ಅಂತರಂಗ
ಅರಿಮೆಯ ಅರಿವಿರಲಿ-55 : ಭಯಗಳು ಭಾವಗಳಾಗೆ
- ಯೋಗೇಶ್ ಮಾಸ್ಟರ್
ಆಲೋಚನೆಗಳಿಂದ ಭಾವನೆಗಳೋ ಅಥವಾ ಭಾವನೆಗಳಿಂದ ಆಲೋಚನೆಗಳೋ; ಚರ್ಚೆ ಒಂದೊಟ್ಟಿಗಿರಲಿ. ಆದರೆ ವ್ಯಕ್ತಿಯೊಬ್ಬನು ತನ್ನತನದ ಬದ್ಧತೆಯಿಂದ ತನಗೆ ಎದುರಾಗುವ ಸಂಗತಿ, ವ್ಯಕ್ತಿ ಮತ್ತು ಸನ್ನಿವೇಶಗಳನ್ನು ಹೇಗೆ ಗ್ರಹಿಸುತ್ತಾನೆ? ಅದು ಮುಖ್ಯ. ಆ ಗ್ರಹಿಕೆಯಿಂದಲೇ ಆಲೋಚನೆಗಳು ಮೂಡುವವು. ಭಾವನೆಗಳು ಉಂಟಾಗುವವು.
ಈಗ ಹುಟ್ಟುವ ಒಂದು ಬಗೆಯ ಆಲೋಚನೆಗೆ ಅಂದೆಂದೋ ಬಿತ್ತಿರುವ ಆಲೋಚನೆಯು ಬೀಜವಾಗಿ ಮೊಳೆದಿರುತ್ತವೆ. ಇರಲಿ, ಮನುಷ್ಯನ ಮೂಲ ಪ್ರವೃತ್ತಿಗಳು ಆಲೋಚನೆಗಳಿಗೆ ಪ್ರೇರೇಪಿಸುತ್ತವೆ. ಹಾಗೆಯೇ ಆಲೋಚನೆಗಳೂ ಆ ಪ್ರವೃತ್ತಿಗಳನ್ನು ಪ್ರೇರೇಪಿಸುತ್ತವೆ.
ಭಾವನೆಗಳು ಆಲೋಚನೆಗಳನ್ನು, ಆಲೋಚನೆಗಳು ಭಾವನೆಗಳನ್ನು, ಇವೆರಡೂ ಪ್ರವೃತ್ತಿಗಳನ್ನು, ಪ್ರವೃತ್ತಿಗಳು ಇವೆಲ್ಲವನ್ನೂ ಪ್ರೇರೇಪಿಸುತ್ತಿರುತ್ತವೆ. ಒಟ್ಟಾರೆ, ಮನಸ್ಸೆಂಬ ತರಂಗವಿದೆಯಲ್ಲಾ ಅದು ಎಲ್ಲದಕ್ಕೂ ವಾಹಕವಾಗುತ್ತದೆ, ಮಿಡಿಯುತ್ತದೆ ಮತ್ತು ಅಲೆಯಾಗುತ್ತದೆ.
ಆತಂಕಗಳ ಪ್ರಸಂಗಗಳು
ವೇದಿಕೆಯ ಮೇಲೆ ಮಾತಾಡಿ ರೂಢಿ ಇಲ್ಲದಿರುವಾಗ ಅಥವಾ ಮಾತಾಡುವ ವಿಷಯದಲ್ಲಿ ಗೊಂದಲ ಇರುವಾಗ ಅಥವಾ ಸ್ಪಷ್ಟತೆ ಇಲ್ಲದಿರುವಾಗ ಅಥವಾ ಬಹಳಷ್ಟು ಜನ ಸೇರಿರುವ ಸಭೆಯನ್ನು ಎದುರಿಸುವ ಭಯವಿರುವಾಗ ವೇದಿಕೆಗೆ ಹೋಗುವಾಗ ಅಥವಾ ಹೋಗಿ ನಿಂತಾದ ಮೇಲೆ ಹೊಟ್ಟೆಯಲ್ಲಿ ಏನೋ ಒಂದು ತರ ಆಗುತ್ತಿರುತ್ತದೆ.
ಕೆಲವೊಮ್ಮೆ ಧಾರಾಕಾರವಾಗಿ ಬೆವರು ಸುರಿಯುತ್ತಿರುತ್ತದೆ. ಮತ್ತೂ ಕೆಲವೊಮ್ಮೆ ಹೇಳಬೇಕಾದುದೆಲ್ಲಾ ಮರೆತೇ ಹೋಗತ್ತೆ. ನಾಲಿಗೆ ತೊದಲುತ್ತದೆ, ಗಂಟಲು ಒಣಗುತ್ತದೆ. ಕೈ ಕಾಲುಗಳು ನಡುಗುತ್ತಿರುತ್ತದೆ. ಹಾಗಾಗುವುದು ಏಕೆ?
ನಿಮ್ಮ ಮನೆಯವರೋ ಸ್ನೇಹಿತರೋ ಅದ್ಯಾವುದೋ ಸ್ಥಳಕ್ಕೆ ಹೋಗಿದ್ದಾರೆ. ನಿಮಗೆ ಆ ಸ್ಥಳದಲ್ಲಿ ದೊಡ್ಡ ಗಲಭೆಯಾಗಿದೆ, ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ, ವಾಹನಗಳಿಗೆ ಕಲ್ಲು ತೂರುತ್ತಿದ್ದಾರೆ ಎಂದೆಲ್ಲಾ ಸುದ್ಧಿ ಬರುತ್ತದೆ. ನೀವು ಸಂಪರ್ಕಿಸಲು ಯತ್ನಿಸಿದರೆ ನಿಮ್ಮವರ ಫೋನ್ ಸ್ವಿಚ್ ಆಫ್ ಆಗಿದೆ ಅಥವಾ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂದು ಕೇಳುತ್ತಿರುತ್ತದೆ. ಆಗ ಹೊಟ್ಟೆಯಲ್ಲಿ ಸಂಕಟ ಪ್ರಾರಂಭವಾಗುತ್ತದೆ.
ಕೆಲವೊಮ್ಮೆ ಅದು ವಿಪರೀತಕ್ಕೆ ಹೋಗಿ ಮಲ ಮೂತ್ರ ವಿಸರ್ಜನೆಗೆ ಅವಸರವಾಗುತ್ತದೆ. ಒಮ್ಮೆ ಹೋಗಿ ಬಂದರೂ ಮತ್ತೆ ಮತ್ತೆ ಹೋಗುವಂತಾಗುತ್ತದೆ. ಏಕೆ?
ತಡೆಯಲಾರದಷ್ಟು ಬೇಸರವಾಗಿದೆ. ಕೋಪ ಬಂದಿದೆ ಅಥವಾ ಆತಂಕವಾಗಿದೆ ಎಂದರೆ ಉಸಿರಾಟ ವಿಪರೀತ ಏರಿಳಿಯುತ್ತಿರುತ್ತದೆ. ಬೆವರುತ್ತಿದೆ. ಕೈ ಕಾಲುಗಳು ನಡುಗುತ್ತವೆ. ಏನು ಮಾಡಬೇಕೆಂದು ತೋಚುವುದಿಲ್ಲ. ಹೀಗೇಕಾಗುತ್ತದೆ?
ನಮಗೆ ಇಷ್ಟವಾದವರೊಬ್ಬರು ಯಾವುದೋ ಊರಿನಿಂದ ಬರುತ್ತಿದ್ದಾರೆ. ನಮ್ಮ ಪ್ರೀತಿಪಾತ್ರರು ನಮಗಾಗಿ ಬರುತ್ತಾರೆ. ಯಾವುದೋ ಹಬ್ಬ. ಕೆಲಸಕ್ಕೆ ರಜೆ ಹಾಕಿ ಎಲ್ಲರೊಟ್ಟಿಗೆ ಮನೆಯಲ್ಲಿರುತ್ತೇವೆ. ಉತ್ಸಾಹ ಮತ್ತು ಆನಂದವಿರುವಾಗ ಮೈ ಮನಸ್ಸು ಪ್ರಫುಲ್ಲವಾಗಿರುತ್ತದೆ. ಇಷ್ಟಪಟ್ಟಿರುವ ಹೊಸ ಬಟ್ಟೆಯೊಂದನ್ನು ಹಾಕಿಕೊಂಡಾಗ ನಮ್ಮಲ್ಲಿ ಉಂಟಾಗುವ ಹುರುಪನ್ನು ಗಮನಿಸಿ.
ಅಂದು ಹೆಚ್ಚು ಕೆಲಸ ಮಾಡಿದರೂ, ಹೆಚ್ಚು ಹೆಚ್ಚು ಓಡಾಡಿದರೂ ಆಯಾಸವಿಲ್ಲ. ಅಂದೇನೋ ಹೊಸಬಲ. ಅದೆಲ್ಲೆಂದ ಬರುವುದು?
ಕೋಪ ಬರುವುದು, ಬೇಜಾರಾಗುವುದು, ಸಂತೋಷವಾಗುವುದು, ಭಯವಾಗುವುದು, ಆತಂಕವಾಗುವುದು; ಇವೆಲ್ಲವೂ ಮನಸ್ಸಿಗೆ ಮತ್ತು ಭಾವನೆಗಳಿಗೆ ಸಂಬಂಧಪಟ್ಟಿರುವುದು. ಆದರೆ ಅದರ ಪರಿಣಾಮವು ದೇಹದ ಮೇಲೂ ಆಗುತ್ತಿರುತ್ತದೆ. ಮನಸ್ಸಿನ ಅಧೀನ ದೇಹವೋ? ಅಥವಾ ದೇಹದ ಭಾಗವು ಮನಸ್ಸಿನದೋ? ಹೇಗಾದರೂ ಆಲೋಚಿಸಿ.
ಆದರೆ ಒಂದು ವಿಷಯ ನಿಜ. ಮನಸ್ಸು ಸಂತೋಷಗೊಂಡಾಗ ದೇಹದಲ್ಲಿ ಕೆಲವು ಬಗೆಯ ರಸಗಳನ್ನು ಉತ್ಪತ್ತಿ ಮಾಡುತ್ತದೆ. ಹಾಗೆಯೇ ಖೇದಗೊಂಡಾಗ, ದುಃಖಿತರಾದಾಗ, ಆತಂಕಗೊಂಡಾಗ, ಕೋಪಗೊಂಡಾಗಲೂ ಹಾಗೆಯೇ ಕೆಲವು ಬಗೆಯ ರಸಗಳು ಉತ್ಪತ್ತಿಯಾಗುತ್ತದೆ. ಹಾಗೆ ಉತ್ಪತ್ತಿಯಾದ ರಸಗಳ ರಾಸಾಯನಿಕ ಕ್ರಿಯೆಗಳು ದೇಹದ ಮೇಲೆ ಪರಿಣಾಮವನ್ನು ಬೀರುತ್ತದೆ. ಈ ರಸಗಳು ಹೆಚ್ಚುಹೆಚ್ಚಾಗಿ ಸ್ರವಿಸುತ್ತಿದ್ದರೆ, ರಾಸಾಯನಿಕ ಕ್ರಿಯೆಯು ತೀವ್ರವಾದರೆ ಸಹಜವಾಗಿ ದೇಹದ ಮೇಲೆಯೂ ಪರಿಣಾಮವನ್ನು ಬೀರುತ್ತದೆ.
ಆತಂಕ, ಉದ್ವೇಗ, ಉದ್ರೇಕಗಳು ಹೃದಯದ ಬಡಿತವನ್ನು ಏರಿಸುತ್ತದೆ. ಸಿಕ್ಕಾಪಟ್ಟೆ ವೇಗವಾಗಿ ಹೊಡೆದುಕೊಳ್ಳಲು ಆರಂಭಿಸುತ್ತದೆ. ರಕ್ತದ ಒತ್ತಡ ಏರುತ್ತದೆ. ರಕ್ತ ಸಂಚಲನ ವೇಗವಾಗುತ್ತದೆ. ವಾಕರಿಕೆ ಬರುವುದು, ಕೆಲವೊಮ್ಮೆ ವಾಂತಿಯಾಗುವುದೂ ಉಂಟು. ನಡುಕ, ಬೆವರುವಿಕೆ, ಬಾಯಿ ಒಣಗುವುದು, ಎದೆಯಲ್ಲಿ ನೋವು, ತಲೆ ನೋವು, ಹೊಟ್ಟೆಯಲ್ಲಿ ಹಿಂಡಿದಂತೆ ನೋವು ಮತ್ತು ಉಸಿರಾಟದಲ್ಲಿ ವಿಪರೀತವಾಗಿ ಏರಿಳಿತ.
ಮೆದುಳು ಆತಂಕವನ್ನು ಗ್ರಹಿಸಿ ಅಥವಾ ಉದ್ವೇಗಗೊಂಡು ದೇಹದ ಇತರ ಭಾಗಗಳಿಗೆ ತನ್ನ ಆತಂಕದ ಸಂದೇಶಗಳನ್ನು ಕಳುಹಿಸುತ್ತದೆ. ಅದರಂತೆ ದೇಹದ ಇತರ ಭಾಗಗಳೂ ಕೂಡಾ ವರ್ತಿಸುತ್ತವೆ. ಈ ಮನೋದೈಹಿಕ ವ್ಯತ್ಯಾಸವು ಬಹಳಷ್ಟು ಸಲ ಸಾಂದರ್ಭಿಕವಾಗಿ ಎದುರಿಸುವ ಸನ್ನಿವೇಶಕ್ಕೆ ಅನುಗುಣವಾಗಿ ಇರುತ್ತದೆ.
ಆಗ ಬರುವ ಶಾರೀರಿಕ ಸಮಸ್ಯೆ ಸನ್ನಿವೇಶವು ಬದಲಾಗುತ್ತಿದ್ದಂತೆ, ವಾತಾವರಣವು ತಿಳಿಯಾಗುತ್ತಿದ್ದಂತೆ ಬಂದಂತೆಯೇ ಹೊರಟೂ ಹೋಗುತ್ತದೆ. ಆದರೆ, ಕೆಲವರಿಗೆ ಕೋಪಗೊಳ್ಳುವುದು ಅಥವಾ ಆತಂಕಗೊಳ್ಳುವುದು, ಖಿನ್ನತೆಗೆ ಒಳಗಾಗುವುದು, ನಕಾರಾತ್ಮಕವಾಗಿಯೇ ಚಿಂತಿಸುವುದು, ಏನಾಗುತ್ತದೋ, ಏನನ್ನು ಎದುರಿಸಬೇಕೋ ಎಂದು ಭಯದಲ್ಲಿಯೇ ಇರುವುದು ವ್ಯಕ್ತಿತ್ವದ ಭಾಗವಾಗಿಟ್ಟಿರುತ್ತದೆ.
ಆಗ ಅವರು ಅವರ ರಕ್ತದೊತ್ತಡವನ್ನು ಸದಾ ಹೊಂದುತ್ತಿರುತ್ತಾರೆ. ಯಾವಾಗಲೂ ಏರಿಳಿತಗಳಾಗುತ್ತಿರುತ್ತದೆ. ಇದರಿಂದ ರಕ್ತದೊತ್ತಡದಿಂದ ಉಂಟಾಗುವ ರೋಗಗಳನ್ನು ಬಳುವಳಿಯಾಗಿ ಪಡೆಯುತ್ತಾರೆ. ಮೆದುಳಿಗೆ ಮತ್ತು ಹೃದಯಕ್ಕೆ ಸಂಬಂಧಪಟ್ಟಂತಹ ತೊಂದರೆಗಳನ್ನು ಪರಿಣಾಮಗಳಾಗಿ ನೋಡಬೇಕಾಗುತ್ತದೆ.
ಕೆಲವರು ಹೇಳುತ್ತಿರುತ್ತಾರೆ, ಅವರಿಗೆ ಬ್ಲಡ್ ಪ್ರೆಷರ್ ಇದೆ ಅದಕ್ಕೆ ಹೆಚ್ಚು ಕೋಪ ಎಂದು. ಆದರೆ ಅದು ಹೀಗೂ ಇರಬಹುದು. ಅವರಿಗೆ ಕೋಪಗೊಳ್ಳುವುದು, ಆತಂಕಗೊಳ್ಳುವುದು ಸತತವಾದ ಅಭ್ಯಾಸವಾಗಿವುದರಿಂದ ರಕ್ತದೊತ್ತಡವು ಖಾಯಿಲೆಯಾಗಿ ಪರಿಣಮಿಸಿದೆ ಎಂದು.
ಏನೇ ಆಗಲಿ, ವಂಶವಾಹಿನಿಯಿಂದ, ಬೇರೆ ಕಾರಣಗಳಿಂದ ಬರುವ ಕಾಯಿಲೆಗಳನ್ನೂ ಕೂಡಾ ಮನೋಭಾವನೆಗಳ ಮತ್ತು ವರ್ತನೆಗಳ ಸರಿಯಾದ ನಿಯಂತ್ರಣ ಮತ್ತು ತರಬೇತಿಯಿಂದ ವಾಸಿ ಮಾಡಲಾಗದಿದ್ದರೂ ಉಲ್ಬಣಗೊಳ್ಳದಿರುವಂತೆ ನೋಡಿಕೊಳ್ಳಬಹುದು.
ಮನೋದೈಹಿಕ ಸಮಸ್ಯೆಗಳು
ಕೌಟುಂಬಿಕವಾಗಿ, ವೃತ್ತಿಯಲ್ಲಿ, ಸಾಮಾಜಿಕವಾಗಿ, ವ್ಯಕ್ತಿಗತವಾಗಿ ಅದೆಷ್ಟೇ ಒತ್ತಡಗಳಿದ್ದರೂ, ಆತಂಕಗಳಿದ್ದರೂ ಅವುಗಳನ್ನು ನೋಡುವ ದೃಷ್ಟಿ ಮತ್ತು ಅವುಗಳೊಂದಿಗೆ ಕೆಲಸ ಮಾಡುವ ಮುಕ್ತ ಮನಸ್ಥಿತಿಯನ್ನು ಹೊಂದಬೇಕು. ಆಗ ಅವು ರೋಗಗಳಾಗಿ ತಿರುಗುವುದಿಲ್ಲ. ಹೊರಗಿನ ಕೆಲಸಗಳು ಎಷ್ಟೇ ಒತ್ತಡಗಳನ್ನು ಹೇರಿದರೂ ಮನಸ್ಸಿನ ಒತ್ತಡಕ್ಕೆ ಬಲಿಯಾಗಲೇಬಾರದು. ಇದನ್ನು ಸ್ಪಷ್ಟವಾಗಿ ತಿಳಿಯೋಣ.
ಮನಸ್ಸಿನ ಸ್ಥಿತ್ಯಂತರಗಳ ನಿರೋಧಕ ಶಕ್ತಿಯು ಶರೀರದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ದುರ್ಬಲ ಮನಸ್ಸಿನವರಿಗೆ ರೋಗ ನಿರೋಧಕ ಶಕ್ತಿಯೂ ಕೂಡಾ ಪರಿಣಾಮಕಾರಿಯಾಗಿ ಕೆಲಸ ಮಾಡಲು ಹಿಂದೆ ಮುಂದೆ ನೋಡುತ್ತದೆ. ಖಿನ್ನತೆಗೊಳಗಾಗುವ ಅಥವಾ ಆತಂಕಕ್ಕೊಳಗಾಗುವ ರೂಢಿಯವರಿಗೆ ಸರಿಯಾಗಿ ಊಟ ಸೇರುವುದಿಲ್ಲ, ನಿದ್ದೆ ಬರುವುದಿಲ್ಲ.
ಸರಿ, ಹೊತ್ತು ಹೊತ್ತಿಗೆ ಸರಿಯಾಗಿ ಆಹಾರ ತೆಗೆದುಕೊಳ್ಳದೇ ಮತ್ತು ನಿದ್ದೆ ಮಾಡದೇ ಇರುವುದರಿಂದ ಆಗುವಂತಹ ಸಮಸ್ಯೆಗಳಿಗೆ ಅದು ಆಹ್ವಾನ ಕೊಟ್ಟಂತಾಗುತ್ತದೆ. ಈ ರೀತಿ ಮನಸ್ಸಿನ ಸ್ಥಿತ್ಯಂತರದ ಕಾರಣಗಳಿಂದ ದೇಹದ ಮೇಲೆ ಉಂಟಾಗುವ ಪರಿಣಾಮಗಳಿಗೆ ಮನೋದೈಹಿಕ ಸಮಸ್ಯೆಗಳು ಅಥವಾ ಸೈಕೋಸೊಮ್ಯಾಟಿಕ್ ಡಿಸಾರ್ಡರ್ ಎನ್ನುತ್ತಾರೆ.
ಈ ಮನೋದೈಹಿಕ ಸಮಸ್ಯೆಗಳು ಎಗ್ಸಿಮಾ, ಹೊಟ್ಟೆಯ ಹುಣ್ಣುಗಳಿಗೆ, ಹೈಪರ್ ಟೆಂನ್ಶನ್, ಸೋರಿಯಾಸಿಸ್ ಮತ್ತು ಹೃದಯದ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ಆತಂಕ ಮತ್ತು ಉದ್ವೇಗಗಳನ್ನು ಹೊಂದುವುದರಿಂದ, ಖಿನ್ನತೆಗೆ ಜಾರುವುದರಿಂದ ಅಡ್ರಿನಲ್ ಗ್ರಂಥಿಯಲ್ಲಿ, ಎಪಿನೆಫ್ರಿನ್ ನಲ್ಲಿ ತೀವ್ರಗತಿಯಲ್ಲಿ ಹಾರ್ಮೋನುಗಳ ವ್ಯತ್ಯಯ ಉಂಟಾಗುವುದು.
ಆಗ ಸಹಜವಾಗಿ ಈ ಹಾರ್ಮೋನುಗಳ ವ್ಯತ್ಯಾಸದಿಂದ ಏನು ಶಾರೀರಿಕ ಸಮಸ್ಯೆ ಬರುವುದೋ ಅದನ್ನು ಎದುರಿಸಬೇಕಾಗುವುದು. ಸಾಮಾನ್ಯವಾಗಿ ಕುತ್ತಿಗೆ ನೋವು, ಆಮ್ಲತೆ (ಅಸಿಡಿಟಿ), ಬೆನ್ನು ನೋವು, ಮರೆತುಹೋಗುವುದು, ಪಿತ್ತ ಕೆರಳುವುದು, ಹಠಾತ್ ಕೋಪ ಬರುವುದು ಕೂಡಾ ಮನೋದೈಹಿಕ ಸಮಸ್ಯೆಗಳಾಗಿರುತ್ತವೆ. ಮನೋದೈಹಿಕ ಸಮಸ್ಯೆಗಳಲ್ಲಿ ಮುಖ್ಯವಾಗಿ ಎರಡು ವಿಧವನ್ನು ಗುರುತಿಸಬಹುದು.
ಶರೀರದಲ್ಲಿ ನೋವು, ಆಯಾಸ, ಅಧಿಕವಾಗಿ ನಿದ್ರೆ, ಅಥವಾ ನಿದ್ರೆ ಇಲ್ಲದಿರುವುದು, ಹಸಿವು ಇಲ್ಲದಿರುವುದು, ಆಮ್ಲತೆ (ಅಸಿಡಿಟಿ) ಈ ಬಗೆಯ ಸಮಸ್ಯೆಗಳು ಬರುವುದು ಒಂದಾದರೆ, ನರದೌರ್ಬಲ್ಯ ಸಮಸ್ಯೆಗಳು ಎದುರಾಗುವುದು, ಹೆಂಗಸರಲ್ಲಿ ಋತುಚಕ್ರವು ವ್ಯತ್ಯಾಸಗೊಳ್ಳುವುದು, ಲೈಂಗಿಕತೆಯಲ್ಲಿ ದೌರ್ಬಲ್ಯವನ್ನು ಹೊಂದುವುದು ಇತ್ಯಾದಿಗಳು ಮತ್ತೊಂದು ಬಗೆಯ ಸಮಸ್ಯೆಗಳು.
ಗರ್ಭಿಣಿಯರಾದಾಗಲೂ ಕೂಡಾ ಆ ಬಗೆಯ ಮನೋದೈಹಿಕ ಸಮಸ್ಯೆಗಳನ್ನು ಎದುರಿಸಬಹುದು. ಇದರಿಂದ ವಾಕರಿಕೆ, ಹುಸಿ ಹೆರಿಗೆ ನೋವು, ದೇಹದ ಇತರ ಭಾಗಗಳಲ್ಲಿ ನೋವು; ಇತ್ಯಾದಿಗಳನ್ನು ಕಾಣಬಹುದು.
ಅದೇ ರೀತಿ ಮನೋದೈಹಿಕ ವ್ಯತ್ಯಾಸಗಳು ಇನ್ನೂ ಕೆಲವು ಲಕ್ಷಣಗಳನ್ನು ತೋರುತ್ತವೆ. ಕೆಲವೊಮ್ಮೆ ದಿಢೀರನೆ ಹಾಸಿಗೆ ಹಿಡಿದು ಮಲಗುವಂತೆ ಮಾಡಬಹುದು. ಮೂರ್ಚೆ ಹೋಗುವುದು, ನಿದ್ರೆ ಬರುತ್ತಿರುವಂತೆ ಕಣ್ಣುಗಳು ಭಾರವಾಗಿದ್ದು ಕಣ್ಣೆಳೆಯುತ್ತಿರುವುದು, ಕೆಲವೊಮ್ಮೆ ಕಣ್ಣು ಕಾಣಿಸದೇ ಹೋಗುವುದು. ದೇಹದ ಯಾವುದಾದರೂ ಒಂದೋ, ಎರಡೋ ಭಾಗವನ್ನು ಕಳೆದುಕೊಂಡಂತೆ ಭಾಸವಾಗುವ ರೀತಿಗಳಲ್ಲಿಯೂ ಕಾಣುವುದು.
ಬಯಸಿ ಬರುವ ರೋಗ
ಮನೋದೈಹಿಕ ಸಮಸ್ಯೆಯಿಂದಾಗಿ ಕೆಲವರು ತಮಗೇನೋ ಬಹುದೊಡ್ಡ ರೋಗವೊಂದಿದೆ ಎಂದು ಭಾವಿಸತೊಡಗುತ್ತಾರೆ. ಯಾರಾದರೂ ವೈದ್ಯರ ಬಳಿ ತೋರಿಸಿ ಏನಿಲ್ಲ ಎಂದು ವರದಿ ಬಂದರೂ ಅವರಿಗೆ ಸಮಾಧಾನವಾಗುವುದಿಲ್ಲ. ಮತ್ತೊಬ್ಬ, ಮಗದೊಬ್ಬ ವೈದ್ಯರ ಬಳಿ ಪರೀಕ್ಷೆಗೆ ಒಳಪಡುತ್ತಿರುತ್ತಾರೆ. ನಿಮಗೆ ಏನೂ ಸಮಸ್ಯೆ ಇಲ್ಲವೆಂದರೂ ಅವರು ನಂಬುವುದಿಲ್ಲ.
ವೈದ್ಯರನ್ನು ಬದಲಾಯಿಸುತ್ತಾರೆಯೇ ಹೊರತು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದಿಲ್ಲ. ಕೆಲವರಿಗೆ ದೇಹದ ಕೆಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುತ್ತದೆ. ಅದಕ್ಕೆ ಯಾವ ಕಾರಣವೂ ಇರುವುದಿಲ್ಲ. ಅದನ್ನು ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ಅವರಿಗೆ ಅಲ್ಲಿ ಏನೂ ತಿಳಿಯುದಿಲ್ಲ. ಆದರೆ ಇವರಿಗೆ ಮಾತ್ರ ಬಹುಕಾಲದಿಂದ ಆ ನೋವು ಕಾಣುತ್ತಿರುತ್ತದೆ. ಇದೂ ಕೂಡಾ ಮನೋದೈಹಿಕ ನೋವಿನ ಸಮಸ್ಯೆಯೇ ಆಗಿರುತ್ತದೆ.
ಕೆಲವರು ತಮ್ಮ ಮುಖದಲ್ಲಿ ಅಥವಾ ದೇಹದಲ್ಲಿ ಯಾವುದೋ ನ್ಯೂನ್ಯತೆ ಇದೆ ಎನಿಸುತ್ತಿರುತ್ತದೆ. ಅದಕ್ಕಾಗಿ ಕಾಸೆಮೆಟಿಕ್ ಚಿಕಿತ್ಸೆ ತೆಗೆದುಕೊಳ್ಳುತ್ತಿರುತ್ತಾರೆ. ಕೆಲವರು ಲಘು ಶಸ್ತ್ರ ಚಿಕಿತ್ಸೆಗಳನ್ನೂ ಕೂಡಾ ಕಾಲದಿಂದ ಕಾಲಕ್ಕೆ ಮಾಡಿಸಿಕೊಳ್ಳುತ್ತಿರುತ್ತಾರೆ. ಅದೆಷ್ಟು ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಿಕೊಂಡರೂ ಅಥವಾ ಕಾಸ್ಮೆಟಿಕ್ ಚಿಕಿತ್ಸೆಗಳನ್ನು ತೆಗೆದುಕೊಂಡರೂ ಅವರಿಗೆ ತೃಪ್ತಿಯೇ ಇರದಂತೆ ಮನೋರೋಗವಾಗಿ ಪರಿಣಮಿಸಿರುತ್ತದೆ.
ಉದಾಹರಣೆಗೆ ತಮ್ಮ ಮೂಗು ಸೊಟ್ಟ ಎನಿಸುತ್ತಿರುತ್ತದೆ. ತುಟಿಯಲ್ಲೇನೋ ಸ್ವಲ್ಪ ಸಮಸ್ಯೆ ಎನಿಸುತ್ತಿರುತ್ತದೆ. ಕೆನ್ನೆಯ ಮೇಲ್ಭಾಗದಲ್ಲೇನೋ ವಿನ್ಯಾಸ ಸರಿ ಇಲ್ಲ ಎನಿಸುತ್ತಿರುತ್ತದೆ, ಹೀಗೆ ತಮ್ಮ ಶರೀರ ರಚನೆಯ ಬಗ್ಗೆ ಅವರಿಗೆ ಸದಾ ಅತೃಪ್ತಿ. ಕೆಲವು ಸಿನಿಮಾ ಕಲಾವಿದರು, ಫ್ಯಾಷನ್ ಮತ್ತು ಪಾಪ್ ತಾರೆಯರಿಗೆ ಈ ಗೀಳಿತ್ತು. ತಮ್ಮ ಶರೀರದ ಯಾವುದೋ ಒಂದು ಭಾಗವನ್ನು ಒಂದಲ್ಲಾ ಒಂದು ಕಾರಣಕ್ಕೆ ಚಿಕಿತ್ಸೆಗೆ ಒಳಪಡಿಸಿಕೊಳ್ಳುತ್ತಿದ್ದರು. ಅವರಿಗೆ ತಮ್ಮದೇ ಶರೀರದ ಬಗ್ಗೆ ತೃಪ್ತಿಯೇ ಇರುತ್ತಿರಲಿಲ್ಲ.
ಸಾಮಾನ್ಯವಾಗಿ ಮಾನಸಿಕ ಖಿನ್ನತೆ ಮತ್ತು ಅನಿಯಂತ್ರಿತ ಭಾವೋದ್ವೇಗ ಈ ಬಗೆಯ ಮನೋದೈಹಿಕ ಸಮಸ್ಯೆಗಳಿಗೆ ಕಾರಣವಾಗಿರುತ್ತದೆ. ಒಟ್ಟಾರೆ ಮನಸ್ಥಿತಿಯು ದೇಹದ ಸ್ಥಿತಿಗತಿಗಳ ಮೇಲೆ ನೇರಾನೇರ ಪ್ರಭಾವವನ್ನು ಬೀರುತ್ತದೆ. ಅಂದರೆ ಈ ದೇಹದಲ್ಲಿ ತೊಂದರೆಗಳನ್ನು ಸರಿಪಡಿಸಿಕೊಳ್ಳಬೇಕೆಂದರೆ, ಮನಸ್ಥಿತಿಯನ್ನು ಸರಿಪಡಿಸಿಕೊಳ್ಳಬೇಕೆಂದಾಯಿತು.
ಮನೋದೈಹಿಕ ಸಮಸ್ಯೆಗಳಿಗೆ ಚಿಕಿತ್ಸೆ
ಇಂತಹ ಸಮಸ್ಯೆಗಳಿಗೆ ಚಿಕಿತ್ಸೆ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ, ರೀತಿಯಿಂದ ರೀತಿಗೆ ಬದಲಾಗುತ್ತಿರುತ್ತದೆ. ಏನೇ ಆಗಲಿ, ಮನೋದೈಹಿಕ ಸಮಸ್ಯೆ ಇದೆ ಎಂಬುದನ್ನು ಗುರುತಿಸಿದ ಮೇಲೆ ವ್ಯಕ್ತಿಯು ಪ್ರಶಾಂತತೆಯನ್ನು ಪಡೆಯುವುದರ ಕಡೆಗೆ ಮೊದಲ ಗಮನ ಹರಿಸಬೇಕು.
ವಾತಾವರಣ ಬದಲಾವಣೆ ಬಹಳ ಉತ್ತಮವಾದದ್ದು.
ಯಾಂತ್ರಿಕವಾಗಿ ಕೆಲಸ ಮಾಡಿಕೊಂಡಿರುವ ಮತ್ತು ಒಂದೇ ಸಮನೆ ಅದೇ ಸ್ಥಳದಲ್ಲಿ ಇರುವ ಮೂಲಕ ಉಂಟಾಗಿರುವ ಏಕತಾನತೆಯನ್ನು ಒಡೆಯಲು ಬೇರೆ ವಾತಾವರಣಕ್ಕೆ ಹೋಗಬೇಕು. ಸ್ಥಳ ಬದಲಾವಣೆಯಾಗಬೇಕು. ಹೆಚ್ಚಿನ ಜನ ಸಂಚಾರವಿರದ, ಗದ್ದಲವಿರದ ಸ್ಥಳಗಳಿಗೆ ಪ್ರವಾಸ ಹೋಗುವುದು, ಅಲ್ಲಿ ಇರುವುದು ಮತ್ತು ತಮ್ಮ ಓದು, ಬರಹ, ಅಥವಾ ಇನ್ನಾವುದೇ ಒಬ್ಬರೇ ಮಾಡಿಕೊಳ್ಳುವ ಕೆಲಸ ಮಾಡಿಕೊಳ್ಳುವುದೆಲ್ಲವೂ ಮನೋದೈಹಿಕ ಸಮಸ್ಯೆಗಳಿಂದ ಪಾರಾಗಲು ಒಳ್ಳೆಯದೇ.
ಸುಂದರ ಮತ್ತು ಗದ್ದಲವಿಲ್ಲದಂತಹ ಸುಮಧುರ ಸಂಗೀತವನ್ನು ಕೇಳಬೇಕು. ಹಿಂಸೆ, ಅತಿ ಮಾನುಷಶಕ್ತಿಯ ಪ್ರದರ್ಶನಗಳಿರದ, ತುಂಬಾ ಉತ್ಪ್ರೇಕ್ಷಿತ ವೈಭವಗಳಿರದ ಸಕಾರಾತ್ಮಕವಾದ ಸಿನಿಮಾಗಳಿಗೆ ಹೋಗಬೇಕು. ನಿತ್ಯವೂ ನಿಯಮಿತವಾಗಿ ವ್ಯಾಯಾಮ, ನೃತ್ಯ ಈ ರೀತಿಯಲ್ಲಿ ದೇಹಕ್ಕೆ, ಮನಸ್ಸಿಗೆ ಮತ್ತು ಹೃದಯಕ್ಕೆ ಹದ ನೀಡಬೇಕು.
ಧಾರ್ಮಿಕತೆಯ ರೂಢಿಯಿದ್ದರೆ ಉಪವಾಸ, ಧ್ಯಾನ ಮತ್ತು ಪ್ರಾರ್ಥನೆಗಳನ್ನು ಮಾಡಬೇಕು.
ಒಳ್ಳೆಯ ಧನಾತ್ಮಕವಾದ ಕತೆಗಳನ್ನು ಕೇಳಬೇಕು ಅಥವಾ ಓದಬೇಕು.
ನಮ್ಮನ್ನು ನಾವು ಗಮನಿಸಿಕೊಂಡು, ಆತ್ಮಾವಲೋಕನ ಮಾಡಿಕೊಂಡು ನಮ್ಮ ವರ್ತನೆಗಳಲ್ಲಿ ಉದ್ದೇಶಪೂರ್ವಕವಾದಂತಹ ಬದಲಾವಣೆಗಳನ್ನು ತಂದುಕೊಳ್ಳಬೇಕು. ಇತರರಿಗೆ ಕಷ್ಟಗಳಲ್ಲಿ ನೆರವಾಗುವುದು, ಒತ್ತಡ ಮತ್ತು ಖಿನ್ನತೆ ಇರುವಂತವರನ್ನು ಕೂರಿಸಿಕೊಂಡು ಅವರ ಸಮಸ್ಯೆಗಳನ್ನು ಆಲಿಸುವುದು ಮತ್ತು ಅದರಿಂದ ಹೇಗೆ ಹೊರಗೆ ಬರಬೇಕೆಂಬ ಸಾಧ್ಯತೆಗಳನ್ನು ಅವರಿಗೆ ಅರಿವಾಗುವಂತೆ ತಿಳಿಸಬೇಕು.
ಎಷ್ಟೋ ಸಲ ಈ ರೀತಿ ಇನ್ನೊಬ್ಬರಿಗೆ ಅವರ ಕಷ್ಟದಿಂದ ಹೊರಗೆ ನೆರವಾಗಲು ಹೇಳಿಕೊಡುವಾಗ ನಮ್ಮ ಕಷ್ಟಗಳಿಂದ ನಾವು ಹೊರಗೆ ಬರಲು, ನಮ್ಮ ಒತ್ತಡಗಳಿಂದ ನಾವು ಹಗುರವಾಗಲು ನಮಗೆ ಒಳನೋಟಗಳು, ದಾರಿ ಸಿಗುವುದು. ಮಕ್ಕಳೊಂದಿಗೆ ಆಡುವುದು, ಅವರೊಂದಿಗೆ ಓದುವುದು, ಉದ್ಯಾನವನಗಳಲ್ಲಿ ಓಡಾಡುವುದು ಇವೆಲ್ಲವೂ ಮನೋದೈಹಿಕ ಸಮಸ್ಯೆಗಳಿಗೆ ಚಿಕಿತ್ಸಕ ರೀತಿಯಲ್ಲಿ ಸಹಾಯಕ್ಕೆ ಬರುವುದು.
ಒಟ್ಟಾರೆ ಮನೋಭಾವ, ಏಕಪ್ರಕಾರದ ಯೋಚನೆಗಳು ಮತ್ತು ಮನಸ್ಸಿನ ವಿವಿಧ ಬಗೆಯ ಆಲೋಚನೆಗಳು ಆತಂಕಗಳನ್ನು, ಒತ್ತಡವನ್ನು ಉಂಟುಮಾಡುತ್ತವೆ. ಅವು ದೇಹದ ಮೇಲೂ ಪರಿಣಾಮ ಬೀರುತ್ತದೆ. ನಮ್ಮ ಗಮನಕ್ಕೆ ಬರುವಂತಹ ಆಲೋಚನೆಗಳ ಮನಸ್ಸು ಒಂದಾದರೆ, ನಮ್ಮ ಗಮನಕ್ಕೆ ಬರದೇ ಇರಬಹುದಾದಂತಹ ದೇಹದ ಮನಸ್ಸೊಂದು ಇದೆ. ಅದರಲ್ಲಿಯೂ ಕೂಡಾ ವ್ಯತ್ಯಾಸಗಳಾಗುತ್ತಿರುತ್ತವೆ.
ಇದು ನಾನಾ ರೀತಿಯ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಾಗಿ ಕಾಣುತ್ತವೆ. ಮನೋದೈಹಿಕ ಸಮಸ್ಯೆಗೆ ಎಷ್ಟೋ ಕಾರಣಗಳಿವೆ.
ಕೆಲವು ಜನಕ್ಕೆ ಸುಮ್ಮನೆ ದಿಗಿಲು ಬೀಳುವುದೇ ಒಂದು ಸಮಸ್ಯೆ. ಸಾಮಾಜಿಕ ಆತಂಕದ ಸಮಸ್ಯೆ, ವಿವಿಧ ರೀತಿಯ ಭಯಗಳು, ಏನೇನೋ ಕಾಣುವುದು, ಆರೋಗ್ಯದ ಬಗ್ಗೆಯೇ ಆತಂಕ, ಭಾವನೆಗಳ ವ್ಯತ್ಯಾಸಗಳು, ನಿದ್ರಾಹೀನತೆ, ಒತ್ತಡಗಳು, ಬಾಲ್ಯದ ಆತಂಕಗಳು, ಮದುವೆಯಾಗಿ ಹೊಸ ಮನೆಗೆ ಹೋಗುವ ಹೆಣ್ಣುಮಗುವಿನ ಆತಂಕ ಮತ್ತು ಒತ್ತಡಗಳು, ಸಂಬಂಧಗಳು ಮುರಿದುಹೋಗುತ್ತವೆ ಎಂಬ ಆತಂಕ, ಯಾರನ್ನಾದರೂ ಪ್ರೀತಿಪಾತ್ರರ ಕಳೆದುಕೊಂಡಿರುವ ನೋವು, ವ್ಯಾಪಾರ ವ್ಯವಹಾರ ರಾಜಕೀಯ ಅಥವಾ ಯಾವುದೇ ಉದ್ದಿಮೆಯಲ್ಲಿ ಅಪಾರವಾದ ನಷ್ಟ, ಕಿರುಕುಳ ನೀಡುವ ಸಾಲಗಾರರು, ಲೈಂಗಿಕ ಸಮಸ್ಯೆ, ಹೆಂಗಸರಲ್ಲಿ ಋತು ಸಮಸ್ಯೆ, ಸಾಮಾಜಿಕ ಅಥವಾ ಧಾರ್ಮಿಕತೆಯ ಕಾರಣದಿಂದ ಹತ್ತಿಕ್ಕಲಾಗುವ ಎಷ್ಟೋ ಮನೋಬಯಕೆಗಳು ಮತ್ತುಅವುಗಳಿಂದಾಗುವ ಒತ್ತಡಗಳು; ಹೀಗೆ ಯಾವುದ್ಯಾವುದೋ ಕಾರಣಗಳು ಮನೋದೈಹಿಕ ಸಮಸ್ಯೆಗೆ ಕಾರಣವಾಗುತ್ತವೆ.
ಒಟ್ಟಾರೆ ಕಣ್ಣು, ಕಿವಿ, ಮೂಗುಗಳಿಗೆ ಏನೋ ಸಮಸ್ಯೆ ಬಂದಂತೆ ಮನಸ್ಸಿಗೂ ಸಮಸ್ಯೆ ಬರುತ್ತಿರುತ್ತದೆ. ಹಾಗಾಗಿ ನಮ್ಮ ಮನಸ್ಸಿನ ಸಮಸ್ಯೆಗೆ, ಮೆದುಳಿನ ಸಮಸ್ಯೆಗೆ ಅಥವಾ ನರಗಳ ಸಮಸ್ಯೆಗೆ ಸಂಕೋಚಪಡುವುದು ಬೇಡ. ಮನಸಿನ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಎಷ್ಟೋ ಸಮಸ್ಯೆಗಳು ಇಲ್ಲವಾಗುತ್ತವೆ. ದೈಹಿಕ ಸಮಸ್ಯೆಗಳೂ ಗುಣ ಹೊಂದುತ್ತವೆ.
ಕೊನೆಯ ಎಲೆ
ವಾಸ್ತವಧಾರವಲ್ಲದೇ ಭ್ರಮಾಧೀನವಾದ ಮನಸ್ಸಿಗೂ ಬದುಕನ್ನು ಕಲ್ಪಿಸಿಕೊಡಲು ಸಾಧ್ಯವಾಗುವುದು. ಅದೊಂದು ತಂತ್ರ. ದ ಲಾಸ್ಟ್ ಲೀಫ್ ಅಂದರೆ ಕೊನೆಯ ಎಲೆ ಎಂಬ ಕತೆ ಇದೆ. ಅದನ್ನು ಬರೆದವರು ಓ ಹೆನ್ರಿ ಎಂಬ ಅಮೇರಿಕೆಯ ಕತೆಗಾರ. ಅದರಲ್ಲಿ ಇಬ್ಬರು ಗೆಳತಿಯರಿರುತ್ತಾರೆ. ಅವರಿಬ್ಬರೂ ಚಿತ್ರಕಲಾವಿದೆಯರು. ಒಂದೇ ಸ್ಟುಡಿಯೋ ಮಾಡಿಕೊಂಡಿರುತ್ತಾರೆ. ಅವರಲ್ಲಿ ಒಬ್ಬಳಿಗೆ ನಿಮೋನಿಯಾ ರೋಗ ಬರುತ್ತದೆ.
ಅವಳಿಗೆ ಔಷಧೋಪಚಾರ ಆಗುತ್ತಿದ್ದರೂ, ಅವಳು ಮಲಗಿದ್ದ ಮಂಚದಿಂದ ಹೊರಗೆ ಒಂದು ಮರವನ್ನು ನೋಡುತ್ತಿರುತ್ತಾಳೆ. ಶಿಶಿರ ಕಾಲದಲ್ಲಿ ಆ ಮರದ ಎಲೆಗಳೆಲ್ಲಾ ದಿನದಿನವೂ ಉದುರುತ್ತಿರುತ್ತವೆ. ಅದನ್ನು ನೋಡುತ್ತಿದ್ದ ಅವಳಿಗೆ ಆ ಮರದ ಎಲೆಗಳೆಲ್ಲ ಉದುರುತ್ತಿರುವ ಹಾಗೆ ತನ್ನ ಬದುಕಿನ ದಿನಗಳೂ ಮುಗಿದುಹೋಗುತ್ತಿವೆ. ಆ ಮರದ ಕೊನೆಯ ಎಲೆ ಉದುರಿದ ಮೇಲೆ ತಾನೂ ಇರುವುದಿಲ್ಲ ಎಂದು ಹೇಳುತ್ತಿರುತ್ತಾಳೆ.
ದಿನವೂ ಅದನ್ನು ಕೇಳುತ್ತಿದ್ದ ಗೆಳತಿಯು ನಿಮೋನಿಯಾ ಬಂದಿರುವ ಗೆಳತಿಯ ಹುಚ್ಚು ಕಲ್ಪನೆಯನ್ನು ಒಪ್ಪದೇ ಸಕಾರಾತ್ಮಕವಾಗಿ ಅವಳಿಗೆ ಯೋಚಿಸಲು ಹಚ್ಚಲು ಯತ್ನಿಸುತ್ತಿರುತ್ತಾಳೆ. ಆದರೆ ಆಗುವುದಿಲ್ಲ. ನಿಮೋನಿಯಾದ ಹುಡುಗಿ ತನ್ನ ಕಲ್ಪನೆಯನ್ನೇ ಬಲಗೊಳಿಸಿಕೊಳ್ಳುತ್ತಿರುತ್ತಾಳೆ. ಒಂದು ದಿನ ಕಿಟಕಿ ತೆರೆದಾಗ ಮರದ ಎಲ್ಲಾ ಎಲೆಗಳು ಉದುರಿಬಿದ್ದಿದ್ದರೂ ಒಂದೇ ಒಂದು ಎಲೆ, ಕೊನೆಯ ಎಲೆ ಪಕ್ಕದ ಕಟ್ಟಡದ ಗೋಡೆಯೊಂದಕ್ಕೆ ತಗುಲಿದ್ದು, ಅದು ಉದುರಿರುವುದೇ ಇಲ್ಲ.
ಅದು ಉದುರುವ ಹೊತ್ತಿಗೆ ತಾನೂ ಸಾಯುತ್ತೇನೆ ಎಂದು ಅವಳ ನಂಬಿಕೆ. ಆದರೆ ಎಷ್ಟೇ ದಿನಗಳು ಕಳೆದರೂ ಅದು ಉದುರುವುದೇ ಇಲ್ಲ. ತಾನು ಬದುಕುತ್ತೇನೆ. ಆ ಎಲೆಯು ಅದನ್ನು ಸೂಚಿಸಲೆಂದೇ ಉದುರುತ್ತಿಲ್ಲ ಎಂದು ಅವಳಿಗೆ ಅನಿಸುತ್ತದೆ. ಅವಳು ಬದುಕುತ್ತಾಳೆ. ಆರೋಗ್ಯಕ್ಕೆ ಮರಳುತ್ತಾಳೆ.
ಆ ಎಲೆ ಉದುರುವುದೇ ಇಲ್ಲ. ಏಕೆಂದರೆ, ಈ ಹುಡುಗಿಯ ಹುಚ್ಚು ಭ್ರಮೆಯನ್ನು ಗೆಳತಿಯಿಂದ ತಿಳಿದ ಮುದುಕ ಕಲಾವಿದನೊಬ್ಬ ಮರದ ಕೊಂಬೆ ಮತ್ತು ಕಟ್ಟಡದ ಗೋಡೆ ಸಂಧಿಸುವಂತಹ ಎಡೆಯಲ್ಲಿ ಒಂದು ಎಲೆಯ ಚಿತ್ರವನ್ನು ಬಿಡಿಸಿರುತ್ತಾನೆ. ದೂರದಿಂದ ನೋಡಲು ಕೊಂಬೆಗೆ ಅಂಟಿಕೊಂಡಿರುವ, ಕಟ್ಟಡದ ಗೋಡೆಗೆ ತಗುಲಿಕೊಂಡಿರುವ ಹಳದಿ ಬಣ್ಣಕ್ಕೆ ತಿರುಗಿರುವ ಎಲೆಯಂತೆ ಕಾಣುತ್ತಿರುತ್ತದೆ. ಅದು ಅವಳ ಭ್ರಮೆಯ ಪ್ರಕಾರವೇ ಅವಳ ಜೀವವನ್ನು ಉಳಿಸಿರುತ್ತದೆ.
ಆದರೆ ದುರದೃಷ್ಟವಶಾತ್, ಆ ಕೊನೆಯ ಎಲೆಯ ಮಾಸ್ಟರ್ ಪೀಸ್ ಮಾಡಿದ್ದ ವೃದ್ಧ ಮತ್ತು ಕುಡುಕ ಕಲಾವಿದ ಮಾಗಿಯ ಚಳಿಯ ರಾತ್ರಿಯಲ್ಲಿ ಚಿತ್ರವನ್ನು ಬರೆದು ತಾನು ಚಳಿಗೆ ಸತ್ತಿರುತ್ತಾನೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ: ಪ್ರತಿ ತಿಂಗಳು ಎರಡು ದಿನ ಪ್ರವಾಸ
-
ದಿನದ ಸುದ್ದಿ7 days agoಶ್ರೀಮಂತಿಕೆಯ ನಡುವೆ ಸರಳ ಬದುಕು: 50 ರೂ. ಹೇರ್ಕಟ್ ಹೇಳಿದ ಡಿಕೆಶಿ
-
ದಿನದ ಸುದ್ದಿ4 days agoಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
-
ದಿನದ ಸುದ್ದಿ4 days agoಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!
-
ದಿನದ ಸುದ್ದಿ5 days agoವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್ಗೆ ರಾಜೀನಾಮೆ ಸವಾಲು!
-
ದಿನದ ಸುದ್ದಿ5 days agoವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಕ್ಯಾಂಟೀನ್ಗಳಿಗೆ ಅಧಿಕಾರಿಗಳ ಶಾಕ್! 34 ಕ್ಯಾಂಟೀನ್ ಪರಿಶೀಲನೆ, 5ಕ್ಕೆ ನೋಟಿಸ್
-
ದಿನದ ಸುದ್ದಿ5 days agoTrump Oil Deal: ವೆನೆಜುವೆಲಾದ 65 ಬಿಲಿಯನ್ ಬ್ಯಾರೆಲ್ ತೈಲದ ಮೇಲೆ ಅಮೆರಿಕದ ಕಣ್ಣು; ಇದು ವಿಶ್ವದ ಅತಿದೊಡ್ಡ ಡೀಲ್ನಾ?
-
ದಿನದ ಸುದ್ದಿ5 days agoಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

