ಅಂತರಂಗ
ಅರಿಮೆಯ ಅರಿವಿರಲಿ-29 : ಮೌಲ್ಯದ ಮೌಲ್ಯಮಾಪನ
- ಯೋಗೇಶ್ ಮಾಸ್ಟರ್
ಮೌಲ್ಯ ಅಥವಾ ಬೆಲೆ ಎನ್ನುವುದು, ಅದು ತಾತ್ವಿಕವೋ ಅಥವಾ ಲೌಕಿಕವೋ, ಒಟ್ಟಾರೆ ಅದು ಮಾನವನಿಂದ ಆರೋಪಿತವಾಗಿರುವುದು. ಪಾತ್ರ ಅಪಾತ್ರ, ದಯೆ ನಿರ್ದಯೆ, ಔದಾರ್ಯ ಅನೌದಾರ್ಯ, ಪ್ರಾಮಾಣಿಕ ಅಪ್ರಮಾಣಿಕ, ಸದ್ಗುಣ ದುರ್ಗುಣ, ಒಳಿತು ಕೆಡಕು, ಧರ್ಮ ಅಧರ್ಮ; ಈ ದ್ವಂದ್ವ ಪರಿಕಲ್ಪನೆಗಳಾವುವೂ ವಾಸ್ತವವಾಗಿ ನಿಸರ್ಗದಲ್ಲಿ ಇಲ್ಲ. ಆದರೆ ಮಾನವ ನಿರ್ಮಿತ ಸಮಾಜದಲ್ಲಿ ಎಲ್ಲವೂ ಇದೆ. ಎಲ್ಲಿ ದ್ವಂದ್ವಗಳು ಇರುತ್ತವೆಯೋ ಅಲ್ಲಿ ಮಾನಸಿಕ ಸಮಸ್ಯೆಗಳೂ ಇರುತ್ತವೆ. ಸಂಘರ್ಷ, ತುಮುಲ, ದ್ವಂದ್ವ, ಗೊಂದಲ, ಒತ್ತಡ, ಖಿನ್ನತೆ; ಈ ಎಲ್ಲವೂ ಮನೋರೋಗಗಳಿಗೆ ಕಾರಣವೇ.
ಒಂದು ಕಾಲಘಟ್ಟದಲ್ಲಿ ಯಾವುದನ್ನು ಮೌಲ್ಯ ಎಂದು ಭಾವಿಸಿಲಾಗಿರುತ್ತದೆಯೋ ಮನುಷ್ಯನ ಜೀವನ ಕ್ರಮ, ಆಲೋಚನಾ ಕ್ರಮಗಳು ಬದಲಾದಂತೆ ನಾವು ವಸ್ತು ಅಥವಾ ವಿಷಯಗಳಿಗೆ ಆರೋಪಿಸುವ ಮೌಲ್ಯಗಳೂ ಕೂಡ ಬದಲಾಗುತ್ತವೆ. ತೊಟ್ಟಲಿನಲ್ಲಿಯೇ ಮಕ್ಕಳನ್ನು ವಧೂವರರನ್ನಾಗಿಸುವ ಕಾಲಘಟ್ಟವಿತ್ತು.ಹೆಣ್ಣುಮಗುವು ಮೈನೆರೆಯುವ ಮುನ್ನವೇ ಮದುವೆ ಮಾಡಬೇಕಾದ ಕಾಲದಲ್ಲಿ ಬಾಲ್ಯವಿವಾಹ ಸಮಾಜವು ಒಪ್ಪಿತ ವ್ಯವಸ್ಥೆಯಾಗಿತ್ತು. ಆದರೆ ಈಗ ಅದು ಅಪರಾಧ. ಸಾಮಾಜಿಕ ಮೌಲ್ಯಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತವೆ ಎಂದು ತಿಳಿಯಲು ಇಷ್ಟು ಸಾಕು. ಹೆಚ್ಚು ಹೆಚ್ಚು ಚರ್ಚೆಗಳು ಬೇಡ.
ಹಾಗಾಗಿಯೇ ಸಾಮಾಜಿಕ ಮೌಲ್ಯವೆಂದು, ಸಮಾಜವೋ, ಸಂಸ್ಕೃತಿಯೋ ಒಪ್ಪಬೇಕೆಂದು ಪ್ರಾಣವನ್ನು ಪಣವಾಗಿಟ್ಟು ನಾವು ಎಂದೂ ನಡೆದುಕೊಳ್ಳುವ ಅಗತ್ಯವಿಲ್ಲ. ಆದರೂ ಒಂದು ವಿಷಯವನ್ನು ಗಮನದಲ್ಲಿ ಇರಿಸಿಕೊಂಡು ನಮ್ಮ ನಡವಳಿಕೆಗಳನ್ನು, ಆಲೋಚನೆಗಳನ್ನು, ಕೆಲಸಗಳನ್ನು ಒಂದು ಕ್ರಮಕ್ಕೆ ಒಳಪಡಿಸಿಕೊಳ್ಳಬೇಕಾದ ಅಗತ್ಯವಿದೆ.
ಯಮ ನಿಯಮ
ಒಂದು ಕೆಲಸವು ಸರಾಗವಾಗಿ ನಡೆಯಲು ಅದಕ್ಕೊಂದು ಕ್ರಮಬೇಕು. ಕ್ರಮವಿಲ್ಲದೇ ಹೋದರೆ ಸಾಮಾನ್ಯವಾಗಿ ಆ ಕೆಲಸ ಆಗದು. ಆ ಕೆಲಸದ ಕ್ರಮಕ್ಕೆ ವ್ಯಕ್ತಿಯು ತನ್ನನ್ನು ಬದ್ಧಗೊಳಿಸಿಕೊಳ್ಳುವುದಕ್ಕೆ ಶಿಸ್ತು ಎನ್ನುತ್ತೇವೆ. ಹೀಗೆಂದುಕೊಳ್ಳೋಣ, ನಮ್ಮ ಆಲೋಚನೆಯಲ್ಲಿ ಒಂದು ಕ್ರಮವಿರಲಿ, ಕೆಲಸದಲ್ಲಿ ಒಂದು ಶಿಸ್ತು ಇರಲಿ. ಒಬ್ಬ ವ್ಯಕ್ತಿಯು ತನ್ನ ಮನಸ್ಸನ್ನು, ದೇಹವನ್ನು, ಭಾವನೆಗಳನ್ನು, ಕುಟುಂಬವನ್ನು, ಸಂಬಂಧಗಳನ್ನು ಮತ್ತು ಸಮಾಜದಲ್ಲಿ ತನ್ನ ಇರುವಿಕೆ ಮತ್ತು ಭಾಗವಹಿಸುವಿಕೆಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
ಆ ಕ್ರಮಗಳನ್ನು ಕಾರ್ಯರೂಪಕ್ಕೆ ತರಲು ಶಿಸ್ತು ಬೇಕಾಗುತ್ತದೆ. ಕ್ರಮ ಮತ್ತು ಶಿಸ್ತುಗಳ ಉದ್ದೇಶ ವ್ಯಕ್ತಿ, ಕುಟುಂಬ, ಸಂಬಂಧ ಮತ್ತು ಸಮಾಜ; ಇವಿಷ್ಟನ್ನೂ ಆರೋಗ್ಯವಾಗಿಡುವುದಷ್ಟೇ ಆಗಿರುತ್ತದೆ. ಇದನ್ನೇನಾದರೂ ನಾವು ಮೌಲ್ಯ ಎನ್ನಬಹುದೇ? ಅನ್ನಬಹುದು. ಅಂದುಕೊಳ್ಳೋಣ, ಅಡ್ಡಿಯಿಲ್ಲ.
ಆರೋಗ್ಯವಾಗಿರಬೇಕು ಎಂದು ಬಯಸುತ್ತಿರುವುದಾದರೂ ಆನಂದಕ್ಕೆ. ಹಿತವಾದ ಬದುಕು, ಆನಂದವಾದ ವಾತಾವರಣ ಮತ್ತು ಘಾಸಿತವಾಗುವಂತಹ ಸಂಘರ್ಷಗಳಿಲ್ಲದ ಜೀವನವನ್ನು ನಾವು, ನಮ್ಮ ಸಹಜೀವಿಗಳು ಮತ್ತು ಮುಂದಿನ ಪೀಳಿಗೆಯವರು ಹೊಂದಬೇಕೆನ್ನುವುದೇ ನಮ್ಮ ಉದ್ದೇಶವಾಗಿದ್ದ ಪಕ್ಷದಲ್ಲಿ ಯಾವುದ್ಯಾವುದಕ್ಕೋ ಮೌಲ್ಯವೆಂದು ಆರೋಪಿಸುವುದನ್ನು ನಿಲ್ಲಿಸಬೇಕು. ಅನರ್ಥಕಾರಿ ಮತ್ತು ಅನಗತ್ಯವಾಗಿರುವುದನ್ನೆಲ್ಲಾ ಮೌಲ್ಯವೆಂದು ಪರಿಗಣಿಸುವುದನ್ನು ನಿಲ್ಲಿಸಬೇಕು.
ಅವಗ್ಯಾವಾಗಲೋ ಪತಿಯೇ ಪರದೈವ ಎಂಬುದೊಂದು ಮೌಲ್ಯ. ಅವನು ಬೂಟುಗಾಲಿನಲ್ಲಿ ಒದ್ದರೂ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂದು ಬಂದು ಕೇಳದೇ ಇರುವಂತಹ ಕೌಟುಂಬಿಕ ಅಥವಾ ದಾಂಪತ್ಯದ ಮೌಲ್ಯವನ್ನು ಅವನು ಪಾಲಿಸುತ್ತಿದ್ದರು.ಮೌಲ್ಯಗಳಿಗೊಂದು ಮೌಲ್ಯಮಾಪನವಿರಬೇಕು. ಇದನ್ನು ಗಂಭೀರವಾಗಿ ಪರಿಗಣಿಸೋಣ. ಯಾವುದನ್ನು ಮೌಲ್ಯವೆಂದು ಭಾವಿಸುತ್ತೇವೆಯೋ ಆ ಗುಣವಾಗಲಿ, ವರ್ತನೆಯಾಗಲಿ, ಆಚಾರ ಅಥವಾ ವಿಚಾರವಾಗಲಿ ತನಗೂ ನೋವನ್ನುಂಟು ಮಾಡಿಕೊಳ್ಳಬಾರದು. ಇತರರಿಗೆ ನೋವನ್ನುಂಟು ಮಾಡಬಾರದು. ನೋವೆಂದರೆ ಮಾನಸಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಕಿರುಕುಳ ಆಗಬಾರದು. ಯಾವುದೇ ವ್ಯಕ್ತಿಯ ವಯಸ್ಸು, ಹಿನ್ನೆಲೆ, ವರ್ಣ ಮತ್ತು ವರ್ಗಗಳನ್ನು ಲೆಕ್ಕಿಸದೇ ಗೌರವವನ್ನು ಸಲ್ಲಿಸಬೇಕು.
ಅಂದರೆ ಯಾವುದರ ಆಧಾರದಲ್ಲಿಯೂ ಯಾರೊಬ್ಬರ ವ್ಯಕ್ತಿಗೌರವಕ್ಕೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು. ಸೋಲು, ಅವಘಡ, ನೋವು, ಸಾವಿನಂತಹ ಸಂಕಟಗಳ ಸಮಯಗಳಲ್ಲಿ ಯಾರಿಗಾದರೂ ನೆರವಾಗುವಂತಹ ವರ್ತನೆಗಳು ಸಹಜವಾಗಿರಬೇಕು. ಯಾರೊಬ್ಬರ ಆಯ್ಕೆ ಮತ್ತು ಜೀವನ ಕ್ರಮದಲ್ಲಿ ಅನಗತ್ಯವಾಗಿ ಮೂಗು ತೂರಿಸುವಂತಹ ಅತಿಕ್ರಮಣ ಪ್ರವೇಶದ ಧೋರಣೆಗಳು ಇರಬಾರದು.
ಯಾರೊಬ್ಬರ ಆಹಾರ, ಆಶ್ರಯ, ಶಿಕ್ಷಣ ಮತ್ತು ಆರೋಗ್ಯದ ವಿಷಯದಲ್ಲಿ ಯಾರಾದರೂ ತಮ್ಮಿಂದಾಗುವ ಕಾಣ್ಕೆಯನ್ನು ನೀಡುವಂತಹ ಔದಾರ್ಯವನ್ನು ಹೊಂದಿರಬೇಕು. ಈ ರೀತಿಯಲ್ಲಿ ಒಂದಿಷ್ಟನ್ನು ಪಟ್ಟಿ ಮಾಡಿಕೊಂಡು ಪಟ್ಟು ಹಿಡಿದು ಉಳಿದ ವಿಷಯಗಳನ್ನು ಧಾರ್ಮಿಕವೇ ಆಗಿರಲಿ, ಸಾಂಸ್ಕೃತಿಕವೇ ಆಗಿರಲಿ, ಸಾಮಾಜಿಕವಾಗಿ ಪ್ರಚಲಿತದಲ್ಲಿದ್ದು ಬಹಳ ಜನಪ್ರಿಯವಾಗಿರಲಿ ನಿರಾಕರಿಸುವಂತಹ ಸಾಮಾಜಿಕವಾಗಿ ಧೈರ್ಯವೂ ಮಾನಸಿಕವಾಗಿ ಗಟ್ಟಿತನವೂ ಇರಬೇಕು.
ಧೈರ್ಯ ಮತ್ತು ಗಟ್ಟಿತನ
ಸಾಮಾಜಿಕವಾಗಿ ಧೈರ್ಯ ಮತ್ತು ಮಾನಸಿಕವಾಗಿ ಗಟ್ಟಿತನದಿಂದ ಕೂಡಿರುವ ಮೌಲ್ಯವನ್ನು ಪ್ರತಿಪಾದಿಸಿಕೊಂಡು ಬರುವಂತಹ ಮನಸ್ಥಿತಿಯವರಿಗೆ ಅರಿಮೆಗಳಂತಹ ಮಾನಸಿಕ ಸಮಸ್ಯೆಗಳು ವಿರಳವೆಂದೇ ಹೇಳಬಹುದು. ಏಕೆಂದರೆ ಅವರಿಗೆ ಸಮಾಜದ ಒಪ್ಪಿತ ಅಥವಾ ತಿರಸ್ಕೃತ ವಿಚಾರಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬರುವ ವಿಷಯದ ಬಗ್ಗೆ ಅರಿವಿರುತ್ತದೆ.
ವ್ಯಕ್ತಿಗತವಾಗಿ ಮತ್ತು ವ್ಯಕ್ತಿಗಳಿಂದ ಕೂಡಿರುವ ಸಮಾಜಕ್ಕೆ ಯಾವುದು ಅಗತ್ಯ ಮತ್ತು ಯಾವುದು ಅನಗತ್ಯ ಎಂದು ತಿಳಿದಿರುತ್ತದೆ. ತಾವು ಯಾವ ಕ್ರಮದಲ್ಲಿ ಆಲೋಚನೆಗಳನ್ನು ಹೊಂದಿದ್ದೇವೆ ಮತ್ತು ಯಾವ ರೀತಿಯಲ್ಲಿ ಶಿಸ್ತುಬದ್ಧರಾಗಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟತೆ ಇರುತ್ತದೆ. ಹಾಗಾಗಿ ಅರಿಮೆಗಳ ಸಮಸ್ಯೆ ಅವರಲ್ಲಿ ವಿರಳ. ದ್ವಂದ್ವಗಳು, ಗೊಂದಲಗಳು ಸಮಸ್ಯೆಗಳಿಗೆ ಸಂಪನ್ಮೂಲಗಳು.
ಸಾಮಾಜಿಕ ಸೋಂಕು
ತಿಳಿಯದೇ ಯಾವುದ್ಯಾವುದೋ ಸೋಂಕುಗಳು ತಗುಲಿ ಶರೀರದಲ್ಲಿ ಸಮಸ್ಯೆಯಾದಂತೆ, ಆಕಸ್ಮಿಕ ಮತ್ತು ಅಪಘಾತಗಳಿಂದ ದೇಹಕ್ಕೆ ಗಾಯಗಳಾದಂತೆ, ಮನಸ್ಸಿಗೂ ಕೆಲವು ಸಮಸ್ಯೆಗಳು ಬರುತ್ತವೆ, ಗಾಯಗಳು ಆಗುತ್ತವೆ. ಇವಕ್ಕೆ ಯಾವುದೋ ಸನ್ನಿವೇಶ, ಸಂಗತಿಗಳು ಮತ್ತು ಸಾಂದರ್ಭಿಕ ಒತ್ತಡಗಳು ಕಾರಣಗಳಾಗುತ್ತವೆ. ದೈಹಿಕ ಸಮಸ್ಯೆಗಳನ್ನು ತಪಾಸಣೆಗಳಿಂದ ತಿಳಿದುಕೊಳ್ಳುವಂತೆ ಮಾನಸಿಕ ಸಮಸ್ಯೆಗಳನ್ನು ಮತ್ತು ಘಾಸಿತ ಮನಸ್ಸಿನ ನೋವಿನ ಕಾರಣಗಳನ್ನೂ ವ್ಯಕ್ತಿಗಳು ಗಮನಿಸಿಕೊಳ್ಳುವಷ್ಟು ಪ್ರಜ್ಞಾವಂತರಾದರೆ ಅಲ್ಲಿಗೆ ಆರೋಗ್ಯಕರ ಮನಸ್ಸಿನ ಭರವಸೆಯನ್ನು ಹೊಂದಬಹುದು.
ಆಕಾಶದಲ್ಲಿ ಮೋಡಗಳು ಚಲಿಸಿದಂತೆ ಯಾವುದ್ಯಾವುದೋ ಮನೋವಿಕಾರಗಳು, ವಿಕೃತ ಭಾವನೆಗಳು, ಅಸಂಬದ್ಧ ಆಲೋಚನೆಗಳು ವರ್ತಿಸಲು ಮತ್ತು ಪ್ರದರ್ಶಿಸಲು ಹಾತೊರೆಯುತ್ತವೆ. ವಿಕಾರ ವಿಕೃತ ಅಕ್ರಮ ಎಂದೆಲ್ಲಾ ಹೇಳುವುದೂ ಕೂಡಾ ಸಾಮಾಜಿಕ ಅಭಿಪ್ರಾಯಗಳ ಪದಗಳೇ. ಆದರೆ ಸಮಸ್ಯೆಗೆ ಸಮಾಧಾನ ಹುಡುಕುವವರಿಗೆ ಅವು ಸಮಸ್ಯೆಗಳು ಮಾತ್ರವೇ. ಮನೋವೈದ್ಯರಿಗೆ ಅವುಗಳು ರೋಗಲಕ್ಷಣಗಳು. ಆ ರೋಗಲಕ್ಷಣಗಳನ್ನು ಅನುಸರಿಸಿ ಸಮಾಲೋಚನೆ ಮಾಡಿ ರೋಗದ ಕಾರಣವನ್ನು ಪತ್ತೆ ಮಾಡಬೇಕು ಮತ್ತು ಚಿಕಿತ್ಸೆಯನ್ನು ನೀಡಿ ರೋಗಿಯನ್ನು ರೋಗಮುಕ್ತನನ್ನಾಗಿ ಮಾಡಬೇಕು. ಇದು ವೈದ್ಯರಾದವರ ಮತ್ತು ಸಮಾಲೋಚಕರ ಉದ್ದೇಶ ಮತ್ತು ಗಮ್ಯ.
ವೈದ್ಯರು ರೋಗಿಯನ್ನು ದ್ವೇಷಿಸಲಾರರು. ಅವರ ಗುರಿ ರೋಗಿಯೆಂಬ ಜೀವಿಯ ಕ್ಷೇಮ ಮತ್ತು ರೋಗವೆಂಬುದರ ನಿರ್ನಾಮ. ಅರಿಮೆಗಳು ಮತ್ತು ಇತರ ಮಾನಸಿಕ ಸಮಸ್ಯೆಗಳು ಇರುವ ನಾವಾಗಲಿ, ನಮ್ಮ ಜೊತೆಯಲ್ಲಿರುವವರು ಯಾರೇ ಆಗಲಿ ನಾವು ಹೊಂದಬೇಕಾದ ಧೋರಣೆಯೇ ಇದು. ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಹುಟ್ಟುಹಾಕುವಲ್ಲಿ ಧರ್ಮಗಳು, ಸಂಸ್ಕೃತಿಗಳು, ಸಾಮಾಜಿಕ ಅಭಿಪ್ರಾಯಗಳು, ಜಾತಿ ಗೋತ್ರಗಳ ಶ್ರೇಷ್ಟತೆ ಮತ್ತು ಮಡಿವಂತಿಕೆಯ ಗೀಳುಗಳು, ಸೈದ್ಧಾಂತಿಕ ವ್ಯಸನಗಳೆಲ್ಲವೂ ತಮ್ಮ ಪಾತ್ರಗಳನ್ನು ವಹಿಸುತ್ತವೆ.
ನಮಗೆ ಅಪಘಾತವಾಗಿ ಅಥವಾ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ರಕ್ತಬೇಕಾದಾಗ ಧರ್ಮ ಅಥವಾ ಜಾತಿಯನ್ನು ನೋಡದೇ ಅಗತ್ಯವಾಗಿರುವ ಗ್ರೂಪಿನ ರಕ್ತವನ್ನು ನೋಡುವಂತೆ, ಜಡ್ಡು ಬಿದ್ದ ದೇಹಕ್ಕೆ ಅಗತ್ಯವಿರುವ ಔಷಧಿಯನ್ನು ತೆಗೆದುಕೊಳ್ಳುವಂತೆ, ಧಾರ್ಮಿಕ – ಸಾಂಸ್ಕೃತಿಕ – ಸಾಮಾಜಿಕ ಕಟ್ಟುಪಾಡುಗಳಿಂದ ಉಂಟಾಗುವ ಮಾನಸಿಕ ಒತ್ತಡಗಳು ಮತ್ತು ಸಮಸ್ಯೆಗಳನ್ನು ನಿಭಾಯಿಸುವಲ್ಲಿಯೂ ಕೂಡಾ ವೈಜ್ಞಾನಿಕ ಮತ್ತು ವೈಚಾರಿಕ ಕ್ರಮಗಳನ್ನು ಅನುಸರಿಸಬೇಕು.
ದೈಹಿಕ ಸಮಸ್ಯೆಗಾದರೂ ಅವರಿವರು ಬಾಹ್ಯ ಒತ್ತಡವನ್ನು ವ್ಯಕ್ತಿಗಳ ಮೇಲೆ ಹೇರಿ ಚಿಕಿತ್ಸೆಯು ನಡೆಯುವಂತೆ ನೋಡಿಕೊಳ್ಳಬಹುದು. ಆದರೆ ಮಾನಸಿಕ ಸಮಸ್ಯೆಗೆ ಅವರಿವರು ಬಾಹ್ಯ ಒತ್ತಡವನ್ನು ತರಲು ಆಗದು. ವ್ಯಕ್ತಿಯು ತಾನೇ ಮೊದಲು ಒಪ್ಪಿಕೊಳ್ಳಬೇಕು. ತನಗಿರುವ ಸಮಸ್ಯೆಯಿಂದ ತಾನು ಬಿಡುಗಡೆಯಾಗುವ ಆಶಯವನ್ನು ಹೊಂದಬೇಕು. ಅದಕ್ಕಾಗಿ ಅವನು ಪ್ರಾಮಾಣಿಕವಾಗಿ ಕ್ರಮದಲ್ಲಿ ಒಳಗಾಗಿ, ಶಿಸ್ತನ್ನು ಪಾಲಿಸಲು ಸಿದ್ಧನಾಗಬೇಕು.
ಇದು ವ್ಯಕ್ತಿಯು ತಾನೇ ಮುಂದಾಗಬೇಕಾದ ಕಾರಣದಿಂದ ತಪಾಸಣೆಯೂ ಆಗದು, ಚಿಕಿತ್ಸೆಯೂ ನಡೆಯದು, ಗುಣಮುಖರೂ ಆಗರು. ಹಾಗಾಗಿಯೇ ಮಾನಸಿಕ ಸಮಸ್ಯೆಗಳ ನಿರ್ವಹಣೆಯಲ್ಲಿ ಭಾರತವು ಬಹಳ ಹಿಂದಿದೆ. ವೈಜ್ಞಾನಿಕ ತಪಾಸಣೆಗೆ ಮತ್ತು ಚಿಕಿತ್ಸೆಗೆ ಒಡ್ಡಿಕೊಳ್ಳುವವರ ಸಂಖ್ಯೆ ಬಹಳ ಕಡಿಮೆಯಿದೆ. ರೋಗಿಗಳ ಸಂಖ್ಯೆಯು ಬಹುದೊಡ್ಡ ಪ್ರಮಾಣದಲ್ಲಿದೆ. ಮಾನಸಿಕ ರೋಗಿಯೆಂದರೆ ಕಡೆಗಣಿಸಿ ಕಾಣುವಂತಹ ಮನಸ್ಥಿತಿ ಸಮಾಜದಲ್ಲಿದೆ.
ಅವರನ್ನು ಕೇವಲವಾಗಿ ಕಾಣುವ, ನಿಮ್ಹಾನ್ಸ್ ನಂತಹ ಪ್ರತಿಷ್ಟಿತ ಮತ್ತು ಬದ್ಧತೆಯಿಂದ ಕೆಲಸ ಮಾಡುತ್ತಿರುವಂತಹ ಚಿಕಿತ್ಸಾ ಕೆಂದ್ರವನ್ನು “ಹುಚ್ಚರ ಆಸ್ಪತ್ರೆ” ಎಂದು ಅವಹೇಳನಕಾರಿಯಾಗಿ ಹಾಸ್ಯ ಮತ್ತು ಅಪಹಾಸ್ಯಗಳನ್ನು ಮಾಡುವ ಜನರಿದ್ದಾರೆ. ಇಂತಹ ಸೋಶಿಯಲ್ ಸ್ಟಿಗ್ಮಾ ಅಥವಾ ಸಾಮಾಜಿಕ ಅಪಕೀರ್ತಿಯೂ ಕೂಡಾ ಮಾನಸಿಕ ಸಮಸ್ಯೆಗಳಿಗೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳದಿರಲು ಕಾರಣ. ಆದರೆ ಸಾಮಾಜಿಕ ಅಪಕೀರ್ತಿಯನ್ನು ಅಥವಾ ಕಳಂಕವನ್ನು ಸೃಷ್ಟಿಸಿರುವವರಾದರೂ ಯಾರು? ಮತ್ತಿದೇ ವ್ಯಕ್ತಿಗಳು.
ತಾವೇ ಸಮಸ್ಯೆಯಲ್ಲಿರುವರು, ತಮ್ಮ ಸಮಸ್ಯೆಯನ್ನು ನಿವಾರಿಸಿಕೊಳ್ಳಲಾಗದಂತೆ ತಾವೇ ಸಾಮಾಜಿಕ ಮನಸ್ಥಿತಿಯನ್ನು ನಿರ್ಮಿಸುವರು. ಇದು ಇಂದಿನ ಬಹುದೊಡ್ಡ ಸಮಸ್ಯೆ. ಇದರ ಬಗ್ಗೆ ನಾವು ಮೊದಲು ಜಾಗೃತರಾಗುವುದು ಮತ್ತು ಇತರರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಸಧ್ಯದ ಕರ್ತವ್ಯ. ಇದಾದರೆ ಆರೋಗ್ಯಕರವಾದ ಮನಸ್ಸು ಮತ್ತು ಸಮಾಜವನ್ನು ಹಂತಹಂತವಾಗಿಯಾದರೂ ಮುಂದಿನ ಪೀಳಿಗೆಗಳಿಗೆ ನಿರ್ಮಿಸಲು ಸಾಧ್ಯವೇನೋ ನೋಡಬಹುದು.
(ಮುಂದುವರಿಯುತ್ತದೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ6 days agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ5 days agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
-
ದಿನದ ಸುದ್ದಿ3 days agoಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ಗೌಡ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
-
ದಿನದ ಸುದ್ದಿ21 hours agoಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ


