ಬಹಿರಂಗ
ಸಂವಿಧಾನ ಸಭೆಯಲ್ಲಿ ಅಂಬೇಡ್ಕರರು ಮಾಡಿದ ಸಮಾರೋಪ ಭಾಷಣ
ಭಾರತದ ಸ್ವಾತಂತ್ರ್ಯಕ್ಕೆ ಏನಾಗಲಿದೆ? 26ನೇ ಜನವರಿ 1950ರಂದು, ಭಾರತವು ಸಂಪೂರ್ಣ ಸ್ವತಂತ್ರ ರಾಷ್ಟ್ರವಾಗಲಿದೆ. ಆದರೆ ಅದರ ಸ್ವಾತಂತ್ರ್ಯಕ್ಕೆ ಏನಾಗಲಿದೆ? ಅದು ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲಿದೆಯೇ? ಅಥವಾ ಅದು ತನ್ನ ಸ್ವಾತಂತ್ರ್ಯವನ್ನು ಮತ್ತೊಮ್ಮೆ ಕಳೆದುಕೊಳ್ಳಲಿದೆಯೇ? ಇದು ನನ್ನ ಮನಸ್ಸಿನಲ್ಲಿ ಮೂಡಿದ ಮೊದಲ ವಿಷಯವಾಗಿರುತ್ತದೆ.
ಭಾರತವು ಹಿಂದೆಂದೂ ಸ್ವತಂತ್ರವಾಗಿರಲಿಲ್ಲವೆಂದು ಇದರ ಅರ್ಥವಲ್ಲ. ಅದು ತನ್ನ ಸ್ವಾತಂತ್ರ್ಯವನ್ನು ಮಧ್ಯೆ ಕಳೆದುಕೊಂಡಿತ್ತು. ಅದು ಎರಡನೆಯ ಬಾರಿಗೆ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತದೆಯೇ?
ಈ ಆಲೋಚನೆಯೇ ಭವಿಷ್ಯದ ಬಗ್ಗೆ ನನ್ನನ್ನು ಕಳವಳಗೊಳ್ಳು ವಂತೆ ಮಾಡಿದೆ. ಭಾರತವು ತನ್ನ ಸ್ವಾತಂತ್ರ್ಯವನ್ನು ಹಿಂದೊಮ್ಮೆ ಕಳೆದುಕೊಂಡಿತ್ತೆಂಬ ಸಂಗತಿಯು ನನ್ನ ಮನಸ್ಸಿನ ಕ್ಷೋಭೆಗೆ ಕಾರಣ. ತನ್ನವರದೇ ಆದ ವಿಶ್ವಾಸಘಾತುಕದಿಂದ ಹಾಗೂ ದೇಶದ್ರೋಹಿಗಳಿಂದ ಸ್ವಾತಂತ್ರ್ಯವನ್ನು ಕಳೆದುಕೊಂಡಿತು ಎಂಬುವುದು ನನ್ನ ಮನಸ್ಸಿನ ಕ್ಷೋಭೆಗೆ ಮುಖ್ಯ ಕಾರಣವಾಗಿದೆ.
ಸಿಂಧ್ ಪ್ರಾಂತ್ಯದ ಮೇಲೆ ಮೊಹಮ್ಮದ್ ಬಿನ್ ಖಾಸಿಂ ದಂಡೆತ್ತಿ ಬಂದಾಗ ಅವನ ವಿರುದ್ಧ ಯುದ್ಧ ಘೋಷಣೆ ಮಾಡಬೇಕಿದ್ದ ಧಾರ್ ಅರಸನ ಸೈನಿಕ ಕಮಾಂಡರುಗಳು ಮೊಹಮದ್ ಬಿನ್ ಖಾಸಿಂ ಕಡೆಯ ಏಜೆಂಟರುಗಳು ಕೊಟ್ಟ ಲಂಚವನ್ನು ಸ್ವೀಕರಿಸಿ ರಾಜನ ಪರವಾಗಿ ಯುದ್ಧ ಮಾಡದೆ ಹೋದ ಉದಾಹರಣೆ ನನ್ನ ಮುಂದೆ ಇದೆ. ಭಾರತದ ಮೇಲೆ ಯುದ್ಧ ಮಾಡಲು ಮೊಹಮ್ಮದ್ ಘೋರಿ ಯನ್ನು ಭಾರತೀಯನೇ ಆಗಿದ್ದ ಜೈಚಂದರ್ ಎಂಬುವವನು ಸ್ವಾಗತಿ ಸಿದ್ದು, ಮತ್ತು ಪೃಥ್ವಿರಾಜನ ವಿರುದ್ಧ ಯುದ್ಧ ಮಾಡುವಂತೆ ಪ್ರೇರೇಪಿ ಸಿದ್ದು ಮತ್ತು ಆ ಯುದ್ಧದಲ್ಲಿ ತಾನು ಹಾಗೂ ಸೋಲಂಕಿಯ ರಾಜರು ಗಳು ಸಹಾಯ ಮಾಡುವುದಾಗಿ ಹೇಳಿದಂತಹ ಉದಾಹರಣೆಗಳು ನನ್ನ ಮುಂದೆ ಇವೆ.
ಶಿವಾಜಿ ಮಹಾರಾಜನು ಹಿಂದೂಗಳ ವಿಮೋಚನೆ ಗಾಗಿ ಯುದ್ಧ ಮಾಡುತ್ತಿದ್ದಾಗ, ಇತರೆ ಮರಾಠಾ ರಾಜರುಗಳು ಮತ್ತು ರಜಪೂತ್ ರಾಜರುಗಳು ಮೊಘಲ್ ಚಕ್ರವರ್ತಿಗಳ ಪರವಾಗಿ ಯುದ್ಧ ಮಾಡುತ್ತಿದ್ದರು. ಬ್ರಿಟಿಷರು ಸಿಖ್ ರಾಜರುಗಳ ಆಡಳಿತವನ್ನು ಧ್ವಂಸ ಮಾಡಬೇಕೆಂದು ಪ್ರಯತ್ನಿಸುತ್ತಿದ್ದಾಗ, ಸಿಖ್ ರಾಜರುಗಳ ಸೇನೆಯ ಮುಖ್ಯ ಕಮಾಂಡರ್ ಆದ ಗುಲಾಬ್‍ಸಿಂಗನು ಪ್ರೇಕ್ಷಕನಂತೆ ಮೌನ ವಹಿಸಿ ಕುಳಿತಿದ್ದನು. ಅವನು ಸಿಖ್ ಸಾಮ್ರಾಜ್ಯದ ರಕ್ಷಣೆಗಾಗಿ ಕಿಂಚಿತ್ತೂ ಸಹಾಯ ಮಾಡಲಿಲ್ಲ.
1857ರಲ್ಲಿ ಭಾರತದಾದ್ಯಂತ, ಬ್ರಿಟೀಷರ ವಿರುದ್ಧ, ಸ್ವಾತಂತ್ರ್ಯಕ್ಕಾಗಿ ಯುದ್ಧವನ್ನು ಘೋಸಿದಾಗ, ಸಿಖ್ ಸಮುದಾಯ ಆ ಘಟನೆಯನ್ನು ಕೇವಲ ಪ್ರೇಕ್ಷಕರಂತೆ ನಿಂತು ನೋಡಿದ ಉದಾಹರಣೆ ನನ್ನ ಮುಂದೆ ಇದೆ.
ಇತಿಹಾಸ ಮರುಕಳಿಸುತ್ತದೆಯೇ? ಈ ವಿಷಯವೇ ನನ್ನ ಕಳವಳಕ್ಕೆ ಮುಖ್ಯ ಕಾರಣವಾಗಿದೆ. ನಮ್ಮ ಹಿಂದಿನ ವೈರಿಗಳಾದ ಜಾತಿ-ಪಂಗಡ ಗಳ ಜೊತೆಗೆ ಇನ್ನು ಮುಂದೆ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಪಂಗಡಗಳು ಸೇರಿಕೊಳ್ಳಲಿವೆ. ಭಾರತೀಯರು ತಮ್ಮ ಜಾತಿ, ಪಂಗಡಗ ಳನ್ನು ಬದಿಗೊತ್ತಿ ರಾಷ್ಟ್ರ ಮುಖ್ಯ ಎನ್ನುವರೋ, ಅಥವಾ ರಾಷ್ಟ್ರವನ್ನು ಬದಿಗೊತ್ತಿ ಜಾತಿ-ಪಂಗಡಗಳು ಮುಖ್ಯ ಎನ್ನುವರೋ, ನನಗೆ ಗೊತ್ತಿಲ್ಲ. ಆದರೆ ಇಷ್ಟಂತೂ ಸತ್ಯ. ದೇಶದಲ್ಲಿನ ರಾಜಕೀಯ ಪಕ್ಷಗಳು ಜಾತಿ ಪಂಗಡಗಳನ್ನೇ ಪ್ರಧಾನವಾಗಿ ಮಾಡಿಕೊಂಡರೆ ದೇಶದ ಸ್ವಾತಂತ್ರ್ಯಕ್ಕೆ ಗಂಡಾಂತರ ಒದಗುತ್ತದೆ ಮತ್ತು ನಮ್ಮ ಸ್ವಾತಂತ್ರ್ಯವನ್ನು ಎರಡನೆಯ ಬಾರಿಗೆ ಮತ್ತು ಶಾಶ್ವತವಾಗಿ ಕಳೆದುಕೊಳ್ಳುವ ಪ್ರಸಂಗ ಒದಗಬಹುದು.
ಇಂತಹ ಸಂಭಾವ್ಯ ಘಟನೆಯ ವಿರುದ್ಧ ನಾವು ದೃಢಸಂಕಲ್ಪದಿಂದ ಎಚ್ಚರ ವಹಿಸಬೇಕು. ನಮ್ಮ ಕಟ್ಟ ಕಡೆಯ ರಕ್ತದ ತೊಟ್ಟನ್ನು ಹರಿಸಿಯಾ ದರೂ, ದೇಶದ ಸ್ವಾತಂತ್ರ್ಯವನ್ನು ರಕ್ಷಿಸುತ್ತೇವೆ, ಎಂದು ನಾವು ಪ್ರತಿಜ್ಞೆಯನ್ನು ಕೈಗೊಳ್ಳಬೇಕಿದೆ.
26 ನೇ ಜನವರಿ 1950ರಂದು ಭಾರತವು ಸ್ವತಂತ್ರ ಗಣರಾಜ್ಯ ವಾಗಲಿದೆ. ಅಂದರೆ ಅದರ ಅರ್ಥ, ಆ ದಿನದಿಂದ ಭಾರತವು ತನ್ನ ಜನತೆುಂದ, ತನ್ನ ಜನರಿಗಾಗಿ, ತನ್ನ ಜನರಿಗೋಸ್ಕರ ಸರ್ಕಾರವನ್ನು ರೂಪಿಸಿಕೊಳ್ಳಲಿದೆ. ಇದೇ ವಿಷಯ ಮತ್ತೊಮ್ಮೆ ನನ್ನ ಮನಸ್ಸಿಗೆ ಬರುತ್ತಿದೆ. ಸಂವಿಧಾನವು ತನ್ನ ಪ್ರಜಾಸತ್ತಾತ್ಮಕ ಲಕ್ಷಣಗಳನ್ನು ಉಳಿಸಿ ಕೊಳ್ಳುತ್ತದೆಯೇ? ಅದು ಉಳಿಸಿಕೊಳ್ಳುತ್ತದೆಯೇ ಅಥವಾ ಮತ್ತೊಮ್ಮೆ ಕಳೆದುಕೊಳ್ಳುತ್ತದೆಯೇ? ಈ ಎರಡನೆಯ ವಿಚಾರವು ನನ್ನ ಮೊದಲನೆಯ ಪ್ರಶ್ನೆಯಷ್ಟೇ ನನಗೆ ಕಳವಳಕಾರಿಯಾಗಿದೆ.
ಭಾರತಕ್ಕೆ `ಪ್ರಜಾಪ್ರಭುತ್ವ’ ಎಂದರೆ ಏನು ಎಂಬುದು ತಿಳಿದಿರಲಿಲ್ಲ ಎಂದು ಹೇಳಲು ಬರುವುದಿಲ್ಲ. ಭಾರತವು ಒಂದಾನೊಂದು ಕಾಲಕ್ಕೆ ಅನೇಕ ಗಣರಾಜ್ಯಗಳನ್ನು ಹಾಗೂ ಅನೇಕ ರಾಜ-ಮಹಾರಾಜರುಗಳನ್ನು ಹೊಂದಿತ್ತು. ಇಂತಹ ಮಹಾರಾಜರುಗಳಲ್ಲಿ ಕೆಲವರು ಚುನಾಯಿತರಾಗು ತ್ತಿದ್ದರು ಅಥವಾ ಅವರು ಸೀಮಿತ ಅಧಿಕಾರ ಹೊಂದಿರುತ್ತಿದ್ದರು. ಆದರೆ ಅವರು ಎಂದೂ ನಿರಂಕುಶ ಪ್ರಭುಗಳಾಗಿರಲಿಲ್ಲ. ಭಾರತಕ್ಕೆ ಸಂಸತ್ತುಗಳು ಅಥವಾ ಸಂಸತ್ತುಗಳಲ್ಲಿ ನಡೆಯಬೇಕಾದ ವಿಧಿ ವಿಧಾನ ಗಳು ತಿಳಿದಿರಲಿಲ್ಲ ಎಂದಲ್ಲ.
ಬೌದ್ಧ ಭಿಕ್ಷು ಸಂಘಗಳ ರಚನೆಯನ್ನು ಅಧ್ಯಯನ ಮಾಡಿದರೆ, ನಮ್ಮಲ್ಲಿ ಸಂಘಗಳಿಗೆ ಪರ್ಯಾಯವಾಗಿ ಸಂಸತ್ತುಗಳು ಇದ್ದವು ಮತ್ತು ಅಂತಹ ಸಂಘಗಳು ಎಂದರೆ ಸಂಸತ್ತುಗಳೇ ಅಲ್ಲದೆ ಬೇರೆ ಏನೂ ಅಲ್ಲ ಎಂಬುದು ವೇದ್ಯವಾಗುತ್ತದೆ. ಅಂತಹ ಸಂಘಗಳು ಆಧುನಿಕ ಯುಗದಲ್ಲಿನ ಸಂಸತ್ತುಗಳು ಯಾವ ವಿಧಿ-ವಿಧಾನಗಳನ್ನು ಅನುಸರಿಸಿಕೊಂಡು ರಚನೆಯಾಗಿವೆಯೋ ಅಂತಹ ವಿಧಿ-ವಿಧಾನಗಳ ಮೇಲೆ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದವು. ಅವುಗಳಲ್ಲಿ ಆಸನಗಳ ಏರ್ಪಾಡು, ನಿರ್ಣಯಗಳನ್ನು ಕೈಗೊಳ್ಳಲು ಇದ್ದ ನಿಯಮಗಳು, ಕೋರಮ್, ಸಚೇತಕರು, ಮತಗಳ ಎಣಿಕೆ, ಮತ ಚೀಟಿಗಳ ಮೂಲಕ ಮತದಾನ, ಛೀಮಾರಿ ನಿರ್ಣಯ, ನಿಯಂತ್ರಿ ಸುವ ವಿಧಾನ, ಪೂರ್ವ ನ್ಯಾಯ ಇತ್ಯಾದಿ ಇದ್ದುದನ್ನು ನೋಡ ಬಹುದು. ಬುದ್ಧನು ಸಂಘಗಳ ಸಭೆಗಳ ನಿರ್ವಹಣೆಗಾಗಿ ಅನುಸರಿಸುತ್ತಿದ್ದ ಈ ಸಂಸದೀಯ ವಿಧಿ ವಿಧಾನಗಳನ್ನು, ತನ್ನ ಕಾಲಕ್ಕೆ ತನ್ನ ದೇಶದಲ್ಲಿದ್ದ ರಾಜಕೀಯ ಸಭೆಗಳಿಂದ ಅಥವಾ ರಾಜಕೀಯ ಪರಿಷತ್‍ಗಳಿಂದ, ತೆಗೆದುಕೊಂಡಿರಬೇಕೆಂದು ಕಂಡುಬರುತ್ತದೆ.
ಈ ಪ್ರಜಾಪ್ರಭುತ್ವ ಪದ್ದತಿಯನ್ನು ಭಾರತವು ಕಳೆದುಕೊಂಡಿತು. ಅದು ಎರಡನೇ ಬಾರಿಗೆ ಕಳೆದುಕೊಳ್ಳಲಿದೆಯೇ? ನನಗೆ ಗೊತ್ತಿಲ್ಲ. ಆದರೆ ಭಾರತದಂತಹ ದೇಶದಲ್ಲಿ ಪ್ರಜಾಪ್ರಭುತ್ವ ಪದ್ಧತಿಯು ಬಹಳ ಕಾಲದಿಂದ ಬಳಕೆಯಲ್ಲಿ ಇಲ್ಲದಿದ್ದ ಕಾರಣ ಈ ಪ್ರಜಾಪ್ರಭುತ್ವ ವ್ಯವಸ್ಥೆ ಹೊಸದೆನಿಸಬಹುದು ಮತ್ತು ಪ್ರಜಾಪ್ರಭುತ್ವ ಮರೆಯಾಗಿ ಸರ್ವಾಧಿಕಾರಕ್ಕೆ ಎಡೆ ಮಾಡಿಕೊಡುವ ಅಪಾಯವುಂಟು. ಈಗ ಹೊಸದಾಗಿ ಜನ್ಮ ತಳೆದ ಪ್ರಜಾಪ್ರಭುತ್ವ ತನ್ನ ಸ್ವರೂಪವನ್ನು ಉಳಿಸಿಕೊಳ್ಳದೇ ಅದರ ಜಾಗದಲ್ಲಿ ಸರ್ವಾಧಿಕಾರಕ್ಕೆ ಅವಕಾಶ ಮಾಡಿಕೊಡುವ ಸಂಭವ ವುಂಟು. ರಾಜಕೀಯದಲ್ಲಿ ಇಂಥÀ ಭೂಕಂಪವೇನಾದರೂ ನಡೆದಿದ್ದೆಯಾ ದರೆ ನನ್ನ ಎರಡನೇ ಅನುಮಾನವು ವಾಸ್ತವವಾಗುವ ಸಾಧ್ಯತೆಯುಂಟು.
ಪ್ರಜಾಪ್ರಭುತ್ವವನ್ನು ಅದರ ಸ್ವರೂಪವನ್ನಷ್ಟೇ ಅಲ್ಕದೆ, ಅದರ ತತ್ವವನ್ನು ಉಳಿಸಿಕೊಳ್ಳಬೇಕಾದರೆ ನಾವು ಏನು ಮಾಡಬೇಕು? ನನ್ನ ಅಭಿಪ್ರಾಯದ ಪ್ರಕಾರ, ನಮ್ಮ ಸಾಮಾಜಿಕ ಮತ್ತು ಆರ್ಥಿಕ ಉದ್ದೇಶಗ ಳನ್ನು ಈಡೇರಿಸಿಕೊಳ್ಳಲು ಸಂವಿಧಾನದ ವಿಧಾನಗಳನ್ನೇ ಅನುಸರಿಸ ಬೇಕಾಗುತ್ತದೆ. ಅಂದರೆ ನಾವು ಕ್ರಾಂತೀಯ ರಕ್ತಪಾತ ಮಾರ್ಗವನ್ನು ಕೈಬಿಡಬೇಕಾಗುತ್ತದೆ. ಅಂದರೆ ನಾವು ಶಿಸ್ತುಭಂಗ, ಅಸಹಕಾರ ಮತ್ತು ಸತ್ಯಾಗ್ರಹ ಈ ಮಾರ್ಗಗಳನ್ನು ಬಿಡಬೇಕಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಉದ್ದೇಶಗಳ ಈಡೇರಿಕೆಗೆ ಸಂವಿಧಾನ ಸಮ್ಮತ ಮಾರ್ಗಗಳ ಅವಕಾಶವಿಲ್ಲದಿದ್ದ ಸಂದರ್ಭದಲ್ಲಿ ಸಂವಿಧಾನ ಬಾಹಿರವಾದ ಮಾರ್ಗ ಗಳನ್ನು ಅನುಸರಿಸುವುದು ಬಹಳಷ್ಟು ಸಮರ್ಥನೀಯವಾಗಿತ್ತು.
ಆದರೆ ಎಲ್ಲಿ ಸಂವಿಧಾನದ ಸಮ್ಮತ ಮಾರ್ಗಗಳಿಗೆ ಅವಕಾಶವಿರುತ್ತದೆಯೋ, ಅಲ್ಲಿ ಸಂವಿಧಾನ ಬಾಹಿರವಾದ ಮಾರ್ಗಗಳಿಗೆ ಸಮರ್ಥನೆ ಇರುವು ದಿಲ್ಲ. ಈ ಮಾರ್ಗಗಳು ಅರಾಜಕತೆಯ ಧರ್ಮಗ್ರಂಥದ ನೀತಿ ಸೂತ್ರ ಗಳಾಗಿದ್ದು, ಇವುಗಳನ್ನು ಎಷ್ಟು ಬೇಗ ತೊರೆಯುತ್ತೇವೆಯೋ, ರಾಷ್ಟ್ರಕ್ಕೆ ಅಷ್ಟೂ ಕ್ಷೇಮ.
ಎರಡನೆಯದಾಗಿ ಜಾನ್ ಸ್ಪೋರಟ್ ಮಿಲ್ ಪ್ರಜಾಪ್ರಭುತ್ವವನ್ನು ಕುರಿತು ಹೇಳಿದ್ದ ಎಚ್ಚರಿಕೆ ಮಾತನ್ನು ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಇರುವವರೆಲ್ಲರೂ ಗಮನಿಸಬೇಕಾಗುತ್ತದೆ. ಅಂದರೆ “ಎಂತಹ ಮಹಾನ್ ವ್ಯಕ್ತಿಯೇ ಆಗಿದ್ದರೂ ಅವನ ಪಾದದಡಿಯಲ್ಲಿ ತಮ್ಮ ಸ್ವಾತಂತ್ರ್ಯವನ್ನು ಎಸೆಯಬಾರದು. ಅಥವಾ ತಮ್ಮ ಯಾವುದೇ ಸಂಸ್ಥೆಗಳನ್ನು ಬುಡ ಮೇಲು ಮಾಡಲು ಅನುಕೂಲವಾಗುವ ಹಾಗೆ, ಅವರಿಗೆ ಅಧಿಕಾರವನ್ನು ಕೊಡಲೂಬಾರದು” ದೇಶಕ್ಕೆ ಜೀವಮಾನವೆಲ್ಲಾ ಸೇವೆ ಸಲ್ಲಿಸಿದ ಯಾವುದೇ ಮಹಾನ್ ವ್ಯಕ್ತಿಗೆ ಋಣಿಯಾಗಿರುವುದರಲ್ಲಿ ತಪ್ಪೇನೂ ಇಲ್ಲ, ಆದರೆ ಋಣಿಯಾಗಿರುವುದಕ್ಕೂ ಕೆಲವು ಮಿತಿಗಳಿರುತ್ತವೆ.
ಐರಿಷ್ ರಾಷ್ಟ್ರಪ್ರೇಮಿಯಾದ ಡೇನಿಲ್ ಓ ಕನ್ನೋಲ್ ಎಂಬುವವನು ಹೇಳಿ ದಂತೆ, “ಯಾವೊಬ್ಬ ವ್ಯಕ್ತಿಯು ತನ್ನ ಗೌರವವನ್ನು ಕಳೆದು ಕೊಂಡು ಮತ್ತೊಬ್ಬನಿಗೆ ಋಣಿ ಯಾಗಿರಬಾರದು. ಯಾವೊಬ್ಬ ಮಹಿಳೆಯು ತನ್ನ ಪಾವಿತ್ರ್ಯತೆ ಯನ್ನು ಬಲಿಗೊಟ್ಟು ಕೃತಜ್ಞತೆಯನ್ನು ತೋರಿಸಬೇಕಿಲ್ಲ. ಅದೇ ರೀತಿಯಲ್ಲಿ ಯಾವ ರಾಷ್ಟ್ರವೂ ತನ್ನ ಸ್ವಾತಂತ್ರ್ಯವನ್ನು ಬಲಿಗೊಟ್ಟು ಕೃತಜ್ಞವಾಗಿರ ಬೇಕಿಲ್ಲ”. ಈ ಎಚ್ಚರಿಕೆಯ ಮಾತು, ಇತರೆ ಯಾವುದೇ ದೇಶಕ್ಕಿಂತ ಭಾರತದ ಸಂದರ್ಭದಲ್ಲಿ ಹೆಚ್ಚು ಅಗತ್ಯವಾಗಿರುತ್ತದೆ.
ಭಾರತದಲ್ಲಿ ಭಕ್ತಿಪಂಥ ಅಥವಾ ವ್ಯಕ್ತಿಪೂಜೆ ರಾಜಕೀಯದಲ್ಲಿ ಮಹತ್ವದ ಪಾತ್ರಗಳನ್ನು ವಹಿಸುತ್ತಿವೆ. ಈ ವಿಷಯದಲ್ಲಿ ಪ್ರಪಂಚದ ಯಾವುದೇ ರಾಷ್ಟ್ರವು ಇದಕ್ಕೆ ಸರಿಸಾಟಿಯಾಗಲಾರದು. ಧಾರ್ಮಿಕವಾಗಿ ಭಕ್ತಿಯು ಆತ್ಮದ ಮೋಕ್ಷಕ್ಕೆ ದಾರಿ ಮಾಡಿಕೊಡಬಹುದು. ಆದರೆ ರಾಜಕೀಯದಲ್ಲಿನ ಭಕ್ತಿ ಅಥವಾ ವ್ಯಕ್ತಿ ಪೂಜೆಯು, ಖಂಡಿತವಾಗಿಯೂ, ಅವನತಿಗೆ ಮತ್ತು ನಿರಂಕುಶ ಪ್ರಭುತ್ವದ ಉದಯಕ್ಕೆ, ದಾರಿ ಮಾಡಿ ಕೊಡುತ್ತದೆ.
ಮೂರನೆಯದಾಗಿ ನಾವು ಮಾಡಬೇಕಾದುದು ಎಂದರೆ, ಕೇವಲ ರಾಜಕೀಯ ಪ್ರಜಾಪ್ರಭುತ್ವದಿಂದ ತೃಪ್ತಿ ಹೊಂದಿ ಸಮ್ಮನಾಗ ಬಾರದು. ನಾವು ನಮಗೆ ದೊರೆತ ಈ ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾ ಜಿಕ ಪ್ರಜಾಪ್ರಭುತ್ವವನ್ನಾಗಿಯೂ ಮಾಡಬೇಕು. ರಾಜಕೀಯ ಪ್ರಜಾಪ್ರಭು ತ್ವಕ್ಕೆ ಸಾಮಾಜಿಕ ಪ್ರಜಾಪ್ರಭುತ್ವವು ಬುನಾದಿಯಾಗಿರದಿದ್ದರೆ ರಾಜಕೀಯ ಪ್ರಭುತ್ವಕ್ಕೆ ಉಳಿಗಾಲವಿಲ್ಲ. ಹಾಗಾದರೆ, ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ ಏನು? ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ ಅದೊಂದು ಜೀವನ ಪದ್ಧತಿ. ಸ್ವಾತಂತ್ರ್ಯ, ಸಮಾನತೆ ಮತ್ತು ಬ್ರಾತೃತ್ವ ಆದ ಈ ತ್ರಿವಳಿಗಳಲ್ಲಿ ಒಂದೊಂದನ್ನು ಪ್ರತ್ಯೇಕವೆಂದು ಪರಿಗಣಿಸು ವಂತಿಲ್ಲ. ಅವು ಒಂದಕ್ಕೊಂದು ಪೂರಕವಾಗಿರುತ್ತವೆ. ಅವುಗಳನ್ನು ಪ್ರತ್ಯೇಕಿಸುವು ದೆಂದರೆ ಪ್ರಜಾಪ್ರಭುತ್ವದ ಉದ್ದೇಶವು ವಿಫಲವಾಗುತ್ತದೆ.
ಸ್ವಾತಂತ್ರ್ಯ ವನ್ನು, ಸಮಾನತೆಯಿಂದ ಪ್ರತ್ಯೇಕಿಸಲು ಬರುವುದಿಲ್ಲ. ಸಮಾನತೆಯನ್ನು ಸ್ವಾತಂತ್ರ್ಯದಿಂದ ಪ್ರತ್ಯೇಕಿಸಲು ಬರುವುದಿಲ್ಲ. ಹಾಗೆಯೇ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು, ಭ್ರಾತೃತ್ವದಿಂದ ಪ್ರತ್ಯೇಕಿಸಲೂ ಬರುವುದಿಲ್ಲ. ಸ್ವಾತಂತ್ರ್ಯತೆ ಇಲ್ಲದ ಸಮಾನತೆಯು ವ್ಯಕ್ತಿಗತ ಸ್ವಾತಂತ್ರ್ಯವನ್ನು ನಾಶ ಗೊಳಿಸುತ್ತದೆ.
ಭ್ರಾತೃತ್ವವಿಲ್ಲದೆ ಸ್ವಾತಂತ್ರ್ಯ ಮತ್ತು ಸಮಾನತೆಗಳು ಸುಸೂತ್ರವಾಗಿ ನಡೆಯುವಂತಿಲ್ಲ. ಇವುಗಳನ್ನು ಜಾರಿಗೆ ತರಲು ಬಲಪ್ರಯೋಗ ಅಗತ್ಯವಾದೀತು! ಭಾರತೀಯ ಸಮಾಜದಲ್ಲಿ ಈ ಎರಡೂ ಸಂಗತಿಗಳು ಸಂಪೂರ್ಣ ಅಭಾವವಿದೆ ಎಂಬ ವಾಸ್ತವವನ್ನು ನಾವು ಒಪ್ಪಿಕೊಳ್ಳ ಬೇಕು. ಅಂತಹ ಎರಡು ಸಂಗತಿಗಳಲ್ಲಿ ಸಮಾನತೆ ಎಂಬುವುದೂ ಒಂದು. ಸಾಮಾಜಿಕ ಸ್ಥರದ ಮಟ್ಟಿಗೆ ಹೇಳಬೇಕಾದರೆ, ಭಾರತದಲ್ಲಿ ಸಾಮಾಜಿಕ ವ್ಯವಸ್ಥೆಯು ಅಸಮಾನತೆಯ ಶ್ರೇಣಿಗಳ ಮೇಲೆ ನಿಂತಿದೆ. ಅಂದರೆ ಕೆಲವರು ಮೇಲು ಮತ್ತು ಕೆಲವರು ಕೀಳು ಎಂಬ ಅರ್ಥದಲ್ಲಿ. ಆರ್ಥಿಕ ಸ್ಥರದಲ್ಲಿ ಹೇಳಬೇಕೆಂದರೆ, ನಮ್ಮ ಸಮಾಜದಲ್ಲಿ ಹೆಚ್ಚಿನ ಜನ ಕಡು ಬಡತನದಲ್ಲಿದ್ದರೆ, ಕೆಲವರಲ್ಲಿ ಮಾತ್ರ ಶ್ರೀಮಂತಿಕೆ ತುಂಬಿದೆ.
ಜನೆವರಿ 26, 1950ರಂದು ನಾವು ಇಂತಹ ಪರಸ್ಪರ ವೈರುಧ್ಯಗಳಿರುವ ಒಂದು ಹೊಸ ವ್ಯವಸ್ಥೆಗೆ ಪ್ರವೇಶಿಸುತ್ತಿದ್ದೇವೆ. ರಾಜ ಕೀಯ ಜೀವನದಲ್ಲಿ ನಾವು ಸಮಾನತೆಯನ್ನು ಹೊಂದಿದ್ದೇವೆ. ಆದರೆ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ನಾವು ಅಸಮಾನತೆಯನ್ನು ಹೊಂದಲಿದ್ದೇವೆ. ರಾಜಕೀಯದಲ್ಲಿ ಒಬ್ಬ ವ್ಯಕ್ತಿಗೆ ಒಂದು ಮತ ಮತ್ತು ಒಂದು ಮತದ ಮೌಲ್ಯ ಒಂದು ಎಂಬ ತತ್ವವನ್ನು ಸ್ವೀಕರಿಸಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆುಂದಾಗಿ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಮತ, ಒಂದು ಮೌಲ್ಯ ಎಂಬ ತತ್ವವನ್ನು ನಿರಾಕರಿಸಿದ್ದೇವೆ.
ಸಮಾಜದಲ್ಲಿ ಇಂತಹ ವೈರುಧ್ಯಗಳನ್ನು ಒಳಗೊಂಡ ಜೀವನವನ್ನು ನಾವು ಎಲ್ಲಿಯ ವರೆಗೆ ಮುಂದುವರೆಸಲು ಸಾಧ್ಯ? ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಎಲ್ಲಿಯ ವರೆಗೂ ನಾವು ಸಮಾನತೆಯನ್ನು ನಿರಾಕರಿಸಲು ಸಾಧ್ಯ? ನಾವು ಈ ನಿರಾಕರಣೆಯನ್ನು ಹೀಗೆಯೇ ಮುಂದುವರೆಸಿದ್ದಾ ದರೆ ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಒಡ್ಡಿದಂತಾಗುತ್ತದೆ. ನಾವು ಈ ವೈರುಧ್ಯಗಳನ್ನು ಆದಷ್ಟು ಬೇಗ ನಿವಾರಿಸಬೇಕಿರುತ್ತದೆ. ಇಲ್ಲವಾದರೆ ಯಾರು ಅಸಮಾನತೆಯಿಂದ ನರಳುತ್ತಿರುವರೋ ಅವರು, ಯಾವ ಪ್ರಜಾಪ್ರಭುತ್ವಕ್ಕಾಗಿ ಈ ಸಂವಿಧಾನ ಸಭೆ ಪ್ರಯತ್ನಿಸಿತೋ, ಆ ರಾಜಕೀಯ ಪ್ರಜಾಪ್ರಭುತ್ವದ ಕಟ್ಟಡವನ್ನೇ ಧ್ವಂಸಗೊಳಿಸುತ್ತಾರೆ.
ನಾವು ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ಒಂದು ರಾಷ್ಟ್ರವಾಗಿಲ್ಲ ಎಂಬುದನ್ನು ಎಷ್ಟು ಬೇಗ ಅರ್ಥ ಮಾಡಿಕೊಳ್ಳು ತ್ತೇವೆಯೋ ಅಷ್ಟೂ ಒಳ್ಳೆಯದು. ಆಗ ಮಾತ್ರ ನಾವು ರಾಷ್ಟ್ರವಾಗುವ ಅಗತ್ಯತೆಯನ್ನು ಕಂಡುಕೊಳ್ಳುತ್ತೇವೆ ಹಾಗೂ ಅಂತಹ ಒಂದು ಉದ್ದೇಶದ ಈಡೇರಿಕೆಗಾಗಿ ನಾವು ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಗಂಭೀರವಾಗಿ ಯೋಚಿಸುತ್ತೇವೆ. ಈ ಗುರಿಯ ಈಡೇರಿಕೆಯು ಅಷ್ಟು ಸುಲಭದ್ದಾಗಿರುವುದಿಲ್ಲ. ಅಮೇರಿಕಾ ಸಂಸ್ಥಾನಕ್ಕಿಂತ ಭಾರತದಲ್ಲಿ ಅಸಂಖ್ಯಾತ ಜಾತಿಗಳು ಇವೆ. ಜಾತಿಗಳು ರಾಷ್ಟ್ರದ ಕಲ್ಪನೆಗೆ ವಿರೋಧ ವಾದವುಗಳು. ಮೊದಲನೆಯದಾಗಿ ಸಾಮಾಜಿಕ ಜೀವನದಲ್ಲಿ ಇವು ಪ್ರತ್ಯೇಕತೆಯನ್ನು ತರುತ್ತವೆ. ಇವು ರಾಷ್ಟ್ರ ವಿರೋಧಿಗಳೂ ಕೂಡ. ಯಾಕೆಂದರೆ ಜಾತಿ ಮತ್ತು ಜಾತಿಗಳ ನಡುವೆ ಅಸೂಯೆ ಮತ್ತು ದ್ವೇಷ ಭಾವನೆಗಳನ್ನು ಉಂಟು ಮಾಡುತ್ತವೆ.
ನಾವು ವಾಸ್ತವವಾಗಿ ಒಂದು ರಾಷ್ಟ್ರವಾಗಬೇಕೆಂದು ಬಯಸುವುದಾದರೆ ಈ ಎಲ್ಲಾ ತೊಂದರೆಗಳನ್ನು ನಿವಾರಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ಒಂದು ರಾಷ್ಟ್ರ ಎಂಬುದು ಅಸ್ತಿತ್ವದಲ್ಲಿದ್ದರೆ, ಭ್ರಾತೃತ್ವವು ವಾಸ್ತವವಾಗುತ್ತದೆ. ಭ್ರಾತೃತ್ವವಿಲ್ಲದೆ ಸಮಾನತೆ ಮತ್ತು ಸ್ವಾತಂತ್ರ್ಯ ಎಂಬುವುದು ಕೇವಲ ಬಣ್ಣ ಬಳಿದಂತೆಯೇ.
ನಮ್ಮ ಮುಂದಿರುವ ಕರ್ತವ್ಯಗಳ ಸಂಬಂಧದಲ್ಲಿ ಇವು ನನ್ನ ಚಿಂತನೆಗಳಾಗಿರುತ್ತವೆ ಅಷ್ಟೇ. ಕೆಲವರಿಗೆ, ಇವಾವು ಸಂತೋಷವನ್ನು ಉಂಟು ಮಾಡಿರಲಿಕ್ಕಿಲ್ಲ. ಆದರೆ ನಮ್ಮ ದೇಶದಲ್ಲಿ ರಾಜಕೀಯ ಅಧಿಕಾರ ಬಹಳ ಕಾಲದಿಂದ ಕೆಲವರ ಸ್ವತ್ತಾಗಿದ್ದು ಬಹುಸಂಖ್ಯಾತರು ಪ್ರಾಣಿಗಳಂತೆ ಹಾಗೂ ಪಶುಗಳಂತೆ ಜೀವಿಸುತ್ತಿದ್ದಾರೆ ಎಂಬುವುದನ್ನು ಒತ್ತಿ ಹೇಳಬೇಕಿಲ್ಲ. ಅಧಿಕಾರವು ಕೆಲವೇ ಕೆಲವರ ಸ್ವತ್ತಾಗಿರುವ ಕಾರಣ ಬಹು ಸಂಖ್ಯಾತರಿಗೆ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವ ಅವಕಾಶವು ಇಲ್ಲದಂತಾಗಿದೆ. ಇಷ್ಟೇ ಅಲ್ಲದೇ ಜೀವನದ ಮಹತ್ವದ ಬಗೆಗಿನ ಅವರ ಆಸಕ್ತಿಯು ಉಡುಗಿ ಹೋಗುವಂತಾಗಿದೆ.
ತುಳಿತಕ್ಕೆ ಒಳಗಾದ ಈ ಜನರು ಇವರ ಆಡಳಿತಕ್ಕೆ ಬೇಸತ್ತಿದ್ದಾರೆ ಮತ್ತು ತಮ್ಮನ್ನು ತಾವೇ ಆಳಿಕೊಳ್ಳುವ ತವಕದಲ್ಲಿದ್ದಾರೆ. ದಲಿತ ವರ್ಗಗಳಲ್ಲಿ ಆತ್ಮಾವಲೋಕನದ ಸಲುವಾಗಿ ಉಮ್ಮಳಿಸುತ್ತಿರುವ ಉತ್ಕಟವಾದ ಆಕಾಂಕ್ಷೆಯು ವರ್ಗ ಸಂಘರ್ಷದಲ್ಲಿ ಪರಿಣಮಿಸದಂತೆ ನಾವು ಎಚ್ಚರ ವಹಿಸಬೇಕಾಗುತ್ತದೆ. ಹಾಗೇನಾದರೂ ಆಗಿದ್ದೆ ಆದರೆ, ರಾಷ್ಟ್ರ ಇಬ್ಬಾಗವಾದಂತೆಯೇ. ಅಂತಹದೊಂದು ದಿನ ಬಂದಿದ್ದೇ ಆದರೆ ಅದು ಘೋರ ದುರಂತ ದಿನವಾಗುತ್ತದೆ. ಯಾಕೆಂದರೆ ಅಬ್ರಹಾಂ ಲಿಂಕನ್ ಹೇಳಿರುವ ಹಾಗೆ ಯಾವ ಮನೆ ಇಬ್ಭಾಗವಾಗುತ್ತದೋ ಆ ಮನೆಗೆ ಉಳಿಗಾಲವಿಲ್ಲ.
ಸ್ವಾತಂತ್ರ್ಯವು ವಾಸ್ತವಾಗಿ ಸಂತೋಷ ಉಂಟು ಮಾಡುವ ಸಂಗತಿ. ಆದರೆ ಈ ಸ್ವಾತಂತ್ರ್ಯವು ನಮ್ಮ ಮೇಲೆ ಹೆಚ್ಚು ಜವಾಬ್ದಾರಿಗ ಳನ್ನು ಹೊರೆಸಿದೆ ಎಂಬುವುದನ್ನು ಮರೆಯದಿರೋಣ. ಸ್ವಾತಂತ್ರ್ಯದ ಮೂಲಕ, ಪ್ರತಿಯೊಂದು ತಪ್ಪು ಎಸಗಿದಾಗ ಬ್ರಿಟೀಷರ ಕಡೆಗೆ ಬೆರಳು ಮಾಡಿ ತೋರಿಸುತ್ತಿದ್ದಂತಹ ಅವಕಾಶವನ್ನು ಕಳೆದುಕೊಂಡಿದ್ದೇವೆ. ಇನ್ನು ಮುಂದೆ ಏನಾದರೂ ತಪ್ಪಾದಾಗ ನಾವು ನಮ್ಮನ್ನು ಬಿಟ್ಟು ಬೇರೆ ಯಾರನ್ನೂ ಆಪಾದಿಸಿ ಹೇಳುವಂತಿಲ್ಲ. ತಪ್ಪುಗಳು ಸಂಭವಿಸುವ ಬಹು ದೊಡ್ಡ ಅಪಾಯವಿದೆ.
–ಡಾ. ಬಿ.ಆರ್.ಅಂಬೇಡ್ಕರ್
(ಸಂವಿಧಾನ ಸಭೆಯಲ್ಲಿ ಡಾ. ಅಂಬೇಡ್ಕರರು ಮಾಡಿದ ಸಮಾರೋಪ ಭಾಷಣದ ಆಯ್ದ ಭಾಗ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಸ್ತೆ ವಿಸ್ತೀರ್ಣ ವಿರೋಧಿಸಿ ಎಸ್‌ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ
ದಾವಣಗೆರೆ: ಎಸ್‌ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸುವುದರೊಂದಿಗೆ, ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಎಸ್‌ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಲ್ಲಿ ಸೇರಿದ ಎಸ್‌ಒಜಿ ಕಾಲೊನಿಯ ನಿವಾಸಿಗಳು ಇಲ್ಲಿಂದಲೇ ಮೆರವಣಿಗೆ ಹೊರಟು ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.
ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್‌ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂದು ಎಸ್‌ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್‌ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

ಅಂತರಂಗ
ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ
~ ಡಾ. ಸುಜಾತಾ ಚಲವಾದಿ
ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.
ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.
ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.
ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.
ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.
ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.
ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.
ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್‌ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.
1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.
ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.
ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.
26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.
ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು
ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.
ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.
ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.
ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.
ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.
——————————————————————-
ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?
ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.
ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?
ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.
ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.
ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)
ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?
ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)
ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?
ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.
ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?
ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.
ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days agoಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್‌ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ8 hours agoದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ


