ದಿನದ ಸುದ್ದಿ
ನನ್ನ ಹೆಸರಿನ ಪಜೀತಿ..! ನನ್ನ ಹೆಸರು ಹೇಗೆ ಬಂತು..?
- ಪರಶುರಾಮ್. ಎ
ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಹೆಸರು ಇದ್ದೇ ಇರುತ್ತದೆ ಇರಲೇ ಬೇಕು ಸಹ. ಆ ವ್ಯಕ್ತಿ ಹೆಸರಿಗೂ ಇತಿಹಾಸದ ನಂಟು ಅಥವಾ ಒಂದು ಕತೆ ಇದ್ದೆ ಇರುತ್ತದೆ. ಅವುಗಳನ್ನ ಕೆದಕಿ ನೋಡಿದಾಗ ಆ ಕತೆಗಳು ನೆನಪುಗಳಾಗಿ ಮೇಲೆದ್ದು ಕಾಣಿಸಿಕೊಳ್ಳುತ್ತದೆ.
ಈಗೀಗ ಜನ ಸಮಾಜದಲ್ಲಿ ಹೆಸರು ಮಾಡಲು ಏನೇನೂ ಸರ್ಕಸ್ ಮಾಡ್ತಾರಂತ ನಿಮಗೆ ಗೊತ್ತೇ ಇದೆ. ರಾಜಕೀಯ. ಸಿನಿಮಾ. ರೌಡಿಸಂ. ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್, ಡಬ್ ಸ್ಮಾಷ್. ಟಿಕ್ ಟಾಕ್ ನಲ್ಲಿ ಹುಚ್ಚರಾಗಿ ಹೆಸರು ಗಳಿಸಲು ನಾನಾ ತರದ ಸರ್ಕಸ್ ನಡಿತಾನೇ ಇದೆ. ಅವರ ಹೆಸರುಗಳು ಸಹ ವಿಚಿತ್ರ ವಿಚಿತ್ರವಾಗಿ ಇರ್ತವೆ!!! ಈ ವಿಚಿತ್ರ ಹೆಸರುಗಳ ಖಯಾಲಿ ಸಿನೆಮಾ, ರೌಡಿಸಂ ಕ್ಷೇತ್ರದಲ್ಲಿ ಹೆಚ್ಚು.
ಹೆಸರಿನಲ್ಲಿ ಏನಿದೆ ಬಿಡ್ರೀ ಮಹತ್ವ?? ಅನ್ನುವವರಿಗೆ ಅವರ ಹೆಸರು ಒಮ್ಮೆ ಹಾಳಾದಗಲೇ ಅದರ ನೋವು ಗೊತ್ತಾಗುವುದು ಹೆಸರಿನ ಮಹತ್ವ!! ಅಂದಾಗೆ ನಾನು ನನ್ನ ಹೆಸರು ಹುಟ್ಟಿನ ಬಗ್ಗೆ ಹೇಳ್ತಿನಿ ಆಮೇಲೆ ಆ ಹೆಸರಿನಿಂದ ನನಗಾದ ಪಜೀತಿಗಳೆಷ್ಟು ಅಂತ ಹೇಳ್ತಿನಿ. ನಾನು ಹುಟ್ಟಿದಾಗ ನನಗೆ ನಾಮಕರಣ ಮಾಡಲು ಹೆಸರಿಡಲು ವಾಡಿಕೆಯಂತೆ ಜ್ಯೋತಿಷ್ಯ ಕೇಳಿದಾಗ ನನಗೆ ಡ,ಡು,ಡೆ ಎಂಬ ಪದಗಳು ಬಂದವಂತೆ.
ಹೋಗಿ ಹೋಗಿ ಎಂತ ಪದಗಳು ಬಂದಿವೇ ನೋಡ್ರೀ!! ಈ ಡ,ಡು,ಡೆ ಎಂಬ ಪದಗಳಿಂದ ಯಾವ ಹೆಸರು ತಾನೇ ಕನ್ನಡದಲ್ಲಿ ಆಗಲಿ ಯಾವ ಭಾಷೆಯಲ್ಲಿ ಆಗಲಿ ಬರೊದಕ್ಕೆ ಸಾಧ್ಯ?? (ಈಗಲೂ ಈ ಅಕ್ಷರದಿಂದ ನಿಮಗೆ ಏನಾದರೂ ಹೆಸರು ಗೊತ್ತಾದರೆ ಹೇಳಿ ನನ್ನ ಹೆಸರೇ ಬದಲಾಯಿಸಿಕೊಳ್ತಿನಿ.) ಹೆಸರಿನ ಮೊದಲ ಅಕ್ಷರ ಹೇಳಿದ ಜ್ಯೋತಿಷಿ ಬಳಿ ಯಾವುದೇ ಉತ್ತರ ಸಿಗದೆ ಕಂಗಾಲಾಗಿ ನಮ್ಮ ಅಜ್ಜಿ ತಾತ ಮತ್ತು ಅಪ್ಪ ಅಮ್ಮ ಅಪ್ಪ ಆಕಾಶ ತಲೆ ಮೇಲೆ ಬಿದ್ದಂಗಾಗಿ ಏನಿದು ಹುಟ್ಟಿರೊ ಮಗುವಿಗೆ ಈ ರೀತಿಯಲ್ಲಿ ಅಕ್ಷರಗಳು ಬಂದಿದಾವಲ್ಲಂತ ಯೋಚಿಸಿ ಕುಳಿತರಂತೆ.!
ಹೀಗೆ ಯೋಚಿಸಿದಾಗ ಅವರಿಗೆ ಒಂದು ಜ್ಞಾನೋದಯ ಅಗಿ ಹೇಗಿದ್ದರೂ ನಮ್ಮ ಮನೆಯ ದೇವರು ಸವದತ್ತಿ ಯಲ್ಲಮ್ಮ ಈಗ ಹುಟ್ಟಿದ ಗಂಡು ಮಗುವಿಗೆ ಆಕೆಯ ಮಗನಾದ ಪರಶುರಾಮ ಎಂಬ ಹೆಸರನ್ನೇ ಇಟ್ಟು ಇನ್ನೂ ಮಿಕ್ಕಿದ್ದ ಪಾಪ ಪುಣ್ಯ ಎಲ್ಲಾ ಯಲ್ಲಮ್ಮನ ಮೇಲೆ ಹಾಕಿ ಪರಶುರಾಮ ಎಂಬ ಹೆಸರಿನಲ್ಲಿ ನನಗೆ ನಾಮಕರಣ ಮಾಡಿದರು. ಇವತ್ತಿಗೂ ನಮ್ಮ ಹಳ್ಳಿಯಲ್ಲಿನ ನಮ್ಮ ಸಂಬಂಧಿ ಚಂದ್ರಣ್ಣ ಎಂಬುವವರು ನನಗೆ ಈ ಕತೆ ಹೇಳಿ ನನ್ನ ಹೀಗೆ ಡ,ಡು,ಡೆ ಎಂದೇ ಸಂಬೋಧಿಸಿ ಕರೆಯುತ್ತಾರೆ.
ಅವರಿಗೆ ನನ್ನ ಹೆಸರೇ ತಮಾಷೆಯ ವಸ್ತು. ನಾನು ಹುಟ್ಟಿದಾಗಲೇ ಬ್ರಾಹ್ಮಣರ ಬಳಿಯಿಂದ ಹೆಸರನ್ನು ಪಡೆಯದೆ ಹುಟ್ಟಿನಿಂದಲೇ ನಾನು ಬ್ರಾಹ್ಮಣತ್ವದ ವಿರೋಧಿಯಾಗಿದ್ದೆ, ಹೋರಾಡಿದ್ದೆ ಎಂದು ಈಗ ಒಮ್ಮೊಮ್ಮೆ ಹಲವು ಸಲ ಮನದಲ್ಲಿ ಯೋಚಿಸಿ ನಗು ಬರುತ್ತದೆ. ನನ್ನ ಅಮ್ಮ ಈ ಸಂಗತಿಯನ್ನು ಅದೆಷ್ಟೋ ಸಲ ಹೇಳಿ ನಗ್ತಾಳೆ. ನೀನು ನನಗೆ ಹುಟ್ಟಿದಾಗ ನಿನಗೆ ಒಂದು ಸರಿಯಾದ ಹೆಸರು ಬರಲಿಲ್ಲ ಗೊತ್ತ ನಿನಗೆ ಅಂತ ಕೇಳಿ.
ಹೇಗೋ ನನಗೂ ಒಂದು ಹೆಸರು ಬಂತು ಅಂದುಕೊಂಡಾಗ, ನಾನು ಚಿಕ್ಕವಯಸ್ಸಿನಲ್ಲಿದ್ದಾಗ ನಮ್ಮ ಸಂಬಂಧಿಕರು ನನ್ನ ಪರ್ಶಿ, ಪರ್ಸೀ ಅಂದು ನನ್ನ ಹೆಸರೇ ಹಾಳು ಮಾಡಿದ್ದರು. ಪರಶುರಾಮ ಎಂಬ ಸುಂದರ ಹೆಸರನ್ನು ಹೀಗೆ ಹಾಳು ಮಾಡಿದಾಗ ಯಾರಿಗೆ ತಾನೇ ಕೋಪ ಬರಲ್ಲ ಹೇಳಿ?? ಬೆಳೆದು ದೊಡ್ಡವನಾದರೂ ಇನ್ನೂ ಅದೆಷ್ಟು ಸಂಬಂಧಿಕರು ನನ್ನ ಪರ್ಸಿ ಪರ್ಸಿ ಅಂತಾನೆ ಕರೆತಾರೆ ಇದಂತು ನನಗೆ ಅಳುನೇ ತರ್ಸುತ್ತೆ.
ಇನ್ನೂ ನಾನು ಪ್ರಾಥಮಿಕ ಶಾಲೆಯಲ್ಲಿ ವಿದ್ಯೆ ತಲೆಗೆ ಹತ್ತದೆ ಇದ್ದಾಗ ನನಗೆ rr ಎಂಬ ಟೀಚರ್ ಒಬ್ಬರು ಪರಶುರಾಮ ಎಂಬ ನನ್ನ ಹೆಸರನ್ನ ಸಿದ್ದರಾಮ ಎಂದು ರೇಗಿಸುತ್ತಿದ್ದರು ಅದು ತರಗತಿಯ ನನ್ನ ಎಲ್ಲಾ ಸ್ನೇಹಿತರ ಮುಂದೆ. ನನಗೆ ಎಷ್ಟು ಕೋಪ ಮುಜುಗರ ಬರಬೇಡ?? ಆಗ ನನಗೆ ಕೇವಲ ಏಳು ಅಥವಾ ಎಂಟು ವರ್ಷ. ಇನ್ನೂ ನಾನು ಐದನೇ ತರಗತಿಯ ಓದುವಾಗ ನಮಗೆ ಇಂಗ್ಲೀಷ್ ಭಾಷೆ ಪರಿಚಯಿಸಿದರು, ನೇತ್ರಾವತಿ ಟೀಚರ್ ಸಹ ನನ್ನ ಹೆಸರನ್ನು ಇಂಗ್ಲಿಷ್ ಓದಲು ಬಾರದೆ ಇದ್ದದ್ದಕ್ಕೆ ಮತ್ತದೇ ಸಿದ್ದರಾಮ ಎಂದು ಒತ್ತಿ ಒತ್ತಿ ಕರೆಯುತ್ತಿದ್ದರು.
ಆಗಲಂತು ನನ್ನ ಮನಸ್ಸು ನನ್ನ ಈ ಹೆಸರಿನ ಬಗೆಗೆ ತೀವ್ರ ಜಿಗುಪ್ಸೆ ತರಿಸಿತ್ತು.
ಇನ್ನೂ ಏಳನೇ ತರಗತಿಯಲ್ಲಿ ಪರಶುರಾಮ್ ಎಂಬ ನನ್ನೊಂದಿಗೆ ಪುರುಷೋತ್ತಮ ಎಂಬ ಎರಡು ಸ್ನೇಹಿತರು ಬೇರೆ ಒಂದೇ ತರಗತಿಯಲ್ಲಿ ಇದ್ದೆವು. ಆಗಲಂತು ತರಗತಿಗೆ ಬಂದ ಟೀಚರ್ ಗಳು ಅದೆಷ್ಟೋ ಬಾರಿ ಪುರುಷೋತ್ತಮನ ಪರಶುರಾಮ ಎಂದು ಪರಶುರಾಮನ ಪುರುಷೋತ್ತಮ ಎಂದು ಕರೆದು ಗೊಂದಲಕ್ಕೆ ಸಿಕ್ಕಿಸಿದರೊ ಗೊತ್ತಿಲ್ಲ. ಇದು ಒಂದು ವರ್ಷಗಳ ಕಾಲ ಹೀಗೆ ನಡೆಯಿತು.
ಇನ್ನೂ ಹೈಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಈ ಹೆಸರು ಮತ್ತದೆ ಯಥಾವತ್ ಜಿಗುಪ್ಸೆ ತರಿಸಿ ನನ್ನ ಹೆಸರೇ ನಾನು ಕಳಚುವಂತೆ ಯೋಚಿಸಲು ತಲೆನೋವು ತಂದಿತ್ತು. ಕಾರಣ ಸ್ನೇಹಿತರು ನನ್ನ ರೇಗಿಸಲು ನನ್ನ ಹೆಸರನ್ನೇ ಅಸ್ತ್ರವನ್ನಾಗಿ ಬಳಸಿ ಪರ್ಸು ಪರ್ಸು(purse) ಅನ್ನೊರು. ಆಗಲಂತು ನನಗೆ ಕೆಟ್ಟ ಕೋಪ ಬರೊದು ನಿಜವಾಗಿಯೂ ನನ್ನ ಹೆಸರಿಗೆ ತಕ್ಕಂತೆ ಪರಶುರಾಮನಾಗಿ ಹೊಡೆಯಲ ಎಂದು ಆದರೆ ಏನು ಮಾಡೊದು ಎಲ್ಲಾ ಸ್ನೇಹಿತರೆ ಅಂತ ನನಗೆ ನಾನೇ ಸಮಾದಾನವಾಗಿ ತಗೊಂಡು ನಾನು ಅವರೊಂದಿಗೆ ನಗ್ತ ಸುಮ್ಮನೆ ಆಗ್ತಿದ್ದೆ. ಹಿರಿಯರು ಮತ್ತು ಅನಕ್ಷರಸ್ಥರ ಬಾಯಲ್ಲಿ ನನ್ನ ಹೆಸರು ಹೀಗೆ ಹಾಳದದ್ದು ಉಂಟು ಆದರೆ ಅಕ್ಷರಸ್ಥರ ಬಾಯಲ್ಲಿ ಹೆಸರು ಹಾಳಾದಾಗ ಆಗುವ ನೋವು ಹೇಳಲಾಗದಷ್ಟು ಇತ್ತು.
ಇನ್ನೂ ನಾನು ಡಿ,ಎಡ್ ಓದುವಾಗಲಂತೂ ವಿಜ್ಞಾನದ ಸರ್ ಗುರುಮೂರ್ತಿಯವರಂತು ಪ್ರತಿ ಭಾರಿ ನನ್ನ ಪರಶಿವನಾಗಿ ಮಾಡಿದ್ದರು. ಪರಶಿವ ಎಂದರೆ ಶಿವನಾಗಿ ಅಲ್ಲ. ಪರಶುರಾಮನ ಹೆಸರನ್ನು ಅವರು ಗೊಂದಲದಲ್ಲಿ ಪರಶಿವ ಎಂದೇ ಕರೆಯುತ್ತಿದ್ದರು ಅದಕ್ಕೆ ಕಾರಣ ಎರಡು ವರ್ಷಗಳ ಹಿಂದಿನ ಡಿ,ಎಡ್ ಬ್ಯಾಚಿನಲ್ಲಿ ಪರಶಿವ ಎಂಬ ಹೆಸರಿನ ವಿದ್ಯಾರ್ಥಿ ಹುಡುಗನೊಬ್ಬ ಇದ್ದನಂತೆ ಅದರಿಂದಾಗಿ ನನ್ನ ಹೆಸರು ಹೀಗೆ ಬದಲಾಗಿತ್ತು.
ಡಿ.ಎಡ್ ಮಾಡಿದ ಎರಡು ವರ್ಷಗಳ ಕಾಲ ನನ್ನ ಅವರು ಕರೆದದ್ದು ಪರಶಿವನೆಂದೆ. ನನಗೂ ನನ್ನ ಹೆಸರು ಸರ್ ಗೆ ಹೇಳಿ ಹೇಳಿ ಸಾಕಾಗಿ ಸರಿ ಇನ್ನೂ ಮುಂದೆ ಸರ್ ಕೂಗುವ ಈ ಹೆಸರಿಗೆ ಪ್ರತಿಕ್ರಿಯಿಸಲು ನಾನೇ ಬದಲಾಗಿ ಅವರು ಪರಶಿವ ಎಂದಾಗಲೆಲ್ಲ ಓಗುಟ್ಟುತ್ತಿದ್ದೆ.
ಆದರೂ ಅವರು ಕೊನೆಯ ವರೆಗೆ ನನ್ನ ಹೆಸರು ಜ್ಞಾಪಕ ಶಕ್ತಿಯಲ್ಲಿ ಉಳಿಸಿಕೊಂಡಿದ್ದು ಪರಶಿವನಾಗಿಯೇ ಹೊರತು ಪರಶುರಾಮನಾಗಿ ಅಲ್ಲ!! ಇವತ್ತಿಗೂ ಆಗಾಗ ಕಾಲೇಜ್ ಕಡೆ ಹೋದಾಗ ಎದುರಾದರೆ ಏನಯ್ಯ ಪರಶಿವ ಅಂತಾರೆ. ಗುರುಗಳ ಆ ಮಾತಿಗೆ ಉತ್ತರಿಸಲೊ ಕೋಪಗೊಳ್ಳಲೊ ಅಥವಾ ಅವರ ಬಾಯಲ್ಲಿ ನನ್ನ ಬದಲಾದ ಹೆಸರಿಗೆ ಮುಜುಗರ ಪಡಲೊ ತಿಳಿಯದೆ ಕಂಗಲಾಗ್ತಿನಿ..
ಅಂದ ಹಾಗೆ ನಿಮಗೆ ನನ್ನ ಹೆಸರು ಸರಿಯಾಗಿ ಏನಂತ ಗೊತ್ತಾಯ್ತ?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ
ಸುದ್ದಿದಿನ,ದಾವಣಗೆರೆ : ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಭರತ್ ಕುಮಾರ್ ಅವರು ಅಣಬೆಯ ಹೊಸ ಮೂರು ಶೀಲಿಂದ್ರ ಜಾತಿಗಳನ್ನು ಪತ್ತೆ ಹಚ್ಚಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಕರ್ನಾಟಕದ ಪಶ್ಚಿಮ ಘಟ್ಟಗಳ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಅರಣ್ಯ ಪ್ರದೇಶಗಳಲ್ಲಿ ನಡೆಸಿದ ಸಮಗ್ರ ಸಂಶೋಧನೆಯ ಫಲವಾಗಿ ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ಪಿಎಚ್ಡಿ ಸಂಶೋಧಕರಾದ ಭರತ್ ಕುಮಾರ್ ಎಸ್ ಅವರು ಮೂರು ಹೊಸ ಶಿಲೀಂಧ್ರ (ಮಶ್ರೂಮ್) ಜಾತಿಗಳನ್ನು ಪತ್ತೆಹಚ್ಚಿದ್ದಾರೆ.
ಮರಕುಲುಷಣ ಶಿಲೀಂಧ್ರಗಳ ವೈವಿಧ್ಯತೆ, ದಾಖಲೆಗೊಳಿಸುವಿಕೆ ಹಾಗೂ ಜೈವ ನಿಯಂತ್ರಣ ಸಾಮರ್ಥ್ಯದ ಅಧ್ಯಯನದ ಅಂಗವಾಗಿ ಈ ಸಂಶೋಧನೆ ಕೈಗೊಳ್ಳಲಾಗಿತ್ತು.
ಈ ಅಧ್ಯಯನವನ್ನು ಕ್ರಮಬದ್ಧ ವೈಜ್ಞಾನಿಕ ವಿಧಾನದಲ್ಲಿ ನಡೆಸಲಾಗಿದ್ದು, ಕ್ಷೇತ್ರ ಸಂಗ್ರಹಣೆಯ ವೇಳೆ ತಾಜಾ ಹಾಗೂ ಪರಿಪಕ್ವ ಫಲಧಾರಕ ದೇಹಗಳನ್ನು ಅವುಗಳ ಸ್ವಾಭಾವಿಕ ವಾಸಸ್ಥಳಗಳಿಂದ ಸಂಗ್ರಹಿಸಿ, ಸ್ಥಳದ ವಿವರಗಳು (GPS, ಎತ್ತರ), ಸಬ್ಸ್ಟ್ರೇಟ್ (ಮಣ್ಣು, ಮರ, ಆತಿಥೇಯ ಸಸ್ಯ), ದಿನಾಂಕ ಮತ್ತು ಪರಿಸರ ಮಾಹಿತಿ ದಾಖಲಿಸಲಾಗಿದೆ.
ಡಾ. ಎನ್. ಪ್ರವೀಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮತ್ತು ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ ಸಂಸ್ಥೆಯ ಅರಣ್ಯ ಪಥಾಲಜಿ ವಿಭಾಗದ ಹಿರಿಯ ವಿಜ್ಞಾನಿಯಾಗಿರುವ ಡಾ. ಮುತ್ತು ಕುಮಾರ್ ಅವರ ಸಹಯೋಗದಲ್ಲಿ ನಡೆದ ಈ ಸಂಶೋಧನೆಯಲ್ಲಿ Ganoderma swietenium, Fulvifomes ficicola ಹಾಗೂ Lachnocladium sevyakrishnarum ಎಂಬ ಮೂರು ಹೊಸ ಶಿಲೀಂಧ್ರ ಜಾತಿಗಳನ್ನು ಗುರುತಿಸಲಾಗಿದೆ.
ಮೊದಲ ಎರಡು ಜಾತಿಗಳಿಗೆ ಅವುಗಳ ಆತಿಥೇಯ ಮರಗಳಾದ Swietenia mahagoni ಮತ್ತು Ficus religiosa ಆಧಾರದ ಮೇಲೆ ಹೆಸರು ನೀಡಲಾಗಿದ್ದು, ಮೂರನೇ ಜಾತಿಯನ್ನು ಸಂಶೋಧಕರ ತಂದೆಯಾದ ಸೇವ್ಯ ನಾಯ್ಕ ಅವರ ಗೌರವಾರ್ಥವಾಗಿ Lachnocladium sevyakrishnarum ಎಂದು ನಾಮಕರಣ ಮಾಡಲಾಗಿದೆ.
ವರ್ಗೀಕರಣ (Taxonomy) ಮತ್ತು ವಂಶವೃಕ್ಷ (Phylogenetic) ಅಧ್ಯಯನಗಳ ಆಧಾರದ ಮೇಲೆ ಈ ಜಾತಿಗಳನ್ನು ಜಾಗತಿಕ ವಿಜ್ಞಾನ ಸಮುದಾಯಕ್ಕೆ ಪರಿಚಯಿಸಲಾಗಿದ್ದು, ಈ ಸಂಶೋಧನಾ ಫಲಿತಾಂಶಗಳು ಅಂತರರಾಷ್ಟ್ರೀಯ ಮಟ್ಟದ ಪೀರ್-ರಿವ್ಯೂ ಪತ್ರಿಕೆಗಳಾದ Journal of Sustainable Forestry (Taylor & Francis) ಮತ್ತು Indian Phytopathology (Springer Nature)ಗಳಲ್ಲಿ ಪ್ರಕಟವಾಗಿವೆ.
ಪಶ್ಚಿಮ ಘಟ್ಟಗಳು ಜಗತ್ತಿನ ಪ್ರಮುಖ ಜೈವ ವೈವಿಧ್ಯತೆಯ ಹಾಟ್ಸ್ಪಾಟ್ ಆಗಿರುವುದರಿಂದ, ಈ ಪತ್ತೆಗಳು ಅಲ್ಲಿ ಇನ್ನೂ ಅನಾವರಣಗೊಳ್ಳದ ಶಿಲೀಂಧ್ರ ವೈವಿಧ್ಯತೆಯನ್ನು ಹೈಲೈಟ್ ಮಾಡುತ್ತವೆ.
ಭರತ್ ಕುಮಾರ್ ಎಸ್ ಅವರು ತಮ್ಮ ಪಿಎಚ್ಡಿ ಸಂಶೋಧನಾ ಪಯಣದಲ್ಲಿ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕ ಕ್ಷೇತ್ರ ಕಾರ್ಯ, ಅಪರೂಪದ ಶಿಲೀಂಧ್ರ ಮಾದರಿಗಳ ಸಂಗ್ರಹಣೆ ಹಾಗೂ ಪ್ರಯೋಗಾಲಯದ ಅಣುಮಟ್ಟದ ವಿಶ್ಲೇಷಣೆಗಳ ಮೂಲಕ ಹಲವು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಇವರ ಸಂಶೋಧನೆ ಶಿಲೀಂಧ್ರಗಳ ವೈವಿಧ್ಯತೆಯನ್ನು ದಾಖಲಿಸುವುದರೊಂದಿಗೆ, ಅವುಗಳ ಜೈವ ನಿಯಂತ್ರಣ ಸಾಮರ್ಥ್ಯವನ್ನು ಅನ್ವೇಷಿಸಿ ಪರಿಸರ ಸ್ನೇಹಿ ರೋಗ ನಿಯಂತ್ರಣ ವಿಧಾನಗಳಿಗೆ ಹೊಸ ದಾರಿಯನ್ನು ತೆರೆದಿದೆ.
ಇದರ ಜೊತೆಗೆ, ಅವರು ತಮ್ಮ ಸಂಶೋಧನಾ ಲೇಖನಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಂಡಿಸಿದ್ದು, 2025ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ “ಯುವ ಸಂಶೋಧನಾ ವಿದ್ವಾಂಸ ಪ್ರಶಸ್ತಿ-2025” ಅನ್ನು ಪಡೆದಿದ್ದಾರೆ.
ಈ ಸಾಧನೆಗೆ ಪ್ರೋತ್ಸಾಹ ನೀಡಿದ ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ. ಫಾ. ರೋಷನ್ ಕ್ಯಾಸ್ಟೀಲಾನೊ ಹಾಗೂ ಉಪಕುಲಪತಿಗಳಾದ ರೆವ್. ಡಾ. ಫಾ. ವಿಕ್ಟರ್ ಲೋಬೋ ಎಸ್.ಜೆ ಅವರಿಗೆ, ಜೊತೆಗೆ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ನೀಲಂ ಮಿಶ್ರಾ ಅವರಿಗೆ ಸಂಶೋಧಕರು ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಶಿಲೀಂಧ್ರಗಳ ಮಹತ್ವವನ್ನು ಅರ್ಥಮಾಡಿಕೊಳ್ಳಲು ಈ ಪತ್ತೆಗಳು ಸಹಕಾರಿಯಾಗಿದ್ದು, ಭವಿಷ್ಯದ ಸಂಶೋಧನೆಗಳಿಗೆ ಮಹತ್ವದ ದಿಕ್ಕು ನೀಡುವಂತಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು
~ಗೋವರ್ಧನ ನವಿಲೇಹಾಳು
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಖಾಲಿಯಾದ ಈ ಕ್ಷೇತ್ರವು ಕುಟುಂಬದ ರಾಜಕೀಯ ಉತ್ತರಾಧಿಕಾರ, ಅಲ್ಪಸಂಖ್ಯಾತರ ಅಸಮಾಧಾನ ಮತ್ತು ಪಕ್ಷಾಂತರದ ಆರೋಪಗಳ ನಡುವೆ ತೀವ್ರ ಸ್ಪರ್ಧೆಯನ್ನು ಕಂಡಿತು. ಸುಮಾರು 5,708 ಮತಗಳ ಅಂತರದಿಂದ ಗೆದ್ದ ಸಮರ್ಥ್ ಅವರು ಶಾಮನೂರು ಕುಟುಂಬದ ಮೂರನೇ ಪೀಳಿಗೆಯ ಪ್ರತಿನಿಧಿಯಾಗಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಈ ಗೆಲುವು ಕಾಂಗ್ರೆಸ್ಗೆ ಸಂತೋಷದ ಸುದ್ದಿಯಾದರೂ, ಎಸ್ಡಿಪಿಐ ಪಡೆದ ಗಣನೀಯ 18,975 ಮತಗಳು ಮತ್ತು ಬಿಜೆಪಿಯ ತೀವ್ರ ಪೈಪೋಟಿ ರಾಜಕೀಯ ಸಮೀಕರಣಗಳಲ್ಲಿ ಹೊಸ ತಿರುವುಗಳನ್ನು ಸೂಚಿಸುತ್ತವೆ.
ಈ ಉಪಚುನಾವಣೆಯು ಕೇವಲ ಕ್ಷೇತ್ರೀಯ ಘಟನೆಯಾಗಿರದೆ, ಕರ್ನಾಟಕ ರಾಜಕೀಯದಲ್ಲಿ ಅಲ್ಪಸಂಖ್ಯಾತರ ಮತಬ್ಯಾಂಕ್, ಕುಟುಂಬ ರಾಜಕೀಯ ಮತ್ತು ಪ್ರತಿಪಕ್ಷದ ತಂತ್ರಗಳ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಯಿತು. ಶಾಮನೂರು ಕುಟುಂಬದ ದೀರ್ಘಕಾಲದ ಸೇವೆಯನ್ನು ಜನರು ಮೆಚ್ಚಿದ್ದರೂ, ಕಾಂಗ್ರೆಸ್ನಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನಿರಾಕರಣೆಯಿಂದಾಗಿ ಉಂಟಾದ ಅಸಮಾಧಾನವು ಎಸ್ಡಿಪಿಐಗೆ ಅವಕಾಶ ಮಾಡಿಕೊಟ್ಟಿತು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ತೀವ್ರ ಪ್ರಚಾರ ನಡೆಸಿದ್ದರೂ, ಕಾಂಗ್ರೆಸ್ನ ಅಭಿವೃದ್ಧಿ ಕಾರ್ಯಗಳು ಮತ್ತು ಐದು ಗ್ಯಾರಂಟಿಗಳ ಪ್ರಭಾವವು ಗೆಲುವಿಗೆ ನೆರವಾಯಿತು. ಆದರೆ ಈ ಗೆಲುವು ಸುಲಭವಾಗಿರಲಿಲ್ಲ; ಅದು ಎಲ್ಲಾ ಪಕ್ಷಗಳಿಗೂ ಪಾಠವನ್ನು ಕಲಿಸುತ್ತದೆ.
ಸಮರ್ಥ್ ಶಾಮನೂರು ಅವರ ಮುಂದಿನ ನಡೆ
ಕಿರಿಯ ವಯಸ್ಸಿನಲ್ಲಿ (ದೇಶದ ಎರಡನೇ ಅತಿ ಕಿರಿಯ ಶಾಸಕರಾಗಿ) ಗೆದ್ದ ಸಮರ್ಥ್ ಅವರು ತಮ್ಮ ಅಜ್ಜರ ರಾಜಕೀಯ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿಯಲ್ಲಿದ್ದಾರೆ. ಮುಂದಿನ ನಡೆಯು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರೀಕರಣಗೊಳ್ಳಬೇಕು. ದಾವಣಗೆರೆಯಂತಹ ನಗರ-ಗ್ರಾಮೀಣ ಮಿಶ್ರ ಕ್ಷೇತ್ರದಲ್ಲಿ ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವುದು ಮುಖ್ಯ. ಶಾಮನೂರು ಕುಟುಂಬದ ಹೆಸರು ಅಭಿವೃದ್ಧಿಗೆ ಸಮಾನವಾಗಿದೆ; ಇದನ್ನು ಮುಂದುವರಿಸಿ, ಎಲ್ಲಾ ಸಮುದಾಯಗಳ ನಡುವೆ ಸೇತುವೆಯಾಗಬೇಕು.
ವಿಶೇಷವಾಗಿ ಅಲ್ಪಸಂಖ್ಯಾತರ ಅಸಮಾಧಾನವನ್ನು ನಿವಾರಿಸುವುದು ಅಗತ್ಯ. ಟಿಕೆಟ್ ವಿವಾದದ ನಂತರ ಉಂಟಾದ ಬಿರುಕುಗಳನ್ನು ತುಂಬುವ ಮೂಲಕ ಏಕತೆಯ ಸಂದೇಶ ನೀಡಬೇಕು. ಯುವಕರಾಗಿರುವುದರಿಂದ ಆಧುನಿಕ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಪಾರದರ್ಶಕ ಆಡಳಿತದ ಮೂಲಕ ಹೊಸ ಚಿಂತನೆ ತರಬಹುದು. ರಾಜಕೀಯದಲ್ಲಿ ವೈಯಕ್ತಿಕ ದಾಳಿ ಬದಲು ನಿರ್ಮಾಣಾತ್ಮಕ ವಿಮರ್ಶೆಯನ್ನು ಪ್ರೋತ್ಸಾಹಿಸುವುದು ಅವರ ಯಶಸ್ಸಿಗೆ ಕಾರಣವಾಗುತ್ತದೆ. ಜನಸಂಪರ್ಕವನ್ನು ನಿರಂತರವಾಗಿ ಉಳಿಸಿಕೊಂಡು, ಕ್ಷೇತ್ರದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತುತಪಡಿಸುವುದು ಅವರ ಮುಂದಿನ ಗುರಿಯಾಗಬೇಕು. ಗೆಲುವು ಕುಟುಂಬದ ಆಸ್ತಿಯಲ್ಲ, ಜನರ ವಿಶ್ವಾಸದ ಫಲ; ಇದನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲು.
ಬಿಜೆಪಿಯ ಮುಂದಿನ ಸವಾಲುಗಳು
ಬಿಜೆಪಿ ಈ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ನ ಒಳಜಗಳಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳಲು ವಿಫಲವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದೆ ಬಿಜೆಪಿಗೆ ಸವಾಲುಗಳು ಹಲವು: ಮೊದಲನೆಯದು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ನಡುವೆ ವಿಶ್ವಾಸಾರ್ಹತೆಯನ್ನು ಕಟ್ಟುವುದು. ಧ್ರುವೀಕರಣದ ತಂತ್ರಗಳು ಸೀಮಿತ ಯಶಸ್ಸು ನೀಡುತ್ತವೆ ಎಂಬುದು ಈ ಫಲಿತಾಂಶ ಸೂಚಿಸುತ್ತದೆ.
ಕ್ಷೇತ್ರದಲ್ಲಿ ಸ್ಥಳೀಯ ನಾಯಕರನ್ನು ಬಲಪಡಿಸುವುದು, ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನಸಂಪರ್ಕ ಹೆಚ್ಚಿಸುವುದು ಅಗತ್ಯ. ರಾಜ್ಯ ಮಟ್ಟದಲ್ಲಿ ಪ್ರತಿಪಕ್ಷದ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು ಮುಂದಿನ ಚುನಾವಣೆಗಳಲ್ಲಿ ನೆರವಾಗುತ್ತದೆ. ಈ ಗೆಲುವು ಕಾಂಗ್ರೆಸ್ಗೆ ಎಚ್ಚರಿಕೆಯಾಗಿದ್ದರೆ, ಬಿಜೆಪಿಗೆ ಕ್ರಿಯಾಶೀಲತೆಯ ಅಗತ್ಯವನ್ನು ತೋರಿಸುತ್ತದೆ.
ಎಸ್ಡಿಪಿಐ ಮುಂದಿನ ಸವಾಲು
ಎಸ್ಡಿಪಿಐ ಈ ಚುನಾವಣೆಯಲ್ಲಿ ಗಮನಾರ್ಹ ಮತಗಳನ್ನು ಪಡೆದು ತನ್ನ ಉಪಸ್ಥಿತಿಯನ್ನು ಸಾಬೀತುಪಡಿಸಿದೆ. ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಂ ಸಮುದಾಯದ ಅಸಮಾಧಾನವನ್ನು ಬಳಸಿಕೊಂಡು ತನ್ನ ಮತಬ್ಯಾಂಕ್ನ್ನು ವಿಸ್ತರಿಸಿದೆ. ಆದರೆ ಇದು ಸವಾಲುಗಳನ್ನೂ ತಂದಿದೆ. ಮುಂದೆ ಎಸ್ಡಿಪಿಐಗೆ ಬ್ರಾಡ್ ಆಪೀಲ್ ಅಗತ್ಯ – ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಆರ್ಥಿಕ-ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಉದ್ಯೋಗದಂತಹ ವಿಷಯಗಳಲ್ಲಿ ಎಲ್ಲರಿಗೂ ಸ್ಪಂದಿಸುವ ಧೋರಣೆ ಬೆಳೆಸಬೇಕು.
ಚುನಾವಣಾ ಅನಿಯಮಗಳ ಆರೋಪಗಳು ಮತ್ತು ಮುಖ್ಯ ಪಕ್ಷಗಳ ನಡುವಿನ ತಂತ್ರಗಳ ನಡುವೆ ಸಿಲುಕದೆ, ಸ್ವತಂತ್ರ ರಾಜಕೀಯವನ್ನು ಬಲಪಡಿಸುವುದು ಮುಖ್ಯ. ದೀರ್ಘಕಾಲದ ಯಶಸ್ಸಿಗೆ ಸಮುದಾಯಗಳ ನಡುವಿನ ಸೇತುವೆಯಾಗುವುದು ಅಗತ್ಯ; ಇಲ್ಲದಿದ್ದರೆ ಮತ ವಿಭಜನೆಯ ಆರೋಪಗಳು ಮುಂದುವರಿಯುತ್ತವೆ.
ಈ ಫಲಿತಾಂಶವು ಭಾರತೀಯ ಜನತಂತ್ರದ ಜೀವಂತತೆಯನ್ನು ತೋರಿಸುತ್ತದೆ. ಗೆಲುವು ಸಂಭ್ರಮಿಸುವುದರ ಜೊತೆಗೆ, ಸೋಲಿನಿಂದ ಪಾಠ ಕಲಿಯುವುದು ಎಲ್ಲಾ ಪಕ್ಷಗಳ ಕರ್ತವ್ಯ. ಸಮರ್ಥ್ ಶಾಮನೂರು ಅವರು ತಮ್ಮ ಯುವಕರ ಉತ್ಸಾಹ ಮತ್ತು ಕುಟುಂಬ ಪರಂಪರೆಯನ್ನು ಸಂಯೋಜಿಸಿ, ಎಲ್ಲಾ ವರ್ಗಗಳ ಜನರ ಸೇವೆಗೆ ಮುಂದಾಗಬೇಕು. ಕಾಂಗ್ರೆಸ್ ಅಂತರ್ಗತ ಏಕತೆಯನ್ನು ಬಲಪಡಿಸಬೇಕು. ಬಿಜೆಪಿ ಮತ್ತು ಎಸ್ಡಿಪಿಐ ತಮ್ಮ ತಂತ್ರಗಳನ್ನು ಪುನರ್ ಪರಿಶೀಲಿಸಿ, ಜನಕೇಂದ್ರಿತ ರಾಜಕೀಯಕ್ಕೆ ಮರಳಬೇಕು.
ದಾವಣಗೆರೆ ದಕ್ಷಿಣದ ಜನರು ಅಭಿವೃದ್ಧಿ ಮತ್ತು ಸಾಮರಸ್ಯವನ್ನು ಬಯಸುತ್ತಾರೆ. ಹೊಸ ಶಾಸಕರು ಈ ನಿರೀಕ್ಷೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ. ರಾಜಕೀಯವು ಸೇವೆಯಾಗಬೇಕೇ ವಿನಾ ಕುಟುಂಬ ಅಥವಾ ಸಮುದಾಯ ದ್ವೇಷದ ಆಟವಾಗಬಾರದು. ಈ ಉಪಚುನಾವಣೆಯ ಪಾಠಗಳು ರಾಜ್ಯದ ಭವಿಷ್ಯದ ಚುನಾವಣೆಗಳಿಗೆ ದಾರಿ ತೋರಿಸುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ದೇಗುಲಗಳಲ್ಲಿ ನಿಧಿ ಶೋಧನೆ ಯತ್ನ ; ಆರು ಜನರ ಬಂಧನ
ಸುದ್ದಿದಿನ,ದಾವಣಗೆರೆ:ತಾಲ್ಲೂಕಿನ ಕಾಡಜ್ಜಿ ಗ್ರಾಮದ ದೇಗುಲಗಳಲ್ಲಿ ನಿಧಿ ಶೋಧಿಸಲು ಯತ್ನಿಸಿದ ಆರು ಜನರ ಆರೋಪಿಗಳನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಾಡಜ್ಜಿ ಗ್ರಾಮದ ಬಸವರಾಜ (42), ಮಲೇಬೆನ್ನೂರಿನ ಪ್ರಕಾಶ ಆಚಾರಿ (48), ಮಂಜುನಾಥ (51), ಪ್ರಕಾಶ (42), ಹೊನ್ನಾವರ ತಾಲ್ಲೂಕಿನ ಇಡಗುಂಜಿ ಗ್ರಾಮದ ರಾಮನಾಥ ಪೈ (52), ಸಾಗರ ತಾಲ್ಲೂಕಿನ ಬ್ಯಾಕೋಡು ಗ್ರಾಮದ ಶ್ರೀಕಾಂತ ಭಟ್ (51) ಬಂಧಿತರು.
ಆರೋಪಿಗಳು ಏ. 22ರಂದು ರಾತ್ರಿ ಕಾಡಜ್ಜಿ ಗ್ರಾಮದ ಚೌಡಮ್ಮ ದೇಗುಲದಲ್ಲಿ ನಿಧಿ ಶೋಧ ಮಾಡಿದ್ದರು. ಏ.29ರಂದು ರಾತ್ರಿ ಪೇಟೆ ದುರುಗಮ್ಮ ದೇಗುಲದ ಬಳಿ ಜೆಸಿಬಿ ಮೂಲಕ ಗುಂಡಿ ತೆಗೆದಿದ್ದರು. ದುಷ್ಟ ಶಕ್ತಿ ಪೂಜೆ, ಹೋಮ– ಹವನ ಮಾಡಿ ಗರ್ಭಗುಡಿಯಲ್ಲಿ ನಿಧಿ ತೆಗೆಯಲು ಮುಂದಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಆರೋಪಿಗಳನ್ನು ಹಿಡಿಯಲು ಯತ್ನಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆಯ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಸುಗಮ ಮತ ಎಣಿಕೆಗೆ ಸಜ್ಜು
-
ಅಂಕಣ2 days agoಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು
-
ದಿನದ ಸುದ್ದಿ5 days agoದಾವಣಗೆರೆ | ದೇಗುಲಗಳಲ್ಲಿ ನಿಧಿ ಶೋಧನೆ ಯತ್ನ ; ಆರು ಜನರ ಬಂಧನ
-
ದಿನದ ಸುದ್ದಿ7 hours agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ

