ಅಂತರಂಗ
ಅರಿಮೆಯ ಅರಿವಿರಲಿ-20 : ನಾಲಾಯಕ್ ನಾಮಧೇಯ
- ಯೋಗೇಶ್ ಮಾಸ್ಟರ್
ಗಾಳಿಗೆ ಸಿಕ್ಕಿದ ಹದ್ದಿನ ಮರಿಯೊಂದು ಕೆಳಕ್ಕೆ ಬಿದ್ದು ಮೇಲೇರಲಾಗದೇ ಹತ್ತಿರದ ಕೋಳಿ ಸಾಕುವವರ ಹತ್ತಿರಕ್ಕೆ ಸಾಗಿತು. ಹದ್ದಿನ ಮರಿಯು ಕೋಳಿ ಸಾಕುವವರ ಕರುಣೆಗೆ ಪಾತ್ರವಾಗಿ ಕೋಳಿಗಳ ಜೊತೆಗೇ ಗುಟಕಿನ ಪಾಲನ್ನು ಪಡೆಯುತ್ತಾ ಬೆಳೆಯಿತು. ಪರಿಣಾಮ ಕೋಳಿಯಂತೇ ತಿನ್ನುವುದು, ಕೋಳಿಯಂತೇ ನಡೆಯುವುದು, ಕೋಳಿಯಂತೇ ಹೆದರುವುದು, ಕೋಳಿಯಷ್ಟೇ ಹಾರುವುದು.
ಕೋಳಿಪಿಳ್ಳೆಗಳನ್ನು ಎಗರಿಸಿಕೊಂಡು ಹೋಗಲು ಬಂದಿದ್ದ ವಯಸ್ಕ ಹದ್ದೊಂದು ತಮ್ಮ ಜಾತಿಯ ಯುವಕನೊಬ್ಬ ಕೋಳಿಯಂತೆ ವರ್ತಿಸುವುದನ್ನು ಕಂಡು ಅವನನ್ನು ಹಾರಿಸಿಕೊಂಡು ಹೋಗಿ ಹೇಳಿತು, “ಅಯ್ಯೋ ಪೆದ್ದಪ್ಪಾ, ನೀನು ಹದ್ದು. ಆಕಾಶದಲ್ಲಿ ರೆಕ್ಕೆಗಳನ್ನು ಬಿಚ್ಚಿಕೊಂಡು ಆನಂದದಲ್ಲಿ ಹಾರಬೇಕಾದವನು ಕೋಳಿಗಳ ತರ ಇದ್ದೀಯಲ್ಲಾ. ನೋಡು ನನ್ನಂತೆಯೇ ನಿನಗೆ ಕೊಕ್ಕು, ರೆಕ್ಕೆ, ಕಾಲಿನುಗುರು; ಎಲ್ಲಾ ಇದೆ” ಎಂದರೂ ಆ ಯುವ ಹದ್ದು, ನಾನು ಕೋಳಿ ಕೋಳಿ ಎಂದೇ ಜಪಿಸುತ್ತಿತ್ತು. ವಯಸ್ಕ ಹದ್ದು ಅದನ್ನು ಬೆಟ್ಟದ ಮೇಲಿಂದ ತಳ್ಳಿತು. ಅದು ಯುವ ಹದ್ದು ಹೆದರಿಕೆಯಿಂದ ರೆಕ್ಕೆಗಳನ್ನು ಬಡಿಯುವಾಗ ಅದು ಬೀಳದೇ ಹಾರಾಡತೊಡಗಿತು. ತನಗೆ ಆಕಾಶದ ಅವಕಾಶದಲ್ಲಿ ಹಾರಾಡಲು ಶಕ್ತ ಎಂಬ ಸತ್ಯವನ್ನು ಮನಗಂಡಿತು.
ಈ ಕತೆಯಲ್ಲಿ ಅಡಕವಾಗಿರುವ ಅಂಶಗಳನ್ನು ಗಮನಿಸಿ. ಮೊದಲನೆಯದು, ಅನುದ್ದೇಶದಿಂದ ಹದ್ದಿನ ಮರಿಯು ಕೋಳಿಗಳ ಪರಿವಾರವನ್ನು ಸೇರಿದ್ದು. ಎರಡನೆಯದು, ಸತತವಾಗಿ ಕಾಲ ಕಳೆದ ಪರಿಸರದ ಪ್ರಭಾವದಿಂದ ಹದ್ದು ಕೋಳಿಯಾಗಿ ರೂಪುಗೊಂಡಿದ್ದು. ಮೂರನೆಯದು, ಹದ್ದು ತನ್ನ ಸ್ವಾಭಾವಿಕ ಶಕ್ತಿಯನ್ನು ಅರಿಯುವ ಅವಕಾಶವನ್ನೇ ಪಡೆಯದೇ ತನ್ನ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಅದನ್ನೇ ಸತ್ಯ ಎಂದು ತಿಳಿದುಕೊಂಡಿದ್ದು. ನಾಲ್ಕನೆಯದು, ವಯಸ್ಕ ಹದ್ದು, ಯುವ ಹದ್ದಿಗೆ ವಿಷಯವನ್ನು ತಿಳಿಸಿದರೂ ಅದು ಅದನ್ನು ಒಪ್ಪದೇ ಹೋದದ್ದು. ಐದನೆಯದು, ವಯಸ್ಕ ಹದ್ದು ಯುವ ಹದ್ದಿನ ಸಹಜ ಸಾಮರ್ಥ್ಯವನ್ನು ಅರಿತಿದ್ದು, ಬೆಟ್ಟದಿಂದ ತಳ್ಳಿದ್ದು ಮತ್ತು ಅದು ಯಶಸ್ವಿಯಾದದ್ದು.
ತಮ್ಮ ಮುಂದೆ ಹುಟ್ಟಿದ ಮಗು, ತಮ್ಮ ಪಾಲನೆಯಲ್ಲಿ ಕಣ್ಬಿಟ್ಟು, ನಡೆಯುವುದನ್ನು ಕಲಿತ ಕೈಗೂಸು, ಪ್ರತಿಯೊಂದಕ್ಕೂ ತಮ್ಮ ಮೇಲೆ ಅವಲಂಬಿತವಾಗಿರುವ ಮಗುವನ್ನು ಹದ್ದು ಎಂದು ಗುರುತಿಸಲಾಗದ ಬಹಳಷ್ಟು ಕೋಳಿ ಪೋಷಕರು ತಮ್ಮ ನಿರ್ದೇಶನದಂತೆಯೇ ನಡೆಯಬೇಕು, ತಮ್ಮ ಕಣ್ಣಳತೆಯಲ್ಲಿಯೇ ಬೆಳೆಯಬೇಕು, ತಾವು ಹೇಳಿದಷ್ಟೇ ಹಾರಬೇಕು, ಏಕೆಂದರೆ ತಾವೆಲ್ಲಾ ಅಷ್ಟೇ ಹಾರಿರುವುದು, ಅದಕ್ಕಿಂತ ಮೇಲೆ ಹಾರಿದರೆ ಬಿದ್ದು ಹೋಗುವೆ; ಹೀಗೆ ತಮ್ಮದೊಂದು ಅಳತೆಗೋಲಿನ ಪ್ರಕಾರ ಅವರ ಮಕ್ಕಳ ಸಾಮರ್ಥ್ಯವನ್ನು ಅಳೆಯುತ್ತಿರುತ್ತಾರೆ. ಹೀಗೆ ನಿರಂತರವಾಗಿ ಅಳೆಯುವ, ಅಪ್ಪಣೆ ನೀಡುವ ಪರಿಣಾಮದಿಂದ ಮಕ್ಕಳಲ್ಲಿ ಕೀಳರಿಮೆ ಬೆಳೆಯುತ್ತದೆ.
ಹೇಗೋ ಏನೋ ಹುಟ್ಟುವ ಈ ಕೀಳರಿಮೆಯು ಮಕ್ಕಳ ಎಲ್ಲಾ ನಡೆಗಳಲ್ಲಿ ಮೇಲುಗೈಯನ್ನು ಸಾಧಿಸುತ್ತಿರುತ್ತದೆ. ತಮ್ಮ ನಿಜವಾದ ಸಾಮರ್ಥ್ಯವನ್ನು ಅರಿಯದೇ, ಅದನ್ನು ಎಟುಕಿಸಿಕೊಳ್ಳದೇ, ತಮ್ಮನ್ನು ತಾವೇ ಸಂದೇಹಿಸಿಕೊಂಡು, ತಾವು ಖಂಡನೆಗೊಳಗಾಗುತ್ತೇವೆಂಬ ಸಂಶಯದಿಂದ ಮುಕ್ತವಾಗಿ ತೆರೆದುಕೊಳ್ಳದೇ, ತೊಂದರೆಗೊಳಗಾಗುತ್ತೇವೆಂಬ ಭಯದಿಂದ ಹಿನ್ನೆಡೆಯುವುದಕ್ಕೇ ಸದಾ ಸಿದ್ಧವಾಗಿರುವಂತಹ ಅರಿಮೆಯಿದು.
ಸಾಮಾನ್ಯವಾಗಿ ಸತತವಾದ ನಿರುತ್ಸಾಹ ಮತ್ತು ನಿರಾಶೆಗಳ ಪ್ರತಿಫಲವೇ ಕೀಳರಿಮೆ.
ಬಹಳಷ್ಟು ಮತ್ತು ಪೋಷಕರು ಶಿಕ್ಷಕರು ಮಕ್ಕಳಿಗೆ ಕೊಡುವ ಬಿರುದು ನಾಲಾಯಕ್. ಮಕ್ಕಳೂ ಸತತವಾಗಿ ಕೇಳುವ ಈ ನಾಮಧೇಯವನ್ನು ತಮ್ಮದು ಎಂದು ಸ್ವೀಕರಿಸಿಬಿಡುತ್ತಾರೆ. ಒಪ್ಪಿಕೊಂಡಿರುವ ತನ್ನ ನಾಲಾಯಕ್ ಬಿರುದನ್ನು ಉಳಿಸಿಕೊಳ್ಳಲು ಮಗುವಿನ ಅಂತರಾಳ ಹೆಣಗಾಡುತ್ತಿದ್ದರೆ, ಪಟ್ಟ ಕಟ್ಟಿದವರು, ನಾಲಾಯಕ್ ಬಿತ್ತನೆ ಬಿತ್ತಿದವರು ಮಗುವು ಲಾಯಕ್ಕಾಗಿರಬೇಕೆಂದು ಹಟ ಹಿಡಿಯುತ್ತಾರೆ.
ಯಾವ ಮಕ್ಕಳು ತಮ್ಮ ಮನೆಯವರಿಂದ ಅಥವಾ ಶಿಕ್ಷಕರಿಂದ ಸದಾ ಖಂಡನೆಗೆ ಮತ್ತು ನಿಂದನೆಗೆ ಒಳಗಾಗುತ್ತಿರುತ್ತಾರೋ, ಅಥವಾ ಯಾವ ಮಕ್ಕಳು ತಮ್ಮ ಪೋಷಕರು ಅಥವಾ ಶಿಕ್ಷಕರ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂಬುದಾಗಿ ಭಾವಿಸುವಂತಾಗುತ್ತದೆಯೋ, ಅವರು ಕೀಳರಿಮೆಯಲ್ಲಿ ಬಳಲುತ್ತಾರೆ.
ನಿರುತ್ಸಾಹ, ನಿರಾಶೆ, ಖಂಡನೆ, ನಿಂದನೆ, ಖಿನ್ನತೆ, ಹತಾಶತೆ; ಇವುಗಳೆಲ್ಲಾ ಹುಟ್ಟುವುದಕ್ಕೆ ನಮ್ಮ ಸಮಾಜದಲ್ಲಿ ವ್ಯಕ್ತಿಗಳಿಂದ ಹಿಡಿದು, ಕುಟುಂಬವೂ ಒಳಗೊಂಡಂತೆ ಸಾಕಷ್ಟು ಸಾಮಾಜಿಕ ಸಂಸ್ಥೆಗಳು ದಣಿವರಿಯದೇ ಕೆಲಸ ಮಾಡುತ್ತಿರುತ್ತವೆ. ಕೌಟುಂಬ ಹಿನ್ನೆಲೆ, ಸಾಮಾಜಿಕ ಸ್ಥಾನಮಾನ, ಆರ್ಥಿಕತೆ, ವ್ಯಕ್ತಿಗತ ಪ್ರತಿಭೆ ಮತ್ತು ಸಾಮರ್ಥ್ಯಗಳು, ಶಿಕ್ಷಣ, ದೇಹಸ್ವರೂಪ; ಹೀಗೆ ಒಂದೆರಡಲ್ಲ ಕೀಳರಿಮೆಯ ಹುಟ್ಟಿಗೆ ಕಾರಣಗಳು. ವ್ಯಕ್ತಿಗಳು ಮತ್ತು ಸಮಾಜ ಧಾರಾಳವಾಗಿ ಮತ್ತು ಬಹಳ ಔದಾರ್ಯದಿಂದ ಕೊಡುವುದೇ ಟೀಕೆಗಳನ್ನು, ಖಂಡನೆಗಳನ್ನು, ಇಲ್ಲದಿರೆ ಅಪ್ರಮಾಣಿಕ ಮತ್ತು ಹುಸಿ ಪ್ರೋತ್ಸಾಹವನ್ನು. ನಿರ್ದಯ ಟೀಕೆಗಳು ಮತ್ತು ಹುಸಿಹೊಗಳಿಕೆಗಳು ಎರಡೂ ಒಂದಕ್ಕಿಂತ ಒಂದು ಅಪಾಯಕಾರಿ.
ಈ ಕೀಳರಿಮೆಯೆನ್ನುವುದು ಅಪಾಯಕಾರಿ ಎಂಬುದನ್ನು ಯಾಕಿಷ್ಟು ಒತ್ತಿ ಹೇಳಬೇಕೆಂದರೆ ಅದು ನೆಲೆಗೊಳ್ಳುವುದು ವ್ಯಕ್ತಿಯ ಸುಪ್ತಚೇತನದಲ್ಲಿ. ಅದು ವ್ಯಕ್ತಿಯ ವರ್ತನೆ, ಸಾಮರ್ಥ್ಯ, ಭಯ, ಪ್ರತಿಭೆ; ಎಲ್ಲವನ್ನೂ ನಿಯಂತ್ರಿಸುವುದು ಅಂತರಾಳದಿಂದಲೇ.
ತಾನು ಮಾಡುವ ಪ್ರತಿಯೊಂದು ಕೆಲಸದ ಮಹತ್ವವನ್ನು ತಾನೇ ಅನುಮಾನಿಸುವುದು, ಅದು ಸರಿಯಿದೆಯೋ ಇಲ್ಲವೋ ಎಂದು ಸದಾ ಬೇರೊಬ್ಬರ ಅಭಿಪ್ರಾಯದ ಮೇಲೆ ಅವಲಂಬಿತವಾಗಿರುವುದು, ಬೇರೊಬ್ಬರು ಸರಿ ಇದೆ ಎಂದಾಗ ಮಾತ್ರ ಅದನ್ನು ತಾವೂ ಒಪ್ಪುವುದು, ಅದರ ಮೌಲ್ಯವನ್ನು ಅಳೆಯಲು ಅರ್ಹರಲ್ಲದ ವ್ಯಕ್ತಿಗಳು ತಪ್ಪು ಎಂದರೂ ಖಿನ್ನರಾಗಿ ಕೆಲಸವನ್ನು ಅಥವಾ ವಿಷಯವನ್ನು ಕೈ ಬಿಡುವುದು; ಇವುಗಳೆಲ್ಲಾ ಕೀಳರಿಮೆಯ ಲಕ್ಷಣಗಳೇ.
ಮಿಸ್ಟರ್ ಪರ್ಫೆಕ್ಷನ್
ಈ ಕೀಳರಿಮೆಯಿಂದಾಗಿ ವ್ಯಕ್ತಿಗಳು ‘ಮಿಸ್ಟರ್ ಪರ್ಫೆಕ್ಷನ್’ ಆಗುವ ಗೀಳೂ ಬೆಳೆಸಿಕೊಳ್ಳಲು ಪ್ರಾರಂಭಿಸುತ್ತಾರೆ. ಮಿಸ್ಟರ್ ಪರ್ಫೆಕ್ಷನ್‍ಗಳು ಒಳಗಾಗುವ ಒತ್ತಡಗಳು ಊಹಾತೀತ. ಯಾರು ತಮ್ಮ ಕೆಲಸದ ಬಗ್ಗೆ ಬೆರಳು ಮಾಡಿ ಏನು ಅಂದುಬಿಡುತ್ತಾರೋ, ಎಲ್ಲಿ ನಿರ್ಲಕ್ಷಿಸಿಬಿಡುತ್ತಾರೋ, ಖಂಡಿಸಿ ನಿರಾಕರಿಸಿಬಿಡುತ್ತಾರೋ ಎಂಬ ಅವಿರತ ಭಯ ಅವರನ್ನು ಕಾಡುತ್ತಿರುತ್ತದೆ. ಸಾಲದಕ್ಕೆ ತಮ್ಮ ಜೊತೆಯಲ್ಲಿರುವವರ ಮೇಲೂ ಅದನ್ನು ದಬ್ಬುತ್ತಿರುತ್ತಾರೆ.
ಇನ್ನೂ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳೋಣ. ಕೀಳರಿಮೆ ಎಂದ ತಕ್ಷಣವೇ ಇದೊಂದು ಮಹಾ ಮನೋರೋಗವೆಂದೇನೂ ಅಂದುಕೊಳ್ಳುವಷ್ಟಿಲ್ಲ. ಏಕೆಂದರೆ, ಎಲ್ಲರಿಗೂ ತಾವು ಮಾಡುವ ಕೆಲಸವೆಲ್ಲಿ ಕೆಡುವುದೋ, ಅಥವಾ ಮಾಡಲಾಗದೇ ಹೋಗುವುದೋ ಎಂಬ ಆತಂಕ ಇದ್ದೇ ಇರುತ್ತದೆ. ಈ ಆತಂಕ ಇರುವ ಹೊತ್ತಿಗೆ ಎಚ್ಚರಿಕೆಯಿಂದ ಕೆಲಸ ಮಾಡಲೂ ಸಾಧ್ಯ. ಕೆಲಸಗಳು ಕೆಡದಿರಲು ಸಾಧ್ಯ. ಆದರೆ ಇದು ಗೀಳಾಗಿ ಪರಿಣಮಿಸುವುದರ ಬಗ್ಗೆ ಅಥವಾ ಅರಿಮೆಯಾಗಿ ಮನಸ್ಸಿನಾಳದಲ್ಲಿ ಉಳಿದು ಕೆಲಸವನ್ನೇ ಮಾಡಲಾಗದೇ ದುರ್ಬಲರನ್ನಾಗಿಸುವುದರ ಬಗ್ಗೆ ಗಮನವನ್ನು ಕೇಂದ್ರೀಕರಿಸಬೇಕಾಗಿರುವುದು. ಆತಂಕ, ಭಯ, ಹಿಂಜರಿಕೆ ಇತ್ಯಾದಿಗಳೆಲ್ಲಾ ಆರೋಗ್ಯವಂತ ಮನಸ್ಸಿನ ಲಕ್ಷಣಗಳೇ. ಆದರೆ, ಅದು ಮುನ್ನಡೆಯಲು ಬಿಡದೇ ಹೋಗುತ್ತದೆ ಎಂದಾಗ ಮಾನಸಿಕ ಸಮಸ್ಯೆಯಾಗಿ ಪರಿಣಮಿಸುತ್ತದೆ.
ಕೀಳರಿಮೆಯ ಬಗೆಗಳು
ಈ ಕೀಳರಿಮೆಗಳು ಹುಟ್ಟುವ ಮತ್ತು ಪ್ರಭಾವಿಸುವ ಮೂಲಗಳನ್ನು ಆಧರಿಸಿಕೊಂಡು ಅವನ್ನು ಎರಡು ಬಗೆಯಾಗಿ ಗುರುತಿಸಬಹುದು. ಪ್ರಾರಂಭಿಕ ಕೀಳರಿಮೆ ಮತ್ತು ಪ್ರಭಾವಿತ ಕೀಳರಿಮೆ. ಒಬ್ಬ ವ್ಯಕ್ತಿಯ ಪ್ರಾರಂಭಿಕ ಕೀಳರಿಮೆ ಹುಟ್ಟು ಅವನ ಬಾಲ್ಯದಲ್ಲಿಯೇ. ಅವನು ಸ್ವಾಭಾವಿಕವಾಗಿ ಸಣ್ಣಗೆಯೋ, ದೈಹಿಕವಾಗಿ ದುರ್ಬಲನಾಗಿಯೋ, ಬುದ್ಧಿಮತ್ತೆಯಲ್ಲಿ ಅಷ್ಟು ಚುರುಕಿಲ್ಲದವನಾಗಿಯೋ ಇದ್ದಿರಬಹುದು. ಆಗ ಅದನ್ನು ಪದೇ ಪದೇ ಆತನ ಗಮನಕ್ಕೆ ತರುವುದೇ ಅಲ್ಲದೇ ಅದನ್ನು ಕೇವಲವಾಗಿ ಕಾಣುವುದು, ಅಪಹಾಸ್ಯ ಮಾಡುವುದು, ಖಂಡಿಸುವುದು, ನಿಂದಿಸುವುದನ್ನು ಮಾಡುವಾಗ ಅದು ಅರಿಮೆಯಾಗಿ ಬೆಳೆಯುತ್ತದೆ.
ಒಬ್ಬರಿಗೆ ಮತ್ತೊಬ್ಬರನ್ನು ಹೋಲಿಸುವುದು, ಮತ್ತೊಬ್ಬರ ಸಾಧನೆಯನ್ನು ಮಾದರಿಯಾಗಿ ಮುಂದಿಡುವುದು, ಅತಿ ನಿರೀಕ್ಷೆಗಳನ್ನು ಮುಂದಿಡುವುದು; ಇವೆಲ್ಲವೂ ಕೂಡಾ ಬಾಲ್ಯದಲ್ಲಿ ಮಕ್ಕಳ ಮೇಲೆ ಮಾಡುವ ದಾಳಿಗಳೇ. ಇನ್ನೂ ಕ್ರೂರವೆಂದರೆ, ಒಬ್ಬನ ದೈಹಿಕ ಸ್ವರೂಪವನ್ನು ತಮ್ಮ ಹಾಸ್ಯಕ್ಕೆ ಮತ್ತು ಕುರೂಪತನದ ದೃಷ್ಟಿಗೆ ಬಳಸಿಕೊಳ್ಳುವುದು. ಕರಿಯ, ಕೆಂಚ, ಸಣಕಲ, ಹಲ್ಲುಬ್ಬ, ಬಾಂಡ್ಲಿ, ಡುಮ್ಮ, ಕುಂಟ, ಕುರುಡ, ಕೆಪ್ಪ; ಇತ್ಯಾದಿ.
ಇವೊಂದು ಕಡೆ ಇರಲಿ. ಒಬ್ಬನ ಅಸಹಾಯಕತೆ ಮತ್ತು ಅವಲಂಬನೆ ಕೂಡಾ ಅರಿಮೆಯ ಹುಟ್ಟಿಗೆ ಕಾರಣವಾಗುತ್ತದೆ. ತಿರುಬೋಕಿ, ದರಿದ್ರ, ಗತಿಗೆಟ್ಟವನು; ಇವುಗಳೂ ಕೂಡಾ ಅವನ ಸ್ಥಿತಿಗತಿಯ ಕಾರಣ ಅವನು ಎತ್ತರಕ್ಕೆ ಏರಲಾಗದು, ಅವನ ಸಾಮರ್ಥ್ಯ ಮತ್ತು ಪ್ರತಿಭೆಗಳು ಬೆಳಕಿಗೆ ಬರಲಾಗದು ಎಂಬ ಅರಿಮೆಯನ್ನು ಗಟ್ಟಿಗೊಳಿಸುತ್ತದೆ.
ಹಾಗಿರುವುದಕ್ಕೆಯೇ ಬಡತನದಲ್ಲಿರುವವರು ವಿದ್ಯಾವಂತರಾದರೆ, ತರಕಾರಿ ಮಾರುವವನ ಮಗಳು ಉನ್ನತ ಸ್ಥಾನ ಪಡೆದು ಚಿನ್ನದ ಪದಕವನ್ನು ಪಡೆದರೆ ಅತ್ಯುನ್ನತ ಸಾಧನೆ ಎಂದು ಪರಿಗಣಿಸುವುದು. ಏಕೆಂದರೆ ಮೇಲುಕೀಳುಗಳ ಸ್ಥಾನಮಾನಗಳನ್ನು ಸೃಷ್ಟಿಸಿರುವ ಸಮಾಜವು ಅಂತವರಿಗೆಲ್ಲಾ ಕೀಳರಿಮೆಯನ್ನು ಹುಟ್ಟಿಹಾಕಿದೆ. ಅದನ್ನು ಮೀರಿ ಅವರು ಬೆಳೆದರೆ, ಸಾಧಿಸಿದರೆ ಮಹತ್ವವೆಂದು ಪರಿಗಣಿಸುವರು. ನಿಜ ಹೇಳಬೇಕೆಂದರೆ, ಆ ರೀತಿ ಶಿಕ್ಷಣ ಪಡೆಯುವುದಾಗಲಿ, ಉನ್ನತಿಯನ್ನು ಸಾಧಿಸುವುದಾಗಲಿ ಎಲ್ಲರಿಗೂ ಸಾಧ್ಯವಾಗಬೇಕು. ಯಾರೋ ಕೆಲವೇ ವ್ಯಕ್ತಿಗಳಿಗಲ್ಲ. ಎಲ್ಲರಿಗೂ ಶಿಕ್ಷಣ ಬೇಕು. ಎಲ್ಲರೂ ಮಾನಸಿಕವಾಗಿ ಸದೃಢರಾಗಿರಬೇಕು. ಎಲ್ಲರೂ ಆರೋಗ್ಯಕರವಾದಂತಹ ಪರಿಸರವನ್ನು ರೂಪಿಸಿಕೊಂಡು ಉನ್ನತಿಗೇರಬೇಕು.
ಆದರೆ ಸಾಮಾನ್ಯವಾಗಿ ಕೀಳರಿಮೆಗೆ ಬಲಿಯಾಗುವವರೇ ಸಾಮಾನ್ಯವಾಗುವುದರಿಂದ ಅದನ್ನು ಮೀರಿರುವವರು ಸಾಧಕರನ್ನಾಗಿ ಸಮಾಜವು ಹಾಡಿ ಹೊಗಳುತ್ತದೆ. ಆ ಹೊಗಳಿಕೆ ಅವರು ಅರ್ಹರೇ. ಅದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಸಾಮಾಜಿಕ ಪರಿಸರವು ಸೃಷ್ಟಿಸುವ ಕೀಳರಿಮೆಗೆ ಅವರು ಬಲಿಪಶುಗಳಾಗದೇ ಶಕ್ತಿಶಾಲಿಗಳಾಗಿದ್ದಕ್ಕೆ. ಆದರೆ ಇಲ್ಲಿ ನನ್ನ ಆಕ್ಷೇಪವೇನೆಂದರೆ ಸಮಾಜವು ಹುಟ್ಟುಹಾಕುವ ಅರಿಮೆಯದ್ದು. ನಮ್ಮ ಸಮಾಜವಿದೆಯಲ್ಲಾ, ಅದು ಕಾಂಪ್ಲೆಕ್ಸುಗಳ ಕಾಂಪ್ಲೆಕ್ಸು.
ನಾಲಾಯಕ್ ವಯಸ್ಕ
ಇನ್ನು ವಯಸ್ಕನೊಬ್ಬನು ತಾನು ಬಯಸಿದ್ದ ಎತ್ತರವನ್ನು ಏರಲಾಗದೇ ಹೋದಾಗ, ಉದ್ಯೋಗದಲ್ಲಿ ಸದೃಢತೆಯನ್ನು ಕಾಯ್ದುಕೊಳ್ಳದೇ ಹೋದಾಗ, ಅಗತ್ಯವಿರುವಷ್ಟು ಆರ್ಥಿಕತೆಯಲ್ಲಿ ಸ್ವಾವಲಂಬಿಯಾಗದೇ ಹೋದಾಗ, ತನ್ನ ಸುರಕ್ಷತೆಯಲ್ಲಿ ಅಭದ್ರತೆ ಕಾಡುವಾಗ, ತನ್ನ ಬಯಕೆಗಳನ್ನು ಕೊರತೆಗಳಿಂದಾಗಿ ತ್ಯಾಗ ಮಾಡುವಂತಾದಾಗ, ತನ್ನನ್ನು ಮತ್ತು ತನ್ನ ಕುಟುಂಬದವರ ಅಗತ್ಯಗಳನ್ನು ಪೂರೈಸುವುದರಲ್ಲಿ ವಿಫಲರಾದಾಗ, ತಮ್ಮ ಕನಸುಗಳು ನನಸಾಗದೇ ಹೋದಾಗ ನಾಲಾಯಕ್ ಆಗಿ ಎರಡನೇ ಬಗೆಯ ಪ್ರಭಾವಿಕ ಕೀಳರಿಮೆ ಹುಟ್ಟುವುದು. ಇದಕ್ಕೇನೂ ವಿವರಣೆ ಬೇಕಾಗಿಲ್ಲ. ನೇರವಾಗಿ ತಿಳಿಯುತ್ತದೆ. ಗಣಿತದಲ್ಲಿ ಸರಿಯಾಗಿ ಲೆಕ್ಕಗಳನ್ನು ಮಾಡಲು ಬಾರದ ಬಾಲಕ ಅದಕ್ಕೆ ಸಂಬಂಧವೇ ಇರದಂತಹ ಕಾಂಪೌಂಡ್ ಹತ್ತುವುದರಲ್ಲಿ ವಿಫಲನಾಗುತ್ತಾನೆ. ಕಾಗುಣಿತ ತಪ್ಪುಗಳನ್ನು ಮಾಡುವ ಮನುಷ್ಯ ಯಾರೋ ಒಬ್ಬರನ್ನು ಮಾತಾಡಿಸಿ ಅವರಿಗೇನೋ ಹೇಳಿ ಬರಲು ಬೇಕಾದ ಅಲ್ಪ ಪ್ರಮಾಣದ ಆತ್ಮವಿಶ್ವಾಸವನ್ನೂ ಕಳೆದುಕೊಂಡಿರುತ್ತಾರೆ. ಅಷ್ಟು ಕೇಡಿನ ಒಳಸುಳಿಗಳನ್ನು ಹೊಂದಿರುವವು ಈ ಕೀಳರಿಮೆಗಳು. ಅವೆಲ್ಲಾ ಸರಿ, ಇವುಗಳೀಗಾಗಲೇ ಇದ್ದರೆ ಮಾಡುವುದೇನು? ಅವುಗಳನ್ನು ಮಕ್ಕಳಲ್ಲಿ ತಲೆದೋರದಂತೆ ಮಾಡುವುದು ಹೇಗೆ ಇತ್ಯಾದಿಗಳನ್ನು ಗಮನಿಸಬೇಕಾಗಿದೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ6 days agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
-
ದಿನದ ಸುದ್ದಿ4 days agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
-
ದಿನದ ಸುದ್ದಿ17 hours agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ


