Connect with us

ಅಂತರಂಗ

ಅರಿಮೆಯ ಅರಿವಿರಲಿ-14 : ತನ್ನ ಬಣ್ಣಿಸಬೇಡ

Published

on

  • ಯೋಗೇಶ್ ಮಾಸ್ಟರ್

ತ್ಮರತಿಯ ಮತ್ತೊಂದು ಮುಖ್ಯ ಲಕ್ಷಣವೆಂದರೆ ತನ್ನ ಹೊಗಳಿಕೆಯ ಉನ್ಮತ್ತತೆಯಲ್ಲಿ ಮೈಮರೆಯುವುದು. ತನ್ನನ್ನು ಪ್ರದರ್ಶಿಸಿಕೊಳ್ಳುವ ಅಮಲಿನಲ್ಲಿ ಮತ್ತು ಬಣ್ಣಿಸಿಕೊಳ್ಳುವ ಮದದಲ್ಲಿ ಮೈಮರೆಯುವುದು. ಹೆಚ್ಚೆಚ್ಚು ಮಾಡಿಕೊಂಡಷ್ಟೂ ಹೆಚ್ಚೆಚ್ಚು ಮದ. ಯಾವ್ಯಾವ ಸಂದರ್ಭಗಳು ಒದಗುವುದೋ ಅದನ್ನೆಲ್ಲಾ ತನ್ನ ಬಣ್ಣನೆಗೆ ಬಳಸಿಕೊಳ್ಳುವುದು. ಅದಕ್ಕೆ ಖರ್ಚಾಗುವುದೋ? ಆಗಲಿ. ಒಟ್ಟಾರೆ ತನ್ನ ಬಣ್ಣನೆ ವರ್ಣನೆ ಪ್ರದರ್ಶನವಾಗಬೇಕು.

ದೇವಸ್ಥಾನಕ್ಕೆ ಫ್ಯಾನ್ ಹಾಕಿಸಿದರಾ? ಅದ್ಯಾವುದೋ ಆಶ್ರಮಕ್ಕೆ ಅಲಮಾರಿ ಕೊಟ್ಟರಾ? ಇನ್ಯಾವುದೋ ಗುಡಿಗೆ ಗಂಟೆ ದಾನವಿತ್ತರಾ? ಅದರ ಮೇಲೆಲ್ಲಾ ಅವರ ಹೆಸರಿರಬೇಕು. ಕೆಲವೊಮ್ಮೆ ಯಾರದೋ ಸ್ಮರಣೆಯಿಂದ ಕೊಡುತ್ತಿದ್ದು, ಅವರ ಹೆಸರೂ ಸೇರಿದಂತೆ ಕೊಟ್ಟವರ ಹೆಸರೂ, ಅವರ ಹೆಂಡರು ಮಕ್ಕಳ ಹೆಸರೂ ಉಲ್ಲೇಖಿತವಾಗಿರಬೇಕು. ಇದು ಆತ್ಮತೃಪ್ತಿಯ ವಿಷಯವಲ್ಲ. ಅರಿಮೆಯ ತೃಪ್ತಿ. ನಾರ್ಸಿಸಂ ಎಂಬ ಮಾನಸಿಕ ಸಮಸ್ಯೆಯು ಮನಸ್ಸಿಗೆ ಹಾತೊರೆಯುವಂತೆ ಮಾಡುವ ಬಯಕೆ. ಯಾವುದೇ ಅರಿಮೆಯನ್ನು ನಿವಾರಿಸಿಕೊಳ್ಳಲು ಮಾಡಬೇಕಾದ ಮೊದಲನೆಯ ಕೆಲಸವೆಂದರೆ, ಅದನ್ನು ತಮ್ಮಲ್ಲಿ ಗುರುತಿಸಿಕೊಳ್ಳುವುದು ಮತ್ತು ಅದು ಮತ್ತೆ ತಲೆ ಎತ್ತದಂತೆ ಬಹಳ ಎಚ್ಚರದಿಂದ ಕೆಲಸ ಮಾಡುವುದು. ಪ್ರಜ್ಞಾಪೂರ್ವಕವಾಗಿ ವರ್ತಿಸುವುದು.

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ” ಎನ್ನುವ ಬಸವಣ್ಣ ಆತ್ಮರತಿಯ ಅರಿಮೆಯನ್ನು ನಿವಾರಿಸಿಕೊಳ್ಳಲು ಅರಿವಿನ ದಾರಿ ತೋರುತ್ತಾರೆ. ತನ್ನನ್ನು ಬಣ್ಣಿಸಿಕೊಳ್ಳುವುದೊಂದು ವಿಧಾನವಾದರೆ, ಮತ್ತೊಬ್ಬರನ್ನು ಹಳಿಯುತ್ತಾ ತಾನೆಷ್ಟು ಉತ್ತಮನು ಎಂದು ಪ್ರದರ್ಶಿಸಿಕೊಳ್ಳುವುದು ಮತ್ತೊಂದು ವಿಧಾನ. ತನ್ನ ಬಣ್ಣಿಸಿಕೊಂಡು ಇದಿರಿರುವವರನ್ನು ಹಳಿಯುವುದಕ್ಕೆ ಮನೆಯಲ್ಲಿ ಮಕ್ಕಳಿಗೆ ಬಹಳಷ್ಟು ಪೋಷಕರೇ ಮಾದರಿಯಾಗುತ್ತಾರೆ.

ತಾವು ಸಣ್ಣವರಿದ್ದಾಗ ಅದೆಷ್ಟು ಕಷ್ಟಪಟ್ಟೆವು. ನಮಗೆ ಕೇಳಿದ್ದೆಲ್ಲಾ ಸಿಗುತ್ತಿರಲಿಲ್ಲ. ನಿಮಗೆ ಎಲ್ಲಾ ಸಿಗುತ್ತಿದೆ. ನಿಮಗೆ ಕಷ್ಟ ಅರ್ಥವಾಗಲ್ಲ. ನಾವು ಅಷ್ಟು ದೂರ ನಡೆದುಕೊಂಡು ಹೋಗುತ್ತಿದ್ದೆವು. ನಿಮಗೆ ಈಗ ವಾಹನ ಸೌಕರ್ಯವಿದೆ. ನಮಗೆ ಹೊಟ್ಟೆಗೆ ಸರಿಯಾಗಿ ದೊರಕುತ್ತಿರಲಿಲ್ಲ. ನಿಮಗೆ ಕೇಳಿದ್ದು ಕೇಳಿದ್ದೆಲ್ಲಾ ಸಿಗುತ್ತದೆ. ನಿಮಗೆ ಹೊಟ್ಟೆ ತುಂಬಾ ಸಿಗತ್ತಲ್ಲಾ ಅದಕ್ಕೇ ಕೊಬ್ಬು. ನಮಗೆ ಒಂದು ಪುಸ್ತಕ ಬೇಕಾದರೆ ಅದೆಷ್ಟು ಕಾಡಿಬೇಡಿ ಪಡೆಯಬೇಕಿತ್ತು. ನೀವು ಅದೆಷ್ಟು ವ್ಯರ್ಥ ಮಾಡುತ್ತೀರಿ. ಇಲ್ಲಿ ಪೋಷಕರು ತಮ್ಮನ್ನು ಬಣ್ಣಿಸಿಕೊಂಡು, ಮಕ್ಕಳನ್ನು ಹಳಿದುಕೊಂಡು ಮಾಡುತ್ತಿರುವುದೇನು? ಮಕ್ಕಳ ಮುಂದೆ ಪೋಷಕರ ಆತ್ಮರತಿಯ ಪ್ರದರ್ಶನ.

ಕಪಟತನ ಕದವಿಕ್ಕಿಕೊಳ್ಳದು

ಆತ್ಮರತಿಯ ವೇದಿಕೆ ಯಾವುದಾದರೂ ಆಗಬಹುದು. ದೇಗುಲ, ಅನಾಥಾಶ್ರಮ, ಸಾಮಾಜಿಕ ಸಂಸ್ಥೆಗಳು, ಆಧ್ಯಾತ್ಮಿಕ ಆಶ್ರಮಗಳು, ಧಾರ್ಮಿಕ ಕೇಂದ್ರಗಳು; ಹೀಗೆ.
ಆತ್ಮರತಿಯ ಈ ಅರಿಮೆಯ ಬಗ್ಗೆ ಎಚ್ಚರವಹಿಸಲು ಯೇಸು ನೀಡುವ ಎಚ್ಚರಿಕೆ ಬಹಳ ಸ್ಪಷ್ಟವಾಗಿದೆ.

ನೀನು ದಾನಧರ್ಮ ಮಾಡುವಾಗ ತುತ್ತೂರಿ ಊದಿಸಬೇಡಿ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ನೀನು ದಾನಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ.”
“ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು.”

ತಾನೆಷ್ಟು ಪರಮ ಭಕ್ತ ಎಂದು ಹೊರಗೆ ತೋರಿಸಿಕೊಳ್ಳುವುದು ಭಕ್ತಿಯಲ್ಲ ಆತ್ಮರತಿ ಎನ್ನುವುದು ಯೇಸುವಿನ ಧೋರಣೆ. ಈ ಅರಿಮೆಯನ್ನು ಗುರುತಿಸುತ್ತಾ ಮುಂದುವರಿಸುವ ಬಸವಣ್ಣ,  ಮಾಡಿ ಕೆಟ್ಟರು ಮನವಿಲ್ಲದೆ. ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ” ಮಾಡುವ ಮತ್ತು ನೀಡುವುದು ಎರಡೂ ತನ್ನ ಆತ್ಮರತಿಯ ತೃಪ್ತಿಗೇ ಹೊರತು ಆತ್ಮತೃಪ್ತಿಗಲ್ಲ. ಮಾಡುವ ನೀಡುವ ನಿಜಗುಣವುಳ್ಳವನು ಡಂಗೂರವನ್ನು ಸಾರುವುದೇನೂ ಬೇಕಾಗಿಲ್ಲ ಎಂಬುದು ಬಸವಣ್ಣನವರ ಸ್ಪಷ್ಟತೆ.

ಯೇಸು ಹೇಳುವಂತೆ ಕಪಟತನವು ಕದವಿಕ್ಕಿಕೊಳ್ಳದು. ಹೊರಗೆ ಆಡಂಬರಕ್ಕೆ ತನ್ನ ಪ್ರದರ್ಶನ ಮಾಡಬೇಕು. ಅದು ದಾನವೋ, ಪ್ರಾರ್ಥನೆಯೋ, ಪೂಜೆಯೋ ಎಂತದ್ದೋ. ಈಗ ಕರೋನಾ ಲಾಕ್ ಡೌನ್ ಸಮಯದಲ್ಲಿಯೂ ಕೂಡಾ ಅದೆಷ್ಟು ಜನರು ತಮ್ಮ ಪಾಡಿಗೆ ತಾವು ಆಹಾರ ವಿತರಣೆ ಅಥವಾ ದೈನಂದಿನ ಜೀವನಕ್ಕೆ ಅಗತ್ಯವಿರುವುದರ ವಿತರಣೆಗಳನ್ನು ಉಚಿತವಾಗಿ ತಮ್ಮ ಸಾಮಾಜಿಕ ಕರ್ತವ್ಯದಂತೆ ಆತ್ಮತೃಪ್ತಿಗಾಗಿ ಮಾಡುತ್ತಿದ್ದಾರೆ. ಹಾಗೆಯೇ ಒಂದಿಷ್ಟು, ಒಂದು ದಿನ ಎಲ್ಲೋ ಒಂದಷ್ಟು ಮಾಡಿ ಅದರ ಫೋಟೋ ಮತ್ತು ವಿಡಿಯೋಗಳನ್ನು ಮಾಡಿಕೊಂಡು ವರ್ಷವಿಡೀ ವಾಟ್ಸಪ್ ಮತ್ತು ಫೇಸ್ಬುಕ್ಕಿನಲ್ಲಿ ಎಲ್ಲರಿಗೂ ತೋರಿಸಿಕೊಂಡು ಪ್ರಶಂಸೆಯ ಹಸಿವಿಗೆ ಉಣಬಡಿಸಿಕೊಳ್ಳುತ್ತಿರುವುದೂ ಕೂಡಾ ಬೇಕಾದಷ್ಟಿದೆ.

ಕ್ರೂರ ಕರುಣೆ

ಕೆಲವರಿಗೆ ಅವರಾತ್ಮರತಿಯ ತೃಪ್ತಿಗೆ ಅನಾಥಾಶ್ರಮಗಳ ಅಥವಾ ವೃದ್ಧಾಶ್ರಮಗಳೂ ಕೂಡಾ ಆತ್ಮರತಿಯ ವೇದಿಕೆಗಳಾಗುತ್ತವೆ. ಮೊದಲನೆಯದಾಗಿ ಅದನ್ನು ಅನಾಥಾಶ್ರಮ ಎನ್ನುವುದೇ ಒಂದು ವ್ಯಂಗ್ಯ ಮತ್ತು ಕ್ರೂರ. ಆ ಗೂಡಿನಲ್ಲಿರುವವರನ್ನು ತಾವು “ಅನಾಥ ಅನಾಥ” ಎಂಬ ಪ್ರಜ್ಞೆಯನ್ನು ಸದಾ ಜಾಗೃತವಾಗಿಡುವ ಫಲಕಗಳು ಅವು. ಅಲ್ಲಿಗೆ ಹೋಗಿ ಸಮಾರಂಭದಂತೆ ಒಂದು ಕಾರ್ಯಕ್ರಮ ಮಾಡಿ, ವೇದಿಕೆಯ ಮೇಲೆ ದಾನಿಗಳನ್ನು ಇನ್ನಿಲ್ಲದಂತೆ ಹಾಡಿ ಹೊಗಳಿ, ಅವರು ಉಬ್ಬಿ, ಕೊಡುವ ಕೈ ಮೇಲೆ ಎಂಬ ಭಾವದಿಂದ ಮೈಮರೆತು, ತಮ್ಮ ಮುಂದೆ ಕುಳಿತಿರುವ ಅನಾಥರು, ವೃದ್ಧರು, ಮಕ್ಕಳು ತಾವು ಯಾರದೋ ಅಧೀನದಲ್ಲಿ, ಕೃಪೆಯಲ್ಲಿ ಬದುಕುತ್ತಿದ್ದೇವೆ ಎಂಬ ಕೀಳರಿಮೆಯಲ್ಲಿ ಮುಖಬಾಡಿಸಿಕೊಂಡು ಕುಳಿತಿದ್ದು ಯಾವ ಸಾರ್ಥಕ್ಯಕ್ಕೆ?

ಅನಾಥಾಲಯದಿಂದಲೋ, ಹೆಣ್ಣು ಮಕ್ಕಳಿರುವ ಸೇವಾಶ್ರಮದಿಂದಲೋ ಯಾರನ್ನಾದರೂ ಮದುವೆಯಾಗುವುದು ಇನ್ನೂ ದೊಡ್ಡ ತುತ್ತೂರಿ. ‘ಆ ಹೆಣ್ಣು ಮಗುವಿಗೆ ಬಾಳು ಕೊಡುತ್ತಿರುವ ತಾನೊಬ್ಬ ಬಹು ದೊಡ್ಡ ಉದಾರಿ’ ಎಂದು ಪತ್ರಿಕೆಯಲ್ಲಿ ಪ್ರಕಟಿಸಿಕೊಳ್ಳುವಷ್ಟು ಆತ್ಮರತಿ. ಯಾರು ಯಾರಿಗೆ ಬಾಳು ಕೊಡುವುದು? ವಿಧವೆ ಎಂದು ಕರೆಯುವುದೂ, ಅನಾಥರೆಂದೂ ಕರೆಯುವುದೂ ಕೂಡಾ ಒಂದು ಅಮಾನವೀಯವೇ ಆಗಿರುವಾಗ, ಅವರನ್ನು ಮದುವೆಯಾಗಿ ಬಾಳು ಕೊಡುತ್ತೇನೆ ಎಂದು ಘೋಷಿಸಿಕೊಳ್ಳುವುದು ಆ ಹೆಣ್ಣುಮಗುವನ್ನು ದೈನೇಸಿಯಾಗಿಯೇ ಇಡುವ ಬಗೆ. ಆತ್ಮರತಿಯ ಅರಿಮೆಯುಳ್ಳವರಿಗೆ ಇಂಥಾ ಕ್ರೂರ ಕಾರುಣ್ಯವು ಮತ್ತು ಪ್ರದರ್ಶಕ ಔದಾರ್ಯವು ಸಾಮಾನ್ಯ.

ವಿಧವೆಯ ಅಥವಾ ಯಾವುದೇ ಹೆಣ್ಣುಮಗುವಿನೊಂದಿಗಿನ ಮದುವೆ ಆ ಭಾವವೇ ಇಲ್ಲದೇ ಬರಿಯ ವ್ಯಕ್ತಿಗತವಾಗಿ ಆಪ್ತ ಸಂಗತಿಯಾಗಬಾರದೇ! ಕೆಲವರು ಕೊಡುವ ಕಾರಣವೇನೆಂದರೆ, ಇವು ಇತರರಿಗೆ ಪ್ರೇರಣೆಯಾಗುವುದು ಎಂದು. ಒಬ್ಬನ ಆತ್ಮರತಿಯು ಇನ್ನೊಬ್ಬನ ಆತ್ಮರತಿಯ ಪ್ರದರ್ಶನಕ್ಕೆ ದಾರಿಯಾಗುವುದು ಅಷ್ಟೇ. ಏಕೆಂದರೆ, ಪ್ರಾಮಾಣಿಕ ಮನಸ್ಸುಳ್ಳವನಿಗೆ ಈ ಪ್ರೇರಣೆಗಳೇನೂ ಬೇಕಾಗಿಲ್ಲ. ಆತನ ಆತ್ಮಸಾಕ್ಷಿ ಮತ್ತು ಸ್ವಪ್ರೇರಣೆಯೇ ಸಾಕಾಗಿರುತ್ತದೆ.

ಸಾಮೂಹಿಕ ರತಿಕ್ರೀಡೆ

ಎಷ್ಟೋ ಬಾರಿ ನಮ್ಮ ದೇಶದಲ್ಲಿಯೂ ಸೇರಿದಂತೆ ವಿವಿಧ ಸಮಾಜಗಳಲ್ಲಿ ಯಾವುದಕ್ಕೆ ನಾಚಿಕೊಳ್ಳಬೇಕೋ ಅದಕ್ಕೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಯಾವುದಕ್ಕೆ ಹೆಮ್ಮೆಪಟ್ಟುಕೊಳ್ಳಬೇಕೋ ಅದಕ್ಕೆ ನಾಚಿಕೊಳ್ಳುತ್ತಾರೆ.

ಸಮೂಹ ಆತ್ಮರತಿ ಅಥವಾ (Collective narcissism or group narcissism)
ಅಂತ ಒಂದಿದೆ. ಅದರದೇನಪ್ಪಾ ಲಕ್ಷಣ ಅಂದರೆ, ವ್ಯಕ್ತಿಗತವಾದ ಆತ್ಮರತಿಯು ಸಮುದಾಯ ಗುರುತಿನಲ್ಲಿ ಅಥವಾ ಸಂಕಲಿತವಾಗಿರುವ ವಿಷಯದಲ್ಲಿ ವಿಲೀನಗೊಳಿಸಿಕೊಂಡಿರುವುದು. ಆ ಸಮುದಾಯವನ್ನು ಅಥವ ಸಮೂಹವನ್ನು ಅಥವಾ ಸಂಸ್ಥೆಯನ್ನು ಯಾರಾದರೂ ಏನಾದರೂ ನಕಾರಾತ್ಮಕವಾಗಿ ಅಂದರೆ ವೈಯಕ್ತಿಕವಾಗಿ ತನಗೇ ಏನಾದರೂ ಆದಂತೆ ಭಾಸವಾಗುವುದು.

ಅದೇ ರೀತಿಯಲ್ಲಿ ತಾನು ಆ ಸಮೂಹದವನು ಎಂದು ಹೆಮ್ಮೆ ಪಡುವುದು. ಅದೇ ರೀತಿಯಲ್ಲಿ ಅದಕ್ಕೇನಾದರೂ ಪ್ರಶಂಸೆಯು ದೊರಕಿದರೆ ವಿಪರೀತವಾಗಿ ತಾನು ಹೆಮ್ಮೆ ಪಡುವುದು. ಇದು ಹಲವು ವೇಷಗಳನ್ನು ಹಾಕಿಕೊಂಡು ಬರುತ್ತದೆ. ಧರ್ಮ, ಸಂಸ್ಕೃತಿ, ಜಾತಿ, ಸಂಘ, ಸಂಸ್ಥೆ; ಹೀಗೆ. ಧಾರ್ಮಿಕತೆಯ ಸಂಘರ್ಷವೇ ಬಹಳ ಪ್ರಧಾನ ಕಿರುಕುಳವಾಗಿರುವ ಈ ಸಮಯದಲ್ಲಿ ಧಾರ್ಮಿಕ ಸಮುದಾಯಗಳ ವಿಚಾರವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ.

ನಾನು ಇಂತಹ ಧರ್ಮದಲ್ಲಿ ಗುರುತಿಸಿಕೊಂಡೆನೆಂದರೆ, ಆ ಧರ್ಮವು ಅತ್ಯಂತ ಶ್ರೇಷ್ಟವೆಂದೂ, ಅದರಲ್ಲಿ ಯಾವುದೇ ಬಗೆಯ ನ್ಯೂನ್ಯತೆಗಳಿರುವುದಿಲ್ಲವೆಂದೂ, ಅದರ ವಿಚಾರಗಳೇ ಅಂತಿಮವೆಂದೂ, ಅದನ್ನು ವಿರೋಧಿಸುವವರು ಅಥವಾ ವಿಮರ್ಶಿಸುವವರು ನಮ್ಮ ಶತ್ರುಗಳೆಂದು ಭಾವಿಸುವುದು ಸಮೂಹರತಿಯ ಅರಿಮೆಯ ವ್ಯಾಪ್ತಿಗೆ ಒಳಗಾಗುತ್ತದೆ.

ಎಷ್ಟೋ ಬಾರಿ ಆ ಧರ್ಮವು ತಾನು ಹುಟ್ಟಿದ ಸಂದರ್ಭದ ಸಾಮಾಜಿಕ ವ್ಯವಸ್ಥೆಗೆ ಮತ್ತು ಆಗಿನ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ತನ್ನ ರೂಪುರೇಷೆಗಳನ್ನು ತೀರ್ಮಾನಿಸಿಕೊಂಡಿರುತ್ತದೆ. ಹಿಂದೂ ಧರ್ಮದ ಹೊರತಾಗಿ ವಿಶ್ವದ ಇತರ ಸ್ಥಾಪಿತ ಧರ್ಮಗಳೆಲ್ಲವೂ ಕೂಡಾ ಸಮಾಜೋಧಾರ್ಮಿಕದ ಆಂದೋಲನದ ಪ್ರತಿಫಲಗಳೇ ಆಗಿವೆ. ಹಾಗಾಗಿ ಅವುಗಳನ್ನು ಈ ಕಾಲ ಘಟ್ಟದಲ್ಲಿ ನಿಲುಕಿಸಿಕೊಳ್ಳುವಾಗ ಕೆಲವು ಅಭಿಪ್ರಾಯ ಬೇಧಗಳು ಮತ್ತು ತಾಂತ್ರಿಕ ವ್ಯತ್ಯಾಸಗಳು ಬಹಳ ಸಹಜವಾಗಿರುತ್ತವೆ.

ಇನ್ನು ಹಿಂದೂ ಧರ್ಮವು ವಿಶಾಲ ಭೌಗೋಳಿಕ ಪರಿಸರದಲ್ಲಿ ವಿಕಾಸವಾದ ಜೀವನ ಪದ್ಧತಿಯೇ ಹೊರತು ಯಾವುದೊಂದು ಉದ್ದೇಶದ ಹಿನ್ನೆಲೆಯಲ್ಲಿ ಸ್ಥಾಪಿತವಾದದ್ದೇ ಅಲ್ಲ. ಇಲ್ಲೇ ಸಮಸ್ಯೆ ಇರುವುದು. ವ್ಯಕ್ತಿಗತವಾಗಿ ಸಂಮೋಹಿತಗೊಂಡು ವ್ಯಕ್ತಿಗಳು ಆಯಾ ಧಾರ್ಮಿಕತೆಯಲ್ಲಿ ಮೈಮರೆಯುವುದರಿಂದ ಧರ್ಮವು ದಾರಿಯಾಗದೇ ಗುರಿಯಾಗಿ ಪರಿಣಮಿಸಿ ಒಂದು ಅರಿಮೆಯಾಗಿ ಪರಿಣಮಿಸುತ್ತದೆ.

ತನ್ನ ಧರ್ಮವೇ ಅಂತಿಮವೆಂದೂ, ಶ್ರೇಷ್ಟವೆಂದೂ ಎತ್ತಿ ಹಿಡಿಯಲು ಎಲ್ಲಾ ಧರ್ಮಿಯರೂ ಹೋರಾಡುವಾಗ ಸಂಘರ್ಷಗಳು ಉಂಟಾಗುತ್ತವೆ. ಅಷ್ಟೇ ಅಲ್ಲದೇ ನಿನ್ನ ಧರ್ಮವು ನನ್ನ ಧರ್ಮಕ್ಕಿಂತ ಕನಿಷ್ಟ ಎಂದು ನಿರೂಪಿಸಲು ತನ್ನ ವಿರೋಧಿ ಧರ್ಮವೆಂದು ಯಾವುದನ್ನು ಭಾವಿಸಿರುತ್ತಾರೋ ಅದರ ಹುಳುಕುಗಳನ್ನು ಎತ್ತಿ ಹಿಡಿಯುವುದು, ಆಯಾ ಧಾರ್ಮಿಕ ವ್ಯಕ್ತಿಗಳ ತೇಜೋವಧೆ ಮಾಡಲು ಯತ್ನಿಸುವುದು, ಆ ಮೂಲಕ ವಿರೋಧಿಗಳನ್ನು ಕೆರಳಿಸುವುದು ಇತ್ಯಾದಿಗಳಾಗುತ್ತವೆ. ಇದರಿಂದ ಸಾಂಪ್ರದಾಯಿಕ ವಿರೋಧಿಗಳು ರೂಪುಗೊಳ್ಳುತ್ತವೆ.

ಆಗ ರಾಜಕೀಯ, ಸಾಮಾಜಿಕ ಸ್ಥಾನಮಾನವೇ ಮೊದಲಾಗಿ ಸಾಂಸ್ಕೃತಿಕ ಅಸಹನೆಗಳೂ ಉಂಟಾಗಿ ಸಾಮಾಜಿಕ ಸಂಘರ್ಷಗಳು ಉಂಟಾಗಿ ಜೀವಗಳು ಮೌಲ್ಯರಹಿತವಾಗುತ್ತವೆ.ಆಗ ನಡೆದ ಕ್ರೈಸ್ತರ ಮತ್ತು ಮುಸಲ್ಮಾರದ ಕ್ರುಸೇಡ್ ಯುದ್ಧಗಳು, ಇಸ್ರೇಲ್ ಮತ್ತು ಪ್ಯಾಲೆಸ್ತಿನನಲ್ಲಿ ಮುಸಲ್ಮಾನರ ಮತ್ತು ಯಹೂದಿಗಳ ಸಂಘರ್ಷ, ಪ್ರಾಚೀನ ಭಾರತದಲ್ಲಿ ವೈದಿಕರ ಮತ್ತು ಬೌದ್ಧಾನುಯಾಯಿಗಳ ಸಂಘರ್ಷ, ಪ್ರಸ್ತುತ ಭಾರತದಲ್ಲಿ ಹಿಂದೂ ಮುಸ್ಲೀಮರ ಸಂಘರ್ಷಗಳು, ಆರ್ಯ ರಕ್ತೋನ್ಮಾದದಲ್ಲಿ ಯಹೂದಿಗಳ ಮೇಲೆ ನಾಜಿಗಳ ದ್ವೇಷ, ರೊಹಿಂಗ್ಯಾದಲ್ಲಿ ಮುಸಲ್ಮಾನರ ಮೇಲೆ ಬೌದ್ಧರ ಆಕ್ರಮಣ, ತಮಿಳುನಾಡಿನಲ್ಲಿ ಶೈವ ಮತ್ತು ವೈಷ್ಣವ ಸಂಘರ್ಷ, ಪ್ರಾಚೀನ ಕರ್ನಾಟಕದಲ್ಲಿ ಜೈನ ಮತ್ತು ಶೈವರ ಸಂಘರ್ಷ; ಹೀಗೆ ಒಂದೆರಡು ಉದಾಹರಣೆಗಳಲ್ಲ.

ತಮ್ಮ ಶ್ರೇಷ್ಟತೆಯು ತಮ್ಮ ವಿರೋಧಿಗಳ ದ್ವೇಷದ ಆಧಾರದ ಮೇಲೆಯೇ ಅವಲಂಬಿತವಾಗಿರುವುದು ಸಮೂಹ ರತಿಯ ಪರಮಾವಧಿ. ಪರಸ್ಪರ ವ್ಯಕ್ತಿಗತ ಪರಿಚಯವೇ ಇಲ್ಲದವರು, ಪರಸ್ಪರ ಯಾವುದೇ ದ್ವೇಷ ಮತ್ತು ಸಂಘರ್ಷಗಳು ಇರದಿದ್ದರೂ ಸಮುದಾಯ, ಮತ, ಧರ್ಮ, ಸಂಸ್ಕೃತಿ, ಬುಡಕಟ್ಟು ಮತ್ತು ಜನಾಂಗಗಳು ಎಂಬ ಕಾರಣಕ್ಕಾಗಿ ವಿರೋಧಿಸುವುದು ಮತ್ತು ದಾಳಿಗಳನ್ನು ಮಾಡುವುದು ಸಮುದಾಯದಲ್ಲಿ ಉಲ್ಬಣಗೊಂಡಿರುವ ಮನೋರೋಗದ ಲಕ್ಷಣ. ನೆಮ್ಮದಿಯ ಜೀವನಕ್ಕೆ, ಬದುಕಿನ ವ್ಯವಹಾರಕ್ಕೆ ಬೇಡದೇ ಇರುವುದೆಲ್ಲವೂ ದ್ವೇಷಿಸುವುದಕ್ಕೆ ಕಾರಣವಾಗಿ ಪರಿಣಮಿಸುತ್ತದೆ.

ವ್ಯಕ್ತಿಗತವಾದಂತಹ ದೌರ್ಬಲ್ಯವನ್ನು, ಅಪರಾಧಗಳನ್ನು ಸಮುದಾಯದ ತಲೆಗೆ ಕಟ್ಟಿ ದ್ವೇಷಿಸುವಂತಹ ಮನಸ್ಥಿತಿ ಬೆಳೆದಿರುತ್ತದೆ. ಯಾರಾದರೊಬ್ಬ ಮುಸಲ್ಮಾನ ಕ್ಯಾಬ್ ಡ್ರೈವರ್ ನಿಮ್ಮೊಡನೆ ಸರಿಯಾಗಿ ಚಿಲ್ಲರೆ ಕೊಡದೇ ಹೊರಟುಹೋದಾಗ ಮುಸಲ್ಮಾನರೇ ಹೀಗೆ ಮೋಸಗಾರರು ಎಂಬ ಮಾತು ಮೊದಲು ಹೊರಟರೆ, ಅಥವಾ ಬ್ರಾಹ್ಮಣ ಪತ್ರಕರ್ತನೊಬ್ಬ ತನ್ನ ಶ್ರೇಷ್ಟತೆಯ ವ್ಯಸನವನ್ನು ಪತ್ರಿಕೆಯಲ್ಲಿಯೋ ಅಥವಾ ಮಾಧ್ಯಮಗಳಲ್ಲಿಯೋ ಕಾರಿಕೊಂಡಾಗ ಬ್ರಾಹ್ಮಣರೆಲ್ಲರೂ ಹೀಗೇ ಎಂದು ಅಭಿಪ್ರಾಯಕ್ಕೆ ಬಂದರೆ ಅಲ್ಲಿಗೆ ಸಮೂಹ ಆತ್ಮರತಿಯ ಅರಿಮೆಯಲ್ಲಿ ಸಿಕ್ಕಿದ್ದೇವೆಂದು ಅರ್ಥ.

ವ್ಯಕ್ತಿಗಳೇ ಇಂತಹ
ಮನೋರೋಗಗಳಲ್ಲಿರುವವರು. ಅವರು ಯಾವ ಜಾತಿಯಲ್ಲಿದ್ದರೂ, ಧರ್ಮದಲ್ಲಿದ್ದರೂ ಅವುಗಳ ಲಾಂಛನದಡಿಯಲ್ಲಿ ತಮ್ಮ ಅರಿಮೆಗಳ ಪ್ರದರ್ಶನ ಮಾಡುತ್ತಿರುತ್ತಾರೆ. ಅವನು ಮುಸಲ್ಮಾನನಾಗಿದ್ದರೆ ಇಸ್ಲಾಂ ಶ್ರೇಷ್ಟತೆಯ ಗೀಳು, ಹಿಂದೂ ಆಗಿದ್ದರೆ ಹಿಂದೂ ಶ್ರೇಷ್ಟತೆಯ ಗೀಳು ಅಷ್ಟೇ. ಈ ಗೀಳಿನ ಅಥವಾ ವ್ಯಸನದ, ಅರಿಮೆಯ ಸಮಸ್ಯೆ ಧರ್ಮಗಳದ್ದೋ, ಸಂಸ್ಕೃತಿಗಳದ್ದೋ ಅಲ್ಲ. ವ್ಯಕ್ತಿಗಳದ್ದು. ಅವನಿಗಿರುವ ಸಮಸ್ಯೆ Collective narcissism or group narcissism. ಆದರೆ ಎಡವಟ್ಟಾಗುವುದು ಎಲ್ಲಿ ಗೊತ್ತೇ? ಸಮಾನ ಮನಸ್ಕರು ಸಮೂಹಗಳನ್ನು ಮಾಡಿಕೊಂಡು ಅವರ ಅಭಿರುಚಿ, ಆಸಕ್ತಿ ಇತ್ಯಾದಿಗಳನ್ನು ಗಟ್ಟಿಗೊಳಿಸಿಕೊಳ್ಳುವಂತೆ, ಈ ಸಮೂಹ ರತಿಯ ಅರಿಮೆಯ ಮನಸ್ಥಿತಿಯವರೂ ಕೂಡಾ ಆಯಾ ಜಾತಿ, ಧರ್ಮ ಇತ್ಯಾದಿಗಳ ಲಾಂಛನಗಳಲ್ಲಿ ಶ್ರೇಷ್ಟತೆಯ ವ್ಯಸನವನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಹೋಗುತ್ತಾರೆ.

ಅದರ ಜಾಲದಲ್ಲಿ ಸಿಕ್ಕವರೆಲ್ಲರೂ ಮತ್ತೆ ಮತ್ತೆ ತಮ್ಮ ಧರ್ಮಾಂಧತೆಗೆ ಅಥವಾ ಜಾತಿವಾದಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾ ಹೋಗುತ್ತಾರೆ. ಭಾರತದಲ್ಲಿ ಜಾತಿಯ ವಿಷಯದಲ್ಲಿಯೂ ಈ ಸಾಮುದಾಯಿಕ ಮಾನಸಿಕ ಸಮಸ್ಯೆ ಬಹಳ ಗಾಢವಾಗಿದೆ. ಯಾವುದೇ ವ್ಯಕ್ತಿಯು ತನ್ನ ಜಾತಿಯ ಹೆಸರನ್ನು ತನ್ನ ಹೆಸರಿನ ಜೊತೆಗೆ ಹೆಮ್ಮೆಯಿಂದ ತಗುಲಿಹಾಕಿಕೊಳ್ಳುವನೋ, ಅಥವಾ ಅಪ್ರಾಯೋಗಿಕವಾಗಿದ್ದರೂ, ಅವೈಚಾರಿಕವಾಗಿದ್ದರೂ, ಅವೈಜ್ಞಾನಿಕವಾಗಿದ್ದರೂ, ಅಪ್ರಸ್ತುತವಾಗಿದ್ದರೂ ಜಾತಿಯ ಆಚರಣೆಗಳನ್ನು ಜೀವಂತವಾಗಿ ಇಡಲೇಬೇಕು ಎಂದು ಪ್ರಯತ್ನಿಸುತ್ತಾ, ಸಾಮಾಜಿಕ ಮತ್ತು ವೈಯಕ್ತಿಕವಾದ ಮಾನಸ ಸಂಬಂಧಗಳನ್ನು ಕಡೆಗಣಿಸುತ್ತಾನೆಂದರೆ ಅವನಿಗೆ ಈ ಮನೋರೋಗವಿದೆ ಎಂದೇ ಅರ್ಥ.

ಇದೇ ರೀತಿಯಲ್ಲಿ ಸಂಸ್ಕೃತಿಯಲ್ಲಿ ಉನ್ಮತ್ತತೆಯಿಂದ ಗುರುತಿಸಿಕೊಳ್ಳುವಂತಹ ಅರಿಮೆಯೂ ಕೂಡಾ ಇದರ ಒಂದು ಭಾಗವಾಗಿದೆ. ಗಮನಿಸಿ, ಇಂತವರೆಲ್ಲಾ ಒಟ್ಟೊಟ್ಟಿಗೆ ಗುಂಪುಗೂಡಿಕೊಂಡು ನಮ್ಮದೇ ಶ್ರೇಷ್ಟ, ಮತ್ತೊಬ್ಬರದು ಕನಿಷ್ಟ, ನಾವು ಏನಾದರೂ ನಮ್ಮದನ್ನು ಬಿಡಬಾರದು. ಹೀಗೆಲ್ಲಾ ಮಾತಾಡಿಕೊಂಡು ಸಂತೋಷಪಡುವುದು ಸಾಮೂಹಿಕ ರತಿಕ್ರೀಡೆಯಂತೆ.

ಜಗತ್ತಿನಲ್ಲಿಯೇ ನಮ್ಮಷ್ಟು ಶ್ರೇಷ್ಟ ಸಂಸ್ಕೃತಿ ಯಾವುದೂ ಇಲ್ಲ, ನಮ್ಮದೇ ಅತ್ಯಂತ ಪುರಾತನ, ನಮ್ಮದೇ ಈಗಲೂ ಪ್ರಸ್ತುತ, ಇತರ ಎಲ್ಲಾ ಸಂಸ್ಕೃತಿಗಳ ನಮ್ಮದಕ್ಕಿಂತ ಕೀಳು; ಈ ಬಗೆಯ ವ್ಯಸನವು ಅಥವಾ ಶ್ರೇಷ್ಟತೆಯ ಗೀಳು ಕೂಡಾ ಈ ಕಾಂಪ್ಲೆಂಕ್ಸ್‍ನ ಒಂದು ಭಾಗವಾಗಿದೆ.

ಒಳಕುದಿ

ಹಾಗಾದರೆ ನಮ್ಮದರ ಬಗ್ಗೆ ನಮಗೆ ಹೆಮ್ಮೆ, ಅಭಿಮಾನ ಬೇಡವೇ? ಬೇಕು. ಅದು ಆರೋಗ್ಯಕರವಾಗಿರುವುದು ಯಾವಾಗೆಂದರೆ, ನಮ್ಮಂತದ್ದೇ ಹಲವು ಸಂಸ್ಕೃತಿಗಳು, ಧರ್ಮಗಳು ಜಗತ್ತಿನಲ್ಲಿ ಅಸ್ತಿತ್ವದಲ್ಲಿವೆ. ಅವುಗಳಿಗೆ ಅವುಗಳದೇ ಆದಂತಹ ಮೌಲ್ಯವಿದೆ. ನಾವು ಅನುಸರಿಸುತ್ತಿರುವಂತೆ ಅವುಗಳನ್ನು ಕೂಡಾ ನಮ್ಮಂತಹ ಜೀವಿಗಳೇ ಅನುಸರಿಸುತ್ತಿದ್ದಾರೆ. ನಮ್ಮದು ಮತ್ತು ಅವರದರಲ್ಲಿ ಕೂಡುವಿಕೆಯ ಅಂಶಗಳಾವುವು? ಭಿನ್ನವಿರುವ ಅಂಶಗಳಾವುವು; ಇತ್ಯಾದಿಗಳೆಲ್ಲಾ ನಮ್ಮ ಅಧ್ಯಯನದ ಅಥವಾ ಅರಿವಿನ ವಿಷಯಗಳಾಗಿ ಒದಗಿದರೆ ಆರೋಗ್ಯಕರವಾದ ಸಾಂಸ್ಕೃತಿಕ ಅಥವಾ ಧಾರ್ಮಿಕವಾದ ವಾತಾವರಣವು ಸಮಾಜದಲ್ಲಿ ಉಂಟಾಗುತ್ತದೆ.

ನಮ್ಮ ಸಂಸ್ಕೃತಿ ಅಥವಾ ಧರ್ಮದ ಮಾನ್ಯತೆಯು ಅಥವಾ ಶ್ರೇಷ್ಟತೆಯು ಮತ್ತೊಂದು ಯಾವುದೋ ಒಂದರ ಜೊತೆಗಿನ ಪೈಪೋಟಿಯಂತಾಗಿರಬಾರದು. ಅಥವಾ ಅದನ್ನು ದ್ವೇಷಿಸುವ ಮಾನದಂಡದಲ್ಲಿ ನಮ್ಮದರ ಶ್ರೇಷ್ಟತನವು ತಲೆಯೆತ್ತುವಂತಹ ಮನಸ್ಥಿತಿಯು ಇರಕೂಡದು. ಅಷ್ಟೇ!
ಒಟ್ಟಾರೆ ವ್ಯಕ್ತಿವ್ಯಕ್ತಿಯ ಮನಸ್ಥಿತಿಗಳು ಆರೋಗ್ಯದಿಂದಿದ್ದರೆ ಸಮಾಜವು ಆರೋಗ್ಯವಾಗಿರುತ್ತದೆ. ಏಕೆಂದರೆ ವ್ಯಕ್ತಿವ್ಯಕ್ತಿಗಳಿಂದ ಕುಟುಂಬ, ಕುಟುಂಬಗಳಿಂದ ಸಮಾಜ.

ಇತರ ಧರ್ಮೀಯರನ್ನು, ಸಂಸ್ಕೃತಿ, ಆಚಾರ ವಿಚಾರಗಳನ್ನು ಅನಿವಾರ್ಯವಾಗಿ ಸಹಿಸಿಕೊಳ್ಳುವಂತಹ ಮನಸ್ಥಿತಿಯೂ ಕೂಡಾ ಆರೋಗ್ಯಕರವೇನಲ್ಲ. ಏಕೆಂದರೆ ಇದು ಒಳ ಕುದಿಯಾಗಿರುತ್ತದೆ. ಈ ಒಳಕುದಿ ಸ್ವೀಕರಿಸಿರುವುದಿಲ್ಲ. ಸಹಿಸಿಕೊಂಡಿರುತ್ತದೆ ಅಷ್ಟೇ. ಯಾವಾಗ ಅವರ ಸಹನಾ ಶಕ್ತಿ ಬಲ ಕಳೆದುಕೊಳ್ಳುತ್ತದೆಯೋ ಆಗ ಸ್ಫೋಟಗೊಳ್ಳುತ್ತದೆ. ಸಮಾಜದ ಧರ್ಮಗಳಲ್ಲಿ, ಸಂಸ್ಕೃತಿಗಳಲ್ಲಿ ಮಾತ್ರವಲ್ಲ ಸಹಿಸಿಕೊಂಡಿರುವ ಈ ಒಳಕುದಿಯ ಸಂಘರ್ಷ. ಮನೆಗಳಲ್ಲಿಯೂ ಕೂಡಾ. ಗಂಡ ಹೆಂಡತಿಯನ್ನು ಅಥವಾ ಹೆಂಡತಿ ಗಂಡನನ್ನು, ಮಕ್ಕಳು ಪೋಷಕರನ್ನು, ಪೋಷಕರು ಮಕ್ಕಳನ್ನು ಮತ್ತು ಇತರ ಸದಸ್ಯರನ್ನು ಅವರವರ ಸ್ವಭಾವ, ಅಭಿರುಚಿ, ವ್ಯಕ್ತಿತ್ವದಂತೆ ಸ್ವೀಕರಿಸಿರುವುದಿಲ್ಲ. ಹೇಗೋ ಸಹಿಸಿಕೊಂಡಿರುತ್ತಾರೆ.

ಸಹಿಸಿಕೊಳ್ಳುವುದಕ್ಕೂ ಸ್ವೀಕರಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಸಹಿಸಿಕೊಳ್ಳುವುದು ಎಂದರೆ ಅಸಹನೆ ಇದೆ, ಒಪ್ಪಿಗೆ ಇಲ್ಲ, ಆದರೆ ವಾತಾವರಣವು ಕೆಡಬಾರದು ಎಂದೋ ಅಥವಾ ಇನ್ನಾವುದಾದರೂ ಕಾರಣಕ್ಕೆ ಸಂಘರ್ಷಗಳಾಗಬಾರದು ಎಂದೋ ‘ಅಡ್ಜೆಸ್ಟ್’ ಮಾಡಿಕೊಳ್ಳುವುದು. ಹೊಂದಾಣಿಕೆ ಮಾಡಿಕೊಳ್ಳುವುದು. ಅಡ್ಜೆಸ್ಟ್ ಮಾಡಿಕೊಳ್ಳುವವರು ತಮ್ಮ ಬಲ ಮೇಲಾದಾಗ ರಿಜೆಕ್ಟ್ ಮಾಡುವುದರಲ್ಲಿ ಯಾವ ಆಶ್ಚರ್ಯವೂ ಇರುವುದಿಲ್ಲ. ಅಡ್ಜೆಸ್ಟ್‍ಮೆಂಟ್ ಎಂದರೆ ಒತ್ತಡದಲ್ಲಿರುವ ಬಂಧನವೇ.

ಆದರೆ ಅಕ್ಸೆಪ್ಟ್ ಮಾಡಿರುವವರು ಅವರಿಂದ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳುವುದಿಲ್ಲ. ತಮ್ಮ ಆತ್ಮರತಿಯ ಅರಿಮೆಗೆ ಅನುಗುಣವಾಗಿ ಅವರು ವರ್ತಿಸಬೇಕೆಂದು ಕಾಯುವುದಿಲ್ಲ. ಅವರು ಇರುವುದೇ ಹಾಗೆ. ನಾನು ಇರುವುದೇ ಹೀಗೆ. ಪರಸ್ಪರ ನಿರೀಕ್ಷೆಗಳಿಲ್ಲದೇ ಅನುಬಂಧದಲ್ಲಿರುವುದು. ಕೂಡುವಂತಹ ಚುಕ್ಕಿಗಳಿಗೆ ಗೆರೆಗಳನ್ನು ಎಳೆದು ರಂಗೋಲಿ ಬಿಡಿಸುವುದು. ಆತ್ಮರತಿಯ ಅರಿಮೆಯೆಂದ ಬಿಡುಗಡೆ ಎಂದರೆ ಮಿಲನ. ಆತ್ಮರತಿಯ ಅರಿಮೆಯಲ್ಲಿರುವುದು ಎಂದರೆ ಕಾರಾಗೃಹಗಳೊಂದಿಗೆ ನಡೆದಾಡುತ್ತಿರುವುದು. ಯಾರೂ ಯಾರನ್ನೂ ಸಂಧಿಸರು, ಬೆರೆಯರು.
ಅದಕ್ಕೆ ಬಸವಣ್ಣನವರ ಸರಳ ಸೂತ್ರ “ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ.” ಅರಿಮೆಯಿಂದ ಹೊರಗೆ ಬರುವುದು ವ್ಯಕ್ತಿಯು ತನ್ನ ಮನೋರೋಗದಿಂದ ಮುಕ್ತನಾಗುವುದು ಅಂತರಂಗ ಶುದ್ಧಿ. ವ್ಯಕ್ತಿಗತವಾಗಿ ಮಾನಸಿಕವಾಗಿ ಆರೋಗ್ಯವಾಗಿರುವವರಿಂದ ಆರೋಗ್ಯಕರ ಸಮಾಜವೇ ನಿರ್ಮಾಣವಾಗುತ್ತದೆ. ಇದು ಬಹಿರಂಗ ಶುದ್ಧಿ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending