ಅಂತರಂಗ
ಅರಿಮೆಯ ಅರಿವಿರಲಿ-11: ಆತ್ಮವೈಭವ
- ಯೋಗೇಶ್ ಮಾಸ್ಟರ್
ಆತ್ಮರತಿ ಅಥವಾ Narcissistic Personality ಒಮ್ಮೆ ಹೊಕ್ಕಿಕೊಂಡಿತೆಂದರೆ ಅದರಿಂದ ಬಿಡುಗಡೆ ಇಲ್ಲ ಅಂತೇನಿಲ್ಲ. ಇದು ಅನುವಂಶೀಯವಾದ ಸಮಸ್ಯೆಯೇನಲ್ಲ. ಜೊತೆಗೆ ಇದು ಸಾಂಕ್ರಾಮಿಕವೂ ಅಲ್ಲ. ಮನೋರೋಗಗಳಲ್ಲಿ ಕೆಲವು ಸಾಂಕ್ರಾಮಿಕವಾಗುವುದಿವೆ. ಒಬ್ಬರ ವರ್ತನೆ ಮತ್ತು ನಡವಳಿಕೆ ಅಥವಾ ಬಲವಾದ ಪ್ರಭಾವಗಳು ಇನ್ನೊಬ್ಬರಿಗೂ ಅಂತಹ ವರ್ತನೆಯನ್ನು ಪ್ರೇರೇಪಿಸುವಂತಹ ಸೋಂಕು ಇರುತ್ತದೆ. ಒಬ್ಬ ದುರ್ಬಲ ಮನಸ್ಕನು ತನಗಾಗಿರುವ ಭಯ ಅಥವಾ ಇನ್ನಿತರ ನಕಾರಾತ್ಮಕ ಭಾವವನ್ನು ಪದೇಪದೇ ವ್ಯಕ್ತಪಡಿಸುತ್ತಾ ಇನ್ನೊಬ್ಬ ದುರ್ಬಲ ಮನಸ್ಕನಿಗೆ ಅದನ್ನು ಸೋಂಕಿಸಬಹುದು.
ಇದು ಆ ಬಗೆಯದೂ ಅಲ್ಲ. ನಿಜ ಹೇಳಬೇಕೆಂದರೆ ನಾರ್ಸಿಸಂ ಅಥವಾ ಆತ್ಮರತಿಯರಿಮೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ ಅದು ಎಷ್ಟಿರಬೇಕೋ ಅಷ್ಟೇ ಇದ್ದರೆ ಆರೋಗ್ಯಕರ ಮನಸ್ಥಿತಿ ಎಂದೂ, ಮಿತಿಮೀರಿದರೆ ಅನಾರೋಗ್ಯಕರ ಮನಸ್ಥಿತಿ ಎಂದೂ ತಿಳಿಯಬೇಕು. ಒಬ್ಬ ವ್ಯಕ್ತಿಯ ಸಾಧಾರಣ ಬೆಳವಣಿಗೆಗೆ ಆತ್ಮರತಿಯೆಂಬುದು ಬಹಳ ಸಾಮಾನ್ಯವೂ, ಕೆಲವೊಮ್ಮೆ ಅಗತ್ಯವೂ ಆಗಿರುತ್ತದೆ, ಹಸ್ತಮೈಥುನದಂತೆ.
ಸಿಗ್ಮಂಡ್ ಫ್ರಾಯ್ಡ್ ಆತ್ಮರತಿಗೆ ಕೊಡುವ ಒಂದು ಸಾಧಾರಣ ಉದಾಹರಣೆ ಏನೆಂದರೆ, “ಗಂಡ ಹೆಂಡತಿ ಮಗುವನ್ನು ಹೆರುವುದು,” ತಮ್ಮ ತದ್ರೂಪುಗಳನ್ನು ರೂಪಿಸುವುದು ಅಥವಾ ವಂಶ ಮುಂದುವರಿಸುವುದೂ ಕೂಡಾ ಆತ್ಮರತಿಯೇ. ಇರಬಹುದು. ಅರಿವಿಗೆಟುಕದ ಅನೇಕ ಅರಿಮೆಗಳು ನಮ್ಮಲ್ಲಿ ಅಂತರ್ಗತವಾಗಿರುತ್ತವೆ. ಹಾಗಿರುವಾಗ, ಅಯ್ಯೋ ನನಗೆ ಇಂತದ್ದೊಂದು ಅರಿಮೆ ಇದೆ, ಕಾಂಪ್ಲೆಕ್ಸ್ ಕಾಡುತ್ತಿದೆ ಎಂದು ರೋಗಗ್ರಸ್ತ ಮನೋಭಾವವನ್ನು ಹೊಂದುವ ಬದಲು, ‘ಇದಕ್ಕೆ ಈ ಹೆಸರಿನಿಂದ ಕರೆಯುತ್ತಾರೆ’ ಎಂಬು ತಿಳುವಳಿಕೆಯನ್ನು ಹೊಂದುವುದು ಮತ್ತು ಮಿತಿ ಮೀರಲು ಹಾತೊರೆವ ಅರಿಮೆಯನ್ನು ಅರಿವಿನಿಂದ ಅಂಕೆಯಲ್ಲಿಡುವುದು ಜಾಣನಾದವನ ಲಕ್ಷಣ.
ನಾನು ಸರ್ವಶಕ್ತ ಸರ್ವಾಂತರ್ಯಾಮಿ
ಮನುಷ್ಯನಿಗೆ ಮಗುವಾಗಿರುವಾಗಲೇ ತನ್ನ ದೃಷ್ಟಿಯ ಮಿತಿಯಲ್ಲಿರುವ ಇಲ್ಲದಿರುವ ಬೇಕಿರುವ ಬೇಡದಿರುವ ಎಲ್ಲದರ ಮೇಲೆ ತನ್ನ ಒಡೆತನ ಅಥವಾ ಯಜಮಾನಿಕೆ ಅಥವಾ ಅಧಿಕಾರ ಇರಬೇಕೆಂದೂ ಆಸೆ ಇರುತ್ತದೆ.ತಾನೊಬ್ಬ ಸರ್ವಶಕ್ತ ಮತ್ತು ಸರ್ವಾಂತರ್ಯಾಮಿಯಾಗಿರಬೇಕೆಂಬ ಆತ್ಮವೈಭವದ ಪರಿಕಲ್ಪನೆ ಇರುತ್ತದೆ. ಮಗುವಿಗೆ ಆಲೋಚನೆಗಳು ಮೂಡತೊಡಗುವ ವಯಸ್ಸಿನಲ್ಲಿಯೇ, ತನ್ನ ಸುತ್ತಲ ವಿಷಯವಸ್ತುಗಳನ್ನು ಗುರುತಿಸುವಷ್ಟಾಗುತ್ತಿದ್ದಂತೆ, ಅದರಲ್ಲಿಯೂ ತನಗೆ ಯಾವುದರಿಂದ ಆನಂದ ಮತ್ತು ಸುಖ ಸಿಗುತ್ತದೆ ಎಂಬ ಅರಿವಾಗುತ್ತಿದ್ದಂತೆಯೇ ಮನಸ್ಸಿನಲ್ಲಿ ಕನಸುಗಳು ಗರಿಗೆದರತೊಡಗುತ್ತದೆ.
ಅವರ ಏಕಾಂತಗಳಲ್ಲಿ, ಒಬ್ಬರೇ ಆಡಿಕೊಳ್ಳುವ, ತಮ್ಮೊಂದಿಗೆ ತಾವೇ ಇರುವಂತಹ ಎಲ್ಲಾ ಅವಕಾಶಗಳಲ್ಲಿ ಅವರು ಕನವರಿಸುವುದು ತಮ್ಮ ಆತ್ಮವೈಭವವನ್ನೇ. ಇದನ್ನು ಮನಶಾಸ್ತ್ರದಲ್ಲಿ ಮೆಗಲೋಮೇನಿಯಾಕ್ ಆಮ್ನಿಪೇಟೆನ್ಸ್ ಆಲೋಚನೆಗಳು ಎನ್ನುತ್ತಾರೆ. ಸಾಲದಕ್ಕೆ ಕೆಲವು ಪೋಷಕರು, ಕೆಲವು ಶಿಕ್ಷಕರು, ಮಗುವನ್ನು ಪ್ರೀತಿಸುವವರು ಈ ಆಲೋಚನೆಗಳಿಗೆ, ಅವರು ಕನವರಿಸುವ ಕನಸುಗಳಿಗೆ ಕಸುವು ನೀಡುವಂತೆ ಪ್ರೇರಣೆಗಳನ್ನು ನೀಡುತ್ತಾರೆ.
ಪ್ರೋತ್ಸಾಹಿಸುತ್ತಾರೆ. ಕೆಲವು ಪೋಷಕರಂತೂ ತಾವೆಂದಿಗೂ ಸೇರಲಾಗದ ಗುರಿಯ ದಾರಿಯನ್ನು ಅವರ ಕಡೆಗೆ ತಿರುಗಿಸಿಬಿಡುತ್ತಾರೆ. ಮಕ್ಕಳಲ್ಲಿ ಅರಿಮೆಗಳನ್ನು ಬಲಗೊಳಿಸುವುದು ಸಾಮಾನ್ಯವಾಗಿ ಕುಟುಂಬವೇ. ಮಕ್ಕಳಲ್ಲಿರುವ ಮೌಲ್ಯವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಅತ್ಯುತ್ಪ್ರೇಕ್ಷೆಯಿಂದ ವರ್ಣಿಸುವುದು. ಹೊಗಳುವುದು. ನಮ್ಮ ಮಗು ಬಿಟ್ಟಾರೆ ಈ ಜಗತ್ತಿನಲ್ಲಿ ಇಂತಹ ಮಕ್ಕಳೇ ಇಲ್ಲ ಎನ್ನುವಂತೆ ಕೊಂಡಾಡುವುದು; ಇವೆಲ್ಲಾ ಸಹಜವಾಗಿಯೇ ಮಕ್ಕಳಲ್ಲಿ ಇರುವ ಆತ್ಮವೈಭವವನ್ನು ಆತ್ಮರತಿಯ ಸಮಸ್ಯೆಯನ್ನಾಗಿ ಪರಿವರ್ತಿಸುತ್ತದೆ. ಒಂದು ವೇಳೆ ಪೋಷಕರು ಅಥವಾ ಮನೆಯವರು ಅಥವಾ ಸಾಮಾಜಿಕ ಪರಿಸರದಲ್ಲಿರುವವರು ಮಗುವಿಗೆ ಉಬ್ಬಿಸುವ ಬದಲು ಕುಗ್ಗಿಸಿದರೆ, ಮಕ್ಕಳು ಕೀಳರಿಮೆಯಲ್ಲಿ ಬಳಲುತ್ತಾರೆ.
ವಿರೂಪದರಿಮೆ
ಆತ್ಮರತಿಗೆ ವಿರುದ್ಧವಾದಂತಹ ಇನ್ನೊಂದು ಸಮಸ್ಯೆ ಇದೆ, ಅದು ವಿರೂಪದರಿಮೆಯ ಸಮಸ್ಯೆ Body dysmorphic disorder (BDD. ಇವರ ಸಮಸ್ಯೆ ಏನೆಂದರೆ, ತಮ್ಮ ಮುಖದಲ್ಲಿ, ದೇಹದಲ್ಲಿ, ನಡೆಯಲ್ಲಿ, ನಿಲುವಲ್ಲಿ, ಭಂಗಿಯಲ್ಲಿ; ಎಲ್ಲದರಲ್ಲೂ ಏನೋ ಒಂದು ಸಮಸ್ಯೆ ಇದೆ ಎಂದು ಕೊರಗುತ್ತಿರುತ್ತಾರೆ. ತಾನು ಚೆನ್ನಾಗಿಲ್ಲ. ಇತರರು ಇದ್ದಂತೆ ತಾನು ಸುರೂಪವಾಗಿಲ್ಲ. ನನ್ನ ಮೂಗು ವಕ್ರ, ಕೆನ್ನೆ ಚಪ್ಪೆ, ಮೂತಿ ಉದ್ದ, ಹಲ್ಲು ವಕ್ರ, ಮುಖದಲ್ಲಿ ಲಕ್ಷಣವಿಲ್ಲ; ಹೀಗೆ, ಒಂದಲ್ಲಾ ಒಂದು ವಿರೂಪವನ್ನು ತಮ್ಮಲ್ಲಿ ಗುರುತಿಸಿಕೊಂಡು ಕೀಳರಿಮೆಯಲ್ಲಿ ಬಳಲುತ್ತಿರುತ್ತಾರೆ. ತಾವು ಕಪ್ಪು ಎಂಬ ಅರಿಮೆ, ತಲೆಯಲ್ಲಿ ಕೂದಲಿಲ್ಲ ಎಂಬ ಕೊರಗು; ತಾನು ಸಣ್ಣಗಿದ್ದೇನೆ ಅಥವಾ ದಪ್ಪಗಿದ್ದೇನೆ; ಯಾವುದಾದರೂ ಅವರ ತಲೆಯಲ್ಲಿ ಕೂತಿರುತ್ತದೆ. ಹಲ್ಲು ಉಬ್ಬಿದೆ ಎಂದು ಮನಸೋಯಿಚ್ಚೆ ನಗಲಾರರು. ಹಲ್ಲು ಕಂಡವರು ಆಡಿಕೊಳ್ಳುತ್ತಾರೆ, ಅಪಹಾಸ್ಯ ಮಾಡುತ್ತಾರೆ ಎಂಬ ಹಿಂಜರಿಕೆ ಅವರಿಗೆ.
ಸಾಲದಕ್ಕೆ ನಮ್ಮ ಸಮಾಜವೂ ಸೌಂದರ್ಯವೆಂದರೆ ಹೀಗೆ ಎಂಬ ಮಾನದಂಡಗಳನ್ನು ಬೇರೆ ಇಟ್ಟಿದೆಯಲ್ಲಾ. ಹುಡುಗಿ ಎಂದರೆ ತೆಳ್ಳಗೆ, ಬೆಳ್ಳಗೆ ಇರಬೇಕು. “ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ, ನಾಸಿಕವು ಸಂಪಿಗೆಯಂತೆ, ನೀ ನಗಲು ಹೂಬಿರಿದಂತೆ,” ಎಂದು ಸೌಂದರ್ಯಕ್ಕೊಂದು ಮಾನದಂಡವಿಟ್ಟು, ಆ ಸುರೂಪದ ಮಾನದಂಡದ ವ್ಯಾಪ್ತಿಯಲ್ಲಿ ಬರದೇ ಇರುವವರು ತಮ್ಮನ್ನು ಕುರೂಪವೆಂದೋ, ವಿರೂಪವೆಂದೋ ಅಂದುಕೊಳ್ಳಬೇಕು ತಾನೆ? ಕತೆ, ಕಾವ್ಯ ಮತ್ತು ಕಾದಂಬರಿಗಳಂತಹ ಸಾಹಿತ್ಯ, ಸಂಗೀತ, ಸಿನಿಮಾಗಳು ಸಾಕಷ್ಟು ಪ್ರಮಾಣದಲ್ಲಿ ಅರಿಮೆಗಳನ್ನು ಗಟ್ಟಿಗೊಳಿಸುವ ಕಾಣ್ಕೆಗಳನ್ನು ನೀಡುತ್ತವೆ.
ಸುಮ್ಮನೆ ಆಗಲೋ ಈಗಲೋ ಗಮನಿಸಿ, ಬೆಳ್ಳಗಿದ್ದಾನೆಂದೋ, ದಷ್ಟಪುಷ್ಟವಾಗಿದ್ದಾನೆಂದೋ, ಎತ್ತರಕ್ಕಿದ್ದಾನೆಂದೋ, ಅಥವಾ ಇವೆಲ್ಲವೂ ಇದೆಯೆಂದೋ ಆತನಿಗೆ “ನೀನು ಹೀರೋ, ಒಳ್ಳೆ ಹೀರೋ ಇದ್ದಂಗಿದ್ದೀಯ. ಯಾಕೆ ಸಿನಿಮಾಗೆ ಪ್ರಯತ್ನ ಮಾಡಬಾರದು” ಎಂದೇ ಹೇಳುತ್ತಾರೆ.
ಅವರೇನೂ ಸುಮ್ಮನೆ ಹೇಳುತ್ತಿಲ್ಲ. ಅವರಲ್ಲಿ ಒಂದು ಸ್ವಂತ ಆಲೋಚನೆಯೊಂದು ಹುಟ್ಟಿ ಅದಕ್ಕೆ ಸರಿಯಾಗಿ ಅವರು ಮಾತಾಡುತ್ತಿಲ್ಲ. ಸಾಮಾನ್ಯವಾಗಿ ಸಮಾಜದಲ್ಲಿ ಚಾಲ್ತಿಯಲ್ಲಿರುವ ಅಭಿಪ್ರಾಯವನ್ನು ತಮ್ಮದಾಗಿಸಿಕೊಂಡು ಅಭಿವ್ಯಕ್ತಪಡಿಸುತ್ತಿರುತ್ತಾರೆ.
ಅರಿಮೆಗಳ ಬಂಡವಾಳ ಮತ್ತು ವ್ಯಾಪಾರ
ಈ ಅರಿಮೆಗಳು ಎಷ್ಟೋ ಜನಕ್ಕೆ ಬಂಡವಾಳ. ಫೇರ್ ಆಗಿ, ಲವ್ಲೀ ಆಗಿ ಕಾಣಿರಿ ಎಂದು ಫೇರ್ನೆಸ್ ಕ್ರೀಂಗೆ ಬಂಡವಾಳ ಹಾಕಿದವರಿಗೆ ಲಾಭವಾಗುತ್ತಿರುವುದು ಯಾವ ಅರಿಮೆಯಿಂದ? ನಾವು ಧಾರ್ಮಿಕ ಮೌಢ್ಯಗಳನ್ನು ಧಿಕ್ಕರಿಸುತ್ತಾ ಬಂಡವಾಳದಾರರು ಪೋಷಿಸುವ ಮೌಢ್ಯಗಳನ್ನು ಗಮನಿಸುವಲ್ಲಿ ಹಿಂದುಳಿದುಬಿಡುತ್ತೇವೆ. ಹದಿನೈದು ದಿನಗಳ ಮುಖದ ಕಾಂತಿ ಇಂತಿರುವುದು ಅಂತಾಗಿಬಿಡುತ್ತದೆ ಎಂಬ ಬಣ್ಣದ ಮಾಪನದ ಪಟ್ಟಿಯನ್ನು ಹೊಂದಿರುವ ಮುಖಕಾಂತಿಯ ಕ್ರೀಮನ್ನು ವರ್ಷಾನು ವರ್ಷಗಟ್ಟಲೆ ಬಳಸುತ್ತಲೇ ಇದ್ದರೂ ‘ಈ ಕ್ರೀಮಿನವರು ಸುಳ್ಳುಗಾರ. ಈ ಕ್ರಿಮಿಂದ ನನಗೆ ಯಾವ ಮುಖಕಾಂತಿಯೂ ಬಂದಿಲ್ಲ’ ಎಂದು ಧಿಕ್ಕರಿಸದೇ ಇರುವಷ್ಟು ಕ್ರೀಮಿನ ವ್ಯಸನವು ಅಂಟಿರುತ್ತದೆ.
ಬಂಡವಾಳದಾರನಿಗೆ ನಾವು ವ್ಯಸನಕ್ಕಂಟುವುದೇ ಬೇಕಾಗಿರುವುದು. ಇಂದು ಸಮಸ್ಯೆ ಇದೆ ಎಂದು ಕೊಂಡು ನಾಳೆ ವಾಸಿಯಾದ ಮೇಲೆ ಬೇಡದೇ ಸುಮ್ಮನಾಗಿಬಿಡುವಂತಹ ಯಾವುದೋ ರೋಗದ ಔಷಧಿಯಲ್ಲ ಇದು. ಅರಿಮೆಯ ವ್ಯಸನ ಹೋಗದು, ಪರಿಹಾರ ಲಭಿಸದು ಎಂಬ ನಂಬಿಕೆ ಅವರದು.
ಬಂಡವಾಳದಾರರು ಅದೆಷ್ಟು ಅರಿಮೆಯನ್ನು ಗಟ್ಟಿಗೊಳಿಸುತ್ತಾರೆಂದರೆ, ನೀವು ಹಾಡುವ ಸಾಮರ್ಥ್ಯಕ್ಕೂ, ಅದಕ್ಕೆ ಬೇಕಾದ ಆತ್ಮವಿಶ್ವಾಸಕ್ಕೂ ನಿಮ್ಮ ಕಪ್ಪುತ್ವಚೆಯನ್ನು ತಗುಲಿಹಾಕುತ್ತಾರೆ. ಗೌರವವರ್ಣಕ್ಕೆ ನೀವು ತಿರುಗಿದ ಮೇಲೆ ಆತ್ಮವಿಶ್ವಾಸದಿಂದ ಹಾಡುತ್ತೀರಿ ಎನ್ನುತ್ತಾರೆ. ಅದನ್ನು ಒಪ್ಪಿ ಆ ವಸ್ತುಗಳನ್ನು ಕೊಳ್ಳುತ್ತಾರೆ. ಸಣ್ಣಗಿರುವವರಿಗೆ ದಪ್ಪಗಾಗಲು, ದಪ್ಪಗಿರುವವರಿಗೆ ಸಣ್ಣಗಾಗಲು, ಕುಳ್ಳಗಿರುವವರಿಗೆ ಉದ್ದವಾಗಲು, ತಲೆಯಲ್ಲಿ ಕಡಿಮೆ ಕೂದಲಿರುವವರಿಗೆ ಉದ್ದ ಕೂದಲು ಬರಲು; ಅಷ್ಟೇಕೆ ಮೊಲೆಗಳ ಗಾತ್ರವನ್ನು ಹೆಚ್ಚಿಸಲು, ನಿಮ್ಮ ಶಿಶ್ನವು ಚಿಕ್ಕದಾಗಿದ್ದರೆ ಅದನ್ನು ಉದ್ದ ಮಾಡಲು. ನಿಮ್ಮ ಸಂಭೋಗದ ಸಮಯವನ್ನು ರಾತ್ರಿಯಿಡೀ ಹಿಗ್ಗಿಸಲು; ಹೀಗೆ ಅರಿಮೆಗಳು ವ್ಯಾಪಾರಕ್ಕೆ ಬಂಡವಾಳಗಳೂ ಕೂಡಾ.
ಮೊಲೆಗಳು ಚಿಕ್ಕದಿರಲಿ, ದೊಡ್ಡದಿರಲಿ, ಅವುಗಳು ಆರೋಗ್ಯವಾಗಿದ್ದರೆ ಸಾಲದೇ? ಶಿಶ್ನವು ಉದ್ದಕ್ಕಿರಲಿ, ಸಣ್ಣಕ್ಕಿರಲಿ; ಆರೋಗ್ಯವಾಗಿ ಅದು ಮಾಡುವ ಕೆಲಸ ಮಾಡಿದರಾಗದೇ? ಹೋಗಲಿ ಅದು ಅತ್ಯಂತ ಆಕರ್ಷಕವಾಗಿದ್ದರೂ, ಇಲ್ಲದಿದ್ದರೂ ಏನು? ಅದೇನು ಮುಖದಲ್ಲಿ ಮೂಗಿರುವ ಜಾಗದಲ್ಲಿದೆಯೇ ವಡವೆಯೊಂದರಿಂದ ಅಲಂಕರಿಸಿಕೊಂಡು ಮೆರವಣಿಗೆ ಹೋಗಲು? ಆದರೆ ಅರಿಮೆಯ ಪ್ರಭಾವವೇ ಅಂತಹದ್ದು. ಆತ್ಮರತಿಯೇ ಮೊದಲಾದ ಅರಿಮೆ ಎಂಬುದು ಮನುಷ್ಯನ ಪ್ರದರ್ಶನದ ಆಯಾಮಗಳಲ್ಲಿ ಮಾತ್ರವಲ್ಲ ಗುಪ್ತನೆಲೆಗಳಲ್ಲಿ, ಒಳಗಿನ ನೆರಳುಗಳಲ್ಲೂ ಒಳಗೊಳಗೇ ಕಾಡುತ್ತಿರುತ್ತವೆ.
ಶಿಶ್ನದ ಗಾತ್ರವೇ ಮೊದಲಾದ ಲೈಂಗಿಕತೆಯ ಕೀಳರಿಮೆಗಳಿಂದ ಬಹಳಲುವ ಜನರ ಅದೆಷ್ಟು ಸಾಮರ್ಥ್ಯ ಮತ್ತು ಪ್ರತಿಭೆಗಳು ಹಾಗೆಯೇ ಸೊರಗಿ ಹೋಗಿವೆಯೋ ಕಂಡವರಾರು? ಲೆಕ್ಕವಿಟ್ಟವರಾರು? ಮೊದಲು ಇವನ್ನು ರೂಪಿಸಿದವರು ಯಾರು? ಯಾರಾದರಾಗಲಿ, ಹೇಗಾದರಾಗಲಿ; ಇಂತಹ ಸೋಂಕುಗಳಿಂದ ನಾವು ನಮ್ಮನ್ನೂ ರಕ್ಷಿಸಿಕೊಳ್ಳಬೇಕು, ಸಮಾಜವನ್ನೂ ರಕ್ಷಿಸಬೇಕು. ಖಂಡಿತವಾಗಿ ಅದು ಪ್ರಾರಂಭವಾಗಬೇಕಾಗಿರುವುದು ‘ನನ್ನಿಂದಲೇ’.
ಅಭಿಪ್ರಾಯಗಳೂ ಕೂಡಾ ಸೋಂಕುಗಳಂತೆ ವರ್ತಿಸುತ್ತಾ ಅರಿಮೆಗಳಿಗೆ ಕಾರಣವಾಗುತ್ತದೆ.
ವಿರೂಪದ ಅರಿಮೆಯು ತನ್ನ ಮೌಲ್ಯವನ್ನು ತಾನೇ ಗ್ರಹಿಸುವುದಕ್ಕೆ ಬಿಡುವುದಿಲ್ಲ. ತನಗಿರುವ ಸಾಮರ್ಥ್ಯದ ಸಾಧ್ಯತೆಗಳನ್ನು ಹುಡುಕಿಕೊಳ್ಳಲು ಬಿಡುವುದಿಲ್ಲ. ನನ್ನಂತವರಿಗೆ ಯಾರು ಹೆಣ್ಣು ಕೊಡ್ತಾರೆ? ನನ್ನ ಮುಖಕ್ಕೆ ಯಾರು ಕೆಲಸ ಕೊಡ್ತಾರೆ? ನನ್ನ ಯಾರೂ ಮೂಸುವವರಿಲ್ಲ? ಇವುಗಳ ಅವರ ಸಾಧಾರಣ ಮಾತುಗಳು.
ಮಹಾತ್ಮನ ಆತ್ಮ
ನಾನು ಅಂದರೆ ಯಾರು? ನಾನು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡ್ತೇನೆ. ನನ್ನ ಮಾತೇ ನಡೆಯಬೇಕು ಎಂಬ ಅಹಂಕಾರದ ಆತ್ಮರತಿಯಂತೆ, ಇನ್ನೊಂದು ವಿನಯಶೀಲ, ಮಾನವೀಯ ಆತ್ಮರತಿಯೂ ಕೂಡಾ ಅಸ್ತಿತ್ವದಲ್ಲಿದೆ. ನಾನಲ್ಲದೇ ಇನ್ಯಾರು ನೋಡಬೇಕು? ನಾವೇ ಕಾಪಾಡಬೇಕು. ಅವರು ಏನೇ ಹೇಳಲಿ, ನಾನು ಸಮಾಧಾನವಾಗಿದ್ದು ಸನ್ನಿವೇಶವನ್ನು ನಿಯಂತ್ರಿಸಬೇಕು. ಅವನಿಗೆ ಗೊತ್ತಾಗಲ್ಲ ಅಂದರೆ ನನಗೆ ಗೊತ್ತಾಗಲ್ವಾ? ಇದೂ ಕೂಡಾ ಆತ್ಮರತಿಯೇ.
ಆದರೆ ಆಗ್ರಹಪೂರ್ವಕವಾಗಿರುವುದಿಲ್ಲ. ಆವೇಶಭರಿತವಾಗಿರುವುದಿಲ್ಲ. ಈ ಬಗೆಯ ಮೃದುವಾದ ಮತ್ತು ವಿನಯಶೀಲವಾದ ಆತ್ಮರತಿಯ ಮದನರು ಮಹಾತ್ಮರಾಗುತ್ತಾರೆ. ಜನರೂ ಮತ್ತು ಸಮಾಜವೂ ಅವರು ಪ್ರದರ್ಶಿಸುತ್ತಿರುವ ಪ್ರೇಮ, ಪ್ರೀತಿ, ಕಳಕಳಿ ಮತ್ತು ಸೇವೆಗಳನ್ನು ನೋಡುತ್ತಾ, ಅದರಲ್ಲೂ ತಾವು ಹಿಂಜರಿಯುವ ಕ್ಷೇತ್ರಗಳಲ್ಲಿ ಅಸಹ್ಯ ಪಡದೇ, ಧೈರ್ಯವಾಗಿ ಸೇವೆಗಳನ್ನು ಮಾಡುವ ಈ ಮೃದು ಆತ್ಮರತಿಯವರು ಸ್ತುತಿಗೆ ಅರ್ಹವಾಗುತ್ತಾರೆ.
ಪರೋಪಕಾರಾರ್ಥೇಮಿದಂ ಶರೀರಂ ಎಂದು ನಸುನಗುತ್ತಾ ಅವರಿವರಿಗೆ ಸೇವೆ ಸಲ್ಲಿಸುತ್ತಾ, ಬಡವರನ್ನು ಹುಡುಕಿ, ಅನಾಥಾಲಯಗಳನ್ನು ಹೊಕ್ಕು ತಮ್ಮ ಆ ಒಂದು ದಿನದ ಸೇವೆಯನ್ನು ಶಾಶ್ವತ ಫೋಟೋ ಫ್ರೇಮಿನಲ್ಲಿ ಬಂಧಿಸಿ, ಫೇಸ್ಬುಕ್ ವಾಟ್ಸಪ್ಪುಗಳಲ್ಲಿ ಪ್ರಚಾರಪಡಿಸುವ ಆತ್ಮರತಿಯೂ ಕೂಡಾ ನಾರ್ಸಿಸಮ್ ಅರಿಮೆಯ ಭಾಗವೇ.
ಈ ವಿವಿಧ ಬಗೆಯ ಆತ್ಮರತಿಗಳನ್ನು, ಅಹಂಕಾರಗಳನ್ನು, ಆತ್ಮಕೇಂದ್ರಿತ ಆಲೋಚನೆಗಳನ್ನು ತಿಳಿದುಕೊಂಡರೆ ಒಬ್ಬ ಯಾವುದರಲ್ಲೇ ಬಂಧಿತನಾಗಿದ್ದರೆ ಅದರಿಂದ ಮುಕ್ತನಾಗಬಹುದು. ತಿಳಿದುಕೊಳ್ಳೋಣ ಮುಂದೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ6 days agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ5 days agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
-
ದಿನದ ಸುದ್ದಿ3 days agoಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ಗೌಡ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
-
ದಿನದ ಸುದ್ದಿ22 hours agoಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ


