರುವ `ಕನ್ನಿಕಾ ಪರಮೇಶ್ವರಿ ಕ್ಲಾತ್ ಸೆಂಟರ್’ನಲ್ಲಿ ಗಾಯತ್ರಿಗೆ `ನಾಳೆಯೊಳಗೆ ಬ್ಲೌಸ್ ಹೊಲೆದುಕೊಡುವ ಒಪ್ಪಿಗೆಯ ಮೇಲೆ ಒಂದು ಸೀರೆ ಮತ್ತಿತರ ಸಣ್ಣಪುಟ್ಟ ಸಾಮಾನುಗಳನ್ನು ಕೊಂಡುಕೊಂಡೆವು. ನಂತರ ತಹಸೀಲ್ದಾರನಾಗಿದ್ದ ರವೀಂದ್ರನಿಗೆ ಪೋನ್ ಮಾಡಿದೆ. ಹೀಗೆ ನಾನು ಮದುವೆಯಾಗಿ ಹೆಂಡತಿಯೊಡನೆ ಅರಸೀಕೆರೆ ಲಾಡ್ಜ್ನಲ್ಲಿ ಉಳಿದಿರುವ ಬಗ್ಗೆ ತಿಳಿಸಿದೆ. ಅವನು ನೇರ ಸಂಜೆ ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿಸಿದ. ಆತಂಕದ ಆವೇಗದಲ್ಲಿದ್ದ ನಮಗೆ ಅವನಿದ್ದುದು ಮತ್ತು ಮನೆಗೆ ತಕ್ಷಣ ಆಹ್ವಾನಿಸಿದ್ದುದು ಒಂದು ರೀತಿಯ ಸಮಾಧಾನ ನೀಡಿತ್ತು. ಸಂಜೆ ಅವರ ಮನೆಗೆ ಊಟಕ್ಕೆ ಹೊರಡುವ ಮುನ್ನ ಗಾಯತ್ರಿಯ ಎಲ್ಲಾ ಅಕ್ಕಂದಿರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು, ತುರ್ತಾಗಿ ಮದುವೆಯಾದ ಬಗ್ಗೆ ವಿವರಿಸಿ ತಾವೆಲ್ಲರೂ ಆಶೀರ್ವದಿಸಬೇಕೆಂದೂ, ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ನಮ್ರವಾಗಿ ವಿನಂತಿಸಿಕೊಂಡಿದ್ದೆವು.
ಸಂಜೆ ರವೀಂದ್ರನ ಮನೆಗೆ ಮದುವೆಯ ಜೋಡಿಯಾಗಿ ಔತಣವೊಂದಕ್ಕೆ ಜೊತೆಯಾಗಿ ಹೋಗುತ್ತಿರುವುದು ಮೊಟ್ಟಮೊದಲನೆಯದಾಗಿತ್ತು.
ನಾನು ಮಾಂಸಾಹಾರಿ ಮತ್ತು ಬೀರ್ ಕುಡಿಯುತ್ತಿದ್ದುದು ಗಾಯತ್ರಿಗೆ ಗೊತ್ತಿದ್ದರೂ ನಾನು ಅವಳಿಗಾಗಿ ಆ ಕ್ಷಣದಲ್ಲಿ ಕುಡಿಯುವುದು ಬೇಡ ಎಂದು ನಿರ್ಧರಿಸಿದ್ದೆ. ರವೀಂದ್ರನ ಮನೆಯಲ್ಲಿ ಅವರ ತಂದೆ ಆರ್.ಎಫ್.ಒ. ಆಗಿ ನಿವೃತ್ತರಾದವರು. ಮನೆಯಲ್ಲಿ ಮೊದಲೇ ಊಟಕ್ಕೆ ಕೂತಿದ್ದರು. ಜೊತೆಗೆ ಮ್ಯಾಕ್ಡೆವಲ್ ವಿಸ್ಕಿ ಬಾಟಲ್ ಹಾಗೂ ಮಾಂಸದೂಟದ ಎಲುಬಿನ ತುಣುಕುಗಳೆಲ್ಲ ಸುತ್ತಲೂ ಇದ್ದವು. ಗಾಯತ್ರಿ ನೋಡಿದ ಮೊದಲ ಮಾಂಸಹಾರಿ ಊಟದ ನೋಟದಲ್ಲಿಯೇ ಹೌಹಾರಿ ನಿಂತಿದ್ದಳು. ನಾನು ಮದುವೆ ಮಾಡಿಕೊಂಡು ಬಂದಿರುವ ಕಾರಣ ರವೀಂದ್ರ ನಿಜವಾಗಿಯೂ ಅದ್ದೂರಿ ಊಟ ಮತ್ತು ವಿಸ್ಕಿಗೆ ವ್ಯವಸ್ಥೆ ಮಾಡಿದ್ದ. ನಾನು ನನ್ನ ಮದುವೆಯ ಯಾವ ವಿವಾದಗಳನ್ನೂ ಅವನಿಗೆ ತಿಳಿಸದ ಕಾರಣ ಅವನು ತೋಚಿದಂತೆ ಮಾಡಿದ್ದ. ನಾನು ಅವನಿಗೂ ಮತ್ತು ಅವನ ಶ್ರೀಮತಿಯವರಿಗೆ, ಇವಳು ಮಾಂಸ ತಿನ್ನುವುದಿಲ್ಲ ಬೇರೇನಾದರೂ ಇದ್ದರೆ ಆದೀತೆಂದು ಹೇಳಿದೆ. ಅದಕ್ಕೇನೆಂದು 10 ನಿಮಿಷದಲ್ಲಿ ತಿಳಿಸಾರೊಂದು ತಯಾರಿಸಿದರು. ನಾನು ಗಾಯತ್ರಿ ಮತ್ತು ರವೀಂದ್ರ ಊಟ ಮಾಡಿದೆವು. ಮೊದಲ ಮದುವೆಯ ಔತಣಕೂಟ ತಿಳಿಸಾರು ಉಪ್ಪಿನಕಾಯಿ ಮೊಸರಲ್ಲಿ ಅವಳ ಊಟ ಮುಗಿದಿತ್ತು. ನನಗೆ ಒಳ್ಳೆಯ ಮಾಂಸಾಹಾರದ ಊಟವಾಗಿತ್ತು. ಅಲ್ಲಿಂದ ಮಾರನೇ ದಿನ ಮೈಸೂರಿಗೆ ಬಂದು ಜಗನ್ಮೋಹನ ಪ್ಯಾಲೇಸ್ ಹತ್ತಿರದಲ್ಲಿದ್ದ ಮಹಾರಾಜಾ ಲಾಡ್ಜ್ನಲ್ಲಿ ಉಳಿದುಕೊಂಡೆವು. ಅಲ್ಲಿಂದ ಮೈಸೂರಿನ ಗೆಳೆಯರಿಗೆ ನನ್ನ ಹಿರಿಕಿರಿ ಸ್ನೇಹಿತರಿಗೆ ಫೋನಿನಲ್ಲೆ ನಾವು ಮದುವೆಯಾಗಿ ಬಂದಿರುವ ವಿಷಯ ತಿಳಿಸಿದೆ.
ಹಿರಿಯರಾದ ಪಿ. ಮಲ್ಲೇಶ್ ಅವರು ಮನೆಗೆ ಕರೆದು ಅದ್ದೂರಿಯಾದ ಔತಣ ಮಾಡಿಸಿ ನನಗೆ ಗೊತ್ತಿರುವ ಮತ್ತು ಇನ್ನಿತರ ಸ್ನೇಹಿತರನ್ನು ಕರೆದು ನಾವಿಬ್ಬರೂ ಹೊಸದಾಗಿ ಮದುವೆಯಾಗಿ ಬಂದಿರುವ ಬಗ್ಗೆ ಅಭಿಮಾನದಿಂದ ಪರಿಚಯ ಮಾಡಿಸಿ ಹರಸಿ ಜೊತೆಗೆ ನನ್ನ ಹೆಂಡತಿಗೆ ಒಳ್ಳೆಯ ಸೀರೆಯನ್ನು ತಂದು ಉಡುಗೊರೆ ನೀಡಿದ್ದನ್ನ ಈಗಲೂ ಗಾಯತ್ರಿ ನೆನಪಿಸಿಕೊಳ್ಳುತ್ತಾಳೆ. ಮಲ್ಲೇಶ್ ಮತ್ತು ಅವರ ಶ್ರೀಮತಿ ಅವರು ಗಾಯತ್ರಿಯನ್ನು ಚೆನ್ನಾಗಿ ಮಾತಾಡಿಸಿ, ಒಳ್ಳೆಯ ಹುಡುಗನನ್ನು ಮದುವೆಯಾಗಿದ್ದೀಯ ಏನೂ ಯೋಚನೆ ಮಾಡಬೇಡ ಎಂದೆಲ್ಲ ಅವಳಿಗೆ ಸಮಾಧಾನದ ಮಾತು ಹೇಳಿ ಕಳುಹಿಸಿದ್ದರು.
ಹಾಗೆಯೇ ಮಾದೇವ ಮತ್ತು ಸುಮಿತ್ರಾಬಾಯಿಯವರು ಮನೆಗೆ, ಪಿ.ಕೆ. ಮಿಶ್ರಾಜಿ ಮತ್ತು ಮಹೇಶನ ಮನೆಗೂ ಹೋಗಿದ್ದೆವು. ಸುಮಿತ್ರಾಬಾಯಿ ಅವರು ನನ್ನ ಹೆಂಡತಿಯ ಹಿನ್ನೆಲೆ ಮೊದಲೇ ತಿಳಿದುಕೊಂಡಿದ್ದ ಕಾರಣ ಸೊಗಸಾದ ಸಸ್ಯಾಹಾರಿ ಔತಣ ಮಾಡಿದ್ದರು. ನನಗೆ ಬ್ರಾಹ್ಮಣ ಜಾತಿಯ ಅನೇಕ ಸ್ನೇಹಿತರಿರುವುದಾಗಿಯೂ ಆದುದರಿಂದ ಸಸ್ಯಾಹಾರಿ ಊಟ ಉಪಚಾರಗಳು ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿ ಸುಮಿತ್ರಾಬಾಯಿ ಅವರು ಆದರಿಸಿದ್ದರು.
ಎಲ್ಲ ಸ್ನೇಹಿತರನ್ನು ಮಾತಾಡಿಸಿದ ನಂತರ ಸಂಜೆ ಎಂ.ಸಿ. ಸುಂದರೇಶ ನಮ್ಮ ಕಿರಿಯ ಗೆಳೆಯ ಮತ್ತು ತನ್ನ ಎಂಬಿಎ ಶಿಕ್ಷಣದ ನಂತರ ಸ್ವಂತ ಗ್ಯಾಸ್ ಏಜೆನ್ಸಿ ನಡೆಸುತ್ತಾ ಬೆಳೆಯುವ ಉದ್ಯಮಿಯಾಗಿದ್ದ. ಅವನು ದೊಡ್ಡ ಹೋಟೆಲೊಂದರಲ್ಲಿ ಪಾರ್ಟಿ ಏರ್ಪಡಿಸಿದ್ದ. ಮಹೇಶ ಮತ್ತಿತರ ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದೆವು. ಆಗ ಅಲ್ಲಿಗೆ `ಆಂದೋಲನ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಣ್ಣ ತನ್ನ ಪ್ರೇಮ ಪ್ರಕರಣದ ವೈಫಲ್ಯ ಕುರಿತು ಹೇಳುತ್ತಾ… ಅಳುತ್ತಾ ಮತ್ತಾರೂ ಮಾತಾಡಲಾಗದಂತೆ ಅವನದೇ ದೊಡ್ಡ ಗೋಳಾಯಿತು. ಮಹೇಶ ಎಲ್ಲರನ್ನು ಸಮಾಧಾನ ಮಾಡುತ್ತಾ ಪಾರ್ಟಿ ಮುಗಿಸಿದ್ದೆವು. ಸುಂದರೇಶ್, ಇವರೆಲ್ಲ ಅದಕ್ಕೆ ನಾನು ಬೇಡ ಅಂದಿದ್ದು, ಎಂದು ಬೇಸರ ಮಾಡಿಕೊಂಡಿದ್ದ. ನಾನೇ ಆತನಿಗೆ ಸಮಾಧಾನದ ಮಾತುಗಳನ್ನು ಹೇಳಿ ಅಲ್ಲಿಂದ ಬೀಳ್ಕೊಂಡಿದ್ದೆವು.
ಮಾರನೇ ದಿನ ಮಹೇಶನ ಊರಿಗೆ ಹೋಗಿ ಎರಡು ದಿನ ಅವನ ಊರಾದ ಕುಪ್ಪೇಗಾಲದಲ್ಲಿ ಇದ್ದೆವು. ಮಹೇಶನ ತಂದೆ ದೊಡ್ಡ ಜಮೀನುದಾರರು. ಮನೆಯಲ್ಲಿ ಹತ್ತಾರು ಆಳು ಕಾಳುಗಳು ಇದ್ದು ರೈತಾಪಿ ಕೆಲಸಗಳು ನಡೆಯುತ್ತಿದ್ದವು. ರೇಷ್ಮೆ, ತೆಂಗು, ಬತ್ತದ ಬೆಳೆಗಳಿದ್ದ ಹೊಲ ಗದ್ದೆಗಳ ಕಡೆ ತಿರುಗಾಡುತ್ತಾ ಅವರೂರಿಗೆ ಹೊಂದಿಕೊಂಡ ನದಿಕಡೆ ತಿರುಗಾಡಿ ಮನೆಗೆ ಬರುತ್ತಿದ್ದೆವು. ಮಹೇಶನ ಮನೆಯವರು ವಿಶೇಷವಾಗಿ ಉಪಚರಿಸಿದರು. ಗಾಯತ್ರಿ, ಅವರ ಅಡುಗೆಯ ಮನೆಯಲ್ಲಿದ್ದ ಒಂದು ಬುಟ್ಟಿ ತುಂಬಾ ಕಟ್ಟಿಟ್ಟಿದ್ದ ರಾಗಿ ಮುದ್ದೆಗಳನ್ನು ನೋಡಿ `ಇಷ್ಟೊಂದಾ’ ಎಂದು ಉದ್ಗಾರ ತೆಗೆದಿದ್ದಳು. ಅದಕ್ಕೆ ಅವರಮ್ಮ ಕೆಲಸಗಾರರಿಗೆ ಊಟ ಕೊಡದಿದ್ದರೆ ಕೆಲಸಕ್ಕೆ ಬರುವುದಿಲ್ಲ ಎಂದೆಲ್ಲ ವಿವರಣೆ ನೀಡುತ್ತಿದ್ದರು. ಎರಡು ದಿನ ಆರಾಮ ಇದ್ದು ಕುಪ್ಪೇಗಾಲದಿಂದ ಮೈಸೂರಿಗೆ ಹೊರಟು ನಿಂತಿದ್ದ ಬಸ್ಸು ಏರಿದ್ದೆವು. ನಮ್ಮನ್ನು ಕಳಿಸಲು ಬಂದಿದ್ದ ಮಹೇಶ ಏನೋ ನೆನಪು ಮಾಡಿಕೊಂಡವನಂತೆ ಬಸ್ಸಿನ ಪಕ್ಕಕ್ಕೆ ಬಂದು 200ರೂಗಳನ್ನು ನನ್ನ ಕೈಗಿಟ್ಟು ನಾನೇ ಮದುವೆ ಕಾಲಕ್ಕೆ ಸ್ವಲ್ಪ ಮುಂಚೆ ಬರಬೇಕಾಗಿತ್ತು, ಆಗಲಿಲ್ಲ ಎಂದು ಹೇಳುತ್ತಿರುವಾಗಲೇ ಬಸ್ ಮುಂದೆ ಮುಂದೆ ಚಲಿಸುತ್ತಿತ್ತು. ಧಾವಂತದಲ್ಲಿ ಮದುವೆ ನೋಂದಾಯಿಸಿಕೊಂಡು ಮೈಸೂರು ಕಡೆಗೆ ಹೋಗಿದ್ದ ನಾನು ಬಿಆರ್ಪಿಗೆ ವಾಪಸ್ ಬಂದಿದ್ದೆ. ನಂತರ 10ನೇ ತಾರೀಖಿನಂದು ಆಯೋಜಿಸಿದ್ದ ಔತಣಕೂಟಕ್ಕೆ ರೆಡಿಯಾಗುತ್ತಿದ್ದೆವು. ಯಾರೆಲ್ಲಾ ಬರಬಹುದು, ಏನೇನು ಬೆಳವಣಿಗೆಯಾಗಬಹುದೆಂಬ ದುಗುಡದಲ್ಲಿದ್ದೆವು. ನಮ್ಮ ಮದುವೆಗೆಲ್ಲಾ ಒತ್ತಾಸೆಯಾಗಿದ್ದ ಪ್ರಭುವಿನ ಮೇಲೆ ಎಲ್ಲರ ವಕ್ರದೃಷ್ಟಿ ಬಿದ್ದಿತ್ತು. ಗಾಯತ್ರಿ ಮನೆಯವರು ಮತ್ತು ಅವರಲ್ಲಿನ ಹಿರಿಯರನೇಕರು ಶಿವಮೊಗ್ಗದ ಅವರ ಮನೆಗೆ ಬಂದು ಗಾಯತ್ರಿಯನ್ನು ಅವರುಗಳು ಮಾತಾಡಿಸಬೇಕೆಂದು ಅದಕ್ಕಾಗಿ ನೀವು ಅವರಿಬ್ಬರನ್ನು ಶಿವಮೊಗ್ಗಕ್ಕೆ ಕರೆಸಲು ಪ್ರಭುಗೆ ಒತ್ತಾಯಿಸಿದ್ದರು.
ಅವರ ಇಚ್ಛೆಯಂತೆ ನಾನು ಗಾಯತ್ರಿ ಪ್ರಭು ಮನೆಗೆ ಸುಮಾರು ಮಧ್ಯಾಹ್ನ 11-12ರ ಸಮಯಕ್ಕೆ ಹೋದೆವು. ಗಾಯತ್ರಿಯ ಹಿರಿಯ ಅಣ್ಣ ಹೆಚ್.ಸಿ. ನಂಜುಂಡಭಟ್ಟ ಮತ್ತು ಹೆಚ್.ಸಿ. ಜಗದೀಶ್ ಹಾಗೂ ಬಂಧುವಾಗಿದ್ದ ಶಾರದಮ್ಮ ಅವರುಗಳ ಜೊತೆ ಇನ್ನೂ ಹಲವರು ಗಾಯತ್ರಿಯೊಡನೆ ಮಾತನಾಡಿದರು. ಅವರನ್ನೆಲ್ಲ ನೋಡಿದ ಗಾಯತ್ರಿ ಭಾವುಕಳಾಗಿ ಕೂತಿದ್ದಳು. ಬಂದ ಗಾಯತ್ರಿ ಬಂಧುಗಳು ಯಾರೂ ನನ್ನನ್ನು ಮಾತಾಡಿಸಲಿಲ್ಲ. ಅವರೆಲ್ಲ ಗಾಯತ್ರಿಯೊಡನೆ ಮಾತಾಡಿ ಬೇರೆಲ್ಲ ಮಾತು ಮುಗಿದು ಕೊನೆಯಲ್ಲಿ ಈಗ ಎಂ.ಎ. ಮುಗಿದಿರುವ ಕಾರಣ ಮುಂದಿನ ಓದಿಗಾಗಿ ಹೊರದೇಶಕ್ಕೆ ಹೋಗುವ ವ್ಯವಸ್ಥೆ ಮಾಡುವುದಾಗಿಯೂ, ಜೀವನದಲ್ಲಿ ಭೋಗಕ್ಕಿಂದ ತ್ಯಾಗ ದೊಡ್ಡದು ಎಂಬೆಲ್ಲ ಮಾತಾಡಿ ಈಗ ಆಗಿರುವ ಮದುವೆ ಮದುವೆಯಲ್ಲ, ಬಿಟ್ಟು ಬಿಡು ಎಂದೆಲ್ಲ ಮಾತುಗಳು ಬಂದವು. ಆಗ ಅದುವರೆಗೂ ಸುಮ್ಮನಿದ್ದ ಪ್ರಭು ಮಧ್ಯೆ ಪ್ರವೇಶಿಸಿ, ಈಗ ನನ್ನ ಸ್ನೇಹಿತ ನಿಮ್ಮ ತಂಗಿಯನ್ನು ಮದುವೆಯಾಗಿದ್ದು ಮುಂದಿನ ಜೀವನದ ವಿಷಯ ಮಾತನಾಡುವುದನ್ನು ಬಿಟ್ಟು ನೀವು ಬೇರ್ಪಡಿಸುವ ಮಾತಾಡುತ್ತಿದ್ದೀರಿ ಎಂದು ಆಕ್ಷೇಪಿಸಿ, ಇನ್ನು ಸಾಕು ಹೊರಡಿ ಎಂದು ಏರು ಧ್ವನಿಯಲ್ಲಿ ಹೇಳಿದ. ಗಾಯತ್ರಿ ಚಿಕ್ಕ ಅಣ್ಣ ಜಗದೀಶ, ಇದು ಏನು ಮನೆಯೋ ಜೈಲೋ ಹೀಗೆಲ್ಲಾ ಮಾತಾಡುತ್ತೀರೆಂದು ಹೇಳುವಾಗಲೇ, ಪ್ರಭು ಹೌದು ಇದು ಜೈಲು ನಾನಿಲ್ಲಿನ ಜೈಲ್ ಸೂಪರಿಂಟೆಂಡೆಂಟ್ ಎಂದು ಏರು ಧ್ವನಿಯಲ್ಲಿ ಹೇಳಿದ ಕಾರಣ ಮುಂದಿನ ಮಾತುಗಳು ನಿಂತು ನಮ್ಮೆಲ್ಲರ ಭೇಟಿ ಕೊನೆಗೊಂಡಿತ್ತು.
ದಿನಾಂಕ 10-6-1979ರ ಮಧ್ಯಾಹ್ನ 3-4 ಗಂಟೆಗೆ ನಾವಿಬ್ಬರೂ ನಮ್ಮ ಸ್ನಾತಕೋತ್ತರ ಕೇಂದ್ರದಲ್ಲಿನ ಒಂದು ಶಾಲಾ ಕೊಠಡಿಯಲ್ಲಿ ಸಂತೋಷ ಕೂಟ ಆಯೋಜಿಸಲಾಗಿತ್ತು. ಕೃಷ್ಣಪ್ಪನವರ ಸಮಾಜವಾದಿ, ದಲಿತ ಮಿತ್ರರನೇಕರು ಹಾಜರಿದ್ದರು. ಪ್ರಾಸ್ತಾವಿಕವಾಗಿ ಕೃಷ್ಣಪ್ಪನವರು ಮಾತಾಡಿ, ಸರಳ, ಜಾತ್ಯತೀತ ಮದುವೆಗಳು ಭಾರತೀಯರಿಗೆ ಇಂದಿನ ಅವಶ್ಯಕವಾದ ಅಂಶಗಳೆಂದು ಮಾತನಾಡಿ ಇಂತಹ ಮದುವೆಯಾಗುತ್ತಿರುವ ನಮ್ಮಿಬ್ಬರಿಗೂ ಶುಭ ಕೋರಿದ್ದರು. ನಂತರದಲ್ಲಿ ಡಾ. ತೀ.ನಂ. ಶಂಕರನಾರಾಯಣ, ಡಾ. ಶ್ರೀಕಂಠ ಕೂಡಿಗೆ, ಡಾ. ಜಿ.ಎನ್ ಕೇಶವಮೂರ್ತಿ ಮತ್ತು ಪ್ರಭು ಕೂಡ ಮಾತಾಡಿದ ನಂತರ ನಾನು ಎಲ್ಲರಿಗೂ ಕೃತಜ್ಞತೆ ಹೇಳಿದ್ದೆ. ಇನ್ನೇನು ಇದೆಲ್ಲ ಆಗುವ ಸಮಯಕ್ಕೆ ಸರಿಯಾಗಿ ಗಾಯತ್ರಿಯ ತಂದೆ, ಅಣ್ಣಂದಿರು ಹಾಗೂ ಇತರ ಕೆಲವರು ಅಲ್ಲಿಗೆ ಬಂದರು. ಕೃಷ್ಣಪ್ಪನವರು ಇದೆಲ್ಲವನ್ನು ಗಮನಿಸುತ್ತಾ ಇದ್ದ ಕಾರಣ ಗಲಾಟೆ ಆಗುವ ಸಂಭವವನ್ನು ನಿರೀಕ್ಷಿಸಿ ನಮ್ಮಿಬ್ಬರನ್ನು ಒಂದು ಅಂಬಾಸಿಡರ್ ಕಾರಿನಲ್ಲಿ ಭದ್ರಾವತಿಗೆ ತರಾತುರಿಯಲ್ಲಿ ಕಳಿಸಿಕೊಟ್ಟರು. (ಸುದ್ದಿದಿನ.ಕಾಂ|ವಾಟ್ಸಾಪ್|9980346243
ಮುಂದುವರಿಯುವುದು
ಅಂತರಂಗ
ಮಹಾತ್ಮ ಗಾಂಧಿ ಬಿಟ್ಟರೆ ನಾನೇ ಫಾದರ್ ಆಫ್ ದಿ ನೇಷನ್ ಅಂತಾರೆ..!
- ಚೇತನ್ ನಾಡಿಗೇರ್
‘ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಜಾಸ್ತಿ ಆಗ್ತಿಲ್ಲ, ಆ ಬಗ್ಗೆ ಮಾತಾಡೋಣ. ಆಟೋ ಚಾಲಕರಿಗೆ ಬೈಕ್ ಸವಾರರಿಂದ ತೊಂದರೆ ಆಗುತ್ತಿದೆ ಆ ಬಗ್ಗೆ ಮಾತಾಡೋಣ. ಸರ್ಕಾರಿ ಶಾಲೆಗಳಲ್ಲಿ ಬಿಸಿಊಟ ಅಡುಗೆ ಮಾಡುವವರಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ ಸಂಬಳ. ಅದರ ಬಗ್ಗೆ ಮಾತಾಡೋಣ. ಮಿಕ್ಕವರೆಲ್ಲಾ ಬಹಳ ಬ್ಯುಸಿಯಾಗಿರುವುದರಿಂದ ನಾವು ಇದರ ಬಗ್ಗೆ ಮಾತಾಡೋಣ್ವಾ?’
ಮಾರ್ಮಿಕವಾಗಿ ಕೇಳಿದರು ಪ್ರಕಾಶ್ ರೈ. ಅವರಿಗೆ ಆ ವಿಷಯದ ಬಗ್ಗೆ ಮಾತಾಡುವುದಕ್ಕೆ ಇಷ್ಟವಿರಲಿಲ್ಲ. ಆದರೂ ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ತಿಂಗಳಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂಬ ಪ್ರಶ್ನೆ ಬಂತು. ಅದನ್ನು ಬಹಳ ಜಾಣ್ಮೆಯಿಂದ ತಳ್ಳಿಹಾಕಿದರು ರೈ. ಅದೊಂದು ಬಿಟ್ಟು ಹಲವು ವಿಷಯಗಳ ಬಗ್ಗೆ ಮಾತನಾಡಿದರು. ತಮ್ಮ ಇಷ್ಟದ ಚಿತ್ರದ ಬಗ್ಗೆ, ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯ ಬಗ್ಗೆ, ಸೋಷಿಯಲ್ ಮೀಡಿಯಾವನ್ನು ಕೆಲವರು ಕೆಟ್ಟದಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ, ತಂದೆ-ಮಗನ ಸಂಬಂಧದ ಬಗ್ಗೆ, STARDOM ಸಂಭಾಳಿಸುವ ಬಗ್ಗೆ, ಕಲಿಕೆಯ ಬಗ್ಗೆ … ಹೀಗೆ ಹಲವು ವಿಷಯಗಳನ್ನು ಅವರು ಮಾತನಾಡಿದರು. ಅದಕ್ಕೆ ವೇದಿಕೆಯಾಗಿದ್ದು, ಆರ್. ಚಂದ್ರು ನಿರ್ಮಾಣದ, ‘ಡಾರ್ಲಿಂಗ್’ ಕೃಷ್ಣ ಅಭಿನಯದ ‘ಫಾದರ್’ ಚಿತ್ರದ ಪತ್ರಿಕಾಗೋಷ್ಠಿ. ಈ ಚಿತ್ರದಲ್ಲಿನ ತಮ್ಮ ಪಾತ್ರ ಮತ್ತ ತಂದೆಯ ವ್ಯಾಖ್ಯಾನವನ್ನು ರೈ ಎಷ್ಟು ಚೆನ್ನಾಗಿ ಮಾಡಿದರು ಗೊತ್ತಾ? ನೀವೇ ಓದಿ …
ನಾನು ನನ್ನ ಮೂರು ದಶಕಗಳ ವೃತ್ತಿಜೀವನದಲ್ಲಿ ಯಶಸ್ಸಿನಿಂದ ಹಾಳಾದ ಬಹಳಷ್ಟು ಜನರನ್ನು ನೋಡಿದ್ದೇನೆ. ಸೋಲಿನಿಂದ ಹಾಳಾದವರನ್ನು ನೋಡಿದ್ದು ಕಡಿಮೆ. ಯಶಸ್ಸು ಎನ್ನುವುದು ಒಂದು ನಶೆ. ಯಶಸ್ವಿಯಾಗುವುದು ದೊಡ್ಡ ವಿಷಯವಲ್ಲ. ಅದನ್ನು ದಕ್ಕಿಸಿಕೊಳ್ಳೋದು, ಉಳಿಸಿಕೊಳ್ಳೋದು ಬಹಳ ಮುಖ್ಯ. ಹಾಗಾಗಿ, ಡಾ. ರಾಜಕುಮಾರ್, ರಜನಿಕಾಂತ್, ಕಮಲ್ ಹಾಸನ್ ಮುಂತಾದವರು ಆರು ದಶಕ, ಐದು ದಶಕಗಳ ಕಾಲ ಕೆಲಸ ಮಾಡಿದವರನ್ನು ನಾವು ನೋಡಬಹುದು. ಈಗ ಅಂಥವರು ಸಿಗುವುದೇ ಇಲ್ಲ ನಮಗೆ. ಬಹಳಷ್ಟು ಯುವಕರು stardomಗೆ ತಯಾರಾಗಿರುವುದಿಲ್ಲ. ಎಷ್ಟು ನಾವು ಅದನ್ನು ಇಳಿಸಿಕೊಂಡು ಹೊರಗೆ ಬರುತ್ತೀವೋ, ಅಷ್ಟು ಒಳ್ಳೆಯದು. ಇಲ್ಲದಿದ್ದರೆ ಅದು ನಮ್ಮನ್ನು ಸುಟ್ಟುಹಾಕುತ್ತದೆ. ಕೆಲವರು ಕಲಿಯುತ್ತಿದ್ದಾರೆ, ಕೆಲವರು ಕಲಿಯುವುದಿಲ್ಲ.
ಪ್ರತಿಯೊಬ್ಬರಿಗೂ ಇಗೋ ಇರಬೇಕು. ಅದು ಸ್ವಾಭಿಮಾನವಾಗಿರುವವರೆಗೂ ಇರಬೇಕು. ಅದು ಅಹಂಕಾರವಾದರೆ ಇಬ್ಬರಿಗೂ ಒಳ್ಳೆಯದಲ್ಲ. ಒಂದು ಇಗೋ ನನ್ನನ್ನು ಬೆಳೆಸುವುದಕ್ಕೆ ಸಾಧ್ಯವಾದರೆ, ಇನ್ನೊಂದನ್ನು ರೂಪಿಸುವುದಕ್ಕೆ ಸಾಧ್ಯವಾದರೆ, ಒಂದು ಧಾರ್ಮಿಕ ಕೋಪವಾದರೆ ಒಳ್ಳೆಯದಲ್ವಾ? ಅದು ಆಯಾ ಪರಿಸ್ಥಿತಿಗೆ ಬದಲಾಗುತ್ತಿರುತ್ತದೆ. ಒಂದು ಪದದ ಅರ್ಥ ಪದಕೋಶದಲ್ಲಿ ಸಿಗುವುದಿಲ್ಲ, ಆ ಸಂದರ್ಭದಲ್ಲಿ ಸಿಗುತ್ತದೆ. ಯಾವ ಸಂದರ್ಭದಲ್ಲಿ ಆ ಪದವನ್ನು ಉಪಯೋಗಿಸುತ್ತೀವೋ, ಆ ಪದಕ್ಕೆ ಅರ್ಥ ಇರುತ್ತದೆಯೇ ಹೊರತು, ಇಗೋ ಎಂದರೆ ಒಂದು definite ಅರ್ಥವಿರುವುದಿಲ್ಲ.
ಕೆಲವು ನಟರು ಸಹ ತಾವು ಜಿಮ್ಗೆ ಹೋಗಿಯೇ ನಟ ಆಗುತ್ತೀನಿ ಎಂದರೆ ಆಗುವುದಿಲ್ಲ. ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ತಿಳಿದುಕೊಳ್ಳೋದು, ಕಲೆಯ ಪ್ರಕಾರಗಳನ್ನು ಅರಿತುಕೊಳ್ಳೋದು, ಅದರಿಂದ ನನಗೆ ಹೆಸರಾಗಬೇಕೆಂದು ಬಯಸೋದು ಸಹ ಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ, ಪ್ರತಿಯೊಬ್ಬರು ಗೆಲ್ಲಬೇಕೆಂಬ ಒತ್ತಡ ಯಾಕೆ? ಸೋಲು ಸಂತೋಷ ಯಾಕೆ ನಾವು ಕೊಟ್ಟಿಲ್ಲ? ಕ್ಷಮಿಸುವ ಸಂತೋಷವನ್ನು ನಾವು ಯಾಕೆ ಕೊಟ್ಟಿಲ್ಲ? ನಮಗೂ ಅವನೇನು ಹೇಳುತ್ತೇನೆ ಎನ್ನುವ ತಾಳ್ಮೆಯೇ ಇಲ್ಲ. ನಾನು ಅಂದುಕೊಂಡಿರುವ ಸಿನಿಮಾ ತೆಗೆದಿದ್ದೀಯಾ? ಅಂತಲೇ ಎಲ್ಲರೂ ಕೇಳೋದು. ಏನು ಹೇಳುತ್ತಾನೆ ಎನ್ನುವ ತಾಳ್ಮೆಯೇ ಯಾರಿಗೂ ಇಲ್ಲ.
ನಾನೇ ಈಗ ಮತ್ತೆ ಕಲಿಯಬೇಕಾದ ಪರಿಸ್ಥಿತಿಯಲ್ಲಿದ್ದೀನಿ. ಇಷ್ಟು ಸಿನಿಮಾಗಳನ್ನು ಮಾಡಿದ್ದೇನೆ, ಹೊಸಹೊಸ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ಇವತ್ತು ಹೊಸಬರ ಜೊತೆಗೆ ಮಾಡುವಾಗ, ಅವರು ಬೇರೇನೋ ಕೇಳುತ್ತಿದ್ದಾರೆ ಅಂತನಿಸುತ್ತಿದೆ. ಹಾಗಾಗಿ, ಇದುವರೆಗೂ ಕಲಿತಿದ್ದನ್ನು ಮರೆತು, ಹೊಸದಾಗಿ ಕಲಿಯಬೇಕು. ಇದೊಂದು ಸವಾಲು. ಖುಷಿಯಾಗುತ್ತಿದೆ. ಇತ್ತೀಚೆಗೆ ‘ರಾಯನ್’ ಸಿನಿಮಾದ ಸಮಾರಂಭದಲ್ಲಿದ್ದೆ. ಆ ಚಿತ್ರಕ್ಕೆ ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದು, ರೆಹಮಾನ್ ಚಿತ್ರರಂಗಕ್ಕೆ ಬಂದು 30 ವರ್ಷಗಳಾಗಿವೆ. ನನ್ನ ಮೊದಲ ತಮಿಳು ಚಿತ್ರಕ್ಕೆ ಅವರೇ ಸಂಗೀತ ನಿರ್ದೇಶಕರು.
30 ವರ್ಷಗಳ ನಂತರವೂ ನಾವಿನ್ನೂ ಇದ್ದೀವಲ್ಲ ಎನ್ನುವುದೇ ಬಹಳ ಸಂತೋಷದ ವಿಷಯ. ಒಬ್ಬ ಕಲಾವಿದ ಬೆಳೆಯೋದು ಬರೀ ಅವನ ಪ್ರತಿಭೆಯಿಂದ ಮಾತ್ರವಲ್ಲ. ಜನರ ಪ್ರೀತಿಯಿಂದ ಮತ್ತು ಅದಕ್ಕಿಂತ ಜನರು ಅವನ ಮೇಲಿಟ್ಟಿರುವ ನಂಬಿಕೆಯಿಂದ. ಆ ನಂಬಿಕೆಯನ್ನು 30 ವರ್ಷಗಳ ಕಾಲ ಉಳಿಸಿಕೊಂಡಿದ್ದೇವೆ ಎನ್ನುವುದೇ ನಮ್ಮ ಹೆಮ್ಮೆ ಆಗುತ್ತದೆ. ಏಕೆಂದರೆ, ಅವರು ನಮ್ಮನ್ನು ನಂಬಿ ಒಂದು ವೇದಿಕೆ ಕೊಟ್ಟಿದ್ದಾರೆ. ಅವರಿಗೆ ಇಷ್ಟ ಆದರಂತೂ, ನಿಮ್ಮನ್ನು ಪ್ರೀತಿಸೋಕೆ ಕಾರಣಗಳನ್ನು ಹುಡುಕುತ್ತಾನೆ. ಒಬ್ಬ ವ್ಯಕ್ತಿಯ ಬೆಳವಣಿಗೆ ಬರೀ ಅವನು ಬೆಳೆದ ಎತ್ತರ ನೋಡಿ ಲೆಕ್ಕ ಹಾಕುವುದಲ್ಲ, ಅವನು ಎತ್ತರವಾಗಿ ಬೆಳೆದ ಮೇಲೆ ಎಷ್ಟು ಜನರನ್ನ ಬೆಳೆಸಿದ ಎನ್ನುವುದು ಬಹಳ ಮುಖ್ಯ.
‘ನಾನು ನನ್ನ ಕನಸು’ ಇರಬಹುದು, ‘ಒಗ್ಗರಣೆ’ ಅಥವಾ ‘ಇದೆಂಥಾ ರಾಮಾಯಣ’ ಚಿತ್ರಗಳು ನನ್ನ ಅಭಿರುಚಿ. ತಂದೆ-ಮಗನ ಸಂಬಂಧದ ಕುರಿತು ಸಾಕಷ್ಟು ಚಿತ್ರೆಗಳು ಬಂದಿವೆ. ಮಹಾತ್ಮ ಗಾಂಧಿ ಬಿಟ್ಟರೆ ನಾನೇ ಫಾದರ್ ಆಫ್ ದಿ ನೇಷನ್ ಅಂತಾರೆ. ಏಕೆಂದರೆ, ಅಷ್ಟೊಂದು ತಂದೆಯ ಪಾತ್ರಗಳನ್ನು ನಾನು ಇದುವರೆಗೂ ಮಾಡಿಬಿಟ್ಟಿದ್ದೀನಿ. ಇದು ತೀವ್ರವಾಗಿ ಕಾಡುವ ಸಿನಿಮಾ. ತಂದೆ-ಮಗನ ಬಾಂಧವ್ಯಕ್ಕಿಂತ, ಇಲ್ಲಿ ಮಗನನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಹಿರಿಯರನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಸೂಕ್ಷ್ಮವಾಗಿ ಹೇಳಲಾಗಿದೆ. ಪರಿಸ್ಥಿತಿಯ ವಿಕೋಪಗಳಿಗೆ ಅಥವಾ ಕೆಲವು ಒತ್ತಡಗಳಿಗೆ ಆ ಸಂಬಂಧ ಪ್ರಶ್ನಿಸಲ್ಪಡುತ್ತದೆ. ಜೀವನದಲ್ಲಿ ಕೆಲವು ಸಂಘರ್ಷಗಳು ಬಂದಾಗ ನಮಗೊಂದು ಲಿಬರೇಶನ್ ಸಿಗುತ್ತದೆ. ಒಂದು ಪರಿಸ್ಥಿತಿ ಎದುರಾದಾಗ ನಮ್ಮಳೊಗಿರುವ ಇನ್ನೊಂದು ಶಕ್ತಿ ನಮಗೆ ಅರ್ಥವಾಗೋದು ಅಥವಾ ನಾವು ಇನ್ನಷ್ಟು ಬೆಳೆಯೋದಕ್ಕೆ ಸಾಧ್ಯ. ಅದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಇದೊಂದು ಜನ ಸಾಮಾನ್ಯರ ಸಿನಿಮಾ. ನಿಜವಾಗಲೂ ಕಾಡುವ ಸಿನಿಮಾ.
ಒಬ್ಬ ಗಂಡಸು ಮಕ್ಕಳು ಹುಟ್ಟುವ ತನಕ ಬರೀ ಒಬ್ಬ ಗಂಡ ಆಗಿರುತ್ತಾನೆ. ಮಕ್ಕಳು ಹುಟ್ಟಿದ ನಂತರ ಅಪ್ಪ ಎನ್ನುವ ಸ್ಥಿತಿ. ಅಪ್ಪನಿಗೂ, ಮಕ್ಕಳಿಗೂ ಒಂದೇ ವಯಸ್ಸು. ಅದರಲ್ಲೂ ಒಂದು ಹೆಣ್ಣು ಮಗಳ ಜೊತೆಗಿನ ಸಂಬಂಧ ಎಂದರೆ, ಅವನ ಜೀವನದಲ್ಲಿ ಬರುವ ಎಲ್ಲಾ ಸಂಬಂಧಗಳು, ಅಂದರೆ ತಾಯಿ ಇರಬಹುದು, ಹೆಂಡತಿ ಇರಬಹುದು, ತಂಗಿ ಇರಬಹುದು, ಸ್ನೇಹಿತೆ ಇರಬಹುದು. ಆದರೆ, ಮಗಳ ಜೊತೆಗೆ ಬೇರೆ ಸಂಬಂಧ ಇರುತ್ತದೆ. ಚೆನ್ನಾಗಿ ಬೆಳಸಿ ಯಾವುದನ್ನೂ ಎದುರು ನೋಡದೆ ಬಿಟ್ಟು ಕೊಡುವುದು. ತಂದೆ-ಮಗನ ಸಂಬಂಧ ಹಾಗಿರುವುದಿಲ್ಲ. ನನ್ನ ನಂತರ ನೀನು, ನನ್ನ ಇನ್ನೊಂದು ಛಾಯೆ ನೀನು ಎನ್ನುವ ಸಂಬಂಧ ಅದು. ಅದೊಂಥರಾ Love-Hate relationship. ತಂದೆ ತನ್ನ ಮಗನಿಗೆ ಕಲಿಸೋದಕ್ಕಿಂತ, ಅವನ behaviourನಿಂದ ಮಕ್ಕಳು ಕಲಿಯೋದು ತುಂಬಾ ಇರುತ್ತದೆ.
ನನಗೆ ನನ್ನ ಮಗಳ ಜೊತೆಗೆ ಇರುವ relationship ಬೇರೆ, ಮಗನ ಜೊತೆಗೆ ಇರುವ ಸಂಬಂಧ ಬೇರೆ. ಇವತ್ತಿನ ಪ್ರಪಂಚದಲ್ಲಿ ಹೊರಗೆ ಹೋಗಬೇಕು. ಸಾಕಷ್ಟು ಸಮಸ್ಯೆಗಳು ಇರುತ್ತವೆ. ಅದನ್ನು ಹೇಳಿಕೊಳ್ಳುವುದಕ್ಕೆ ಆಗಲ್ಲ. ಅದನ್ನು ಅವರೇ ನಿಭಾಯಿಸಬೇಕು. ಮಗ ಎಷ್ಟೇ ದೊಡ್ಡವನಾದರೂ, ತಂದೆಗೆ ಇನ್ನೂ ಚಿಕ್ಕವನು ಎಂದನಿಸುತ್ತದೆ. ಅದರ ಜೊತೆಗ ಮಗನಿಗೆ ತನ್ನದೇ ಆದ ನಿರ್ಧಾರಗಳೂ ಇರುತ್ತವೆ. ಅದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ನಿನಗೆ ಇಷ್ಟು ಮಾಡಿದೆ, ನೀನೇನು ವಾಪಸ್ಸು ಕೊಡುತ್ತೀಯ ಎನ್ನುವುದಕ್ಕಿಂತ ಅವನನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಒಬ್ಬ ನಟನಾಗಿ ನನಗೆ ‘ನಾನು ನನ್ನ ಕನಸು’ ಬಹಳ ಇಷ್ಟವಾದ ಮತ್ತು ಕಾಡುವ ಸಿನಿಮಾ. ಏಕೆಂದರೆ, ನನ್ನ ಹೆಂಡತಿ ನನ್ನ ಹೆಂಡತಿಯಾಗಿಯೇ ಇರುತ್ತಾಳೆ. ಮಗಳು ಮದುವೆಯಾದಾಗ, ಮಾವ ಆಗ ನನಗೆ ಅರ್ಥಾವಾಗುತ್ತಾನೆ. ಅಲ್ಲಿಯವರೆಗೂ ಹೆಂಡತಿ ಅಪ್ಪ ಅಂತ ಜಗಳ ಆಡುತ್ತಿರುತ್ತೀವಿ. ನನ್ನ ಮಗಳಿಗೆ ಮಾವ ಸಿಗುತ್ತಾನೆ ಎಂದಾಗ, ನನಗೆ ಹೆಂಡತಿ ಅರ್ಥವಾಗುತ್ತಾ ಹೋಗುತ್ತಾಳೆ. ಅವಳು ಇನ್ನೊಬ್ಬಳ ಮಗಳಾಗಿದ್ದಳು, ನಾನು ಅವಳನ್ನು ಇನ್ನೊಬ್ಬರ ಮಗಳು ಅಂತ ನೋಡಿರಲೇ ಇಲ್ಲ. ನನ್ನ ಮಗಳನ್ನು ನಾನು ನೋಡುತ್ತಿದ್ದ ಹಾಗೆ, ಅವಳ ಅಪ್ಪ ಸಹ ಅವಳನ್ನು ಹಾಗೆಯೇ ನೋಡುತ್ತಿದ್ದ. ಮಗಳು ಮತ್ತು ತಂದೆಯ ಸಂಬಂಧದಲ್ಲಿ ಆ ಚಿತ್ರ ನನಗೆ ಬಹಳಷ್ಟು ವಿಷಯಗಳನ್ನು ಕಲಿಸಿತು. ಆ ಚಿತ್ರವನ್ನು ಬರೆಯುತ್ತಾ, ನಿರ್ದೇಶನ ಮಾಡುತ್ತಾ ತುಂಬಾ ಕಲಿತೆ. ಹಾಗಾಗಿ, ನನಗೆ ಅದು ಬಹಳ ಇಷ್ಟವಾದ ಚಿತ್ರ.
ಮಾಣಿಕ್ಯ ಒಳ್ಳೆಯದೇ? ಅದು ಕೋತಿ ಕೈಗೆ ಸಿಕ್ಕಿದರೆ? ಅದರ ಬಗ್ಗೆ ನಾವು ಯೋಚಿಸಬೇಕು. ಪ್ಲಸ್, ಮೈನಸ್ ಇದ್ದೇ ಇರುತ್ತದೆ. ಒಳಗಿನ ಅಸಹ್ಯವೂ ಹೊರಗೆ ಬರುತ್ತದೆ, ವಿಕಾರಗಳೂ ಹೊರಗ ಬರುತ್ತಿವೆ. ಅವೆರಡೂ ಬರಬೇಕು. ಸೋಷಿಯಲ್ ಮೀಡಿಯಾಗಳು ಬಹಳ ಮುಖ್ಯವಾದ ವಿಷಯಗಳನ್ನು ತಲುಪಿಸೋಕೆ ಮಹತ್ವದ ಪಾತ್ರ ವಹಿಸುತ್ತಿದೆ. ಇದರಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ಅವೆರಡರಲ್ಲಿ ನಾವು ಯಾವುದನ್ನು ತೆಗೆದುಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ. ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಅನಂತ್ ನಾಗ್ ಒಂದು ಸಂಭಾಷಣೆ ಹೇಳ್ತಾರೆ. ‘ನಮ್ಮೆಲ್ಲರಲ್ಲೂ ಕಪ್ಪು ನಾಯಿ, ಬಿಳಿ ನಾಯಿ ಇರತ್ತೆ. ಕಪ್ಪು ನಾಯಿ ಕೆಟ್ಟದ್ದು, ಬಿಳಿ ನಾಯಿ ಒಳ್ಳೇದು.
ಅವೆರಡರಲ್ಲಿ ನಾವು ಯಾವುದಕ್ಕೆ ಊಟ ಜಾಸ್ತಿ ಹಾಕುತ್ತೇವೆ ಅನ್ನೋದು ಮುಖ್ಯ’ ಅಂತಾರೆ. ನಾವು ಎರಡನ್ನೂ ನೋಡಬೇಕು. ಅಣು ಬಾಂಬ್ ಕಂಡುಹಿಡಿದಿದ್ದು ಎನರ್ಜಿಗೆ, ಇನ್ನೊಬ್ಬರನ್ನು ಕೊಲ್ಲುವುದಕ್ಕೆ ಅಲ್ಲ. ಇಲ್ಲಿ ನಮ್ಮ ಮನಸ್ಸಾಕ್ಷಿ, ಆತ್ಮಾವಲೋಕನ ಬಹಳ ಮುಖ್ಯ. ಇದನ್ನು ಯಾರೋ ಒಬ್ಬರು ನೋಡುವುದಿಲ್ಲ. ಹೆಣ್ಮಕ್ಕಳು ನೋಡುತ್ತಿರುತ್ತಾರೆ. ಸಮಾಜದ ಒಂದು ಸ್ವಾಸ್ತ್ಯ ನೋಡುತ್ತಿರುತ್ತದೆ. ಅವರಿಗೆ ನಾವೇನು ತಲುಪಿಸಬೇಕು, ಯಾವುದು ಮುಖ್ಯ ಆಗಬೇಕು ಎಂಬುದು ನಮ್ಮ ಕೈಯಲ್ಲಿರೋದು. ಇವತ್ತಿನ ಯುವ ಜನಾಂಗದ ತಪ್ಪೇನು ಇಲ್ಲ. ಒಬ್ಬಿಬ್ಬರು ತಪ್ಪು ಮಾಡಿದರೆ, ಎಲ್ಲರೂ ತಪ್ಪು ಮಾಡುತ್ತಾರೆ ಎನ್ನುವುದು ತಪ್ಪು. Let’s be responsible ಅಷ್ಟೇ. (ಬರಹ : ಚೇತನ್ ನಾಡಿಗೇರ್, ಫೇಸ್ ಬುಕ್ ನಿಂದ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಆತ್ಮಕತೆ | ಪಠ್ಯೇತರ ಚಟುವಟಿಕೆಗಳು
- ರುದ್ರಪ್ಪ ಹನಗವಾಡಿ
ಪಠ್ಯೇತರ ಚಟುವಟಿಕೆಗಳ ಕಾರಣದಿಂದಾಗಿ ಅದರ ಅಧ್ಯಕ್ಷನಾಗಿದ್ದ ಕಾರಣ ಇಡೀ ಕೇಂದ್ರದ ವಿದ್ಯಾರ್ಥಿಗಳು ಪರಸ್ಪರ ಪರಿಚಯ ಮತ್ತು ಅರ್ಥಮಾಡಿಕೊಳ್ಳುವಂತಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಭಾಷಣ, ಚರ್ಚೆಗಳ ಜೊತೆಗೆ ವಿದ್ಯಾರ್ಥಿಗಳಿಗೆ ಸಂಘಟಿತ ಕಾರ್ಯಕ್ರಮಗಳಾದ ಸಂಗೀತ, ನಾಟಕ, ಏಕಪಾತ್ರಾಭಿನಯಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತಾಗಿತ್ತು.
ಪಠ್ಯೇತರ ಚಟುವಟಿಕೆಯ ಸಂಘದ ಉದ್ಘಾಟನಾ ಸಮಾರಂಭದ ನೆಪದಲ್ಲಿ ನಮ್ಮ ಕೇಂದ್ರಕ್ಕೆ ಆಗಿನ ವಿದ್ಯಾ ಮಂತ್ರಿಗಳಾಗಿದ್ದ ಎ. ಆರ್. ಬದರಿ ನಾರಾಯಣ, ಪಿಡಬ್ಲೂಡಿ ಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪ, ಉಪಕುಲಪತಿಗಳಾಗಿದ್ದ ಕೆ.ಎಸ್. ಹೆಗ್ಗಡೆಯವರಂತವರನ್ನು ಆಹ್ವಾನಿಸಿ, ಇಲ್ಲಿನ ಅನಾನುಕೂಲತೆಗಳನ್ನು ಅವರಿಗೆ ವಿವರಿಸಿ, ಅದರ ಅಭಿವೃದ್ಧಿಗಾಗಿ ಕ್ರಮ ಜರುಗಿಸುವಂತೆ ಒತ್ತಾಯಿಸುತ್ತಿದ್ದೆವು. ಮತ್ತು ಇದೇ ಸಂಘಟನೆಯನ್ನು ಉಪಯೋಗಿಸಿಕೊಂಡು ನಮ್ಮ ಕೇಂದ್ರಕ್ಕೆ ಹಿರಿಯ ಸಾಹಿತಿಗಳಾಗಿದ್ದ ಚಂಪಾ, ಸುಜನಾ ಮತ್ತು ಆಗಿನ್ನು ಹಾಡುವ ಉತ್ಸಾಹದಲ್ಲಿದ್ದ ಜಾನಪದ ಹಾಡುಗಾರ ಬಾನಂದೂರು ಕೆಂಪಯ್ಯ, ಶಿವಮೊಗ್ಗದ ಜನಪದ ಹಾಡುಗಾರರಾಗಿದ್ದ ಯುವರಾಜ ಹೀಗೆ ಅನೇಕರನ್ನು ಸಮಾರಂಭಗಳಿಗೆ ಆಹ್ವಾನಿಸಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೆವು.
ನಮ್ಮಲ್ಲಿನ ಕೊರತೆಗಳನ್ನು ಅರುಹುತ್ತಾ ಸರ್ಕಾರ ಮತ್ತು ವಿಶ್ವವಿದ್ಯಾಲಯ ನಮ್ಮ ಕೇಂದ್ರದ ಬೆಳವಣಿಗೆಗೆ ಏನೆಲ್ಲ ಪ್ರಯತ್ನಗಳನ್ನು ಮಾಡಬೇಕೆಂಬುದರ ಬಗ್ಗೆ ಚರ್ಚೆ ಕೂಡ ನಡೆಯುತ್ತಿದ್ದವು. ಇದೇ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಂದ ಚಂದ್ರಶೇಖರ ಪಾಟೀಲರ `ಕುಂಟ ಕುಂಟ ಕುರುವತ್ತಿ’, `ಕೊಡೆಗಳು’, ಚಂದ್ರಶೇಖರ ಕಂಬಾರರ ‘ಸಂಗ್ಯಾ-ಬಾಳ್ಯಾ’, ಪೂರ್ಣಚಂದ್ರ ತೇಜಸ್ವಿಯವರ ‘ಯಮಳ ಪ್ರಶ್ನೆ’, ನಾಟಕಗಳನ್ನು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೆಲ್ಲ ಸೇರಿ ಪ್ರದರ್ಶನ ಮಾಡುತ್ತಿದ್ದೆವು. ನಾಟಕದ ನಿರ್ದೇಶನವನ್ನು ನಾನೇ ಮಾಡುತ್ತಿದ್ದೆ. ಈ ಸಮಾರಂಭಗಳು ನಡೆದಾಗ ವಿಶೇಷವಾಗಿ ವಿದ್ಯಾರ್ಥಿಗಳಲ್ಲದೆ, ಕೇಂದ್ರದ ಅಕ್ಕಪಕ್ಕದ ಗ್ರಾಮಸ್ಥರು ಮತ್ತು ಬಿ.ಆರ್.ಪಿ. ಯಲ್ಲಿ ಇದ್ದ ವಿದ್ಯುತ್ ನಿಗಮದ ಹಿರಿಯ ಅಧಿಕಾರಿಗಳು,ಲೋಕೋಪಯೋಗಿ ಇಲಾಖೆ ನೌಕರರು ಹಾಗೂ ಹತ್ತಿರದಲ್ಲಿದ್ದ ಮೀನುಗಾರಿಕಾ ಇಲಾಖೆಯ ನೌಕರರು ಕೂಡಾ ಬರುತ್ತಿದ್ದರು. ನಮ್ಮ ಪಠ್ಯೇತರ ಚಟುವಟಿಕೆಗಳ ಕಾರಣದಿಂದಾಗಿ ನಮ್ಮ ಕೇಂದ್ರದ ಅಸ್ತಿತ್ವಕ್ಕೆ ಒಂದು ರೀತಿಯ ಮನ್ನಣೆ ದೊರೆತಂತಾಗಿತ್ತು. ಇಂತಹ ಎಲ್ಲಾ ಸಭೆ ಸಮಾರಂಭಗಳಲ್ಲಿ ಹಿರಿಯರಾಗಿದ್ದ ಕನ್ನಡ ವಿಭಾಗದ ಡಾ. ಹೆಚ್. ತಿಪ್ಪೇರುದ್ರ ಸ್ವಾಮಿ ಅವರು ಅಧ್ಯಕ್ಷತೆ ವಹಿಸುತ್ತಿದ್ದರು. ಇತರೆ ಎಲ್ಲಾ ಆಧ್ಯಾಪಕರು ಕೂಡಾ ಏಕಮನಸ್ಸಿನಿಂದ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು.
ನಮ್ಮ ಅರ್ಥಶಾಸ್ತ್ರ ವಿಭಾಗದ ಯೋಜನಾ ವೇದಿಕೆಯೂ ಕೂಡ ಕ್ರಿಯಾಶೀಲವಾಗಿತ್ತು. ಸಾಮಾನ್ಯ ಅರ್ಥಶಾಸ್ತçಕ್ಕೂ ಒಳಪಡುವ ರಾಷ್ಟç ಮತ್ತು ರಾಜ್ಯ ಯೋಜನೆಗಳ ರ್ಯಾವಲೋಚನೆ, ವಾರ್ಷಿಕ ಬಜೆಟ್ ಮೇಲಿನ ಚರ್ಚೆ ಇವೇ
ಮುಂತಾದ ವಿಷಯಗಳನ್ನು ಚರ್ಚಿಸುತ್ತಿದ್ದೆವು. ಇದಕ್ಕಾಗಿ ಮೈಸೂರಿನಿಂದ ಹಿರಿಯ ಅಧ್ಯಾಪಕರಾಗಿದ್ದ ಡಾ. ಮಾದಯ್ಯ, ಡಾ. ಎಸ್. ನಾಗರಾಜು, ಡಾ. ಎಸ್.ಎಂ. ವೀರರಾಘವಾಚಾರ್ ಅವರುಗಳನ್ನು ಜೊತೆಗೆ ಆಡಳಿತಾಧಿ ಕಾರಿಗಳಾಗಿದ್ದ ತರಿಕೆರೆ ಉಪ ವಿಭಾಗದಲ್ಲಿದ್ದ ಎಸ್.ಎಂ. ಜಾಮಾದಾರ್ ಅವರನ್ನು ಕರೆಸಿ ನಮ್ಮ ವಿದ್ಯಾರ್ಥಿಗಳಿಗೆ ಅವರಿಂದ ಉಪನ್ಯಾಸ ಮತ್ತು ಆಡಳಿತದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡುತ್ತಿದ್ದೆವು.
ನಮ್ಮ ಕೇಂದ್ರದ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳನ್ನು ಸಂಘಟಿಸಿ ಸುಮಾರು 10 ದಿನಗಳಿಗೂ ಹೆಚ್ಚು ಕಾಲ ಇಡೀ ಸ್ನಾತಕೋತ್ತರ ಕೇಂದ್ರವನ್ನು ಬಂದ್ ಮಾಡಿ ಪ್ರತಿಭಟಿಸಿದ್ದೆವು. ಈ ಕೇಂದ್ರ ಪ್ರಾರಂಭವಾಗಿ 6-7 ವರ್ಷಗಳಾದರೂ ಖಾಯಂ ಅಧ್ಯಾಪಕರ ಕೊರತೆ ನೀಗಿಸಲು ಸರಿಯಾದ ಲೈಬ್ರರಿ ವ್ಯವಸ್ಥೆ, ಹಾಸ್ಟೆಲ್ನಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಮುಂದಿಟ್ಟುಕೊಂಡು ಒಂದು ಕರಪತ್ರ ಮುದ್ರಿಸಿ ಧರಣಿ ನಡೆಸಿದ್ದೊಂದು ದೊಡ್ಡ ಇತಿಹಾಸ.
ನೇರವಾಗಿ ಅಧ್ಯಾಪಕರು ಭಾಗವಹಿಸಿಲ್ಲವಾದರೂ ವಿದ್ಯಾರ್ಥಿಗಳು ದಿನನಿತ್ಯದ ಬೆಳವಣಿಗೆಯನ್ನೆಲ್ಲ ಗಮನಿಸುತ್ತಾ ಈ ಧರಣಿಯ ವಿಷಯಗಳು ವಿಶ್ವವಿದ್ಯಾಲಯ ಮತ್ತು ಸರ್ಕಾರಕ್ಕೆ ಮುಟ್ಟುವಂತೆ ಮಾಡಲು ಶಿವಮೊಗ್ಗದಲ್ಲಿದ್ದ ಪತ್ರಕರ್ತರಿಗೂ ಸಂಪರ್ಕಿಸಿ ಎಲ್ಲಾ ಪತ್ರಿಕೆಗಳಲ್ಲಿ ಬರುವಂತೆ ಮಾಡಿದ್ದೆವು. ಅದರ ಪರಿಣಾಮವೋ ಎನ್ನುವಂತೆ, ವಿಶ್ವವಿದ್ಯಾಲಯದಿಂದ ಹಿರಿಯ ಅಧಿಕಾರಿಗಳು ಬಂದು ಅಲ್ಲಿನ ಸಮಸ್ಯೆಗಳ ಬಗ್ಗೆ ತುರ್ತು ಗಮನ ಹರಿಸುವ ಬಗ್ಗೆ ಭರವಸೆ ನೀಡಿದ್ದು, ಅದರ ಭಾಗವಾಗಿ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸುತ್ತಿದ್ದ ಅಧ್ಯಾಪಕರಲ್ಲಿ ನನ್ನನ್ನು ಒಳಗೊಂಡAತೆ ಅನೇಕರಿಗೆ ಖಾಯಂಗೊಳಿಸುವ ಪ್ರಕ್ರಿಯೆ ಪ್ರಾರಂಭವಾದವು. ಲೈಬ್ರರಿ ಶಾಖೆಗೆ ಪೂರ್ಣ ಪ್ರಮಾಣದ ಲೈಬ್ರರಿಯನ್ ಆಗಿ ಮೈಸೂರಿನಿಂದ ರಾಮಕೃಷ್ಣ ಗೌಡ ಬಂದರು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ ವಿಭಾಗಗಳಿಗೆ ಹೊಸ ಪುಸ್ತಕಗಳನ್ನು, ನಿಯತಕಾಲಿಕಗಳನ್ನು ಕೇಂದ್ರಕ್ಕೆ ತರಿಸುವ ವ್ಯವಸ್ಥೆಯಾಯಿತು.
ಈ ನಡುವೆ ನಾನು ಪಿಹೆಚ್.ಡಿ., ಮಾಡಲು ಹೊಸ ವಿಷಯವೊಂದರ ಹುಡುಕಾಟ ಮತ್ತು ನನಗೆ ಗೈಡ್ ಮಾಡಲು ಈಗಾಗಲೇ ಪ್ರಾಧ್ಯಾಪಕರಾಗಿದ್ದವರನ್ನು ನಿಗದಿಗೊಳಿಸಿಕೊಳ್ಳುವ ತಯಾರಿಯಲ್ಲಿದ್ದೆ. ಗಂಗೋತ್ರಿಯಲ್ಲಿ ಪ್ರೊ. ಮಾದಯ್ಯನವರನ್ನು ಈ ಬಗ್ಗೆ ವಿಚಾರಿಸಿದೆ. ಅವರ ಬಳಿ ಈಗಾಗಲೇ ಸಂಶೋಧನೆ ಮಾಡುವ ಹೆಚ್ಚಿನ ವಿದ್ಯಾರ್ಥಿಗಳಿರುವ ಕಾರಣ ನೀಡಿ, ಸಾಧ್ಯವಾಗುವುದಿಲ್ಲ ಎಂದರು. ಹಿರಿಯ ಪ್ರಾಧ್ಯಾಪಕರಾಗಿದ್ದ ಎಪಿಎಸ್ ಮತ್ತು ಎಸ್.ಎಂ.ವಿ. ಅವರು ನಿವೃತ್ತಿ ಅಂಚಿನಲ್ಲಿದ್ದು ಅವರೂ ಕೂಡ ನನಗೆ ಮಾರ್ಗದರ್ಶನ ಮಾಡುವ ಆಸಕ್ತಿ ತೋರಲಿಲ್ಲ. ಇದೇ ಯೋಚನೆಯಲ್ಲಿ ನಾನು ಬೆಂಗಳೂರು ವಿಕೆಆರ್ವಿ. ಇನ್ಸಿಟಿಟ್ಯೂಟ್ನಲ್ಲಿ ಅಂದು ಪ್ರಾಧ್ಯಾಪಕರಾಗಿದ್ದ ಡಾ. ಅಬ್ದುಲ್ ಅಜೀಜ್ ಅವರನ್ನು ಭೇಟಿ ಮಾಡಿ ನನ್ನ ಸಂಶೋಧನಾ ಆಸಕ್ತಿಯನ್ನು ವಿವರಿಸಿ ತಾವು ಗೈಡ್ ಆಗಬೇಕೆಂದು ಕೇಳಿದೆ. ಅದಕ್ಕವರು ಇಲ್ಲ, ನೀವು ನಿಮ್ಮ ವಿಶ್ವವಿದ್ಯಾಲಯದಲ್ಲೇ ಇರುವ ಪ್ರಾಧ್ಯಾಪಕರಲ್ಲಿ ಸಂಶೋಧನೆ ಮಾಡುವುದು ಸೂಕ್ತ.
ಮುಂದೆ ಅನೇಕ ಸಂದರ್ಭಗಳಲ್ಲಿ ನಿಮ್ಮ ವಿಭಾಗದ ಮುಖ್ಯಸ್ಥರ ಶಿಫಾರಸ್ಸುಗಳು ನಿಮಗೆ ಬೇಕಾಗುತ್ತದೆ. ನೀವು ಬೇರೊಂದು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಪ್ರಾರಂಭಿಸಿದರೆ ಮುಂದೆ ನಿಮಗೆ ವಿಭಾಗ ಮಟ್ಟದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಿ ನಿಮಗೆ ಸಂಶೋಧನೆಯಲ್ಲಿ ಆಸಕ್ತಿ ಬರದಂತಹ ಸನ್ನಿವೇಶ ಬರಬಹುದೆಂದು ಅವರು ತಿಳಿ ಹೇಳಿದರು. ಸ್ನಾತಕೋತ್ತರ ವಿಭಾಗದಲ್ಲಿ ಹೆಚ್ಚು ಅರ್ಹತೆಗಳನ್ನು ಪಡೆಯದೆ ಸ್ನಾತಕೋತ್ತರ ಕೇಂದ್ರದಲ್ಲಿ ಮುಂದುವರಿಯುವುದು ನ್ಯಾಯ ಸಮ್ಮತವಲ್ಲವೆಂದು ನನ್ನೊಳಗಿನ ಒಳ ಮನಸ್ಸು ಕೂಡ ಜಾಗೃತವಾಗಿ ಹೇಳುತ್ತಲೇ ಇತ್ತು. ಅದರ ಒತ್ತಾಸೆಯಂತೆ ಮುಂದೆ ನಾನು ನನ್ನ ಹುದ್ದೆಯನ್ನು ಬಿಟ್ಟು ಬೇರೆ ಕಡೆಗೆ ಹೋಗುವ ಬಗ್ಗೆ ಯೋಚನೆ ಪ್ರಾರಂಭವಾಗಿತ್ತು.
ಮುಂದುವರಿಯುವುದು
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ4 days ago
ನಕಲಿ ವೈದ್ಯರಿಗೆ ದಂಡ ; ಮೆಡಿಕಲ್ ಸ್ಟೋರ್ ಮುಚ್ಚಲು ಆದೇಶ
-
ದಿನದ ಸುದ್ದಿ4 days ago
ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
-
ದಿನದ ಸುದ್ದಿ4 days ago
ಆರಗದಲ್ಲಿ ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪ ಪತ್ತೆ
-
ದಿನದ ಸುದ್ದಿ18 hours ago
ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಅಹವಾಲು ಸ್ವೀಕಾರ
-
ದಿನದ ಸುದ್ದಿ2 days ago
ದಾವಣಗೆರೆ | ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ
-
ದಿನದ ಸುದ್ದಿ2 days ago
ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ ಅವಧಿ ವಿಸ್ತರಣೆ
-
ದಿನದ ಸುದ್ದಿ18 hours ago
HAL | ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ18 hours ago
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ | ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠ ಹಾಗೂ ಶ್ರೇಷ್ಠ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್