Connect with us

ಅಂತರಂಗ

ಅರಿಮೆಯ ಅರಿವಿರಲಿ – 18 : ಅಮೌಲ್ಯದ ಮೌಲ್ಯ ಮಾಪನ

Published

on

Art : GEOFFREY JOHNSON
  • ಯೋಗೇಶ್ ಮಾಸ್ಟರ್

ಬಲಿದಾನದರಿಮೆಯು ಮೊಳೆಯುವುದು ಹೇಗೆ? ಕೆಲವರು ಬಲಿಗಂಬಕ್ಕೆ ತಮ್ಮನ್ನು ತಾವು ಬಲಿಪಶುವನ್ನಾಗಿಸಿಕೊಂಡು ನಡೆದರೆ, ಮತ್ತೆ ಕೆಲವರು ತಮ್ಮನ್ನು ತಾವು ಗೆಲುವ ನಾಯಕರನ್ನಾಗಿಸಿಕೊಂಡು ನಡೆಯುತ್ತಾರೆ. ಏಕೆ ಹೀಗೆ?‌ಬಹಳ ಗಂಭೀರವಾಗಿ ಗಮನಿಸಬೇಕು ಮತ್ತು ಅನುಕಂಪದಿಂದ ವಿಷಯವನ್ನು ಗ್ರಹಿಸಬೇಕು.

ಸಾಮಾನ್ಯವಾಗಿ ಅರಿಮೆಗಳು ಮೊಳೆಯುವುದು ಮತ್ತು ಬೆಳೆಯುವುದು ಬಾಲ್ಯದಲ್ಲಿಯೇ. ಕೆಲವು ಅರಿಮೆಗಳು ಅಂಕುರಿಸಿ ಸಹಜವಾದ ಅರಿವು ಬರುತ್ತಾ ಅಳಿಸಿ ಹೋಗುತ್ತವೆ. ಮತ್ತೆ ಕೆಲವು ಮೊಳೆತು ಬೆಳೆದು ಬಲಿತು ಬೆಳೆ ನೀಡುತ್ತವೆ. ಈ ಬಲಿದಾನದರಿಮೆಯೂ ಕೂಡಾ ಸಾಮಾನ್ಯವಾಗಿ ಬಾಲ್ಯದಲ್ಲಿ ತಂದೆ ತಾಯಿಗಳಿಂದ ಸಿಗುವಂತಹ ಬಳುವಳಿಯೇ. ಕುಟುಂಬದ ಹಿರಿಯರ ದ್ವಂದ್ವ ಮತ್ತು ಮಿಶ್ರವರ್ತನೆಗಳು, ಅವರು ಪ್ರತಿಪಾದಿಸುವ ಮೌಲ್ಯಗಳು ಕಾರಣವಾಗುತ್ತವೆ.

ಸುಮ್ಮನೆ ಹೀಗಂತ ಅಂದುಕೊಳ್ಳಿ; ನಿಮ್ಮ ತಾಯಿಯು ಏನೋ ಓದಬೇಕು ಮತ್ತು ಉದ್ಯೋಗದಲ್ಲಿ ಪ್ರಗತಿ ಕಾಣಬೇಕು ಎಂದು ಕನಸಿರುತ್ತಾರೆ. ಆದರೆ ಅದು ಆಗದೇ ಕನಸನ್ನು ಕನವರಿಸಿಕೊಂಡೇ, ಅದನ್ನು ತಾಂತ್ರಿಕವಾಗಿ ತ್ಯಾಗ ಮಾಡಿದ್ದು ನಿಮಗಾಗಿ ಮನೆಯಲ್ಲಿ ಗೇಯುತ್ತಿರುತ್ತಾರೆ. ಹಾಗೆ ಹೆಣಗುವುದು ಒಂದು ಮೌಲ್ಯವೆಂದು ಬೇರೆ ಭಾವಿಸಿರುತ್ತಾರೆ. ಹೆಣ್ಣಾದವಳು ಈ ಬಗೆಯ ತ್ಯಾಗಗಳಿಗೆ ಅಣಿಯಾಗಿರಲೇ ಬೇಕು ಎಂದು ಭಾವಿಸಿರುತ್ತಾರೆ. ಅದು ಅವರಿಗೆ ಮೌಲ್ಯ. ಸಾಲದಕ್ಕೆ ಹೆಣ್ಣಿಗೆ ಬಿರುದು ಬಾವಲಿಗಳನ್ನಿತ್ತು ಅವಳನ್ನು ತ್ಯಾಗಕ್ಕೆ ಸಜ್ಜುಗೊಳಿಸಿರುತ್ತಾರೆ. ಹೆಣ್ಣು ಸಂಸಾರದ ಕಣ್ಣು. ಅವಳಿಗೆ ಭೂಮಿಯಷ್ಟು ಸಹನೆ. ಅದೂ ಇದೂ ಪರಾಕುಗಳ ಒಂದು ಪಟ್ಟಿ. ಆ ಪಟ್ಟಿಯನ್ನು ಆಕೆಯ ಒಳಮನಸ್ಸು ಬಾಯಿಪಾಠ ಮಾಡಿಕೊಂಡಿದ್ದು ಅದಕ್ಕೆ ತಕ್ಕುದಾಗಿ ನಡೆದುಕೊಳ್ಳಲು ಯತ್ನಿಸುತ್ತಿರುತ್ತಾಳೆ. ಅವಳ ವೈಯಕ್ತಿಕ ಬಯಕೆಗಳೂ ಭುಗಿಲೆದ್ದು ಕುಣಿಯುತ್ತಿರುತ್ತವೆ.

ಈ ಎರಡರ ತಾಕಲಾಟದಲ್ಲಿ ಸ್ವಭಾವತಃ ಮೃದು ಅಥವಾ ದುರ್ಬಲ ಮನಸ್ಕರಾದರೆ ವ್ಯವಸ್ಥೆ ಮತ್ತು ಪರಿಸ್ಥಿತಿಗಳ ಕೈ ಮೇಲಾಗುತ್ತದೆ. ಅವರು ಬಲಿದಾನದರಿಮೆಯ ನೇರ ಬಲಿಪಶುಗಳಾಗಿರುತ್ತಾರೆ. ಈ ಘನವೆತ್ತ ತ್ಯಾಗದ ಪರಂಪರೆಯನ್ನು ನೀವೂ ಕೂಡಾ ಬಹಳ ಶ್ರದ್ಧೆಯಿಂದ ವ್ರತ ಸ್ವೀಕರಿಸುವಂತೆ ಸ್ವೀಕರಿಸಿದ್ದಿರಬಹುದು. ಏಕೆಂದರೆ ಆ ತಾಯಿಯೇ ನಿಮ್ಮ ಪ್ರತಿದಿನದ ಜೀವಂತ ಮಾದರಿ. ಅವರದೇ ಬಿತ್ತನೆ. ಅವರಿಂದಲೇ ಮೊಳಕೆಯೊಡೆಯುವುದು, ಚಿಗುರೊಡೆಯುವುದು, ಟಿಸಿಲೊಡೆಯುವುದು, ಮೊಗ್ಗರಳಿ ಹೂವಾಗುವುದು. ಇದೊಂದು ಉದಾಹರಣೆಯಷ್ಟೇ. ಯಾವುದನ್ನೋ ಮೌಲ್ಯವೆಂದು ಚಿನ್ನದ ಚೌಕಟ್ಟಿನಲ್ಲಿ ಬರೆದಿಟ್ಟಿರುತ್ತದೆಯೋ ಅದು ನಿಮ್ಮ ವ್ಯಕ್ತಿಗತ ಬಯಕೆಯ, ಉತ್ಕಟ ಬಯಕೆಯ ಮರಣಶಾಸನವಾಗಿರಬಹುದು. ಉತ್ಕಟ ಬಯಕೆಗಳ ಮರಣಶಾಸನಗಳೇ ಅರಿಮೆಯ ಲಕ್ಷಣಗಳು.

ತಂದೆ ತಾಯಿಯರ ಎಷ್ಟೋ ತಾಕಲಾಟಗಳನ್ನು, ತೊಳಲಾಟಗಳನ್ನು, ತಿಕ್ಕಲುತನಗಳನ್ನು ಪರಮಶ್ರದ್ಧೆಯಿಂದ ಮಕ್ಕಳು ಎರವಲು ಪಡೆದಿರುತ್ತಾರೆ. ಅಲ್ಲಿಗೆ ಮನೆಯೇ ಒಂದು ಬಲಿಗಂಬ.ಮನೆಯವರೆಲ್ಲರೂ ಬಲಿಪಶುಗಳು ಸ್ವಯಿಚ್ಛೆಯಿಂದ, ಅನಿವಾರ್ಯವಾಗಿ ಅರಿಮೆಯ ಬಲಿಪಶುಗಳು.

ಮೌಲ್ಯಗಳ ಹೇರುವ ಸಮಾಜ

ಮನೆಯೆಂಬ ಬಾಣಲಿಯಿಂದ ಜಿಗಿದು ಬಂದರೆ ನಿಮಗೆ ಹೊರಗೆ ಸಮಾಜವೆಂಬ ಬೆಂಕಿಯಿದೆ. ವ್ಯಕ್ತಿಯೊಬ್ಬನ ಆಂತರಿಕವಾದ ಉತ್ಕಟ ಬಯಕೆಗಳೇನೇ ಇರಲಿ, ಸಾಮಾಜಿಕ ಕಟ್ಟುಪಾಡುಗಳು, ಸಾಂಸ್ಕೃತಿಕ ನಿರೀಕ್ಷೆಗಳು ಅರಿಮೆಗಳನ್ನು ಬಲಪಡಿಸುತ್ತವೆ.
ಉದಾಹರಣೆಗೆ ನಾನೊಬ್ಬ ಜೈನನೋ, ಬ್ರಾಹ್ಮಣನೋ, ಲಿಂಗಾಯತನೋ ಆಗಿದ್ದರೆ ನನ್ನ ವ್ಯಕ್ತಿಗತವಾದ ಬಯಕೆಗಳೇನೇ ಇರಲಿ. ಚಿಕನ್ ಮಂಚೂರಿಯ ತಿನ್ನಬೇಕೆಂದು ಬಯಸಿದರೆ, ಸಮಾಜ ಅದನ್ನು ವಿಚಿತ್ರವಾಗಿ ಅಥವಾ ವಿಲಕ್ಷಣವಾಗಿ ನೋಡುತ್ತದೆ. “ಬಿಡಪ್ಪಾ ಬ್ರಾಹ್ಮಣರು, ಲಿಂಗಾಯತರೆಲ್ಲಾ ತಿನ್ನಕ್ಕೆ ಶುರು ಮಾಡಿದ್ದರಿಂದ ಮಾಂಸದ ಬೆಲೆ ಏರಿತು” ಎಂದು ತಿನ್ನುವುದನ್ನು ಪರೋಕ್ಷವಾಗಿ ವ್ಯಕ್ತಿಯೊಬ್ಬನ ಆಹಾರದ ಬಯಕೆಯನ್ನು ಖಂಡಿಸುತ್ತಾರೆ.

ಬ್ರಾಹ್ಮಣ ಅಥವಾ ಲಿಂಗಾಯತನು ಮಾಂಸ ತಿನ್ನುವುದಕ್ಕೂ ಬೆಲೆ ಏರಿಕೆಗೂ ಏನೂ ಸಂಬಂಧವಿಲ್ಲದಿದ್ದರೂ ಇವನ್ನು ಕೇಳಬೇಕಾಗುತ್ತದೆ. ಬ್ರಾಹ್ಮಣರ ಅಥವಾ ಜೈನರ ಅಥವಾ ಲಿಂಗಾಯತರ ಸಮುದಾಯವೂ, ಬಳಗವೂ ತಮ್ಮಲ್ಲಿರುವ ಮಾಂಸ ತಿನ್ನುವ ವ್ಯಕ್ತಿಯನ್ನು ಪುರಸ್ಕರಿಸುವುದಿಲ್ಲ. ಅವನೊಬ್ಬ ನೇರವಾಗಿ ಅಲ್ಲದಿದ್ದರೂ ಒಂದು ರೀತಿಯಲ್ಲಿ ಜಾತಿಗೆಟ್ಟವ. ಹಾಗಾಗಿ ಅವನು ಕದ್ದು ತಿನ್ನಬೇಕು. ಅಥವಾ ಅವರ ತಿರಸ್ಕಾರಕ್ಕೆ ಒಳಗಾಗದಿರಲು ತಿನ್ನಬಾರದು.

ಹೆಣ್ಣು ಮಗುವೊಂದರ ಹಣೆಯಲ್ಲಿ ಕುಂಕುಮವಿರದಿದ್ದರೆ ನೀನು ಮುಸಲ್ಮಾನಳಾ ಎನ್ನುವುದು, ಗಡ್ಡವಿಟ್ಟುಕೊಂಡು ಮೀಸೆ ತೆಗೆದ ಪುರುಷನಿಗೆ “ಸಲಾಂ ವಾಲೆಕುಂ” ಎನ್ನುವುದು, ದೇವಸ್ಥಾನಕ್ಕೆ ಅಥವಾ ಮಂಗಳಕಾರ್ಯಕ್ಕೆ ಸೀರೆ, ಇತ್ಯಾದಿ ಮಂಗಳದ್ರವ್ಯಗಳಿಂದ ಅಲಂಕೃತವಾಗಿ ಹೋಗಬೇಕೆನ್ನುವುದು, ಮುತ್ತೈದೆಯಾದವಳು ಹೇಗೆಲ್ಲಾ ಇರಬೇಕೆನ್ನುವುದು ಅಥವಾ ವಿಧವೆಯಾದವಳು ಏನೆಲ್ಲಾ ಬಳಸಬಾರದು ಎನ್ನುವುದು; ಹೀಗೇ, ಸಾಲುಸಾಲಾಗಿ ವ್ಯಕ್ತಿಯ ಆಂತರಿಕ ಬಯಕೆಯನ್ನು ಮೀರಿದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ನಿರೀಕ್ಷೆಗಳನ್ನೆಲ್ಲಾ ವ್ಯಕ್ತಿಯು ಮನ್ನಿಸಬೇಕಾದ ಮೌಲ್ಯವೆಂದು ಅವನಲ್ಲಿ ದ್ವಂದ್ವವನ್ನುಂಟು ಮಾಡುತ್ತಾ ಬಲಿದಾನದರಿಮೆಯನ್ನು ಬಲಿಸುತ್ತದೆ.

ದೌರ್ಬಲ್ಯಕ್ಕೆ ಮೌಲ್ಯದ ಕವಚ

ಸರಿ, ಇನ್ನೊಂದು ಬದಿಯಲ್ಲಿಯೂ ಬಲಿದಾನದರಿಮೆಯು ಬಲಿಯುತ್ತಾ ಬಲಗೊಳ್ಳುವುದನ್ನು ಬಗೆಯಬೇಕು. ಕೆಲವರು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ. ಎದುರಿಸಿ ತಮ್ಮ ಶಕ್ತಿಪ್ರದರ್ಶನ ಮಾಡಿ ತಮ್ಮ ಆಸೆಯನ್ನು ಪ್ರಕಟಗೊಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕೆ ತಮ್ಮ ದೌರ್ಬಲ್ಯಕ್ಕೆ ಮೌಲ್ಯವನ್ನು ಆರೋಪಿಸಿಕೊಂಡು ತಾವು ವಿಧೇಯವಾಗಿ ನಡೆದುಕೊಂಡು ಹೋಗಿಬಿಡುವುದು. ಸುಮ್ಮನೆ ಕೆಲವು ಉದಾಹರಣೆಗಳು ಅಂತ ಹೇಳ್ತೀನಿ. ಆ ಮಾದರಿಯಲ್ಲಿ ಬೇರೆಯದನ್ನು ಗಮನಿಸಿ.

ಶಿಶ್ನದಲ್ಲಿ ನಿಮಿರುವಿಕೆಯ ಸಮಸ್ಯೆ ಇರುವವನು ಅಥವಾ ಷಂಡತನದಿಂದ ಬಳಲುತ್ತಿರುವವನು ತಾನು ಕಾಮವನ್ನು ನಿಗ್ರಹ ಮಾಡಿ ಬ್ರಹ್ಮಚರ್ಯವನ್ನು ಪಾಲನೆ ಮಾಡುತ್ತಿದ್ದೇನೆಂದು ಘೋಷಿಸುತ್ತಾ ಸಂನ್ಯಾಸಿಯಾಗುವುದು. ಅವನ ಸಮಸ್ಯೆಗೆ ಸಂನ್ಯಾಸವೆಂಬ ಆಧ್ಯಾತ್ಮಿಕ ಮೌಲ್ಯದ ಸಮಾಧಾನ. ಅವನು ತನ್ನ ಬಲಿದಾನದರಿಮೆಯನ್ನು ಮೌಲ್ಯಕ್ಕೆ ತಿರುಗಿಸಿಕೊಳ್ಳುವ ಬಗೆ. ತನ್ನಿಂದ ಏನನ್ನೋ ಕಿತ್ತುಕೊಂಡವನಿಗೆ ಎರಡು ತಟ್ಟಿ ವಾಪಸ್ಸು ಕಿತ್ತುಕೊಳ್ಳಲಾಗದವನು ಅವನನ್ನು ಕ್ಷಮಿಸಿದ್ದೇನೆ. ಹೋದರೆ ಹೋಗಲಿ ಎಂಬ ಔದಾರ್ಯವನ್ನು ಪ್ರದರ್ಶಿಸುತ್ತಾ ಮೌಲ್ಯವನ್ನು ಆರೋಪಿಸಿಕೊಳ್ಳುವುದು.

ಪಾಪ, ನಮ್ಮಪ್ಪ ಅಮ್ಮನಿಗೆ ಹೊತ್ತುಹೊತ್ತಿಗೆ ಊಟಕ್ಕೆ ಹವಣಿಸುವುದೇ ದೊಡ್ಡ ಕೆಲಸವಾಗಿರುತ್ತಿತ್ತು. ಇನ್ನು ನನಗೆ ಓದಿಸೋದು, ಇನ್ನೇನೋ ಕಲಿಸೋದು ಹೇಗೆ ಸಾಧ್ಯವಾಗುತ್ತದೆ ಎಂದು ಇನ್ನೊಬ್ಬರನ್ನು ಆರೋಪಿಸುತ್ತಾ ತಮ್ಮನ್ನು ಬಲಿಪಶುವನ್ನಾಗಿಸಿಕೊಂಡು ಕೊರಗುವುದು, ತಮಗೆ ತಾವೇ ಮರುಗುವುದು, ಇತರರಿಂದ ಅನುಕಂಪವನ್ನು ಅಪೇಕ್ಷಿಸುವುದು ಕೂಡಾ ಈ ಅರಿಮೆಯ ಮತ್ತೊಂದು ಮುಖವೇ.

ಅರಿಮೆಗೆ ಪೋಷಕ ಮಾದರಿಗಳು

ಬಲಿದಾನದರಿಮೆಯನ್ನು ಪೋಷಿಸಲು ನಿಮಗೆ ರಾಷ್ಟ್ರೀಯ ನಾಯಕರೂ ಸಿಗುತ್ತಾರೆ. ಆಧ್ಯಾತ್ಮವ್ಯಕ್ತಿಗಳೂ ಸಿಗುತ್ತಾರೆ. ಜೋನ್ ಆಫ್ ಆರ್ಕ್, ಅಸ್ಸಿಸ್ಸಿಯ ಸಂತ ಫ್ರಾನ್ಸಿಸ್, ಗಾಂಧೀಜಿ, ಯೇಸು, ಮದರ್ ಥೆರೆಸಾರೇ ಮೊದಲಾದ ಮಾದರಿಗಳು ಕೂಡಾ ತಮ್ಮನ್ನು ತಾವು ನೋವಿಗೆ ಒಳಪಡಿಸಿಕೊಂಡು ಇತರರ ಸೇವೆಯೇ ತಮ್ಮ ಒಲವು ಎಂಬ ಆದರ್ಶವನ್ನು ಒಡ್ಡಬಲ್ಲವು. ಇಂತಹ ಯಶಸ್ವೀ ಮತ್ತು ಪ್ರಖ್ಯಾತ ಐತಿಹಾಸಿಕ ವ್ಯಕ್ತಿಗಳ ತ್ಯಾಗದ ಮೌಲ್ಯಗಳು ವ್ಯಕ್ತಿಯೊಬ್ಬನ ತ್ಯಾಗದ ಅರಿಮೆಯನ್ನು ಬಲಪಡಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯಲಾಗುವುದಿಲ್ಲ.

ಬಾಲ್ಯದಲ್ಲಿನ ಪ್ರೀತಿ ವಾತ್ಸಲ್ಯಗಳ ಕೊರತೆ, ದೇಹದ ಆಕಾರವು ಸರಿ ಇಲ್ಲ ಎಂಬ ಭಾವ, ಮನೆಯಲ್ಲಿ ಕಠಿಣವಾಗಿ ತೀರ್ಮಾನಕ್ಕೊಳಗಾಗುತ್ತಿದ್ದರೆ ಬಲಿದಾನದರಿಮೆಯು ಮೊಳೆಯುವ ಸಾಧ್ಯತೆಗಳಿರುತ್ತವೆ. ತಂದೆ ತಾಯಿ ಅಥವಾ ಮನೆಯ ಇತರ ಸದಸ್ಯರಿಂದ, ಶಿಕ್ಷಕರಿಂದ, ಸಾಮಾಜಿಕ ಪರಿಸರದಿಂದ, ಓರಗೆಯವರಿಂದ ಮಗುವು ಭಾವನಾತ್ಮಕವಾಗಿ ತಳಮಳಕೊಳಗಾಗುತ್ತಿದ್ದರೆ, ಒತ್ತಡವನ್ನು ಅನುಭವಿಸುತ್ತಿದ್ದರೆ ಈ ಬಲಿದಾನದರಿಮೆಯ ಉದಯವಾಗುವುದು.

ದೇಹಾಲಸ್ಯವಿರುವಾಗ, ಶರೀರದಲ್ಲಿ ಅಸೌಖ್ಯವಿರುವಾಗ ಹೊಂದುವಂತಹ ಒಪ್ಪಲಾರದಂತಹ ಸಂಬಂಧಗಳು ಕೂಡಾ ಈ ಅರಿಮೆಗೆ ಕಾರಣವಾಗಬಹುದು. ಕೆಲವೊಮ್ಮೆ ತಾವು ನಿರ್ಧಾರ ತೆಗೆದುಕೊಳ್ಳಬೇಕಾದಾಗ ನಿರ್ಧಾರ ತೆಗೆದುಕೊಳ್ಳದೇ ಜವಾಬ್ದಾರಿಯಿಂದ ತಪ್ಪಿಸಿಕೊಂಡಿರುತ್ತಾರೆ. ಆ ನೋವು ಅಥವಾ ಬೇಸರವೂ ಕೂಡಾ ‘ಹೋಗತ್ತ, ನನ್ನ ಬಾಳು ಇಷ್ಟೇ’ ಎಂಬ ಧೋರಣೆಯಲ್ಲಿ ಬಲಿದಾನದರಿಮೆಯನ್ನು ಬೆಳೆಸಿಕೊಳ್ಳುತ್ತಾರೆ.

ಇನ್ನೂ ಕೆಲವರಿಗೆ ತಾವೊಬ್ಬ ಮಹಾನ್ ಮುಗ್ಧ ಜೀವಿ, ಭಾವುಕ ಮತ್ತು ಅನುಕಂಪದ ಜೀವಿಯೆಂದು ತೋರಿಸಿಕೊಳ್ಳುವ ತವಕ. ಈ ಆಂತರಿಕ ತವಕದ ಕೊಡುಗೆಯಾಗಿಯೂ ದೊರಕುವುದು ಈ ಮಾರ್ಟಿರ್ ಕಾಂಪ್ಲೆಕ್ಸ್.ಇನ್ನೂ ಕೆಲವರು ತಮ್ಮ ಹೆಣಗುವಿಕೆಯನ್ನು ಉತ್ಪ್ರೇಕ್ಷಿಸಿ ವೈಭವೀಕರಿಸುತ್ತಾರೆ. ಸುಮ್ಮನೆ ಒಂದು ಉದಾಹರಣೆ. ಬೇಗ ಬೇಗ ಊಟಕ್ಕೆ ಬಡಿಸಲು ಹೋದಾಗ ಕಾಲಿಗೆ ಚೇರು ಬಡಿದು ಒಂದು ಸಣ್ಣ ನೋವಾಗುತ್ತದೆ. ಅಯ್ಯೋ ಪಾಪ ಎಂದು ಉಪಚಾರಕ್ಕೆ ಅರ್ಹವಾಗಿಲ್ಲದ್ದಷ್ಟು ಸಣ್ಣ ನೋವು ಅದು. ಅದಕ್ಕೆ ಅವರು ಚೇರಿಗೆ ಮೊಣಕಾಲು ಬಡಿದು, ತಾವು ಬಿದ್ದು, ತಲೆಯು ನೆಲಕ್ಕೆ ಅಪ್ಪಳಿಸಿ, ಒಂದೈದು ನಿಮಿಷ ಮೂರ್ಚಾವಸ್ಥೆಯಲ್ಲಿದ್ದು ಎದ್ದು ಬಂದರಾದರೆ ಒಂದಷ್ಟು ಉಪಚಾರ, ಕನಿಕರ, ಅಯ್ಯೋ ಪಾಪ ಲಭ್ಯವಾಗುವುದು. ಅದಕ್ಕೆ ಉತ್ಪ್ರೇಕ್ಷೆ. ಅದು ಬರಿಯ ನೋವಿಗೆ ಸೀಮಿತವಲ್ಲ. ಅವರು ಪಡುವ ಶ್ರಮಕ್ಕೆ, ಅಥವಾ ಇತರರು ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದಕ್ಕೆ; ಇತರ ವಿಷಯಗಳಿಗೂ ಸಹ.

ಈ ಅರಿಮೆಯುಳ್ಳವರಿಗೆ ಇತರರ ಉದ್ದೇಶಗಳ ಮೇಲೆ ಅನುಮಾನವೂ ಕೂಡಾ ಸಾಮಾನ್ಯ.
ತಾವು ಸರಿಯಾಗಿಯೇ ಇರಬೇಕೆನ್ನುವುದು ಅವರ ಗೀಳು. ತಮ್ಮ ಕೈಯಲ್ಲಿ ಆಗುತ್ತದೋ ಇಲ್ಲವೋ, ಯಾರಾದರೂ ಕೆಲಸವನ್ನು ಮಾಡಿಕೊಡಲು ಕೇಳಿದರೆ “ಹೂ, ಮಾಡುತ್ತೇನೆ” ಎನ್ನುವುದೇ ಅವರ ಮೊದಲ ಉತ್ತರ.
ಕೆಲವೊಮ್ಮೆ ಅವರಿಗೆ ಅನ್ನಿಸುವುದೇನೆಂದರೆ, ಇತರರು ತನ್ನ ಮನಸ್ಸನ್ನು ತಿಳಿದುಕೊಂಡಿದ್ದಾರೆ ಅಥವಾ ತಿಳಿದುಕೊಳ್ಳುತ್ತಾರೆ ಎಂದು. ಇವರಿಂದ ಸಮಸ್ಯೆಗಳಿಗೆ ಪರಿಹಾರವಂತೂ ಎಂದಿಗೂ ಸಿಗುವುದಿಲ್ಲ. ಏಕೆಂದರೆ ಇವರು ನೋಯುವುದರಲ್ಲೇ ಸಂತೋಷಪಡುವವರು. ಒಂದು ವೇಳೆ ಸಮಸ್ಯೆಗೆ ಪರಿಹಾರ ಸಿಕ್ಕಿಬಿಟ್ಟಿತು ಎಂದಿಟ್ಟುಕೊಳ್ಳಿ, ಅದರ ನೆರಳಾಗಿ ಮತ್ತಷ್ಟು ಸಮಸ್ಯೆಗಳನ್ನು ತರುತ್ತಾರೆ. ಅವರು ಮಹಾನ್ ನಾಟಕಕಾರರು. ಪ್ರಶಂಸೆ ಗಿಟ್ಟಿಸಲು, ಗಮನ ಸೆಳೆಯಲು, ಜನರ ದೃಷ್ಟಿಯನ್ನು ತಮ್ಮ ಕಡೆಗೆ ಸೆಳೆಯಲು ನಟಿಸಲೂ ಸೈ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.

ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.

ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.

ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.

ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.

ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.

ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.

ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.

ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.

ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.

ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.

ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.

ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

Trending