ಬಹಿರಂಗ
‘ಮಹಿಷಾಸುರ’ ರಾಕ್ಷಸನಲ್ಲ ; ರಕ್ಷಕ..!
ಮಹಿಷ ಎಮ್ಮೆಗಳ ರಾಜ. ಮೈಸೂರು ಭಾಗದ ಪ್ರಮುಖ ಯಾದವ ದೊರೆ. ಯಾದವರಿಗೆ ಎಮ್ಮೆಗಳನ್ನು ಮೇಯಿಸಲು ಬೇಕಿದ್ದದು ಅಪಾರವಾದ ಅರಣ್ಯ. ಅದು ಮೈಸೂರು ಭಾಗದಲ್ಲಿ ಅಪಾರ ಪ್ರಮಾಣದಲ್ಲಿತ್ತು. ಆದರೆ, ಉತ್ತರ ಭಾರತದ ಕಡೆಯಿಂದ ಬಂದ ಆರ್ಯರು ಕೃಷಿಕರನ್ನು ಜತೆ ಸೇರಿಸಿಕೊಂಡು ಕೃಷಿ ಮಾಡಲು ಬಯಲು ಹುಡುಕುತ್ತಿದ್ದರು. ಅದು ಸಾಲದಾದಾಗ ಅರಣ್ಯವನ್ನು ಕಡಿದು, ಬೆಂಕಿ ಹಾಕಿ ನಾಶ ಮಾಡಿ ಬಯಲಾಗಿ ಪರಿವರ್ತಿಸಲು ಪ್ರಯತ್ನಿಸಿದರು. ಅದನ್ನು ವಿರೋಧಿಸಿದ ಮಹಿಷ ತನ್ನ ನಾಡನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದನು. ತಮ್ಮ ತಂತ್ರಗಾರಿಕೆಗೆ ವಿರೋಧ ತೋರಿದ ಮಹಿಷನನ್ನು ಆರ್ಯರು ರಾಕ್ಷಸನಂತೆ ಚಿತ್ರಿಸಿದರು.
ಈ ಭಾಗದ ಅತಿ ಸಾಮಾನ್ಯ ನಾಯಕಿಯಾಗಿದ್ದ ಚಾಮುಂಡಿಯನ್ನು ಮಹಿಷನ ವಿರುದ್ಧ ಆರ್ಯರು ಎತ್ತಿಕಟ್ಟಿದರು. ಅವಳಿಗೆ ಬೆಂಬಲಿಸಿ ಮಹಿಷನನ್ನು ಕುತಂತ್ರದಿಂದ ಕೊಂದರು. ಆ ನಂತರವೇ ಚಾಮುಂಡಿಯನ್ನು ದೇವತೆಯೆಂದೂ ಈ ಬೆಟ್ಟವನ್ನು ಚಾಮುಂಡಿ ಬೆಟ್ಟವೆಂದೂ ಹೆಸರಿಟ್ಟರು. ಅಲ್ಲಿಯವರೆಗೂ ಮಹಾಬಲಗಿರಿಯಾಗಿದ್ದ ಬೆಟ್ಟವು ಚಾಮುಂಡಿಬೆಟ್ಟವಾಯಿತು. ದೊರೆಯಾಗಿದ್ದ ಮಹಿಷನು ಮಹಿಷಾಸುರನಾದನು. ನಾಡನ್ನಾಳಿದ ಮಹಿಷ ಇಲ್ಲಿ ಬಿಸಿಲಿನಲ್ಲಿ ನಿಲ್ಲುವ ಅಗತ್ಯವಿರಲಿಲ್ಲ. ಆರ್ಯರ ತಂತ್ರ, ಜಾತಿ ಪದ್ಧತಿ, ಶೋಷಣೆಗಳಿಗೆ ಯಾರು ವಿರೋಧಿಸಿದರೊ ಅವರೆಲ್ಲ ಊರ ಆಚೆಗೆ ತಳ್ಳಲ್ಪಟ್ಟರು. ಹಾಗಾಗಿಯೇ ಹೊಲೆ–ಮಾದಿಗರು ಊರಿನ ಆಚೆಯೂ ಶೋಷಣೆಯನ್ನು ಒಪ್ಪಿಕೊಂಡ ಮೇಲ್ಜಾತಿಯವರು ಊರಿನ ಒಳಗೂ ವಾಸ ಮಾಡಿದರು.
ಅಶೋಕನ ಕಾಲದ ಶಾಸನಗಳಲ್ಲಿ ಮಹಿಷನ ಉಲ್ಲೇಖವಿದೆ. ಅಂದಿನ ಕಾಲದ ಶಾಸನಗಳಲ್ಲಿ ದಕ್ಷಿಣ ಭಾರತದ ಬೇರಾವ ರಾಜರ ಉಲ್ಲೇಖವೂ ಹೆಚ್ಚಾಗಿ ಇಲ್ಲದೇ ಇರುವುದೇ ಮಹಿಷನ ಶ್ರೇಷ್ಠತೆಗೆ ಹಿಡಿದ ಕನ್ನಡಿಯಾಗಿದೆ. ಇದನ್ನು ಅರ್ಥಮಾಡಿಕೊಂಡವರಿಗೆ ಮಹಿಷ ಇಲ್ಲಿನ ಬಹುಮುಖ್ಯ ಸ್ಥಳೀಯರ ದೊರೆಯಾಗಿದ್ದ ಎನ್ನುವುದು ಅರ್ಥವಾಗುತ್ತದೆ. ದಕ್ಷಿಣ ಪ್ರಾಂತ್ಯವನ್ನಾಳಿದ ಗಂಗರು, ಚೋಳರು, ಹೊಯ್ಸಳರ ಕಾಲಘಟ್ಟಗಳಲ್ಲಾಗಲಿ ಅಥವಾ ಅವರ ಹಿಂದಿನ ಕಾಲಘಟ್ಟಗಳಲ್ಲಾಗಲಿ ಚಾಮುಂಡಿ ಮತ್ತು ಮಹಿಷನ ನಡುವೆ ಯುದ್ಧವಾಗಿರುವ ಪ್ರಸಂಗವೇ ಉಲ್ಲೇಖವಾಗಿಲ್ಲ. ಅಂದಿನ ರಾಜಮನೆತನಗಳಿಗೆ ಯುದ್ಧದ ಕತೆ ತಿಳಿದಿದ್ದರೆ ಬಹುಶ: ಶಾಸನಗಳಲ್ಲಿ ಬರೆಸುತ್ತಿದ್ದರೇನೊ? ಎಂದೆನಿಸುತ್ತದೆ. ಅಂತಹ ಯಾವುದೇ ಶಾಸನಗಳು ಚಾಮುಂಡಿ ಬೆಟ್ಟದಲ್ಲಿ ಇದುವರೆವಿಗೂ ಪ್ರಾಚ್ಯಾವಸ್ತು ಸಂಶೊಧಕರ ಹುಡುಕಾಟಕ್ಕೆ ಸಿಕ್ಕಿರುವುದಿಲ್ಲ ಎಂದು ಲೇಖಕ ಅಶೋಕಪುರಂ ಸಿದ್ಧಸ್ವಾಮಿ ಅವರ ಕೃತಿಗಳಲ್ಲಿ ವಿವರಿಸಿದ್ದಾರೆ. ಹಾಗಾದರೆ ಇಲ್ಲಿ ರಾಜ ಮಹಿಷಾಸುರನಿಗು ಮತ್ತು ಚಾಮುಂಡೇಶ್ವರಿ ನಡುವೆಯೂ ಯುದ್ಧವೇ ನಡೆದಿಲ್ಲವೇ ಎಂಬ ಪ್ರಶ್ನೆ ಕೆಲವರಿಗೆ ಎದುರಾಗಬಹುದು. ಕುತೂಹಲವೆಂದರೆ ದಾಖಲಾತಿಗಳ ಪ್ರಕಾರ ಮಹಿಷಾಸುರನ ಆಡಳಿತ ಅವಧಿಯೇ ಬೇರೆ. ಚಾಮುಂಡೇಶ್ವರಿ ನಾಡದೇವತೆಯಾದ ಕಥೆಯ ಕಾಲಘಟ್ಟವೇ ಬೇರೆ ಎಂಬುದು ಇತಿಹಾಸಕಾರರ ವಿಶ್ಲೇಷಣೆಯಾಗಿದೆ.
ಮೈಸೂರಿಗೆ ಮೂಲ ಹೆಸರು ಬಂದಿರುವುದೇ ಮಹಿಷಾಸುರನಿಂದ. ಪ್ರಾಚೀನ ಕಾಲದಲ್ಲಿ ಮಹಿಸೂರನ್ನು ಮಹಿಷಾ ಮಂಡಲ, ಮಹಿಸೂರ ನಾಡು, ಮಹಿಷಾಪುರ ಎಂಬ ಹೆಸರುಗಳಿದ್ದವು. ಮಹಾಭಾರತ ಗ್ರಂಥದಲ್ಲಿ ಮಹಿಷಾ ಮಂಡಲದ ಪ್ರಸ್ತಾಪವಿದೆ. ಬೌದ್ಧ ಸಾಹಿತ್ಯಗಳಲ್ಲಿ ಮಹಿಷಾ ಮಂಡಲಕ್ಕೆ ವಿಶೇಷ ಸ್ಥಾನಮಾನವಿತ್ತೆಂಬುದು ದೃಢೀಕರಿಸುತ್ತದೆ. 8ನೇ ಶತಮಾನದÉ ಗಂಗರ ಕಾಲದಲ್ಲಿ ಮಹಾಬಲೇಶ್ವರ ದೇವಾಲಯವನ್ನು ಇಂದಿನ ಚಾಮುಂಡಿ ಬೆಟ್ಟದಲ್ಲಿ ಪುನರ್ ನಿರ್ಮಾಣಗೊಳಿಸಲಾಯಿತು. ನಂತರದ ವಿಷ್ಣುವರ್ಧನ ಕಾಲದ 1128ರ ಶಿಲಾ ಶಾಸನಗಳಲ್ಲಿ ಚಾಮುಂಡಿ ಬೆಟ್ಟವನ್ನು “ಸ್ವಸ್ತ ಶ್ರೀ ಮಹಾಬಲ ತೀರ್ಥ” ಎಂದು ಕೆತ್ತಲಾಗಿದೆ. 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಕಾಲಘಟ್ಟದಲ್ಲಿಯೂ ಈ ಬೆಟ್ಟವನ್ನು ಮಹಾಬಲಗಿರಿ ಎಂದೇ ಪ್ರಖ್ಯಾತವಾಗಿತ್ತು. ಅಷ್ಟೇ ಯಾಕೆ? ಕ್ರಿ.ಶ. 1399ರಲ್ಲಿ ಪ್ರಾರಂಭವಾದ ಯಧುವಂಶದ ಯದುಕೃಷ್ಣ ಓಡೆಯರ್ ಕಾಲದಲ್ಲಿಯೂ ಮಹಾಬಲಗಿರಿ ಬೆಟ್ಟ ಎಂದೇ ಸಂಭೋಧಿಸುತ್ತಿದ್ದರು. ಈ ಎಲ್ಲಾ ಮೂಲಾಧಾರಗಳ ಅರಿವಿದ್ದ ದೊಡ್ಡ ದೇವರಾಜ ಓಡೆಯರ್ 1659 ರಲ್ಲಿ ಚಾಮುಂಡಿ ಬೆಟ್ಟದಲ್ಲಿ ರಾಜ ಮಹಿಷಾಸುರನ ಬೃಹತ್ ಪ್ರತಿಮೆಯನ್ನು ಸ್ಥಾಪಿಸಿದ್ದು ಇಂದು ಮೂಲನಿವಾಸಿಗಳು ಅವರನ್ನು ಸ್ಮರಿಸಬೇಕಿದೆ.
ಪ್ರಸ್ತುತದಲ್ಲಿ ಮಹಿಷಾ ಮಂಡಲದಲ್ಲಿ ನೆಲೆಸಿದ್ದ ಪ್ರಜೆಗಳೆಲ್ಲಾ ನಾಗವಂಶಕ್ಕೆ ಸೇರಿದವರು. ಇವರು ಮೂಲತಹ ಬೌದ್ಧರು ಎಂಬ ಚರ್ಚೆಗೆ ಗ್ರಾಸವಾಗಿದೆ. 1970 ರಲ್ಲಿ ಕರ್ನಾಟಕ ಸರ್ಕಾರಿ ಪ್ರಕಾಶನ ಮಂದಿರ (ನಿಯಮಿತ) ವತಿಯಿಂದ ಪ್ರಕಟವಾದ ಡಾ.ಎಂ.ವಿ.ಕೃಷ್ಣರಾವ್ ಮತ್ತು ಎಂ.ಎಂ.ಕೇಶವ ಭಟ್ಟರ ಕರ್ನಾಟಕದ ಇತಿಹಾಸ ದರ್ಶನ ಕೃತಿಯಲ್ಲಿ “ಮೌರ್ಯ ಸಾಮ್ರಾಜ್ಯದ ಚಕ್ರವರ್ತಿಯಾದ ಅಶೋಕನು ರಕ್ಕತ ಎಂಬ ಬೌದ್ಧ ಭಿಕ್ಕುವನ್ನು ಬನವಾಸಿಗೂ ಹಾಗೂ ಮಹಾದೇವ ಎಂಬ ಭಿಕ್ಕುವನ್ನು ಮಹಿಷಾ ಮಂಡಲಕ್ಕೂ(ಮೈಸೂರು) ಬೌದ್ಧ ಮತ ಪ್ರಚಾರಕ್ಕಾಗಿ ಕಳುಹಿಸಿಕೊಟ್ಟಿದ್ದಾನೆಂದು ಬೌದ್ಧ ಗ್ರಂಥಗಳು ತಿಳಿಸುತ್ತದೆ”. ಎಂದು ದಾಖಲಿಸುತ್ತಾರೆ. ಇನ್ನು ಮುಂದುವರೆದು 1979 ರಲ್ಲಿ ಮೈಸೂರು ವಿವಿಯಲ್ಲಿ ಪ್ರಕಟವಾದ ಕನ್ನಡ ವಿಶ್ವಕೋಶ ಪುಟ ಸಂಖ್ಯೆ 34 ರಲ್ಲೂ ಸಹ ಮುಗ್ಗಲಿ ಪುತ್ರ ತಿಸ್ನ ಎಂಬ ಬೌದ್ಧ ಮಹಾಸಭೆ ಅಧ್ಯಕ್ಷನೂ ತೇರಾ ಮಹಾದೇವನೆಂಬ ಬೌದ್ಧ ಭಿಕ್ಕನ್ನು ಮಹಿಷಾ ಮಂಡಲಕ್ಕೆ ಬಂದಿದ್ದನೆಂದು ಉಲ್ಲೇಖವಿದೆ”.
ಇಷ್ಟೆಲ್ಲಾ ಐತಿಹಾಸಿಕ ದಾಖಲೆಗಳಿರುವ ಮಹಿಷಾ ಮಂಡಲದ ದೊರೆ ಮಹಿಷಾಸುರನನ್ನು ವೈದಿಕರು ನರಭಕ್ಷಕನಂತೆ ಬಿಂಬಿಸಿದ್ದು ಮಾತ್ರ ಯಾರು ತಳ್ಳಿ ಹಾಕುವಂತಿಲ್ಲ. ಇಂದು ಎಲ್ಲವೂ ಬದಲಾಗಿದೆ. ಮಹಿಷಾಸುರ ರಾಕ್ಷಕನಾಗಿರಲಿಲ್ಲ. ಆತನೊಬ್ಬ ಸತ್ಯ, ಪ್ರೀತಿ, ಅಹಿಂಸೆ, ಸಮಾನತೆ ಮತ್ತು ಭಾತೃತ್ವದಲ್ಲಿ ನಂಬಿಕೆಯನ್ನಿಟ್ಟು ತನ್ನ ನಾಡು ಮತ್ತು ಪ್ರಜೆಗಳನ್ನು ಮಮತೆಯಿಂದ ಕಾಣುತಿದ್ದ ಮಾತೃ ಹೃದಯಿಯಾಗಿದ್ದನು ಎಂದು ಐತಿಹಾಸಿಕ ದಾಖಲೆಗಳು ಬಹಿರಂಗ ಪಡಿಸಿವೆ. ಮಹಿಷಾಸುರನು ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಅಪಾರವಾದ ಗೌರವವನ್ನಿಟ್ಟು ಪಿತೃಪಕ್ಷ (ಪೂರ್ವಿಕರ ನೆನೆಯುವ ದಿನ) ಎಂಬ ಆಚರಣೆಗೆ ಬುನಾದಿ ಹಾಕಿಕೊಟ್ಟಿದ್ದನು. ಅದನ್ನು ಪಾಲಿಸುತ್ತಿರುವ ಮೂಲನಿವಾಸಿಗಳು ಮೈಸೂರು ದಸರಾ ಪ್ರಾರಂಭವಾಗುವ ಮುನ್ನ ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಕೆಲ ಗ್ರಾಮೀಣ ಭಾಗಗಳಿಂದ ಬಂದು ಮಹಿಷಾಸುರನಿಗೆ ತಮ್ಮದೇ ರೀತಿಯ ಗೌರವ ಸಲ್ಲಿಸುತ್ತಿರುವುದು ಇಂದಿಗೂ ಜೀವಂತವಾಗಿದೆ. ಸಾವಿರಾರು ವರ್ಷಗಳಿಂದ ಮಹಿಷಾ ಮಂಡಲದ ದೊರೆ ಮಹಿಷಾಸುರನನ್ನು ಮರೆತಿದ್ದ ಇಲ್ಲಿನ ಮೂಲನಿವಾಸಿಗಳು ಇಂದು ಮತ್ತೆ ಆತನನ್ನು ಸ್ಮರಿಸುತ್ತಿರುವುದು ಪ್ರಶಂಸನೀಯ. ಇವರ ಈ ಆಚರಣೆ ನಾಡದೇವತೆ ಚಾಮುಂಡೇಶ್ವರಿ ನಂಬಿರುವವರ ವಿರುದ್ಧವಾಗಲಿ ಅಥವಾ ಪರ್ಯಾಯ ದಸರಾವೆಂದು ಯಾರು ಭಾವಿಸಬೇಕಿಲ್ಲ. ಮಹಿಷಾ ದಸರಾದ ಮೂಲಕ ತಮ್ಮ ಮೂಲ ಸಂಸ್ಕøತಿಯನ್ನು ಪುನರ್ ಆಚರಿಸುತ್ತಿರುವುದನ್ನು ಪ್ರಜಾಪ್ರಭುತ್ವದಲ್ಲಿ ಸಮಸ್ತ ನಾಡಿನ ಜನತೆ ಸಕಾರಾತ್ಮಕವಾಗಿ ಸ್ವೀಕರಿಸಿ ಗೌರವಿಸಬೇಕಿದೆ. ಅಕ್ಟೋಬರ್ 07, 2018 (ನಿನ್ನೆ) ರಂದು ಮೈಸೂರಿನ ಮಹಿಷಾ ದಸರಾ ಅನುಷ್ಠಾನ ಸಮಿತಿ ಆಯೋಜಿಸುತ್ತಿರುವ ಮಹಿಷಾ ದಸರಾವನ್ನು ಮುಂದಿನ ದಿನಗಳಲ್ಲಿ ಸರ್ಕಾರವೇ “ಮಹಿಷಾ ಮಂಡಲ ಪ್ರಾಧಿಕಾರ” ವನ್ನು ರಚಿಸಿ ಸರ್ಕಾರದ ವತಿಯಿಂದಲೇ ಆಚರಿಸಿದರೆ ನಮ್ಮ ಮೂಲಸಂಸ್ಕøತಿಯನ್ನು ಜಗತ್ತಿಗೆ ಸಾರಿದಂತಾಗುತ್ತದೆ.
ಸಾಹಿತಿ ಬಂಜಗೆರೆ ಜಯಪ್ರಕಾಶ್ ಹಾಗು ಡಾ. ದಿಲೀಪ್ ನರಸಯ್ಯ ಅವರ ಅಭಿಮತದ ಆಯ್ದ ಸಾಲುಗಳು.

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್ನ ಎಸ್ಎನ್ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್ಎನ್ಎನ್ ಅಪಾರ್ಟ್ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.



