Connect with us

ಅಂತರಂಗ

ಅರಿಮೆಯ ಅರಿವಿರಲಿ-19 : ನೋವಿನ ಸುಖ

Published

on

ಚಿತ್ರಕಲೆ : ಹಜರತ್ ಅಲಿ
  • ಯೋಗೇಶ್ ಮಾಸ್ಟರ್

ದೈಹಿಕವಾಗಿ ವ್ಯಾಯಾಮ ಮಾಡಿದಾಗ ಚೆನ್ನಾಗಿ ವ್ಯಾಯಾಮ ಸಿಕ್ಕಿದ ದೇಹದ ಭಾಗಗಳು ನೋಯುತ್ತಿರುತ್ತವೆ. ಆದರೆ ಆ ನೋವು ಗಾಯದಿಂದಲೋ, ಬಿದ್ದುದರಿಂದ ಆದ ನೋವಿನಂತೆಯೋ ಇರುವುದಿಲ್ಲ. ಒಂದು ರೀತಿಯಲ್ಲಿ ಹಿತವಾದ ನೋವು ಅದಾಗಿರುತ್ತದೆ. ಅಂಗಸೌಷ್ಟವಕ್ಕಾಗಿ ಅಥವಾ ಮೈಯನ್ನು ಹುರಿಗಟ್ಟಿಸುವುದಕ್ಕಾಗಿ ಸತತ ವ್ಯಾಯಾಮ ಮಾಡುವವರಿಗೆ ಈ ನೋವಿನ ಹಿತ ಅನುಭವಕ್ಕೆ ಬಂದಿರುತ್ತದೆ. ಆ ನೋವಿನ ಸುಖವಲ್ಲ ಇಲ್ಲಿ ಹೇಳುತ್ತಿರುವುದು.

ಅವಳ ಗಂಡ ಮಹಾ ಕುಡುಕ. ಸಾಲದಕ್ಕೆ ಪ್ರತಿದಿನವೂ ಕುಡಿದು ಬಂದಾಗ ಮೇಲೆ ಅವಳನ್ನು ನಿಂದಿಸುತ್ತಿದ್ದ. ಹೊಡೆಯುತ್ತಿದ್ದ. ಅವಳು ಮೌನವಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಳು. ತನ್ನ ತವರು ಮನೆಯವರು ಬಂದಾಗ ತಿಳಿದು, ತಿಳಿದಿರುವ ಸ್ನೇಹಿತರು ಎಲ್ಲಾ ಅವಳಿಗೆ ಒಂದು ಸಲಹೆ ನೀಡಿದರು. ವಿಚ್ಛೇದನ ತೆಗೆದಿಕೋ. ಅವನಿಂದ ದೂರಾಗು. ನಂತರ ಬೇರಾವುದಾದರೂ ಮದುವೆಯಾಗಬಹುದು ಎಂದು. ಆದರೆ ಅವಳು ನಿರಾಕರಿಸಿದಳು. ಅವನು ಎಷ್ಟೇ ಹೊಡೆಯಲಿ, ಏನೇ ಮಾಡಲಿ. ಅವನು ನನ್ನ ಗಂಡ. ನಾನು ಡಿವೋರ್ಸ್ ತೆಗೆದುಕೊಳ್ಳುವುದಿಲ್ಲ ಮತ್ತು ಈ ಮನೆಯಿಂದ ಹೊರಗೆ ಬರುವುದಿಲ್ಲ. ಅವಳಿಗೆ ಸಿಗುತ್ತಿರುವ ನೋವಿನ ಸುಖ ಈ ಬಲಿದಾನದರಿಮೆಯದು.

ಇದೇ ರೀತಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಅಗತ್ಯಕ್ಕಿಂತ ಹೆಚ್ಚು ಸಮಯ ಕಛೇರಿಯಲ್ಲಿಯೇ ಉಳಿದು ಕೆಲಸ ಮಾಡುವವರು ಆ ರಾಯರು. “ಯಾಕ್ರೀ ಸುಮ್ಮನೆ ಹೀಗೆ ನಿಮ್ಮನ್ನು ನೀವು ದಂಡಿಸಿಕೊಳ್ತೀರಿ?” ಕರ್ಮಣ್ಯೇವಾಧಿಕಾರಸ್ತೇ ಮಾಫಲೇಶು ಕದಾಚನ ಎಂದು ಭಗವತ್ಗೀತೆಯ ಶ್ಲೋಕವೊಂದನ್ನು ಉದ್ದರಿಸಿ, “ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಬೇಕು. ನಿಷ್ಕಾಮ ಮನೋಭಾವದಿಂದ ಮಾಡುವ ಕೆಲಸವು ಭಗವಂತನ ಸೇವೆಯಾಗಿರುತ್ತದೆ” ಎಂದು ತಮ್ಮ ಬಲಿದಾನದರಿಮೆಗೆ ನಿಷ್ಕಾಮ ಕರ್ಮದ ಕವಚವನ್ನು ತೊಡಿಸುತ್ತಾರೆ.

ಆ ಹುಡುಗಿ ಪ್ರೌಢಶಾಲೆ ಓದುತ್ತಿದ್ದಾಳೆ. ಅವಳ ತಾಯಿ ಅವಳು ಮನೆಯಲ್ಲಿ ತನಗೆ ಸಹಾಯ ಮಾಡುವುದಿಲ್ಲ ಎಂದು ದೂರುತ್ತಿರುತ್ತಾಳೆ. ಹುಡುಗಿಯೋ ತನಗೆ ಬೇಕಾದಷ್ಟು ಶಾಲೆಯದೇ ಕೆಲಸಗಳಿವೆ, ಏನೋ ಒಂದಿಷ್ಟು ಸಣ್ಣಪುಟ್ಟ ಕೆಲಸ ಮಾಡಬಹುದು ಅಷ್ಟೇ ಎಂದರೆ ತಾಯಿ ಒಪ್ಪುವುದಿಲ್ಲ. “ನೀನು ಸ್ವಾರ್ಥಿ, ಮೈಗಳ್ಳಿ, ಒಂದು ಚೂರೂ ನನ್ನ ಕಷ್ಟವನ್ನು ಅರ್ಥವೇ ಮಾಡಿಕೊಳ್ಳುವುದಿಲ್ಲ. ನೀನು ಇಷ್ಟರ ಮಟ್ಟಿಗೆ ಬರಬೇಕೆಂದರೆ ನಾನೆಷ್ಟು ಕಷ್ಟಪಟ್ಟಿದ್ದೀನಿ. ಅದೆಷ್ಟು ಹೆಣಗಾಡಿದ್ದೀನಿ. ನೀನು ಅದನ್ನೆಲ್ಲಾ ನೋಡೋದೇ ಇಲ್ಲ” ಇತ್ಯಾದಿ ಆ ತಾಯಿಯ ಅಳಲು. ಈ ಅಳಲು ತನ್ನ ತ್ಯಾಗವನ್ನು ಗುರುತಿಸುತ್ತಿಲ್ಲ ಎಂಬ ಬಲಿದಾನದರಿಮೆಯ ಅಳಲು. ತಾನು ಮಾಡಿರುವ ತ್ಯಾಗ ಗುರುತಿಸಲ್ಪಡದೆಯೇ ವ್ಯರ್ಥವಾಗುತ್ತಿದೆ ಎಂದು ತಾಯಿ ಪ್ರಲಾಪಿಸಿದರೆ, ಮಗಳಿಗೆ “ಅಯ್ಯೋ, ಮನೆ ಅಂತ ಅಂದಮೇಲೆ ಹೀಗೆಲ್ಲಾ ಮಾಡೋದು ಹೆಣಗೋದು ಎಲ್ಲಾ ಇದ್ದೇ ಇರತ್ತಲ್ವಾ? ಅದಕ್ಕೆ ನಾನು ಏನು ಮಾಡಬೇಕು? ಹೇಗೆ ಅವರಿಗೆ ಗೌರವ ತೋರಿಸ್ಬೇಕೂಂತ ಅರ್ಥ ಆಗ್ತಿಲ್ಲ” ಅಂತ ಅವಲತ್ತುಕೊಳ್ಳುತ್ತಾಳೆ.

ಆ ನಿವೃತ್ತ ಹಿರಿಯ ನಾಗರಿಕರು ಈಗ ಎಪ್ಪತ್ತು ದಾಟಿದ್ದರೂ ಚೈತನ್ಯದ ಚಿಲುಮೆಯಂತೆ ತಮ್ಮ ಶೈಕ್ಷಣಿಕ ಸಂಸ್ಥೆಯನ್ನು ನೋಡಿಕೊಳ್ಳಲು ನಿವೃತ್ತರಾಗಲು ಇಷ್ಟಪಡುವುದಿಲ್ಲ. ಅವರ ಮಗ “ಅಪ್ಪಾ, ಈಗ ನೀವು ಸ್ಪಲ್ಪ ಹಿಂದೆ ಸರಿಯಿರಿ. ನಮಗೆ ಮಾಡಲು ಬಿಡಿ” ಅಂದರೆ, “ನಾನಿಲ್ಲದೇ ಹೋದರೆ ಇಲ್ಲಿ ಯಾರು ಕೆಲಸ ಮಾಡುತ್ತಾರೆ. ಸರಿಯಾಗಿ ನೋಡಿಕೊಳ್ಳುವವರಿಲ್ಲದೇ ಇವೆಲ್ಲಾ ಹಾಳಾಗಿ ಹೋಗತ್ತೆ. ನಾನು ಬರದೇ ಬೇರೆ ದಾರಿಯೇ ಇಲ್ಲ” ಒಟ್ಟಾರೆ ಬಲಿದಾನದರಿಮೆಯ ಧ್ವನಿಯೇನೆಂದರೆ ‘ಅಜ್ಜಿ ಕೋಳಿ ಕೂಗಿದರೇನೇ ಬೆಳಗಾಗೋದು’ ಅಂತ. ಅದಕ್ಕೆ ನೀವು ಬನ್ನಿ ಅಂತ ಯಾರೂ ಕರೆಯದೇ ಇದ್ದರೂ, ಹೊಸ ಕೈಗಳಿಗೆ ಹಳೆಯ ಬೇಡಿಗಳನ್ನು ತೊಡಿಸಲು ಅದೆಷ್ಟು ಕಷ್ಟವಾದರೂ ಅವರು ಬರಲೇ ಬೇಕು.

ಒಲವಿನ ಹೆಸರಿನಲ್ಲಿ ನೋವನ್ನು ಅನುಭವಿಸುವುದು, ನಾನಿಲ್ಲದೇ ಹೋದರೆ ಎಲ್ಲವೂ ಛಿದ್ರಛಿದ್ರವಾಗಿ ಹೋಗುತ್ತದೆ ಎಂದು ನಂಬುವುದು, ಪ್ರತಿಯೊಬ್ಬರ ಸಂತೋಷ, ಸುಖಕ್ಕೆ ತಾವೇ ಜವಾಬ್ದಾರಿ ಹಾಗೂ ತಾವಿಲ್ಲದೇ ಹೋದರೆ ಅವರು ನರಳುತ್ತಾರೆ ಎಂದು ಭ್ರಮಿಸುವುದು, ಬೇರೆಯವರು ತಮ್ಮ ಸಮಸ್ಯೆಗೆ, ತೊಡಗಿಕೆ ಕಾರಣ ಎಂದು ದೂರುವುದು, ತಮ್ಮ ತ್ಯಾಗವನ್ನು ತ್ಯಾಗವೆಂದು ನೂರಕ್ಕೆ ನೂರು ಎಲ್ಲರೂ ಒಪ್ಪಬೇಕು ಎಂಬುವುದು, ಉಳಿದವರ ಕೆಲಸ ಕೆಲಸಕ್ಕೆ ಬಾರದು ಎನ್ನುವುದು; ಇಂತಹ ಧೋರಣೆಗಳು ಮತ್ತು ಸ್ವಭಾವಗಳು ನಿಮ್ಮಲ್ಲೋ ಅಥವಾ ನಿಮ್ಮೊಡನೆ ಇರುವ ಇತರರಲ್ಲೋ ಇದೆ ಎಂದರೆ ಈ ಬಲಿದಾನದರಿಮೆ ಇದೆ ಎಂದಾಯ್ತು. ಇದಕ್ಕೆ ಬಹಳ ಉತ್ತಮವಾದ ಪ್ರತಿಕ್ರಿಯೆ ಎಂದರೆ ಮೊದಲು ಕ್ಷಮಿಸುವುದು. ನಂತರ ಪ್ರೀತಿಸುವುದು. ಆಮೇಲೆ ಅವರಿಗೆ ಬಹಳ ಪ್ರಾಮಾಣಿಕವಾಗಿ ಇದು ಸಮಸ್ಯೆ ಎಂದು ತಿಳಿಸುವುದು. ಒಪ್ಪಿ ಸಮಾಲೋಚನೆಗಳು ನಡೆದರೆ ಸಂತೋಷ. ಇಲ್ಲವೆಂದರೆ ಹಗ್ಗ ಜಗ್ಗಾಟ ಇದ್ದೇ ಇರುವುದು.

ದೆವ್ವ ಹಿಡಿಯಿತು, ದೇವರು ಬಂದಿತು

ಅವರು ಆ ಮನೆಯ ಹಿರಿಯ ಸೊಸೆ. ಇದ್ದಕ್ಕಿದ್ದಂತೆ ಅವರ ಮೈ ಮೇಲೆ ಅವರ ಅಜ್ಜಿಯ ದೆವ್ವ ಬರಲಾರಂಭಿಸಿತು. ದೆವ್ವ ಹಿಡಿದಾಗ ಕೂಗುವುದೇನು, ಆರ್ಭಟಿಸುವುದೇನು, ಅವರಿವರಿವರಿಗೆಲ್ಲಾ ಧಮಕಿ ಹಾಕುವುದೇನು! ಮೈ ಮೇಲೆ ಬಂದ ಅಜ್ಜಿಯ ದೆವ್ವ ಮುಂದೆ ಕುಳಿತಿರುವ ಎಲ್ಲರಿಗೂ ಹೇಳುತ್ತದೆ. “ಈ ಮನೆಗೆ ನಾನು ಹಿರಿಯ ಸೊಸೆ ಆಗಿದ್ದೆ ಎಷ್ಟು ಕೆಲಸ ಮಾಡುತ್ತಿದ್ದೆ. ಗಂಧ ತೇಯುವಂತೆ ತೇಯುತ್ತಿದ್ದೆ. ನೀವ್ಯಾರೂ ನನಗೆ ಮರ್ಯಾದೆ ಕೊಡುತ್ತಿಲ್ಲ” ಎಂದು ಎಲ್ಲರಿಗೂ ಬೈಯುತ್ತದೆ. “ನಾನು ಈ ಮನೆಗೆ ಮಾಡಿರುವ ತ್ಯಾಗವನ್ನು ನೀವು ಗುರುತಿಸದೇ ಹೋದರೆ ನೀವೆಲ್ಲಾ ಸರ್ವನಾಶ ಆಗುತ್ತೀರಾ” ಎಂದು ಎಚ್ಚರಿಸುತ್ತದೆ. ಮನೆಯವರೆಲ್ಲಾ ಎಚ್ಚೆತ್ತು ಅಜ್ಜಿ ದೆವ್ವಕ್ಕೆ ಗೌರವಿಸುತ್ತಾರೆ. ಆ ಅಜ್ಜಿ ದೆವ್ವ ತಾನೆಂದು ಹೇಳಿಕೊಳ್ಳಬಹುದು. ಕೆಲವೊಮ್ಮೆ ಈಗಿನ ಹಿರಿಯ ಸೊಸೆ ಎಂದೇ ಹೇಳಬಹುದು. ಅದು ಆ ದೆವ್ವಕ್ಕೆ ಆಗಿರುವ ಮೂಡಿನ ಮೇಲೆ ವಾಕ್ಯಗಳು ಅವಲಂಬಿತವಾಗಿರುತ್ತವೆ.

ಈ ಮೂಲಕ ಗಂಧದಂತೆ ತೇಯುತ್ತಿರುವ ಸೊಸೆಯ ತ್ಯಾಗವು ಮರ್ಯಾದೆಗೆ ಒಳಪಡುತ್ತದೆ. ಕೆಲವು ಸಲ ದೆವ್ವದ ಬದಲು ಮನೆ ದೇವರೋ, ಊರ ದೇವರೋ ಬರಬಹುದು. ಸಾಮಾನ್ಯವಾಗಿ ಹೆಂಗಸರ ಮೇಲೆ ದೇವಿ ಅಥವಾ ಅಮ್ಮನೋರು ಬರುತ್ತಾರೆ. ಗಂಡಸರ ಮೇಲೂ ಅಮ್ಮನೋರು ಬರುತ್ತಾರೆ, ಕೆಲವು ಶನೀಶ್ವರ, ಮುನೀಶ್ವರನಂತಹ ಗಂಡು ದೇವರೂ ಬರುತ್ತಾರೆ. ದಕ್ಷಿಣ ಕನ್ನಡದ ಭಾಗಗಳಲ್ಲಾದರೆ ಭೂತಗಳು, ದೈವಗಳು ಬರಬಹುದು. ಬಿಡಿ, ಯಾರೋ ಒಬ್ಬರು ಬರುತ್ತಾರೆ. ಒಟ್ಟಾರೆ ನಿಮಗಾಗಿ ದುಡಿಯುತ್ತಿರುವವರ ತ್ಯಾಗವನ್ನು ಗುರುತಿಸದಿದ್ದರೆ, ಅದರ ಮಹಿಮೆಯನ್ನು ಕೊಂಡಾಡದಿದ್ದರೆ, ಯಾರೋ ಒಬ್ಬರು ಮೈ ಮೇಲೆ ಬರುತ್ತಾರೆ. ಇದು ಕೌಟುಂಬಿಕ ಪರಿಮಿತಿಗಳಲ್ಲಿ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಮೈ ಮೇಲೆ ಬರುವ ದೇವರು ಬೇರೆಯೇ ಪ್ರದರ್ಶಕ ಕಲೆಯ ವಿಷಯ. ಇಲ್ಲಿ ಅದರ ಅವಶ್ಯಕತೆ ಇಲ್ಲ.

ಒಂದು ವಿಷಯ ಅಂತೂ ಸತ್ಯ. ಯಾರದೇ ಮೈ ಮೇಲೆ ದೇವರು ಅಥವಾ ದೆವ್ವಗಳು ಬರುತ್ತಾವೆಂದರೆ ಒಂದೋ ಮಾನಸಿಕ ಸಮಸ್ಯೆಯಾಗಿರುತ್ತದೆ ಅಥವಾ ರಾಜಕೀಯವಾಗಿರುತ್ತದೆ.ಸರ್ವಾಂತರ್ಯಾಮಿಯಾದ, ಸರ್ವಶಕ್ತನಾದ, ಸರ್ವಜ್ಞನಾದ ಆ ಮಹಾಮಹಿಮ ಭಗವಂತನು ಇವನ್ಯಾರನ್ನೋ ಯಾಕೆ ಆಯ್ದುಕೊಳ್ಳಬೇಕು ಅವನಿಗೆ ಸಲಹೆ, ಸೂಚನೆ, ಮಾರ್ಗದರ್ಶನ ನೀಡುವುದಕ್ಕೆ. ಅವನಿಗೇ ನೇರವಾಗಿ ಯಾವುದಾದರೊಂದು ರೀತಿಯಲ್ಲಿ ಹೇಳಲಾಗದೇ? ಬಿಡಿ, ಅದು ಬೇಡ ಈಗ. ಮನುಷ್ಯನ ಸಂಕೀರ್ಣಮಯವಾದ ಮನಸ್ಸಿನ ಸಮಸ್ಯೆಗಳ ಕಡೆಗೆ ಗಮನ ಹರಿಸೋಣ.

ರೋಗದ ಸುಖ

ದೇವರು, ದೆವ್ವ, ಭೂತ, ಗಣ, ದೈವವೇ ಮೊದಲಾಗಿ ಏನೂ ಬರದಿದ್ದರೂ ಏನಾದರೂ ಒಂದು ಖಾಯಿಲೆ ಬರುತ್ತದೆ. ಆ ಖಾಯಿಲೆಯ ಲಕ್ಷಣವನ್ನು ಈ ರೋಗಲಕ್ಷಣವೆಂದು ಗುರುತಿಸಲಾಗುವುದಿಲ್ಲ. ತಲೆ ನೋವತ್ತೆ, ತಲೆ ಸುತ್ತು ಬರತ್ತೆ, ಮೈ ಕೈ ನೋವತ್ತೆ, ಹೊಟ್ಟೆ ನೋವತ್ತೆ, ಎದೆ ಹಿಡಿದುಕೊಂಡಂತೆ ಆಗಿ ಬಿದ್ದೇ ಹೋಗುತ್ತಾರೆ. ಡಾಕ್ಟರ್ ಬಳಿಗೆ ಒಯ್ಯುತ್ತೀರಿ. ಅವರು ಔಷಧಿ ಕೊಡುತ್ತಾರೆ. ಅವರಿಗೆ ಇವರು ಹೇಳುತ್ತಿರುವ ರೋಗ ಲಕ್ಷಣಗಳೆಲ್ಲಾ ಕಲಸು ಮೇಲೋಗರವಾಗಿರುತ್ತದೆ. ಯಾವುದಕ್ಕೂ ಯಾವ ರೋಗಕ್ಕೆ ಹತ್ತಿರವಾಗಿದೆಯೋ ಆ ರೋಗದ ಚಿಕಿತ್ಸೆ ನೀಡಲಾರಂಭಿಸುತ್ತಾರೆ. ಇವರ ರೋಗ ವಾಸಿ ಆಗುವುದೇ ಇಲ್ಲ. ಡಾಕ್ಟರ್ ಇನ್ನೊಂದು ದಿಕ್ಕಿನಿಂದ ಚಿಕಿತ್ಸೆ ನೀಡುತ್ತಾರೆ.

ಪರೀಕ್ಷೆಗಳನ್ನು ಮಾಡಿದಾಗ ಅವರೆಂದುಕೊಂಡಿರುವ ರೋಗ ಲಕ್ಷಣಗಳು ಇರುವುದಿಲ್ಲ. ಹಾಗಾಗಿ ಸಾಮಾನ್ಯವಾಗಿ ದೈಹಿಕ ಅಥವಾ ಶಾರೀರಿಕ ರೋಗಗಳನ್ನು ಮತ್ತು ಚಿಕಿತ್ಸೆಗಳನ್ನು ಅಭ್ಯಾಸ ಮಾಡಿರುವ ಡಾಕ್ಟರ್ ಒಂದಷ್ಟು ಪ್ರಮಾಣದ ಮನಶಾಸ್ತ್ರವೂ ತಿಳಿದಿರುತ್ತದೆ, ತಿಳಿದಿರಬೇಕಾಗುತ್ತದೆ.
ಒಂದೇ ಸಮನೆ ಮನೆಯಲ್ಲಿ ದುಡಿಯುತ್ತಿದ್ದ ಆಕೆಯು ಖಾಯಿಲೆ ಎಂದು ಮಲಗಿದಾಗ ಮನೆಯವರಿಗೆ ಆಕೆಯ ಕೆಲಸದ ಮಹತ್ವ ತಿಳಿಯುತ್ತದೆ. ಆಕೆಯಿರದಿದ್ದರೆ ತಮಗೆಷ್ಟೆಲ್ಲಾ ಸಮಸ್ಯೆ ಉಂಟಾಗುವುದು ಎಂದು ತಿಳಿಯುತ್ತದೆ. ಆಗ ಆಕೆಗೆ ಉಪಚರಿಸುತ್ತಾರೆ. ನೀನು ಚೆನ್ನಾಗಿ ಓಡಾಡಿಕೊಂಡಿದ್ದಾಗ ನಮಗೆ ಏನೂ ಗೊತ್ತಾಗುತ್ತಿರಲಿಲ್ಲ. ಈಗ ನೀನು ಖಾಯಿಲೆ ಬಂದು ಮಲಗಿದ ಮೇಲೆ ಈಗ ನೀನೆಷ್ಟು ಮಾಡುತ್ತಿದ್ದೀಯ ಎಂದು ತಿಳಿಯುತ್ತಿದೆ. ಅಲ್ಲಿಗೆ ಆಕೆಗೆ ಬಂದ ಖಾಯಿಲೆಯು ತನ್ನ ಉದ್ದೇಶವನ್ನು ನೆರವೇರಿಸಿಕೊಂಡಿತು. ತನಗೆ ಸಿಗದಿದ್ದ ಮಾನ್ಯತೆಯನ್ನು ಪಡೆದುಕೊಂಡಿತು. ಈಗ ಆ ಖಾಯಿಲೆಯು ಹೋಗುವುದು. ತಾನು ಪಡೆದ ಸೆಕೆಂಡರಿ ಬೆನಿಫಿಟ್ ಸುಖ ನೀಡಿತು.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending