Connect with us

ಅಂತರಂಗ

ಅರಿಮೆಯ ಅರಿವಿರಲಿ-8 : ಶೀಲ ಅಶ್ಲೀಲ

Published

on

  • ಯೋಗೇಶ್ ಮಾಸ್ಟರ್

ಶೀಲದ ಗೀಳಿನ ಸಿನಿಮಾಗಳು

ಶೀಲ ಅಶ್ಲೀಲದರಿಮೆ (Madonna/Whore Complex)ನಮ್ಮ ಭಾರತೀಯ ಸಿನಿಮಾಗಳಲ್ಲಿ ಚೆನ್ನಾಗಿ ಅರ್ಥವಾಗುತ್ತದೆ. ಪಾಪ, ಅವರಾದರೋ ಹೊಸದನ್ನೇನೂ ಸೃಷ್ಟಿಸಿ ತೋರುವುದಲ್ಲ. ಸಮಾಜದಲ್ಲಿ ಸಾಮಾನ್ಯವಾಗಿರುವ ಮನಸ್ಥಿತಿಯನ್ನೇ ವಿಜೃಂಭಿಸಿ ತೋರಿಸುತ್ತಾರೆ. ಆಗ ಸಮಾಜವೂ ಅದನ್ನು ಮೆಚ್ಚುವುದು ಮಾತ್ರವಲ್ಲದೇ ತನ್ನ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಿಕೊಳ್ಳುತ್ತದೆ.

“ಹೆಣ್ಣಿನ ಬಾಳು ಹಣ್ಣಿನ ಹೋಳು, ಜಾರಿದರೊಮ್ಮೆ ಮಣ್ಣಿನ ಧೂಳು” ಎಂದು ಹಾಡುವ ಹೆಣ್ಣು ತನ್ನ ಶೀಲವನ್ನು ಎಷ್ಟು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಬಹಳ ಸೂಕ್ಷ್ಮವಾಗಿರುವ ಗಾಜಿನ ವಸ್ತುವಂತೆ ಶೀಲ ಎನ್ನುವುದು. ಒಮ್ಮೆ ಬಿತ್ತೋ, ಒಡೆದು ಹೋಯಿತೋ, ಮುಗಿಯಿತು. ಅದಿನ್ನು ಬಿಸಾಡಬೇಕು. ತ್ರಿವೇಣಿಯವರ ಶರಪಂಜರದಲ್ಲಿ ಕಾವೇರಿಗೆ ಆವರಿಸಿದ್ದ ಸಮಸ್ಯೆ ಇದೆಯೇ. ಅಂದೆಂದೋ ಅಲ್ಲೆಲ್ಲೋ ಯಾರೊಂದಿಗೋ ಕಲೆತಿದ್ದ ವಿಷಯವನ್ನು ಯಾರೊಂದಿಗೂ ಹೇಳಿಕೊಳ್ಳದೇ ಹೋಗಿದ್ದಳು. ಯಾರಿಗೂ ಅದು ಗೊತ್ತಿಲ್ಲದಿದ್ದರೂ ಅವಳಿಗೇ ಅದನ್ನು ಸಮ್ಮತಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅದೇ ಮನೋರೋಗದಲ್ಲಿ ಬಳಲುವ ಅವಳು ಸಾಮಾಜಿಕ ಮತ್ತು ಕೌಟುಂಬಿಕ ಸಂಘರ್ಷಗಳಿಂದ ಸಮಸ್ಯೆ ಬಗೆಹರಿಯದೇ ಮತ್ತೆ ಮನೋರೋಗಿಯಾಗಿಯೇ ಉಳಿದುಬಿಡುತ್ತಾಳೆ.

ಈಗಾದರೂ ಅತ್ಯಾಚಾರಕ್ಕೊಳಗಾದ ಹೆಣ್ಣಿನ ನೋವು ಮತ್ತು ಅತ್ಯಾಚಾರಿಯ ದೌರ್ಜನ್ಯ ಮತ್ತು ಕ್ರೌರ್ಯವನ್ನು ನಾವು ಗುರುತಿಸುತ್ತಿದ್ದೇವೆ. ಆದರೆ ಈ ಮೊದಲು ನಮ್ಮ ಸಿನಿಮಾಗಳಲ್ಲಿ ಕ್ರೌರ್ಯ ಮತ್ತು ನೋವಿಗಿಂತಲೂ ಕೇಂದ್ರೀಕರಿಸುತ್ತಿದ್ದದ್ದು ಶೀಲವನ್ನು ಕಳೆದುಕೊಂಡಳು ಎಂಬ ವಿಷಯದ ಕುರಿತು. ಮಕ್ಕಳ ಸೈನ್ಯ ಸಿನಿಮಾದಲ್ಲಿ ನಾಯಕ ಮತ್ತು ನಾಯಕಿಗೆ ಅನೇಕ ಮಕ್ಕಳಿರುತ್ತಾರೆ. ಚಿತ್ರದಲ್ಲಿ ತೋರುವಂತೆ ಆತ ವಿಧುರ ಮತ್ತು ಆಕೆ ವಿಧವೆ. ಅವರಿಬ್ಬರೂ ಪ್ರೀತಿಸುತ್ತಾರೆ. ಅವರಿಬ್ಬರಿಗೂ ಇದ್ದ ಸಮಸ್ಯೆ ಮಕ್ಕಳ ಸಾಮರಸ್ಯ. ಅದೆಲ್ಲಾ ಸರಿ ಹೋಗುತ್ತದೆ. ಕೊನೆಗೆ ಅವರಿಬ್ಬರೂ ಮದುವೆಯಾಗುತ್ತಾರೆ.

ಆದರೆ, ಇಲ್ಲಿ ಶೀಲ ಅಶ್ಲೀಲದ ಅರಿಮೆ ತಲೆ ಎತ್ತುತ್ತದೆ. ನಾಯಕಿ ವಿಧವೆಯಾಗಿದ್ದರೆ ಮತ್ತು ಹಲವು ಮಕ್ಕಳ ತಾಯಿ ಎಂದರೆ ಹಿಂದಿನ ಗಂಡನ ಜೊತೆ ಮಲಗಿರುವಾಕೆ. ಈಗ ನಾಯಕನಿಗೆ ಆಕೆ ಕನ್ಯೆಯಲ್ಲ. ಹಾಗಾಗಿ ಕತೆಯಲ್ಲಿ ಒಂದು ಟ್ವಿಸ್ಟ್. ಏನೆಂದರೆ ಆ ಮಕ್ಕಳೆಲ್ಲಾ ಅವಳ ಮಕ್ಕಳಲ್ಲ. ಅವಳ ಅಕ್ಕನದು. ಅವಳು ಅಪಘಾತವೊಂದರಲ್ಲಿ ಸತ್ತಿರುತ್ತಾಳೆ. ಹೀಗೆ ನಾಯಕಿಯನ್ನು ಶೀಲವಂತೆಯಾಗಿ ಉಳಿಸಿದ್ದಾಯಿತು. ಒಂದೆರಡಲ್ಲ, ಇಂತಹ ಉದಾಹರಣೆಗಳು ಸಾಲುಸಾಲು. ಒಬ್ಬಳು ಅತ್ಯಾಚಾರಕ್ಕೆ ಒಳಗಾದರೆ ಅಥವಾ ಪ್ರೀತಿಸಿ, ಮಲಗಿ, ಗರ್ಭಧರಿಸಿದರೆ ಅವಳು ಕಡ್ಡಾಯವಾಗಿ ಕೆರೆನೋ ಬಾವಿಯನ್ನೋ ನೋಡಿಕೊಳ್ಳಲೇ ಬೇಕು.

ಮೊದಲೇ ಹೇಳಿದಂತೆ ಇದು ಸಿನಿಮಾದವರ ಸಮಸ್ಯೆಯಲ್ಲ. ಸಮಾಜದಲ್ಲಿ ವ್ಯಾಪಕವಾಗಿದ್ದಂತಹ ಮನಸ್ಥಿತಿಯನ್ನು ಅವರು ಗಟ್ಟಿಗೊಳಿಸುತ್ತಾರೆ. ಇಲ್ಲವಾದರೆ ಅವರ ಸಿನಿಮಾವನ್ನು ಜನ ತಿರಸ್ಕರಿಸುತ್ತಾರೆ. ಮುತ್ತು ಒಂದು ಮುತ್ತು ಎಂಬ ಸಿನಿಮಾ. ಎಂ ಕೆ ಇಂದಿರಾ ಅವರ ಕಾದಂಬರಿ ಆಧಾರಿತ. ಅನಂತನಾಗ್ ನಾಯಕ, ರೂಪಾ ಚಕ್ರವರ್ತಿ ನಾಯಕಿ. ಆ ಸಿನಿಮಾದಲ್ಲಿ ಒಳ್ಳೆಯ ಹಾಡುಗಳಿದ್ದವು, ನಾಯಕ ನಾಯಕಿ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದರು. ಆದರೆ ಸಿನಿಮಾ ಸೋತಿತು. ಏಕೆಂದರೆ, ನಾಯಕಿ ಒಬ್ಬಳು ಮೂಗಿ. ಅವಳು ಎಲ್ಲೋ ಬೆಳೆಯುತ್ತಿರುತ್ತಾಳೆ. ನಾಯಕ ನೋಡುತ್ತಾನೆ ಪ್ರೀತಿಸುತ್ತಾರೆ. ಮದುವೆಯಾಗಬೇಕೆಂದು ಬಯಸುತ್ತಾರೆ. ನಾಯಕಿಯ ತಾಯಿಯೂ ವಿರೋಧಿಸುತ್ತಾರೆ. ನಾಯಕನ ತಂದೆಯೂ ವಿರೋಧಿಸುತ್ತಾರೆ. ಕಾರಣ ಹೇಳಿರುವುದಿಲ್ಲ.

ನಾಯಕ ಮತ್ತು ನಾಯಕಿ ಎಲ್ಲರ ವಿರೋಧವನ್ನು ಮೀರಿ ದೇವಸ್ಥಾನದಲ್ಲಿ ಮದುವೆಯಾಗುವಾಗ ತಂದೆ ಓಡೋಡಿ ಬರುತ್ತಾನೆ. ಮದುವೆಯನ್ನು ನಿಲ್ಲಿಸಲು ಆದರೆ ಕೈಗೆ ಅಕ್ಷತೆ ಕೊಟ್ಟುಬಿಡುತ್ತಾರೆ. ಅವನು ಹಾಕಿಬಿಡುತ್ತಾನೆ.ಮದುವೆಯಾಗಿಬಿಡುತ್ತದೆ. ವಿಷಯ ತಿಳಿಯುತ್ತದೆ. ಏನೆಂದರೆ, ಅವರಿಬ್ಬರೂ ಒಂದೇ ತಂದೆಯ, ಆದರೆ ಬೇರೆ ಬೇರೆ ತಾಯಿಯ ಮಕ್ಕಳು. ಬೇರೆ ಬೇರೆ ಕಡೆ ಬೆಳೆದಿರುತ್ತಾರೆ. ಮಾನವ ಸಂಬಂಧದಲ್ಲಿ ನೋಡಿದರೆ ಅವರಿಬ್ಬರೂ ಅಣ್ಣ ತಂಗಿಯರಾಗಬೇಕು. ಸಿನಿಮಾ ಗೆಲ್ಲಲಿಲ್ಲ. ಸಿನಿಮಾ ಮಾತ್ರವಲ್ಲ. ಅದು ಬಹಳ ಜನಪ್ರಿಯ ಮತ್ತು ನೇರ ಮಾಧ್ಯಮವಾದ್ದರಿಂದ ಉದಾಹರಣೆಯಾಗಿ ತೆಗೆದುಕೊಂಡೆ. ಇತರ ಕಲೆಗಳು ಮತ್ತು ಜನಪದವೂ ಸೇರಿದಂತೆ ಇತರ ಸಾಹಿತ್ಯವೂ ಕೂಡಾ ಶೀಲ ಅಶ್ಲೀಲಗಳಲ್ಲಿ ಮಿಂದೆದ್ದಿವೆ.

ಶೀಲ ಅಶ್ಲೀಲ

ಶೀಲ ಅಶ್ಲೀಲದ ಅರಿಮೆ ಸಾಮಾನ್ಯವಾಗಿ ಗಂಡಸರಲ್ಲಿಯೇ ಕಾಣುವುದು. ಅಥವಾ ಅವರಿಂದಲೇ ಪ್ರಾರಂಭವಾಗಿರುವುದು. ಗಂಡಸರು ಹೆಣ್ಣನ್ನು ಒಂದೋ ಶೀಲವಂತೆ ಅಥವಾ ಪತಿವ್ರತೆಯಾಗಿಯೇ ನೋಡಲು ಇಷ್ಟಪಡುವರು. ಇವರಿಗೆ ತನ್ನ ಹೆಣ್ಣು ಯಾರೊಂದಿಗೂ ಹಾಸುಗೆಯನ್ನು ಹಂಚಿಕೊಂಡಿರುವುದನ್ನು ಕಲ್ಪಿಸಿಕೊಳ್ಳಲೇ ಸಾಧ್ಯವಿಲ್ಲ. ಮದುವೆಯಾಗುವಾಗ ತಾನು ಮದುವೆಯಾಗುವ ಹೆಣ್ಣಿನ ಕನ್ಯಾಪೆÇರೆ ಹರಿದಿರಬಾರದು ಎಂದು ಆಶಿಸುವವರು ಇವರಂತವರೇ. ಅವರ ಮನಸ್ಸಿನಲ್ಲಿ ಪರಿಶುದ್ಧವಾಗಿರುವ ಅಥವಾ ಶೀಲವಂತೆಯಾಗಿರುವ ಹೆಣ್ಣಿನ ಚಿತ್ರಣವಿರುತ್ತದೆ. ಆ ವರ್ತನೆಗಳನ್ನು ಪ್ರದರ್ಶಿಸಿದರೆ, ಅವರ ಮಾನದಂಡಗಳ ಪ್ರಕಾರ ನಡೆದುಕೊಂಡರೆ ಅವರಿಗೆ ಸಮಾಧಾನವಿರುತ್ತದೆ. ಅದರಲ್ಲಿ ಏನೇನೆಲ್ಲಾ ಇರಬಹುದು. ತನ್ನ ಹೆಂಡತಿ ಅಥವಾ ತಮ್ಮ ಮನೆಯ ಹೆಣ್ಣು ಮಕ್ಕಳು ಯಾವ ಗಂಡಸರ ಜೊತೆಗೆ ಕೈ ಕುಲುಕಬಾರದು, ಗಾಡಿಯಲ್ಲಿ ಹಿಂದೆ ಕುಳಿತುಕೊಂಡು ಹೋಗಬಾರದು, ನಗುನಗುತ್ತಾ ಗಂಡಸರ ಜೊತೆ ಮಾತಾಡಬಾರದು; ಇತ್ಯಾದಿಗಳೂ ಕೂಡ.

ಶೀಲ ಅಶ್ಲೀಲವನ್ನು ಇನ್ನೂ ಸ್ವಲ್ಪ ನಿಖರವಾಗಿ ಸುಶೀಲ ದುಶ್ಶೀಲವೆಂದೂ ಕರೆಯಬಹುದು.
ಸಾಮಾನ್ಯವಾಗಿ ಶೀಲಾಧಾರಿತ ನಿಬಂಧನೆಗಳು ಆ ವ್ಯಕ್ತಿಯ ಪ್ರಾದೇಶಿಕ ಸಂಸ್ಕೃತಿಯನ್ನು ಅಥವಾ ವ್ಯಕ್ತಿಯು ಬೆಳೆದುಬಂದಿರುವ ಸಮಾಜೋಧಾರ್ಮಿಕ ಸಂಸ್ಕೃತಿಯನ್ನೂ ಅವಲಂಬಿಸಿರಬಹುದು. ಶೀಲೆ ದುಶ್ಶೀಲೆಯ ಅರಿಮೆ ಇರುವಂತಹ ರಾಜಾಸ್ತಾನದ ಪುರುಷನಿಗೆ ತಲೆಯ ಮೇಲೆ ಸೆರಗಿಲ್ಲದೆ ಓಡಾಡುವ ಹೆಣ್ಣು ಮಗಳು, ಇದೇ ಬಗೆಯ ಕಾಂಪ್ಲೆಕ್ಸ್ ಇರುವ ಮುಸಲ್ಮಾನ ಪುರುಷನಿಗೆ ದೇಹದ ಉಬ್ಬುತಗ್ಗುಗಳು ಕಾಣುವಂತೆ ಬಟ್ಟೆ ಧರಿಸಿರುವ ಹೆಣ್ಣು ದುಶ್ಶೀಲೆಯಾಗಿ ಕಾಣಬಹುದು. ಹಿಂದೂ ಸನಾತನ ಸಂಪ್ರದಾಯಸ್ಥನಿಗೆ ಸ್ಕರ್ಟ್ ಹಾಕಿರುವ ಹೆಣ್ಣುಮಗು ದುಶ್ಶೀಲೆಯಾಗಿಯೂ, ಸೀರೆ ಉಟ್ಟು ಮೈತುಂಬಾ ಸೆರಗನ್ನು ಹೊದ್ದವಳು ಸುಶೀಲೆಯಾಗಿಯೂ ತೋರುವಳು.

ಹೀಗೆ ಅವರವರ ಧಾರ್ಮಿಕತೆ, ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆಗಳ ವಿನ್ಯಾಸಗಳೂ ಅವರ ಅರಿಮೆಗಳಲ್ಲಿ ಹೊಕ್ಕಿರುತ್ತವೆ. ಹಿಂದಿನ ಸಿನಿಮಾಗಳನ್ನು ನೆನಪಿಸಿಕೊಳ್ಳಿ. ಅವಳು ಶೀಲವಂತೆಯಾಗಿರಬೇಕೆಂದರೆ ಸೀರೆಯುಟ್ಟಿರಬೇಕು, ಮೈ ತುಂಬಾ ಸೆರಗು ಹೊದ್ದಿರಬೇಕು, ಹಣೆಯಲ್ಲಿ ಕುಂಕುಮವಿರಬೇಕು. ದೊಡ್ಡವರಿಗೆ ಗೌರವ ಕೊಡಬೇಕು. ಅವಳು ಖಂಡಿತ ದೈವಭಕ್ತೆಯಾಗಿರಬೇಕು. ಅವಳು ದುಶ್ಶೀಲೆಯಾಗಿದ್ದರೆ, ಪಾಶ್ಚಾತ್ಯ ಉಡುಪು ತೊಟ್ಟಿರುತ್ತಾಳೆ. ಹಣೆಯಲ್ಲಿ ಕುಂಕುಮವಿರುವುದಿಲ್ಲ. ಕೇರ್ ಫ್ರೀ ಆಗಿರುತ್ತಾಳೆ; ಇತ್ಯಾದಿ.

ಒಟ್ಟಾರೆ ಸುಶೀಲೆ ದುಶ್ಶೀಲೆಗಳ ಅರಿಮೆಯವರು ಹೆಣ್ಣನ್ನು ಯಾವಾಗಲೂ ವಿಪರೀತವಾದ ದೃಷ್ಟಿಕೋನಗಳಲ್ಲೇ ನೋಡುತ್ತಿರುತ್ತಾರೆ.ತಮ್ಮ ಸಂಪರ್ಕದ ಹೆಣ್ಣಿನ ಜೊತೆಗೆ ಯಾವುದೇ ರೀತಿಯ ಭಾವನಾತ್ಮಕ ಸಂಬಂಧ ಮತ್ತು ಲೈಂಗಿಕ ಸಂಬಂಧಗಳನ್ನು ಹೊಂದುವುದರಲ್ಲಿಯೂ ಈ ಅರಿಮೆ ಅವರನ್ನು ಬಹಳವಾಗಿ ಕಾಡುತ್ತಿರುತ್ತದೆ. ಈ ಅರಿಮೆಯಿಂದ ಬಳಲುತ್ತಿರುವವರ ವರ್ತನೆಯು ತಮ್ಮ ಹೆಣ್ಣುಗಳನ್ನು ಅನುಮಾಸ್ಪದವಾಗಿ ನೋಡುತ್ತಿರುವಂತೆಯೂ ಕಾಣುತ್ತದೆ. ಹೌದು ಕೂಡಾ. ಈ ಅರಿಮೆಯುಳ್ಳವರು ತಮ್ಮ ಹೆಣ್ಣು ಇನ್ನೊಬ್ಬ ಗಂಡಸರೊಂದಿಗೆ ಸಲುಗೆಯಿಂದ ವರ್ತಿಸಿದರೆ ಅವರು ಆ ಗಂಡಸನ್ನು ಬೈಯುವುದಿಲ್ಲ. ತಮ್ಮ ಹೆಂಗಸನ್ನೇ ಬೈಯುತ್ತಾರೆ, ಆಕ್ಷೇಪಿಸುತ್ತಾರೆ. ಹೆಣ್ಣಾದವಳು ಸರಿಯಾಗಿ ಇರಬೇಕು ಎಂದು. ತನ್ನ ಶೀಲವನ್ನು ಕಾಪಾಡಿಕೊಳ್ಳುವುದು ಅವಳದೇ ಹೊಣೆಗಾರಿಕೆ ಎಂದು ನಿರೀಕ್ಷಿಸುತ್ತಾನೆ.

ಶೀಲಪ್ರಮಾಣ

ಈ ಅರಿಮೆಯ ಗಂಡಸು ಸೌಂದರ್ಯವೋ ಅಥವಾ ಪ್ರತಿಭೆಯೋ ಅಥವಾ ಚಟುವಟಿಕೆಗಳೋ; ಯಾವುದೋ ರೀತಿಯಲ್ಲಿ ತನಗೆ ಆಕರ್ಷಕವಾದಂತಹ ಹೆಣ್ಣಿಗೆ ಮಾರು ಹೋಗುತ್ತಾನೆ. ಆದರೆ ಆ ಆಕರ್ಷಣೆ ಅವನಲ್ಲಿ ಬಹುಕಾಲ ನಿಲ್ಲದು. ಅವನು ಅವಳ ಸುಶೀಲ ಮತ್ತು ದುಶ್ಶೀಲಗಳ ಮಾನದಂಡದಲ್ಲಿಯೇ ಅಳೆಯಲು ಪ್ರಾರಂಭಿಸಿ ನಂತರ ಅವನಿಂದ ಗುಣಪ್ರಮಾಣಪತ್ರವನ್ನು ಪಡೆಯದಿದ್ದರೆ ಸಂಘರ್ಷ ಪ್ರಾರಂಭವಾಗುತ್ತದೆ.ಇದು ಗಂಡಸಿನ ಸಮಸ್ಯೆ ಎಂದು ನಿರಾಳವಾಗಲು ಆಗದು. ಈ ಅರಿಮೆ ಹೆಂಗಸರಲ್ಲಿಯೂ ಇರುತ್ತದೆ. ತಮ್ಮಂತದೇ ಹೆಣ್ಣು ಸುಶೀಲೆಯೋ ದುಶ್ಶೀಲೆಯೋ ಎಂದು ಆಲೋಚಿಸುತ್ತಿರುತ್ತಿರುತ್ತಾರೆ. ಅವರ ಮಾನದಂಡದ ಪ್ರಕಾರ ಇರದ ಹೆಣ್ಣು ಮಕ್ಕಳನ್ನು ತಿರಸ್ಕರಿಸುತ್ತಾರೆ. ನಿಂದಿಸುತ್ತಾರೆ. ಅನುಮಾನದಿಂದ ನೋಡುತ್ತಾರೆ. ಅಷ್ಟೆಲ್ಲಾ ಏಕೆ? ಹೆಂಗಸರನೇಕರು ಇತರ ಹೆಂಗಸರು ತುಂಡು ಬಟ್ಟೆಯನ್ನು ಧರಿಸುವುದು, ಅಥವಾ ಮೈ ಕಾಣುವಂತ ವಿನ್ಯಾಸವಿರುವ ವಸ್ತ್ರವನ್ನು ಧರಿಸುವುದನ್ನೂ ಕೂಡಾ ಸಹಿಸುವುದಿಲ್ಲ. ಅವರಿಗೆ ಅಂತವನ್ನು ಕಾಣುವುದು ತೀರಾ ಮುಜುಗರ.

ಆದ್ದರಿಂದಲೇ ವಸ್ತ್ರಸಂಹಿತೆಯನ್ನು ಸಂಸ್ಕೃತಿಯ ಅಥವಾ ಧಾರ್ಮಿಕತೆಯ ಭಾಗವನ್ನಾಗಿಸಿಕೊಂಡು ಅದನ್ನು ಎತ್ತಿ ಹಿಡಿಯುತ್ತಾ ತಮ್ಮ ತಿರಸ್ಕಾರವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಈ ಅರಿಮೆಯ ಅಸಹನೆಯು ಯಾವ ಯಾವ ವಿಪರೀತಗಳನ್ನು ಮುಟ್ಟುವುದೋ ಹೇಳಲಾಗದು. ಈ ಅರಿಮೆಯಿಂದಲೇ ಅನೇಕಾನೇಕ ಬೈಗುಳಗಳು ಹೆಣ್ಣನ್ನು ಕೇಂದ್ರೀಕರಿಸಿರುವವು. ಇಂಗ್ಲೀಶಲ್ಲಿ ಬಿಚ್, ವೋರ್ ಇಂದ ಹಿಡಿದು ಕನ್ನಡದ ಸೂಳೆ, ಬೋಳಿಮಗನೇ, ಸೂಳೆಮುಂಡೆ, ಹಾದರಗಿತ್ತಿ, ಚಿನ್ನಾಲಿ, ಚಂಬೇಲಿ; ಇನ್ನೂ ಅನೇಕಾನೇಕ ಪದಗಳು ಹುಟ್ಟಿರುವವು.

ಒಟ್ಟಾರೆ ಸುಶೀಲ ದುಶ್ಶೀಲದ ಅರಿಮೆಯ ಬಲಿಪಶು ಹೆಣ್ಣು. ಅದು ಹೆಣ್ಣಿಗಿರಲಿ ಗಂಡಿಗಿರಲಿ. ಗಂಡು ತಪ್ಪು ಮಾಡಿದರೂ ಅವನನ್ನು ಬೈಯುವುದು ಹೆಣ್ಣಿನ ಮೂಲದಿಂದಲೇ. ಗಂಡಸರು ಜಗಳವಾಡುವಾಗಲೂ ಪರಸ್ಪರ ತಾಯಿ, ಹೆಂಡತಿ, ಸೋದರಿಯರನ್ನು ಲೈಂಗಿಕ ಸಂಬಂಧದ ಬೈಗುಳಗಳಲ್ಲಿ ಬಳಸಿಕೊಳ್ಳುವುದು ಈ ಅರಿಮೆಯ ಅಭಿವ್ಯಕ್ತಿಯೇ. ಎಷ್ಟೋ ಗಂಡಸರು ವಿಧವೆಯರ ಮತ್ತು ವಿಚ್ಛೇದಿತರ ವಿವಾಹಗಳನ್ನು ಪುರಸ್ಕರಿಸುತ್ತಾರೆ. ಬೆಂಬಲಿಸುತ್ತಾರೆ. ಆದರೆ ತಾವು ಮಾತ್ರ ಅಂತಹ ವಿವಾಹಗಳನ್ನು ಮಾಡಿಕೊಳ್ಳಲು ಬಯಸುವುದಿಲ್ಲ. ತಮ್ಮ ಹೆಣ್ಣು ಕನ್ಯೆಯೇ ಆಗಿರಬೇಕೆಂದು ಬಯಸುತ್ತಾರೆ. ತಮ್ಮ ಹೆಣ್ಣು ಬೇರೆ ಪುರುಷನೊಂದಿಗೆ ಮಲಗಿಕೊಂಡಿರುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

ಹಾಗೆಯೇ ಕೆಲವು ಕೆಟಗೆರಿ ಪುರುಷರು ತಮಗೆ ಯಾವುದೇ ಹೆಣ್ಣು ನಿರಾಯಾಸವಾಗಿ ತಮ್ಮ ಲೈಂಗಿಕ ವಾಂಛೆಗೆ ಬಳಕೆಯಾಗುವುದನ್ನು ಬಯಸುತ್ತಾರೆ ಮತ್ತು ಸುಖಿಸುತ್ತಾರೆ. ಆದರೆ, ತಮ್ಮ ಮನೆಯ ಹೆಣ್ಣುಮಕ್ಕಳು ಆ ರೀತಿಯಲ್ಲಿ ಎಲ್ಲಿ ಬಳಕೆಯಾಗಿಬಿಡುತ್ತಾರೋ ಎಂಬ ಅನುಮಾನ ಮತ್ತು ಭಯದಿಂದ ಅತಿಯಾದ ಗಮನವನ್ನು ಕೊಡುತ್ತಾರೆ. ಇದರಿಂದ ಅವರ ಮನೆಯ ಹೆಣ್ಣು ಮಕ್ಕಳಿಗೆ ಹಿಂಸೆಯಾಗುತ್ತಿರುತ್ತದೆ. ತಮ್ಮನ್ನು ಅನುಮಾನಿಸುತ್ತಾರೆ ಮತ್ತು ಅಪಮಾನಿಸುತ್ತಾರೆ ಎಂದು ಅನ್ನಿಸುತ್ತಿರುತ್ತದೆ. ಇದರಿಂದ ಸಂಬಂಧಗಳು ಸಡಿಲಗೊಳ್ಳುತ್ತವೆ ಹಾಗೂ ಹಳಸತೊಡಗುತ್ತವೆ.

ಆತ್ಮಾವಲೋಕನ ಮಾಡಿಕೊಂಡಾಗ ತಮ್ಮಲ್ಲಿ ಇಂತಹ ಅರಿಮೆಯನ್ನು ಕಂಡುಕೊಂಡರೆ ಎಚ್ಚೆತ್ತುಕೊಂಡು ಅದೊಂದು ತಮ್ಮಲ್ಲಿರುವ ಮಾನಸಿಕ ಸಮಸ್ಯೆ ಎಂದು ತಿಳಿದು ಪ್ರಜ್ಞಾವಂತಿಕೆಯಿಂದ ವರ್ತಿಸತೊಡಗಿದರೆ ಸಂಬಂಧಗಳು ಮೌಲ್ಯವನ್ನು ಪಡೆಯುತ್ತವೆ. ಇಲ್ಲದಿದ್ದರೆ ತಾವೂ ನೆಮ್ಮದಿಯಾಗಿರರು, ತಮ್ಮ ಸಂಗಾತಿಗಳನ್ನೂ ನೆಮ್ಮದಿಯಾಗಿರಲು ಬಿಡರು.ಮಡಿ ಮೈಲಿಗೆಯಂತಹ ವ್ಯಸನವೇ ಈ ಶೀಲ ಅಶ್ಲೀಲದ ಅರಿಮೆಯು. ಕರೋನ ವೈರಸ್ಸಿನ ಸಂದರ್ಭದಲ್ಲಿ ಸ್ವಾಮೀಜಿಗಳು ಸೇರಿದಂತೆ ಅನೇಕರು ಮಡಿ ಮೈಲಿಗೆಯನ್ನು ಸ್ವಚ್ಛತೆ ಶುದ್ಧತೆಯ ಕಾರಣಗಳಿಂದ ಸಮರ್ಥಿಸಿಕೊಳ್ಳಲು ಮುಂದಾದರು. ಅಂತೆಯೇ ಶೀಲ ಅಶ್ಲೀಲವನ್ನು ವ್ಯಕ್ತಿಗಳು ಪ್ರಾಮಾಣಿಕತೆ ಮತ್ತು ಬದ್ಧತೆಗೆ ಅನ್ವಯಿಸಿಕೊಳ್ಳಲು ಯತ್ನಿಸುತ್ತಾರೆ.

ಸತ್ಯಕಾಮ ಜಾಬಾಲಿ

ಛಾಂದೋಗ್ಯೋಪನಿಷತ್ತಿನಲ್ಲಿ ಗೌತಮ ಋಷಿಯ ಗುರುಕುಲಕ್ಕೆ ಸತ್ಯಕಾಮನೆಂಬ ಬಾಲಕ ಬರುತ್ತಾನೆ. ಅವನಿಗೆ ಅಲ್ಲಿ ಶಿಕ್ಷಣ ಪಡೆಯಬೇಕೆಂಬ ಬಯಕೆ. ವಾಡಿಕೆಯಂತೆ ನಿನ್ನ ತಂದೆ ಯಾರು? ನೀನು ಯಾವ ಗೋತ್ರದವನು? ಎಂದು ಗುರು ಪ್ರಶ್ನಿಸುತ್ತಾನೆ. ಬ್ರಾಹ್ಮಣರಿಗೆ ವಿದ್ಯಾಭ್ಯಾಸದ ಅರ್ಹತೆ ಎಂಬ ವ್ಯವಸ್ಥೆಯ ಕಾಲವದು. ಬಾಲಕ ಸತ್ಯಕಾಮನಿಗೆ ತಿಳಿದಿರುವುದಿಲ್ಲ. ತಾಯಿಯಾದ ಜಾಬಾಲಿಯನ್ನು ಕೇಳಿ ತಿಳಿದುಕೊಂಡು ಬಂದು ಉತ್ತರಿಸುತ್ತಾನೆ.

“ನನ್ನ ತಾಯಿ ದಾಸಿಯಾಗಿದ್ದಳು. ಹಲವರ ಬಳಿ ಸೇವೆ ಮಾಡುತ್ತಿದ್ದಳು. ಆಗ ಯಾರಿಗೋ ಹುಟ್ಟಿರುವ ಮಗ ನಾನು. ಹಾಗಾಗಿ ನನಗೆ ತಂದೆ ಯಾರೆಂದು ಗೊತ್ತಿಲ್ಲ. ನನಗೆ ಗೋತ್ರವಿಲ್ಲ. ನನ್ನ ತಾಯಿ ಜಬಾಲಿ. ನಾನು ಸತ್ಯಕಾಮ ಜಾಬಾಲಿ” ಎಂದು ಉತ್ತರಿಸುತ್ತಾನೆ.ಗೌತಮ ಶೀಲ ಅಶ್ಲೀಲಗಳ ಅರಿಮೆ ಇಲ್ಲದ ಅರಿವಿರುವವನು. “ಸತ್ಯವನ್ನು ನುಡಿವವನೇ ಬ್ರಾಹ್ಮಣ. ನೀನಿಲ್ಲಿ ವಿದ್ಯಾಭ್ಯಾಸ ಪಡೆಯಲು ಯೋಗ್ಯ” ಎಂದು ಅವನನ್ನು ಸ್ವೀಕರಿಸುತ್ತಾನೆ. ಬ್ರಾಹ್ಮಣ್ಯವನ್ನು ಜಾತಿಯ ಸಂಕೋಲೆಯಿಂದ ಬಿಡಿಸಿ ನೀತಿಯ ಮೌಲ್ಯ ನೀಡುತ್ತಾನೆ.

ಶೀಲ ಅಶ್ಲೀಲಗಳ ಅರಿಮೆಯನ್ನು ಮೀರಿವ ಪ್ರತಿಮೆಗಳು ಸತ್ಯಕಾಮ, ಜಬಾಲಿ ಮತ್ತು ಗೌತಮ. ತಾಯಿಗೆ ಶೀಲವನ್ನು ಮೀರಿದ ತನ್ನ ವಾಸ್ತವವನ್ನು ಒಪ್ಪಿಕೊಳ್ಳುವ ಅರಿವಿದೆ. ಮಗನಿಗೂ ತನ್ನ ಹುಟ್ಟಿನ ಪಾವಿತ್ರ್ಯತೆ ಬಗ್ಗೆ ಯಾವ ಅರಿಮೆ ಇಲ್ಲದೇ ತಾಯಿಯನ್ನು ತಾಯಂದಷ್ಟೇ ಸ್ವೀಕರಿಸುವ ಅರಿವಿದೆ. ಗುರುವಿಗೆ ಸಾಂಪ್ರದಾಯಕ ಅರಿಮೆಯನ್ನು ಮೀರಿ ವ್ಯಕ್ತಿಗತವಾದ ಧೈರ್ಯ ಮತ್ತು ಸತ್ಯವನ್ನು ಮನ್ನಿಸುವ ಅರಿವಿದೆ.
ಅರಿಮೆಗಳನ್ನು ಮೀರಲು ಅರಿವೊಂದು ಸಾಧನ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending